“ನಾಳೆಯಿಂದ ಹೆಸರಘಟ್ಟದಲ್ಲಿ ಐದು ದಿನಗಳ ಕಾಲ ರಾಷ್ಟ್ರೀಯ ತೋಟಗಾರಿಕೆ ಮೇಳ”

Promotion

ಬೆಂಗಳೂರು,ಫೆಬ್ರವರಿ,07,2021(www.justkannada.in) : ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಆವರಣದಲ್ಲಿ ಸೋಮವಾರದಿಂದ ಐದು ದಿನಗಳ ರಾಷ್ಟ್ರೀಯ ತೋಟಗಾರಿಕೆ ಮೇಳ ನಡೆಯಲಿದ್ದು, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಚಾಲನೆ ನೀಡಲಿದ್ದಾರೆ.jk

ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಎಂ.ಆರ್.ದಿನೇಶ್ ಈ ಕುರಿತು ಮಾಹಿತಿ  ನೀಡಿದ್ದು, ಮೇಳದಲ್ಲಿ ರೈತರ ಆದಾಯ ದ್ವಿಗುಣ, ಸಮಗ್ರ ತೋಟಗಾರಿಕೆ ಪದ್ಧತಿ, ಮಣ್ಣು ರಹಿತ ಕೃಷಿ ವಿಧಾನ, ಟೆರೆಸ್ ಗಾರ್ಡನಿಂಗ್, ಹೊಸ ತಂತ್ರಜ್ಞಾನಗಳ ಪರಿಚಯ, ರೈತರ ಮನೆ ಬಾಗಿಲಿಗೆ ಉತ್ಕೃಷ್ಟ ಬೀಜ ಪೂರೈಸುವ ‘ಸೀಡ್ ಪೊರ್ಟಲ್ ‘ಸೇರಿದಂತೆ ಹತ್ತು ಹಲವು ತೋಟಗಾರಿಕೆ ಬೆಳೆಗೆ ಸಂಬಂಧಿಸಿದಂತೆ ರೈತರಿಗೆ ಮಾಹಿತಿ ದೊರೆಯಲಿದೆ ಎಂದಿದ್ದಾರೆ.

ಆನ್ ಲೈನ್ ಮೂಲಕ ಮೇಳ

ಕೋವಿಡ್ -19 ಹಿನ್ನೆಲೆಯಲ್ಲಿ ಮೊದಲಬಾರಿಗೆ ಭೌತಿಕ ಹಾಗೂ ಆನ್ ಲೈನ್ ಮೂಲಕ ಮೇಳ ನಡೆಯಲಿದೆ. ಮೇಳದಲ್ಲಿ ಪಾಲ್ಗೊಳ್ಳಲು ರೈತರಿಗೆ ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಲು ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ವ್ಯವಸ್ಥೆ ಕಲ್ಪಿಸಲಾಗಿದೆ. ಆಸಕ್ತ ರೈತರು ಎನ್ ಎಚ್ ಎಪ್ ವೆಬ್ ಸೈಟ್ https://nhf2021.iihr.res.inನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆನ್ ಲೈನ್ ಮೂಲಕ ದೇಶದಾದ್ಯಂತ ರೈತರು ಭಾಗವಹಿಸಲು ಅವಕಾಶ ಇದ್ದು, ಆನ್ ಲೈನ್ ನೋಂದಣಿಗೆ ಈಗಾಗಲೇ ಕೃಷಿ ವಿಜ್ಞಾನ ಕೇಂದ್ರಗಳ (ಕೆವಿಕೆ )ನೆರವು ಪಡೆಯಲಾಗಿದೆ. 11 ಅಟಾರಿ ಕೇಂದ್ರಗಳ 721 ಕೆವಿಕೆ ಗಳಲ್ಲಿ ರೈತರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಮೇಳದಲ್ಲಿ 211 ಪ್ರಾತ್ಯಕ್ಷಿಕೆಗಳನ್ನು ರೈತರಿಗೆ ಪ್ರದರ್ಶಿಸಲಾಗುತ್ತದೆ.

ಆಯಾ ಕೃಷಿ ವಿಜ್ಞಾನ ಕೇಂದ್ರಗಳಿಗೆ ಭೇಟಿ ನೀಡಿ ರೈತರು ಆನ್ ಲೈನ್ ಮೂಲಕ ನೋಂದಾಯಿಸಿ ಮೇಳದಲ್ಲಿ ಪಾಲ್ಗೊಳ್ಳಬಹುದು. ಕೃಷಿ ವಿಜ್ಞಾನಿಗಳ ಜತೆ ದ್ವಿಮುಖ ಸಂಹವನದ ವ್ಯವಸ್ಥೆ ಇದೆ. ರೈತರು  ಕೃಷಿಗೆ ಸಂಬಂಧಿಸಿದ ಸಮಸ್ಯೆಗಳನ್ನು ವಿಜ್ಞಾನಿಗಳ ಜತೆ ಹಂಚಿಕೊಂಡು ಪರಿಹಾರ ಪಡೆಯಬಹುದಾಗಿದೆ. ದೇಶದ ನಾನಾ ಭಾಗಗಳ ಕನಿಷ್ಠ 25 ಲಕ್ಷ ರೈತರಿಗೆ ತಂತ್ರಜ್ಞಾನಗಳನ್ನು ಪೂರೈಸುವ ಕಾರ್ಯದಲ್ಲಿ ಸಂಸ್ಥೆ ಈಗಾಗಲೆ ತೊಡಗಿಸಿಕೊಂಡಿದೆ. ಈ ಭಾರಿಯ ಮೇಳದಲ್ಲಿ ಹೊಸ ತಂತ್ರಜ್ಞಾನಗಳ ಪರಿಚಯ ಮಾಡಲಾಗುವುದು ಎಂದು ವಿವರಿಸಿದ್ದಾರೆ.

