ತಿಗಳರನ್ನು ಪ್ರವರ್ಗ-1ಕ್ಕೆ ಸೇರಿಸಲು ಪ್ರಾಮಾಣಿಕ ಪ್ರಯತ್ನ- ಸಚಿವ  ಅಶ್ವತ್ ನಾರಾಯಣ್ ಭರವಸೆ.

ತುಮಕೂರು,ಮಾರ್ಚ್,28,2022(www.justkannada.in):   ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ತಿಗಳ ಸಮುದಾಯವನ್ನು ಪ್ರವರ್ಗ-1ಕ್ಕೆ ಸೇರಿಸಬೇಕೆಂಬ ಬೇಡಿಕೆಯನ್ನು ಮುಖ್ಯಮಂತ್ರಿಗಳು ಮತ್ತು ಹಿಂದುಳಿದ ವರ್ಗಗಳ ಆಯೋಗದ ಗಮನಕ್ಕೆ ತಂದು, ಸೂಕ್ತ ನ್ಯಾಯ ಒದಗಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಹೇಳಿದ್ದಾರೆ.

ಸೋಮವಾರದಂದು ಇಲ್ಲಿ ಏರ್ಪಡಿಸಿದ್ದ ಅಗ್ನಿಕುಲ ತಿಗಳ ಸಮುದಾಯದ ಮೂಲಪುರುಷ ಅಗ್ನಿ ಬನ್ನಿರಾಯಸ್ವಾಮಿ ಜಯಂತಿಯಲ್ಲಿ ಮಾತನಾಡಿದ ಅವರು, `ತಿಗಳ ಸಮುದಾಯವೂ ಸೇರಿದಂತೆ ಹಿಂದುಳಿದ ಜಾತಿಗಳ ಅಭಿವೃದ್ಧಿಗೆಂದು ಸರಕಾರವು ಈ ವರ್ಷದ ಬಜೆಟ್ಟಿನಲ್ಲಿ 400 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಜತೆಗೆ ಅಗ್ನಿಕುಲ ತಿಗಳ ಸಮುದಾಯದ ಸೇನಾನಿಯಾದ ವೀರಅಗ್ನಿ ಬನ್ನಿರಾಯರ ಜಯಂತಿಯನ್ನು ಇನ್ನುಮುಂದೆ ಪ್ರತೀವರ್ಷವೂ ಸರಕಾರದ ವತಿಯಿಂದಲೇ ಆಚರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಮಾಗಡಿ ಕೆಂಪೇಗೌಡರು ಆಧುನಿಕ ಬೆಂಗಳೂರಿಗೆ ಅಡಿಗಲ್ಲು ಹಾಕಿದಂದಿನಿಂದಲೂ ರಾಜ್ಯದಲ್ಲಿ ನೆಲೆ ನಿಂತಿರುವ ತಿಗಳ ಸಮುದಾಯವು ಹಿಂದುಳಿಯಲು ಹಲವು ಚಾರಿತ್ರಿಕ ಕಾರಣಗಳಿವೆ. ಈ ಬಗ್ಗೆ ಗಮನ ಹರಿಸಿ, ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಉದ್ಯೋಗ ಸಿಗುವಂತೆ ಮಾಡಲು ಎಲ್ಲ ನೆರವನ್ನೂ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ರಾಜ್ಯದಲ್ಲಿ ಬೆಂಗಳೂರು ಸುತ್ತಮುತ್ತಲಿನ 7-8 ಜಿಲ್ಲೆಗಳಲ್ಲಿ ತಿಗಳರು ಅಪಾರ ಸಂಖ್ಯೆಯಲ್ಲಿದ್ದಾರೆ. ಸಮುದಾಯದ ಶ್ರೇಯೋಭಿವೃದ್ಧಿಗೆ ಎಂತಹ ಕಾರ್ಯಕ್ರಮಗಳು ಬೇಕಾಗಿವೆ ಎನ್ನುವುದನ್ನು ತಿಗಳ ಮುಖಂಡರು ಸರಕಾರದ ಗಮನಕ್ಕೆ ತಂದರೆ, ಅಂತಹ ರಚನಾತ್ಮಕ ಕಾರ್ಯಕ್ರಮಗಳನ್ನೇ ರೂಪಿಸಲಾಗುವುದು ಎಂದು ಅವರು ನುಡಿದರು.

