ತಿರುಮಲೆಗೆ ಹೊಸ ಘಾಟ್ ರಸ್ತೆಯನ್ನು ನಿರ್ಮಿಸಲು ಟಿಟಿಡಿ ಪ್ರಸ್ತಾಪ.

ತಿರುಪತಿ, ಡಿಸೆಂಬರ್ 13, 2021 (www.justkannada.in): ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಟ್ರಸ್ಟ್ ಬೋರ್ಡ್ ಶನಿವಾರದಂದು ತಿರುಮಲೆಗೆ ತೆರಳುವ ಹೊಸ ಘಾಟ್ ರಸ್ತೆ ಮತ್ತು ಪಾದಚಾರಿ ಮಾರ್ಗವನ್ನು ನಿರ್ಮಿಸುವುದಾಗಿ ತಿಳಿಸಿದೆ. ಇತ್ತೀಚೆಗೆ ಸುರಿದಂತಹ ಭಾರಿ ಮಳೆಯಿಂದಾಗಿ ತಿರುಮಲ ಬೆಟ್ಟಕ್ಕೆ ತೆರಳುವ ರಸ್ತೆ ಮತ್ತು ಪಾದಚಾರಿ ಮಾರ್ಗಗಳು ಗಂಭೀರ ಸ್ವರೂಪದಲ್ಲಿ ಹಾಳಾಗಿರುವ ಹಿನ್ನೆಲೆಯಲ್ಲಿ ಟಿಟಿಡಿ, ಕಡಪಾ ಜಿಲ್ಲೆಯಿಂದ ಹೊಸ ರಸ್ತೆ ಮಾರ್ಗವನ್ನು ನಿರ್ಮಿಸಲು ತೀರ್ಮಾನಿಸಿದೆ.

ಟಿಟಿಡಿ ಟ್ರಸ್ಟ್ ಬೋರ್ಡ್ ನ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಅವರು ಮಂಡಳಿಯ ಸಭೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ದೇವಸ್ಥಾನದ ಮಂಡಳಿಯು ತಿರುಮಲ ಬೆಟ್ಟಕ್ಕೆ ತೆರಳಲು ಪರ್ಯಾಯ ಮಾರ್ಗವೊಂದರ ತೀವ್ರ ಅಗತ್ಯವಿರುವುದಾಗಿ ಮನಗೊಂಡು ಆ ಕುರಿತು ವಿಸ್ತೃತವಾಗಿ ಚರ್ಚಿಸಿತು. ಆ ಪ್ರಕಾರವಾಗಿ, ಅನ್ನಮಯ್ಯ ಮಾರ್ಗ ಎಂದೇ ಜನಪ್ರಿಯವಾಗಿರುವ ಕಡಪಾ ಜಿಲ್ಲೆಯ ರಾಜಂಪೇಟ್ ಮಂಡಲದ ಕಡೆಯಿಂದ ಈ ಹೊಸ ಪರ್ಯಾಯ ಘಾಟ್ ರಸ್ತೆ ಮತ್ತು ಪಾದಚಾರಿ ಮಾರ್ಗವನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

“ನಾವು ಶೇಶಾಚಲಂ ಬೆಟ್ಟದಲ್ಲಿ ತಿರುಮಲೆಗೆ ತೆರಳಲು ಪರ್ಯಾಯ ಮಾರ್ಗಗಳನ್ನು ಅಭಿವೃದ್ಧಿಪಡಿಸಲು ಪ್ರಸ್ತಾಪಿಸಿದ್ದೇವೆ. ನಮ್ಮ ಇಂಜಿನಿಯರಿಂಗ್ ಇಲಾಖೆಯು ಈ ಸಂಬಂಧ ಅಂದಾಜು ವೆಚ್ಚದ ವಿವರಗಳನ್ನು ಶೀಘ್ರವೇ ಸಿದ್ಧಪಡಿಸಲಿದೆ,” ಎಂದು ವಿವರಿಸಿದರು. ಜೊತೆಗೆ ಟಿಟಿಡಿ, ಇತ್ತೀಚಿನ ಭಾರಿ ಮಳೆಯಿಂದಾಗಿ ಹಾಳಾಗಿರುವಂತಹ ಹಾಲಿ ರಸ್ತೆ ಮತ್ತು ಪಾದಚಾರಿ ಮಾರ್ಗಗಳ ದುರಸ್ಥಿ ಮತ್ತು ನವೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.

ವೈಕುಂಠ ಏಕಾದಶಿ

ಜನವರಿ ೧೩ ರಿಂದ ೧೦ ದಿನಗಳ ಕಾಲ ವೈಕುಂಠ ಏಕಾದಶಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ದೇವಸ್ಥಾನದ ಆಡಳಿತ ಮಂಡಳಿಯು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಪ್ರಸ್ತುತ ತಿರುಮಲೆಗೆ ಬರುವ ಭಕ್ತಾದಿಗಳ ಸಂಖ್ಯೆಯ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ಸಡಿಲಗೊಳಿಸಲು ಅನುಮತಿಯನ್ನು ಕೋರುವುದಾಗಿಯೂ ತಿಳಿಸಿದೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: TTD-proposal – build – new -ghat road – Tirumala