ಮೇಳದ ವಿಶೇಷ

ಸಮಗ್ರ ತೋಟಗಾರಿಕೆ ಕೃಷಿ ಪದ್ಥತಿ ಹಾಗೂ ಅತ್ಯಂತ ಕಡಿಮೆ ಉತ್ಪಾದನ ವೆಚ್ಚದಲ್ಲಿ ಇಳುವರಿ ಜಾಸ್ತಿ ನೀಡುವ  ತಳಿಗಳ ಸಂಶೋಧನೆ ಮಾಡುವ ಮೂಲಕ ರೈತರ ಆದಾಯವನ್ನು ದುಪ್ಪಟ್ಟುಗೊಳಿಸಲು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಮುಂದಾಗಿದೆ. ಅತ್ಯಂತ ಕಡಿಮೆ ದರದಲ್ಲಿ ಸಂಸ್ಥೆ ಅಭಿವೃದ್ದಿ ಪಡಿಸಿರುವ ತೋಟಗಾರಿಕೆ ಬೆಳೆಯ ಬೀಜಗಳನ್ನು ರೈತರಿಗೆ ಪೂರೈಸಲಾಗುತ್ತಿದೆ. ಮೇಳದಲ್ಲಿ ಈ ಕುರಿತು ಅಗತ್ಯ ಮಾಹಿತಗಳನ್ನು ಸಂಸ್ಥೆಯ ವಿಜ್ಞಾನಿಗಳು ರೈತರೊಂದಿಗೆ ವಿನಮಯ ಮಾಡಿಕೊಳ್ಳಲಿದ್ದಾರೆ. ಅಲ್ಲದೆ ರೈತರನ್ನು ಸಮಗ್ರ ತೋಟಗಾರಿಕೆ ಕೃಷಿಯಲ್ಲಿ ಉತ್ತೇಜಿಸಲು ಸಂಸ್ಥೆ ಅಭಿವೃದ್ದಿ ಪಡಿಸಿರುವ ಪ್ರಾತ್ಯಕ್ಷಿಗೆಳ ಪ್ರದರ್ಶನ ಕೂಡ ಮೇಳದಲ್ಲಿ ನಡೆಯಲಿದೆ. ಮಾವಿನ ತೋಪಿನಲ್ಲಿ ಮಣ್ಣಿನ ಮತ್ತು ಹವಾಮಾನಕ್ಕೆ ಪೂರಕವಾದ ತರಕಾರಿ ಬೆಳೆಗಳನ್ನು ಬೆಳೆಯುವ ವಿಧಾನಗಳ ಕುರಿತು ಮೇಳದಲ್ಲಿ ಮಾಹಿತಿ ನೀಡಲಾಗುವುದು ಎಂದಿದ್ದಾರೆ.

ಉದ್ಯಮವಾಗಿ ತೋಟಗಾರಿಕೆ

ತೋಟಗಾರಿಕೆ ಬೆಳೆಯನ್ನು ಉದ್ಯಮವಾಗಿ ಸ್ವೀಕರಿಸಲು ಈ ಮೇಳದಲ್ಲಿ ವಿಶೇಷ ಒತ್ತು ನೀಡಲಾಗಿದೆ. ಬೀಜ ಗ್ರಾಮ ಯೋಜನೆಯನ್ನು ಜಾರಿಗೆ ತಂದಿರುವ ಐಐಎಚ್ ಆರ್,  ರೈತರಿಗೆ ಉತ್ತಮ ಬೀಜಗಳನ್ನು ಪೂರೈಸಿ ಅವರಿಂದ ಬೀಜ ಖರೀದಿಸುವ ಒಡಂಬಡಿಕೆ ಮಾಡಿಕೊಂಡಿದೆ. ಈ ಯೋಜನೆಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೆಚ್ಚಿನ ರೈತರು ಈ ಯೋಜನೆಯಲ್ಲಿ ತಮ್ಮನ್ನು ಜೋಡಿಸಿಕೊಳ್ಳುವಂತೆ ಐಐಎಚ್ ಆರ್ ಅನ್ನು ಕೋರಿದ್ದಾರೆ. ಈ ಮೂಲಕ ರೈತರನ್ನು ಸ್ವಾವಲಂಬಿ ಉದ್ಯಮಿಯಾಗಿಸಲು ಉತ್ತೇಜಿಸುವ ಯೋಜನೆಗೆ ಸಂಸ್ಥೆ ಮುಂದಾಗಿದೆ ಎಂದರು.

