ಜಕ್ಕೂರು ವಿಮಾನ ನಿಲ್ದಾಣ : ಬೆಂಗಳೂರಿನ ಹೊಸ ಹಾಟ್‌ಸ್ಪಾಟ್..!

 

ಬೆಂಗಳೂರು, ಅಕ್ಟೋಬರ್ ೧, ೨೦೨೧ (www.justkannada.in): ಬೆಂಗಳೂರಿನ ಹಳೆಯ ಹಾಗೂ ಅತ್ಯಂತ ನಿರ್ಲಕ್ಷಿತ ಜಕ್ಕೂರು ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರ ಕಾಯಕಲ್ಪ ನೀಡಲು ಯೋಜಿಸಿದ್ದು, ಈ ವಿಮಾನ ನಿಲ್ದಾಣದ ರನ್‌ವೇ ಅನ್ನು ನವೀಕರಿಸುವ ಕಾಮಗಾರಿ ಆರಂಭವಾಗಿದೆ. ಈ ವಿಮಾನನಿಲ್ದಾಣವನ್ನು ಪ್ರವಾಸೋದ್ಯಮ, ಹಾಗೂ ವಿಮಾನಗಳ ಶೆಡ್ಯೂಲ್ಡ್ ಲ್ಯಾಂಡಿಂಗ್ ಹಾಗೂ ಹೊರಡುವ ಚಟುವಟಿಕೆಗಳು ಶೀಘ್ರದಲ್ಲೇ ಆರಂಭವಾಗಲಿವೆ.

ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಅವರ ಪ್ರಕಾರ ಜಕ್ಕೂರು ವಿಮಾನ ನಿಲ್ದಾಣದ ರನ್‌ವೇ ಇನ್ನೊಂದು ವಾರದಲ್ಲಿ ಸಿದ್ಧವಾಗಲಿದೆ. ಇಲ್ಲಿರುವ ರನ್‌ವೇ ಉದ್ದ ಸಾಕಾಗುವುದಿಲ್ಲ. ಇದರ ಉದ್ದವನ್ನು ಹೆಚ್ಚಿಸಲು ಇನ್ನೂ ಮೂರು ಎಕರೆ ಸ್ಥಳದ ಅಗತ್ಯವಿದ್ದು, ಪ್ರಸ್ತುತ ಸಂಬಂಧಪಟ್ಟ ಅಧಿಕಾರಿಗಳು ರನ್‌ವೇಯನ್ನು ವಿಸ್ತರಿಸಲು ಅಗತ್ಯ ಭೂಮಿಯನ್ನು ವಶಪಡಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದ್ದಾರೆ.

“ನಾಗರಿಕ ವಿಮಾನ ಯಾನದ ಪ್ರಧಾನ ನಿರ್ದೇಶನಾಲಯದ ನಿಯಮಾವಳಿಗಳ ಪ್ರಕಾರ ಜಕ್ಕೂರು ವಿಮಾನ ನಿಲ್ದಾಣದ ಸುತ್ತಮುತ್ತಲಿನ ೫ ಕಿ.ಮೀ.ಗಳ ವ್ಯಾಪ್ತಿಯಲ್ಲಿ ೪೫ ಮೀ.ಗಳಿಗಿಂತ ಎತ್ತರವಾದ ಕಟ್ಟಡಗಳು ಇರುವಂತಿಲ್ಲ. ಆದರೆ ಇಲ್ಲಿ ನಿಯಮಗಳನ್ನು ಉಲ್ಲಂಘಿಸಿ ಅನೇಕ ಎತ್ತರದ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿವೆ. ಆದ್ದರಿಂದ ಇಂತಹ ಕಾನೂನುಬಾಹಿರವಾಗಿ ನಿರ್ಮಿಸಿರುವ ಎತ್ತರದ ಕಟ್ಟಡಗಳನ್ನು ಗುರುತಿಸಲು ಬಿಬಿಎಂಪಿ ಸಹಯೋಗದೊಂದಿಗೆ ಸಮೀಕ್ಷೆಯೊಂದನ್ನು ಕೈಗೊಳ್ಳಲಾಗಿದ್ದು, ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು,” ಎಂದು ವಿವರಸಿದರು.

