ರಾಜ್ಯದಲ್ಲಿವೆ 15 ಸಾವಿರ ವಿದ್ಯುತ್ ವಾಹನ

kannada t-shirts

ಬೆಂಗಳೂರು:ಜೂ-10: ಪರಿಸರಸ್ನೇಹಿ ವಾಹನಗಳ ಸಂಚಾರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಟ್ಟಿರುವ ಕಾರಣ ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಅಷ್ಟೆ ಅಲ್ಲ, ದೇಶದಲ್ಲಿಯೇ ಅತಿಹೆಚ್ಚು (15 ಸಾವಿರ) ವಾಹನಗಳನ್ನು ಹೊಂದಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ವರ್ಷಕ್ಕೂ ಮೊದಲು ರಾಜ್ಯದಲ್ಲಿರುವ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಎರಡಂಕಿ ದಾಟಿರಲಿಲ್ಲ. ಪರಿಸರಸ್ನೇಹಿ ವಾಹನಗಳ ಬಳಕೆ ಬಗ್ಗೆ ಹೆಚ್ಚು ಒತ್ತು ನೀಡಿ ಸರ್ಕಾರ ನೀತಿ ರೂಪಿಸಿ ಅನುಷ್ಠಾನಕ್ಕೆ ಕ್ರಮ ಕೈಗೊಂಡ ಬಳಿಕ ಜನರ ಗಮನ ಎಲೆಕ್ಟ್ರಿಕ್ ವಾಹನಗಳ ಮೇಲೆ ಬಿದ್ದಿದೆ. ದೆಹಲಿ, ಮುಂಬೈ, ಕೊಲ್ಕತ ಮತ್ತು ಚೆನ್ನೈಗಿಂತಲೂ ಅತಿಹೆಚ್ಚು ಎಲೆಕ್ಟ್ರಿಕ್ ವಾಹನಗಳು ರಾಜ್ಯದಲ್ಲಿವೆ. ಈಗಿರುವ ಒಟ್ಟು ವಾಹನಗಳಲ್ಲಿ ಅರ್ಧದಷ್ಟು ವಾಹನಗಳು ಬೆಂಗಳೂರಿನಲ್ಲಿಯೇ ಇವೆ.

ಆಗಸ್ಟ್ ಅಂತ್ಯಕ್ಕೆ ಚಾರ್ಜಿಂಗ್ ಸೆಂಟರ್: ಎಲೆಕ್ಟ್ರಿಕ್ ವಾಹನ ಗಳ ಬಳಕೆ ಹೆಚ್ಚಬೇಕೆಂದರೆ, ಪೆಟ್ರೋಲ್ ಬಂಕ್ ರೀತಿಯಲ್ಲಿ ಎಲ್ಲ ಕಡೆಯಲ್ಲೂ ಚಾರ್ಜಿಂಗ್ ಸೆಂಟರ್​ಗಳು ಸೌಲಭ್ಯ ಸಿಗಬೇಕು. ವಿಧಾನಸೌಧ ಮತ್ತು ವಿಕಾಸ ಸೌಧದಲ್ಲಿಯೂ ವಿದ್ಯುತ್​ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಬೆಸ್ಕಾಂ ಕಾಪೋರೇಟ್ ಕಚೇರಿ ಸೇರಿ ನಗರದಲ್ಲಿ 11 ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಆಗಸ್ಟ್ ಅಂತ್ಯಕ್ಕೆ 101 ಚಾರ್ಜಿಂಗ್ ಸೆಂಟರ್​ಗಳನ್ನು ಪ್ರಾರಂಭವಾಗುತ್ತಿದ್ದು, ಇವುಗಳ ಸಂಖ್ಯೆ 112ಕ್ಕೆ ಏರಲಿದೆ. ಇಷ್ಟೊಂದು ಚಾರ್ಜಿಂಗ್ ಸೆಂಟರ್​ಗಳು ಒಟ್ಟಿಗೆ ಪ್ರಾರಂಭವಾಗುತ್ತಿರುವುದು ದಾಖಲೆ.

