ಕಗ್ಗಂಟಾದ ಮೈಸೂರು ಜಿಲ್ಲೆಯ ಮೂರು ಕ್ಷೇತ್ರಗಳ ಟಿಕೆಟ್: ಬಂಡಾಯದ ಬಿಸಿ ಭೀತಿಯಲ್ಲಿ ಕಾಂಗ್ರೆಸ್

ಮೈಸೂರು,ಮಾರ್ಚ್,25,2023(www.justkannada.in):  ರಾಜ್ಯ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್ ಇಂದು  ಮೊದಲ ಹಂತದಲ್ಲಿ 124 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ಈ ಮಧ್ಯೆ ಮೈಸೂರು ಜಿಲ್ಲೆಯ ಮೂರು ಕ್ಷೇತ್ರಗಳ ಟಿಕೆಟ್ ಕೊನೆಗೂ ಕಗ್ಗಂಟಾಗಿ ಉಳಿದಿದೆ.

ಚಾಮರಾಜ, ಕೃಷ್ಣರಾಜ, ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ಮೊದಲ ಪಟ್ಟಿಯಲ್ಲಿ ಫೈನಲ್ ಆಗಿಲ್ಲ. ಕಾರಣ ಮೂರು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ನಡುವೆ ಪೈಪೋಟಿ ಇದ್ದು ಒಬ್ಬರಿಗೆ ಟಿಕೆಟ್ ನೀಡಿದರೇ ಮತ್ತೊಬ್ಬರು ಬಂಡಾಯವೇಳುವ ಭೀತಿ ಎದುರಾಗಿದೆ.

ಚಾಮರಾಜದಲ್ಲಿ ಟಿಕೆಟ್ ಗಾಗಿ ಮಾಜಿ ಶಾಸಕ ವಾಸು ಹಾಗು ಸಿದ್ದರಾಮಯ್ಯ ಆಪ್ತ ಹರೀಶ್ ಗೌಡರಿಂದ‌ ಅರ್ಜಿ ಸಲ್ಲಿಕೆಯಾಗಿದೆ. ವಾಸು ಅವರು ಮಾಜಿಸಿಎಂ ವೀರಪ್ಪಮೋಯ್ಲಿಅವರ ಪರಮಾಪ್ತ. ಈ ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಬಂಡಾಯದ ಬಿಸಿ ಎದುರಾಗುವ ಭೀತಿ ಉಂಟಾಗಿದೆ.

ಈ ಮಧ್ಯೆ ಕೃಷ್ಣರಾಜ ಕ್ಷೇತ್ರದಲ್ಲೂ ಟಿಕೆಟ್ ಗಾಗಿ ಫೈಟ್ ನಡೆಯುತ್ತಿದೆ. ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಪ್ರದೀಪ್ ಕುಮಾರ್, ನವೀನ್ ಕುಮಾರ್ ನಡುವೆ  ಟಿಕೆಟ್ ಗಾಗಿ ಲಾಬಿ ನಡೆಯುತ್ತಿದೆ.

ಇನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ 13 ಮಂದಿ ಆಕಾಂಕ್ಷಿಗಳಿದ್ದಾರೆ. ಮಾವಿನಹಳ್ಳಿ ಸಿದ್ದೇಗೌಡ, ಬೀರಿಹುಂಡಿ ಬಸವಣ್ಣ, ಕೆಂಪನಾಯಕ, ರಾಕೇಶ್ ಪಾಪಣ್ಣ, ಮರೀಗೌಡ, ಡಾ.ಬಿ.ಜೆ.ವಿಜಯಕುಮಾರ್, ಮಂಜುಳ ಮಾನಸ ಸೇರಿ ಹಲವರು ಚಾಮುಂಡೇಶ್ವರಿ ಟಿಕೆಟ್ ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಯಾರಿಗೆ ಟಿಕೆಟ್ ನೀಡಿದರೂ ಕಾಂಗ್ರೆಸ್ ಗೆ ಬಂಡಾಯ ಕಟ್ಟಿಟ್ಟ ಬುತ್ತಿ.

ವಲಸಿಗ v/s ಮೂಲ ಕಾಂಗ್ರೆಸ್ಸಿಗರ ನಡುವೆ ಜಟಾಪಟಿ ನಡೆಯುತ್ತಿದ್ದು ಇದರಿಂದಾಗಿ ಈ ಮೂರು ಕ್ಷೇತ್ರದ ಟಿಕೆಟ್ ಕಗ್ಗಂಟಾಗಿ ಉಳಿದಿದೆ. ಅಭ್ಯರ್ಥಿಗಳು, ಆಕಾಂಕ್ಷಿಗಳ ಎದೆಯಲ್ಲಿ ಢವಢವ ಶುರುವಾಗಿದೆ.

Key words: Ticket –three- constituencies – Mysore district-Congress