ಸರಕಾರವು ಯಾವುದೇ ಸಮುದಾಯವನ್ನೂ ರಾಜಕೀಯ ದೃಷ್ಟಿಯಿಂದ ನೋಡುವುದಿಲ್ಲ. ಬದಲಿಗೆ, ಹಿಂದುಳಿದವರ ಸಬಲೀಕರಣಕ್ಕೆ ಅನೇಕ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ತಿಗಳರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕೆಂಬ ಬೇಡಿಕೆಯ ಬಗ್ಗೆ ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದರು.

ಒಂದು ಕಾಲದಲ್ಲಿ ರಾಜ ಪರಿವಾರಗಳೊಂದಿಗೆ ನಿಕಟವಾಗಿದ್ದ ತಿಗಳ ಸಮುದಾಯವು ಈಗ ಹಿಂದುಳಿದಿದೆ. ರಾಜ್ಯದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಎಲ್ಲ ಸಮುದಾಯಗಳಿಗೆ ಸೇರಿದ ಮಕ್ಕಳಿಗೂ ಜಾಗತಿಕ ಗುಣಮಟ್ಟದ ಕಲಿಕೆಯ ವಾತಾವರಣ ಸಿಗುವಂತೆ ನೋಡಿಕೊಳ್ಳಲಾಗುವುದು. ತಿಗಳ ಸಮುದಾಯವೂ ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಸಚಿವ ಅಶ್ವಥ್ ನಾರಾಯಣ್ ಹಿತವಚನ ಹೇಳಿದರು.

ಉಳಿದ ಹಿಂದುಳಿದ ಸಮುದಾಯಗಳಿಗೆ ಹೋಲಿಸಿದರೆ ತಿಗಳರಲ್ಲಿ ಪರಸ್ಪರ ಅನ್ಯೋನ್ಯತೆ ಮತ್ತು ಒಗ್ಗಟ್ಟಿದೆ. ಆದರೆ, ಇದು ಇನ್ನೂ ಮುಂದಿನ ಹಂತಕ್ಕೆ ಹೋಗಬೇಕು. ಈ ವಿಚಾರದಲ್ಲಿ ಸಮುದಾಯದ ಮುಖಂಡರು ಪರಸ್ಪರ ಚರ್ಚಿಸಿ, ಅರ್ಥಪೂರ್ಣ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ ಎಂದು ಅಶ್ವತ್ಥ ನಾರಾಯಣ್ ಅಭಿಪ್ರಾಯಪಟ್ಟರು.

ಸಚಿವ ಅಶ್ವತ್ಥನಾರಾಯಣ ಅವರು ಇದೇ ಸಂದರ್ಭದಲ್ಲಿ ಸಮುದಾಯ ಕುರಿತು ಹಾಡುವ ಸಿ.ಡಿ ಬಿಡುಗಡೆ ಮಾಡಿದರು. ಅಗ್ನಿಕುಲ ತಿಗಳ ಸಮುದಾಯದ ಮೂಲಪುರುಷ ಅಗ್ನಿ ಬನ್ನಿರಾಯಸ್ವಾಮಿಯ ಭಾವಚಿತ್ರವನ್ನು ಸಚಿವರು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಸಮುದಾಯಕ್ಕೆ ಸೇರಿದ  ಆಲ್ಬೂರಿನ ಶನೈಶ್ವರ ಮಠದ ಶ್ರೀ ಸೋಮಶೇಖರ ಸ್ವಾಮೀಜಿಗಳು, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಂಸದ ಬಸವರಾಜ,, ಅಗ್ನಿಕುಲ ತಿಗಳರ ಮಹಾಸಭಾದ ಅಧ್ಯಕ್ಷ ಆಂಜನೇಯ, ಕರ್ನಾಟಕ ರಾಜ್ಯ ತಿಗಳರ ಮಹಾಸಭಾದ ಅಧ್ಯಕ್ಷ ಸುಬ್ಬಣ್ಣ, ಶಾಸಕ ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಸುರೇಶ್ ಗೌಡ, ಸಮಾಜದ ಮುಖಂಡರಾದ ಉದಯ್ ಸಿಂಗ್ ಮುಂತಾದವರು ಉಪಸ್ಥಿತರಿದ್ದರು.

Key words: thigala community-class-1-Minister -Ashwath Narayan