ಅತಿ ಹೆಚ್ಚು ದ್ವಿಚಕ್ರ ವಾಹನ: ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ 48 ಲಕ್ಷ ದಾಟಿದೆ. ಕಾರು, ಬಸ್, ಲಾರಿ ಸೇರಿದಂತೆ ಎಲ್ಲ ಬಗೆಯ ವಾಹನಗಳ ಸಂಖ್ಯೆ 75 ಲಕ್ಷಕ್ಕೆ ಹೆಚ್ಚಳವಾಗಿದೆ. ಈಗಿರುವ ರಸ್ತೆಗಳ ಸಾಮರ್ಥ್ಯ ಆತ್ರ ಅಷ್ಟೆ ಇದೆ. ಆದರೆ, ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸಿದೆ. ವಾಹನಗಳ ದಟ್ಟಣೆಯಿಂದ ಟ್ರಾಫಿಕ್ ಸಮಸ್ಯೆಯಾದರೆ, ಮತ್ತೊಂದೆಡೆ ವಾಹನಗಳ ಹೊಗೆಯಿಂದಾಗಿ ಪರಿಸರ ಮಾಲಿನ್ಯ ಹೆಚ್ಚಿದೆ. ಅದಕ್ಕಾಗಿಯೇ ಪ್ರಕೃತಿ ಸ್ನೇಹಿ (ಹೊಗೆ ರಹಿತ) ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ರಾಜ್ಯದಲ್ಲಿ 5 ಸಾವಿರ ಎಲೆಕ್ಟ್ರಿಕ್ ಕಾರುಗಳಿದ್ದರೆ, ಬೆಂಗಳೂರಿನಲ್ಲಿಯೇ 4200 ಕಾರುಗಳಿವೆ. ರಾಜ್ಯದಲ್ಲಿ 8 ಸಾವಿರಕ್ಕೂ ಹೆಚ್ಚು ಬೈಕ್​ಗಳಿವೆ. ಪರಿಸರ ಸ್ನೇಹಿ ವಾಹನಗಳನ್ನು ಓಡಿಸಲು ನಿರ್ಧರಿಸಿರುವ ಬೆಂಗಳೂರು ನಗರ ಸಾರಿಗೆ ಕೂಡ (ಬಿಎಂಟಿಸಿ) 150 ಎಲೆಕ್ಟ್ರಿಕ್ ಬಸ್​ಗಳನ್ನು ಖರೀದಿ ಮಾಡಲು ಮುಂದಾಗಿದೆ.

ಡಿಸಿ ಚಾರ್ಜ್, ಎಸಿ ಚಾರ್ಜ್: ಡೈರೆಕ್ಟ್ ಚಾರ್ಜಿಂಗ್ ಹಾಕಿದರೆ 1 ಗಂಟೆಯಲ್ಲಿ ಬ್ಯಾಟರಿಗಳು ಸಂಪೂರ್ಣ ಚಾರ್ಜ್ ಆಗಿ ಬಿಡುತ್ತವೆ. ಎಸಿ ಚಾರ್ಜಿಂಗ್​ನಲ್ಲಿ ಹಾಕಿದರೆ ಕನಿಷ್ಠ 5 ಗಂಟೆ ಬೇಕಾಗುತ್ತದೆ. ಡೈರೆಕ್ಟ್ ಚಾರ್ಜ್ ಮಾಡುವ ಸೆಂಟರ್ ನಿರ್ವಣಕ್ಕೆ 4 ರಿಂದ 5 ಲಕ್ಷ ರೂ ಬೇಕು. ಎಸಿ ಚಾರ್ಜಿಂಗ್ ಸೆಂಟರ್​ಗೆ 50 ಸಾವಿರದಿಂದ 1 ಲಕ್ಷಇದ್ದರೂ ಸಾಕು. ಕಡಿಮೆ ಅವಧಿಯಲ್ಲಿಯೇ ಚಾರ್ಜ್ ಮಾಡಬೇಕು ಎಂಬ ಬೇಡಿಕೆ ಹೆಚ್ಚು ಇರುವುದರಿಂದ ಡಿಸಿ ಚಾರ್ಜಿಂಗ್​ಗೆ ಹೆಚ್ಚು ಬೇಡಿಕೆ ಇದೆ.

