ಇನ್ನು ಸಣ್ಣ ರೈತರ ಖಾಸಗಿ ಸಾಲವೂ ಮನ್ನಾ

Promotion

ಬೆಂಗಳೂರು:ಜುಲೈ-25: ಸಮ್ಮಿಶ್ರ ಸರಕಾರ ರೂಪಿಸಿದ್ದ ಋಣಮುಕ್ತ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ದೊರೆತಿದೆ.

ಖಾಸಗಿ ಲೇವಾದೇವಿದಾರರಿಂದ ಕೈ ಸಾಲ ಪಡೆದಿರುವ ಸಣ್ಣ ರೈತರು, ದುರ್ಬಲ ವರ್ಗದವರು, ಭೂ ರಹಿತ ಕಾರ್ಮಿಕರು ಋಣಮುಕ್ತರಾಗಲು ಈ ಮಸೂದೆ ನೆರವು ನೀಡುತ್ತದೆ ಎಂದು ಹಂಗಾಮಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬುಧವಾರ ಪ್ರಕಟಿಸಿದರು.

ಜು.16ರಂದು ಮಸೂದೆಗೆ ರಾಷ್ಟ್ರಪತಿಯವರ ಅಂಕಿತ ದೊರೆತಿದ್ದು, ಮೈತ್ರಿ ಸರಕಾರದ ಕೊನೆಯ ದಿನವಾದ ಮಂಗಳವಾರ ಅಧಿಸೂಚನೆ ಹೊರಡಿಸಲಾಗಿದೆ. ಈ ಮಸೂದೆಯಡಿ, ಖಾಸಗಿಯವರಿಂದ ಸಾಲ ಪಡೆದಿರುವ ವಾರ್ಷಿಕ 1.20 ಲಕ್ಷ ರೂ. ಆದಾಯ ಇರುವ ಸಣ್ಣ ರೈತರು, ದುರ್ಬಲ ವರ್ಗದವರು, ಭೂ ರಹಿತ ಕಾರ್ಮಿಕರು 90 ದಿನಗಳಲ್ಲಿ ಉಪ ವಿಭಾಗಾಧಿಕಾರಿಗಳ ಮುಂದೆ ಸೂಕ್ತ ದಾಖಲೆಗಳ ಸಹಿತ ಅರ್ಜಿ ಸಲ್ಲಿಸಿದರೆ ಜು. 23ರ ವರೆಗೂ ಪಡೆದಿರುವ ಸಾಲ ಮನ್ನಾ ಆಗಲಿದೆ.

ಸಿವಿಲ್ ಕೋರ್ಟ್‌ ಸಹ ಈ ವ್ಯಾಜ್ಯಗಳಲ್ಲಿ ಮಧ್ಯಪ್ರವೇಶ ಮಾಡುವಂತಿಲ್ಲ. ರೈತರು ಖಾಸಗಿ ಲೇವಾದೇವಿದಾರರಿಂದ ಪಡೆದ ಸಾಲ ತೀರಿಸಿದ್ದರೂ ಅಡಮಾನ ಇರಿಸಿದ ಜಮೀನಿನ ದಾಖಲೆ ಪತ್ರ ನೀಡದೇ ಇದ್ದರೆ ಅಂಥವರ ವಿರುದ್ಧ ಉಪ ವಿಭಾಗಾಧಿಕಾರಿಗೆ ದೂರು ಸಲ್ಲಿಸಬಹುದು. ಈ ಸಂದರ್ಭದಲ್ಲಿ ಅವರು ಲೇವಾದೇವಿದಾರನಿಗೆ ನೋಟಿಸ್‌ ನೀಡಲು ಅವಕಾಶವಿದೆ. ನಿಯಮ ಉಲ್ಲಂಘಿಸಿದವರಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ, ಒಂದು ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ. ಜತೆಗೆ ನೋಡಲ್ ಅಧಿಕಾರಿ ಮಸೂದೆ ಅನುಷ್ಠಾನ ಮಾಡದೆ ಇದ್ದರೆ, ವಿಳಂಬ ಮಾಡಿದರೆ ಅವರಿಗೂ ಶಿಕ್ಷೆ, ದಂಡ ವಿಧಿಸುವ ಅವಕಾಶ ಉಂಟು. ಮುಂದಿನ ಹಂತದಲ್ಲಿ ಪ್ರಕರಣ ಜಿಲ್ಲಾಧಿಕಾರಿಗೆ ವರ್ಗಾವಣೆಯಾಗುತ್ತದೆ. ಯಾವುದೇ ಕಾನೂನು ಸಲಹೆಗಾರರು ಅಥವಾ ವಕೀಲರು ಸಹ ಲೇವಾದೇವಿದಾರರ ಪರ ಉಪ ವಿಭಾಗಾಧಿಕಾರಿಗಳ ಬಳಿ ವಕಾಲತ್ತು ಹಾಕುವಂತಿಲ್ಲ.

