ನರಸಿಂಹರಾಜ ಕ್ಷೇತ್ರ ಲಾಕ್ ಡೌನ್ ಗೆ ಚಿಂತನೆ: ಸಚಿವ ಎಸ್ ಟಿ ಸೋಮಶೇಖರ್

kannada t-shirts

ಮೈಸೂರು, ಜುಲೈ 13, 2020: ಮೈಸೂರಿನಲ್ಲಿ ಕಂಡುಬರುತ್ತಿರುವ ಕೋವಿಡ್ 19 ಪ್ರಕರಣಗಳಲ್ಲಿ ಹೆಚ್ಚಿನವು ನರಸಿಂಹರಾಜ ಕ್ಷೇತ್ರದ ನಾಗರಿಕರಲ್ಲಿಯೇ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಇದೊಂದು ಭಾಗವನ್ನು ಲಾಕ್ ಡೌನ್ ಮಾಡುವ ಬಗ್ಗೆ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರ ನೈತೃತ್ವದಲ್ಲಿ ಕೋವಿಡ್-19 ನಿಯಂತ್ರಣ, ನೀರಾವರಿ, ಪ್ರಹಾವ ಪರಿಸ್ಥಿತಿ ನಿಭಾಯಿದುವ ಸಂಬಂಧ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಸಚಿವರು, ಮೈಸೂರು ಜಿಲ್ಲೆಯ ನರಸಿಂಹರಾಜ ಕ್ಷೇತ್ರದಲ್ಲಿ ಸ್ವಲ್ಪ ಸಮಸ್ಯೆಯಾಗುತ್ತಿದೆ. ಅಲ್ಲಿಯೇ ಶೇ. 50 ರಷ್ಟು ಪ್ರಕರಣಗಳು ಕಂಡುಬರುತ್ತಿದೆ. ಅಲ್ಲಿ ಕೊನೇ ಕ್ಷಣದವರೆಗೂ ಪರಿಕ್ಷೆಗೆ ಬಾರದೆ, ಆರೋಗ್ಯ ತೀವ್ರ ಹದಗೆಟ್ಟ ಮೇಲೆ ಬರುತ್ತಿದ್ದಾರೆ. ಹೀಗಾಗಿ ಈ ಭಾಗವನ್ನು ಮಾತ್ರ ಲಾಕ್ ಡೌನ್ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಈ ಕ್ಷೇತ್ರದ ನಾಗರಿಕರನ್ನು ಹೆಚ್ಚಿನ ರೀತಿಯಲ್ಲಿ ಪರೀಕ್ಷೆಗೊಳಪಡಿಸಿ ಪರಿಸ್ಥಿತಿ ಇನ್ನೂ ಕೈಮೀರಿ ಹೋಗದಂತೆ ತಡೆ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ನೀರಾವರಿಗೆ ಸಂಬಂಧಪಟ್ಟಂತೆ ಯಾವುದೇ ಯಾವುದೇ ಸಮಸ್ಯೆ ಸದ್ಯದ ಪರಿಸ್ಥಿತಿಯಲ್ಲಿ ಇಲ್ಲ. ಇನ್ನು ರಸಗೊಬ್ಬರದ ಕೊರತೆಯೂ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಬಿತ್ತನೆ ಪ್ರಕ್ರಿಯೆಯೂ ನಡೆಯುತ್ತಿದೆ. ಪ್ರವಾಹದಂತಹ ಪರಿಸ್ಥಿತಿ ಎದುರಾದರೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.

ಮೈಸೂರು ಜಿಲ್ಲೆಯ ಆಸ್ಪತ್ರೆಗಳಲ್ಲಿ ಡಿ ಗ್ರೂಪ್ ಸಿಬ್ಬಂದಿಯ ಕೊರತೆ ಇದ್ದು ನೇಮಕಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳ ಶೀಘ್ರವಾಗಿ ಕ್ರಮ ಕೈಗೊಂಡು ವ್ಯವಸ್ಥೆ ಮಾಡಿಕೊಡಬೇಕು ಎಂದು ಮುಖ್ಯಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳಾದ ಅಭಿರಾಂ ಜಿ. ಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ 19 ಗೆ ಸಂಬಂಧಪಟ್ಟಂತೆ ಈ ವರೆಗೆ
38 ಸಾವು ಸಂಭವಿಸಿದೆ. ಆದರೆ ಅದರಲ್ಲಿ 37 ಸಾವುಗಳು ಕಳೆದ 15 ದಿನಗಳಲ್ಲಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ರೀತಿಯ ನಿಗಾ ವಹಿಸಲಾಗಿತ್ತಿದೆ. ಬೆಡ್ ಗಳ ವ್ಯವಸ್ಥೆಯನ್ನು ಸಹ ಹೆಚ್ಚು ಮಾಡಲಾಗಿದೆ. ಜೊತೆಗೆ 2 ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಜೊತೆಯೂ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.

ನೀರಾವರಿ ಸಮಸ್ಯೆ ಸದ್ಯಕ್ಕೆ ತಲೆದೋರಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಉತ್ತಮವಾಗಿದೆ. ಈಗಾಗಲೇ ಶೇ. 65 ರಷ್ಟು ಬಿತ್ತನೆಯಾಗಿದೆ. ಇನ್ನು ಪ್ರವಾಹ ಪರಿಸ್ಥಿತಿ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ತಿಂಗಳು ಎನ್ ಡಿ ಆರ್ ಎಫ್ ತಂಡ ಜಿಲ್ಲೆಗೆ ಭೇಟಿ ನೀಡಿ ಕಳೆದ ಬಾರಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದ ಕಡೆಗಳಲ್ಲಿ ಯಾವ ರೀತಿಯಾಗಿ ನಿಭಾಯಿಸಬೇಕು ಎಂಬ ಬಗ್ಗೆ ಸ್ಥಳೀಯ ಪೊಲೀಸ್, ಗ್ರಾಪಂ ಸಿಬ್ಬಂದಿ ಸೇರಿದಂತೆ ಹಲವರಿಗೆ ತರಬೇತಿ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಮೈಸೂರು ಜಿಲ್ಲೆಯಲ್ಲಿ 773 ಸೋಂಕಿತರ ಸಂಖ್ಯೆ ಕಂಡುಬಂದಿದ್ದು, ಹಾಲಿ 388 ಸಕ್ರಿಯ ಪ್ರಕರಣಗಳು ಇವೆ ಎಂದು ಮಾಹಿತಿ ನೀಡಲಾಯಿತು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಹಾಗೂ ಪೊಲೀಸ್ ಆಯುಕ್ತರಾದ ಚಂದ್ರಗುಪ್ತ ಇದ್ದರು.

website developers in mysore