ನಮ್ಮ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ: ನಾನಾ ಪ್ರಶ್ನೆಗಳಿಗೆ ಪಟಪಟ ಉತ್ತರಿಸಿದ ರಾಮನಗರ ಜಿಲ್ಲೆಯ ಇರುಳಿಗ ಮಕ್ಕಳು

Promotion

ರಾಮನಗರದ, ಡಿಸೆಂಬರ್ 29, 2019 (www.justkannada.in): ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಪ್ರಧಾನ ಮಂತ್ರಿ ಹೆಸರು ನರೇಂದ್ರ ಮೋದಿ, ರಾಷ್ಟಪತಿ ರಾಮಾನಾಥ ಕೋವಿಂದ್…..

ಹೀಗೆ ಕೇಳುವ ಪ್ರಶ್ನೆಗಳಿಗೆ ಪಟಪಟನೆ ಉತ್ತರಿಸಿದ್ದು ಇರುಳಿಗ ಸಮುದಾಯದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು.
ರಾಮನಗರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಮದೇವರ ಬೆಟ್ಟಕ್ಜೆ ಹೊಂದಿಕೊಂಡಿರುವ ಇರುಳಿಗರ ಕಾಲೋನಿಯಲ್ಲಿ ಆಯೋಜಿಸಿದ್ದ ವಿನೂತನ ಗ್ರಾಮಸೇವೆ ಕಾರ್ಯಕ್ರಮದಲ್ಲಿ ಅಲ್ಲಿಯೇ ರಾತ್ರಿ ವಾಸ್ತವ್ಯವಿದ್ದ ಜಿಲ್ಲಾ ವಾರ್ತಾಧಿಕಾರಿ ಎಸ್ .ಶಂಕರಪ್ಪ ಅವರು ಮಕ್ಕಳೊಂದಿಗೆ ಊಟ ಮಾಡಿ ಸಂವಾದ ನಡೆಸಿದರು.

ಸರ್ಕಾರದ ಸೌಲಭ್ಯಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಮಕ್ಕಳು ಬಟ್ಟೆ, ಷೂ, ಊಟ, ಪುಸ್ತಕಗಳು ಉಚಿತವಾಗಿ ದೊರಕುತ್ತಿದ್ದು ಶಾಲೆಯ ಮುಖ್ಯೋಪಾದ್ಯಾಯಿನಿ ಜಯಮ್ಮ ಅವರು ತಮ್ಮ ಸ್ವಂತ ಮಗುವಿನಂತೆ ನಿಗಾ ವಹಿಸಿ ವಿದ್ಯೆ ಕಲಿಸುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ತಮ್ಮ ಪೋಷಕರು ಕೂಲಿ ಮಾಡಿ ಜೀವನ ಮಾಡುತ್ತಿದ್ದಾರೆ. ನಾವು ಓದಿ ಭವಿಷ್ಯ ರೂಪಿಸಿಕೊಳ್ಳುತ್ತೆವೆ ಅಂದು ಭರವಸೆ ನೀಡಿದ ಮಕ್ಕಳು, ಪೊಲೀಸ್, ಪೋಸ್ಟ್ ಮಾಸ್ಟರ್, ಡಾಕ್ಟರ್ ಆಗುವ ಗುರಿ ಹೊಂದಿರುವುದಾಗಿ ತಿಳಿಸಿದರು.

ಕಾಗುಣಿತ, ಮಗ್ಗಿ, ಕನ್ನಡ ಹಾಗೂ ಇಂಗ್ಲಿಷ್ ಪದಗಳನ್ನು ಕುರಿತ ಕೇಳಿದ ಪ್ರಶ್ನೆಗಳಿಗೂ ಸರಾಗವಾಗಿ ಉತ್ತರ ನೀಡಿದರು.
ವೈಯಕ್ತಿಕ ಸ್ವಚ್ಚತೆ ಹಾಗೂ ಉತ್ತಮ ನಡವಳಿಕೆ ಕುರಿತು ಮಾತನಾಡಿದ ಶಂಕರಪ್ಪ ಅವರು, ಪ್ರತಿನಿತ್ಯ ಶುಚಿಯಾಗಿ ಶಾಲೆಗೆ ಆಗಮಿಸಬೇಕು. ಸಾಮಾನ್ಯ ಜ್ಞಾನವನ್ನು ಪತ್ರಿಕೆಗಳನ್ನು ಓದುವ ಮೂಲಕ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ದಾನಿಯೊಬ್ಬರಿಂದ ಶಾಲಾ ಬ್ಯಾಗ್, ನೋಟ್ ಪುಸ್ತಕ ಹಾಗೂ ಇತರ ಪರಿಕರಗಳನ್ನು ವಿತರಿಸಲಾಯಿತು. ಹಲವು ತಿಂಗಳಿಂದ ತಲೆಕೂದಲು ಬೆಳೆಸಿಕೊಂಡಿದ್ದ 15ಕ್ಕೂ ಹೆಚ್ಚು ಮಕ್ಕಳಿಗೆ ವಾರ್ತಾಧಿಕಾರಿ ತಮ್ಮ ಸ್ವಂತ ಖರ್ಚಿನಲ್ಲಿ ಸವಿತಾ ಸಮಾಜವರನ್ನು ಕರೆಸಿ ಕ್ಷೌರ ಮಾಡಿಸಿ ಶುಭ್ರತೆ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಿದರು. ರಾತ್ರಿ ಅಲ್ಲಿಯೇ ವಾಸ್ತವ್ಯಹೂಡಿ ಇರುಳಿಗ ಮುಖಂಡರಾದ ಕೃಷ್ಣಮೂರ್ತಿ, ಡಾ.ಕೃಷ್ಣಮೂರ್ತಿ ಮುಂತಾದ ಮುಖಂಡರೊಂದಿಗೆ ಸರ್ಕಾರಿ ಸೌಲಭ್ಯಗಳ ಸದ್ಬಳಕೆ ಕುರಿತು ಚರ್ಚಿಸಲಾಯಿತು.