ಅರಸು ಜಾರಿಗೊಳಿಸಿದ್ದರು
ದೇವರಾಜ ಅರಸು ಅವರು ಹಿಂದೆ 1976ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಇದೇ ರೀತಿಯ ಡೆಬ್‌r ರಿಲೀಫ್ ಆ್ಯಕ್ಟ್ ಜಾರಿಗೊಳಿಸಿದ್ದರು. ನಾನು ರಾಜ್ಯ ಪ್ರವಾಸಗೈದ ಸಂದರ್ಭದಲ್ಲಿ ಹಲವಾರು ಮಂದಿ ಸಹಕಾರ ಸಂಘ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಪಡೆದವರಿಗೆ ಮನ್ನಾ ಮಾಡಿದ್ದೀರಿ. ಆದರೆ ಖಾಸಗಿ ಲೇವಾದೇವಿದಾರರಿಂದ ಹೆಚ್ಚು ಬಡ್ಡಿ ದರಕ್ಕೆ ಸಾಲ ಪಡೆದವರಿಗೆ ಏನೂ ಪ್ರಯೋ ಜನವಾಗುತ್ತಿಲ್ಲ ಎಂದು ಹೇಳಿದ್ದರು. ಇದ ರಿಂದಾಗಿ ಇಂತಹ ಮಸೂದೆ ಜಾರಿಗೆ ತೀರ್ಮಾ ನಿಸಲಾಗಿತ್ತು. ಎರಡು ಯೂನಿಟ್‌ (ನಾಲ್ಕು ಎಕರೆ) ಜಮೀನು ಹೊಂದಿರುವ ಮತ್ತು ಭೂ ರಹಿತ ಕೃಷಿ ಕಾರ್ಮಿಕರು ಹಾಗೂ ಇತರ ವರ್ಗದವರು ವಾರ್ಷಿಕ 1.20 ಲಕ್ಷ ರೂ. ಆದಾಯಕ್ಕಿಂತ ಕಡಿಮೆ ಇದ್ದರೆ ಅವರು ಖಾಸಗಿಯವರ ಬಳಿ ಎಷ್ಟೇ ಸಾಲ ಪಡೆದಿದ್ದರೂ ಮನ್ನಾ ಆಗಲಿದೆ. ಇದಕ್ಕಾಗಿ ಅವರು ಸಾಲ ಪಡೆದಿರುವ ಬಗ್ಗೆ ಒಂದು ದಾಖಲೆ ಒದಗಿಸಬೇಕು ಎಂದು ಕುಮಾರಸ್ವಾಮಿ ಹೇಳಿದರು.

ಪ್ರಮುಖ ಅಂಶಗಳೇನು?
-90 ದಿನಗಳಲ್ಲಿ ಉಪ ವಿಭಾಗಾಧಿ ಕಾರಿ ಗಳಿಗೆ ದಾಖಲೆ ಸಹಿತ ಅರ್ಜಿ ಸಲ್ಲಿಸಬೇಕು.
– ಹೀಗಾದರೆ ಜು.23ರ ವರೆಗಿನ ಸಾಲ ಮನ್ನಾ.
– ಸಿವಿಲ್‌ ಕೋರ್ಟ್‌ ಈ ವ್ಯಾಜ್ಯಗಳಲ್ಲಿ ಮಧ್ಯಪ್ರವೇಶ ಮಾಡುವಂತಿಲ್ಲ.
– ಖಾಸಗಿ ಲೇವಾದೇವಿದಾರರು ರೈತರು ಸಾಲ ತೀರಿಸಿದರೂ ದಾಖಲೆ ನೀಡದಿದ್ದರೆ 1 ವರ್ಷ ಜೈಲು, 1 ಲಕ್ಷ ರೂ. ದಂಡಕ್ಕೆ ಅವಕಾಶ
– ಮಸೂದೆ ಜಾರಿ ಮಾಡದ ನೋಡಲ್‌ ಅಧಿಕಾರಿಗೂ ಶಿಕ್ಷೆ ಉಂಟು.
– ಕಾನೂನು ಸಲಹೆಗಾರರು ಅಥವಾ ವಕೀಲರು ಸಹ ಲೇವಾದೇವಿದಾರರ ಪರ ವಕಾಲತ್ತು ಹಾಕುವಂತಿಲ್ಲ.
ಕೃಪೆ:ಉದಯವಾಣಿ

ಇನ್ನು ಸಣ್ಣ ರೈತರ ಖಾಸಗಿ ಸಾಲವೂ ಮನ್ನಾ
the-waiver-is-also-a-private-loan-for-small-farmers