ಸಂಸ್ಥೆಯಿಂದ ತರಬೇತಿ ಪಡೆದಿರುವ ರೈತರು ಈಗಾಗಲೇ ಹಲವು ಉದ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಲಸಿನ ಹಣ್ಣಿನ ಪಲ್ಪ್ ಉದ್ಯಮ ಸೇರಿದಂತೆ ಹಲವು ಸಣ್ಣ ಮಟ್ಟದ ಉದ್ಯಮಕ್ಕೆ ಉತ್ತೇಜನ ನೀಡಲಾಗಿದೆ.

ಬೀಜ ಪೂರೈಕೆ

ಆನ್ ಲೈನ್ ಸೀಡ್ ಪೊರ್ಟಲ್ ಮೂಲಕ ಐಐಎಚ್ ಆರ್ ದೇಶದ ಮೂಲೆ ಮೂಲೆಯಲ್ಲಿರುವ ರೈತರನ್ನು ತಲುಪಿದೆ. ರೈತ ಗ್ರಾಮ ಯೋಜನೆಯಲ್ಲಿ ರೈತರಿಂದ ಖರೀದಿಸಿರುವ ಉತ್ತಮ ತಳಿಯ ಮತ್ತು ರೋಗ ನಿರೋಧಕ ಶಕ್ತಿ ಹೊಂದಿರುವ ಬೀಜಗಳನ್ನು ಸೀಡ್ ಫೊರ್ಟ್ ಲ್ ವ್ಯವಸ್ಥೆಯ ಮೂಲಕ ರೈತರಿಗೆ ತಲುಪಿಸಲಾಗುತ್ತಿದೆ. ಉತ್ತರ ಭಾರತದ ಅದರಲ್ಲೂ ವಿಶೇಷವಾಗಿ ಈಶಾನ್ಯ ರಾಜ್ಯಗಳ ರೈತರು ಐಐಎಚ್ ಆರ್ ಅಭಿವೃದ್ದಿ ಪಡಿಸಿರುವ ಬೀಜಗಳನ್ನು ಖರೀದಿಸುತ್ತಿದ್ದಾರೆ.

ಆನ್ ಲೈನ್ ಸೀಡ್ ಪೋರ್ಟಲ್ ಮೂಲಕ ಸುಮಾರು 40 ವಿವಿಧ ತರಕಾರಿ ಹಾಗೂ ಹೂ ಗಳ ಬೀಜಗಳನ್ನು ದೇಶದ ಮೂಲೆ ಮೂಲೆಯಲ್ಲಿರುವ ರೈತರ ಮನೆ ಬಾಗಿಲಿಗೆ ಅತ್ಯಂತ ಕಡಿಮೆ ದರದಲ್ಲಿ ನೀಡುವ ವಿನೂತನ ಪ್ರಯತ್ನದಲ್ಲಿ ತೊಡಗಿ ಯಶಸ್ಸುಗಳಿಸಿದೆ. 20 ವಿವಿಧ ತರಕಾರಿಗಳ 60 ತಳಿಗಳ ಬೀಜಗಳನ್ನು ಬೀಜ ಗ್ರಾಮ ಯೋಜನೆ ಮೂಲಕ ರೈತರಿಂದ ಖರೀದಿಸಿ ಅವುಗಳನ್ನು ಆನ್ ಲೈನ್ ಪೋರ್ಟಲ್ ಮೂಲಕ ಮಾರಾಟ ಮಾಡಲಾಗುತ್ತಿದೆ.  ರೈತರು ಆನ್ ಲೈನ್ ಮೂಲಕ ಮೇಳದಲ್ಲಿ ಭಾಗವಹಿಸಲು ವೆಬ್ ಸೈಟ್ ಲಿಂಕ್ ಒದಗಿಸಲಾಗಿದೆ. http://livehf.iihr.res.in/, https://youtu.be/h3XBo-bRI,  https://nhf2021.iihr.res.in, http://www.facebook.com/events/610609993112714 ಈ ಲಿಂಕ್ ಮೂಲಕ ಮೇಳದಲ್ಲಿ ಭಾಗವಹಿಸಬಹುದಾಗಿದೆ.

ಈ ಸಂದರ್ಭ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಎಂ. ಆರ್ ದಿನೇಶ್, ಮೇಳದ ಸಂಘಟನಾ ಕಾರ್ಯದರ್ಶಿ ಮತ್ತು ಐಐಎಚ್ ಆರ್ ನ ಪ್ರಧಾನ ವಿಜ್ಞಾನಿ ಡಾ. ಧನಂಜಯ್ ಮತ್ತು ಸಂಸ್ಥೆಯ ವಿಜ್ಞಾನಿಗಳು ಹಾಜರಿರಲಿದ್ದಾರೆ ಎಂದು ತಿಳಿಸಿದ್ದಾರೆ.

key words : Tomorrow-hesargatta-National-Horticulture-Fair-Five Days