ಸರಾಸರಿ 100 ಕಿ.ಮೀ. ಮೈಲೇಜ್: ಬ್ಯಾಟರಿ ಆಧಾರಿತ ಎಲೆಕ್ಟ್ರಿಕ್ ವಾಹನಗಳು ಕನಿಷ್ಟ 100 ರಿಂದ 120 ಕಿಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿವೆ.

ಬಸ್​ಗಳಿಗೂ ಹೆವಿ ಡ್ಯೂಟಿ ಬ್ಯಾಟರಿ ಅಳವಡಿಸುವುದರಿಂದ 100 ಕಿ.ಮೀ. ಓಡಿಸಲು ಯಾವುದೇ ಸಮಸ್ಯೆ ಇಲ್ಲ. ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿಕೊಂಡರೆ ಆರಾಮವಾಗಿ ಪ್ರಯಾಣಿಸಬಹುದು.

ಪೆಟ್ರೋಲ್ ದರಕ್ಕಿಂತಲೂ ಅಗ್ಗ

ಎಲೆಕ್ಟ್ರಿಕ್ ವಾಹನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಸ್ಕಾಂ ಕಾಪೋರೇಟ್ ಕಚೇರಿಯಲ್ಲಿ ಉಚಿತವಾಗಿ ಚಾರ್ಜಿಂಗ್ ಮಾಡಿಕೊಡಲಾಗುತ್ತಿದೆ. 120 ಕಿ.ಮೀ. ಕ್ರಮಿಸುವ ಬ್ಯಾಟರಿಯನ್ನು ಒಂದು ಗಂಟೆ ಚಾರ್ಜ್ ಮಾಡಿದರೆ ಸಾಕು. ಬ್ಯಾಟರಿ ಚಾರ್ಜ್ ಮಾಡಲು ಬಳಕೆಯಾಗುವ ಪ್ರತಿ ಯೂನಿಟ್​ಗೆ 4 ರಿಂದ 5 ರೂ ದರ ವಿಧಿಸುವ ಚಿಂತನೆಯಿದೆ.

ಚಾರ್ಜ್ ಮಾಡಿಸಿಕೊಳ್ಳಲು 18ರಿಂದ 20 ಯೂನಿಟ್ ವಿದ್ಯುತ್ ಸಾಕು. 70 ರೂ. ಸರಾಸರಿಯಲ್ಲಿ ಬ್ಯಾಟರಿ ಚಾರ್ಜಿಂಗ್ ಮಾಡಲು ಸಾಧ್ಯವಿದೆ. ಆದ್ದರಿಂದ ಪೆಟ್ರೋಲ್ ರೇಟ್​ಗಿಂತಲೂ ಎಲೆಕ್ಟ್ರಿಕ್ ಚಾರ್ಜಿಂಗ್ ಅಗ್ಗವಾಗಲಿದೆ.

ಬೆಂಗಳೂರಿನಲ್ಲಿ ಪರಿಸರಸ್ನೇಹಿ ವಾಹನಗಳನ್ನು ಪ್ರೋತ್ಸಾಹಿಸಲು ಆಗಸ್ಟ್ ವೇಳೆಗೆ ಹೊಸದಾಗಿ 101 ಕಡೆ ಚಾರ್ಜಿಂಗ್ ಸೆಂಟರ್ ಪ್ರಾರಂಭಿಸಲಾಗುತ್ತಿದೆ. ವಿಧಾನಸೌಧ, ವಿಕಾಸಸೌಧಗಳಲ್ಲೂ ಚಾರ್ಜಿಂಗ್ ಸೆಂಟರ್​ಗಳಿರಲಿವೆ. ಸರ್ಕಾರಿ ಕಚೇರಿಗಳ ಕಡೆಯಲ್ಲಿ ಚಾರ್ಜಿಂಗ್ ಸೆಂಟರ್ ಪ್ರಾರಂಭಿಸಲಾಗುವುದು.

| ಬೆಸ್ಕಾಂ ಹಿರಿಯ ಅಧಿಕಾರಿ
ಕೃಪೆ:ವಿಜಯವಾಣಿ

ರಾಜ್ಯದಲ್ಲಿವೆ 15 ಸಾವಿರ ವಿದ್ಯುತ್ ವಾಹನ
there-are-15000-electric-vehicles-in-the-state

website developers in mysore