ಜಕ್ಕೂರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮುಚ್ಚಿರುವ ಸರ್ಕಾರಿ ವಿಮಾನ ಹಾರಾಟ ತರಬೇತಿ ಶಾಲೆಯನ್ನು ಸಾಧ್ಯವಾದಷ್ಟು ಬೇಗ ಪುನರಾರಂಭಿಸಲಾಗುವುದು. ಈವರೆಗೆ ೩೪ ವಿದ್ಯಾರ್ಥಿಗಳು ವಿಮಾನ ಹಾರಾಟದ ತರಬೇತಿಗೆ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ, ಎಂದು ನಾರಾಯಣಗೌಡ ತಿಳಿಸಿದ್ದಾರೆ.

“ಈ ಹಿಂದೆ ಈ ವಿಮಾನ ಹಾರಾಟ ತರಬೇತಿ ಶಾಲೆಯನ್ನು ಮುಚ್ಚುವ ಹುನ್ನಾರ ನಡೆಸಲಾಗಿತ್ತು. ಹಿಂದೊಮ್ಮೆ ಬೆಂಗಳೂರು ನಗರದ ಹಿರಿಮೆಯಾಗಿದ್ದಂತಹ ಜಕ್ಕೂರು ವಿಮಾನ ನಿಲ್ದಾಣವನ್ನು ನಿರ್ಲಕ್ಷಿಸಲಾಗಿದೆ. ಇಲ್ಲಿ ಒಂದು ವಾಣಿಜ್ಯ ಸಂಕೀರ್ಣವನ್ನು ತೆರೆಯುವ ಪ್ರಸ್ತಾವನೆಯೂ ಇದ್ದು, ಈ ಸುತ್ತಲಿನ ಪ್ರದೇಶವನ್ನು ಪ್ರವಾಸೋದ್ಯಮ ಸ್ಥಳವನ್ನಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆಯಿದೆ,” ಎಂದು ವಿವರಿಸಿದರು.

ಇತ್ತೀಚಿನ ದಿನಗಳವರೆಗೂ ಜಕ್ಕೂರು ವಿಮಾನ ನಿಲ್ದಾಣದಲ್ಲಿ ನಾನ್-ಶೆಡ್ಯೂಲ್ಡ್ ವಿಮಾನದ ಲ್ಯಾಂಡಿಂಗ್ ಹಾಗೂ ಪಾರ್ಕಿಂಗ್ ಸೌಲಭ್ಯವಿತ್ತು. ಆದರೆ ಶೆಡ್ಯೂಲ್ಡ್ ವಿಮಾನ ಇಳಿಯುವುದಕ್ಕೆ ಅವಕಾಶವಿರಲಿಲ್ಲ. ಈಗ ಜಕ್ಕೂರು ವಿಮಾನ ನಿಲ್ದಾಣವನ್ನು ಪ್ರವಾಸೋದ್ಯಮದ ಸುಗಮಗಾರಿಕೆಗೆ ಅನುಮತಿಸಲಾಗಿದೆ. “ಮುಂದಿನ ದಿನಗಳಲ್ಲಿ ಪುನಃ ಇಲ್ಲಿ ವಿಮಾನಗಳ ಹಾರಾಟ ಆರಂಭವಾಗಲಿದೆ. ಜಕ್ಕೂರು ವಿಮಾನ ನಿಲ್ದಾಣದ ಒಂದು ಭಾಗವನ್ನು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಒದಗಿಸಲಾಗಿದ್ದು, ಈವರೆಗೆ ನಮಗೆ ಒಪ್ಪಿಕೊಂಡಿದ್ದ ಹಣದ ಪೈಕಿ ಕೇವಲ ರೂ.೧೦ ಕೋಟಿ ಬಂದಿದೆ. ಇನ್ನೂ ರೂ. ೧೩ ಕೋಟಿ ಬಾಕಿ ಬರಬೇಕಿದೆ,” ಎಂದು ಸಚಿವ ನಾರಾಯಣಗೌಡ ತಿಳಿಸಿದರು.

ಇತ್ತೀಚೆಗೆ ಇಲ್ಲಿ ವಿಮಾನಗಳ ಪಾರ್ಕಿಂಗ್ ಹಾಗೂ ಲ್ಯಾಂಡಿಂಗ್ ಶುಲ್ಕಗಲನ್ನೂ ಸಹ ಪರಿಷ್ಕರಿಸಲಾಯಿತು. ನಾನ್-ಶೆಡ್ಯೂಲ್ಡ್ ಆಪರೇಟರ್‌ಗಳಿಗೆ ಲ್ಯಾಂಡಿಂಗ್ ಶುಲ್ಕಗಳು ರೂ.೫,೦೦೦ ಹಾಗೂ ಶೆಡ್ಯೂಲ್ಡ್ ಆಪರೇಟರ್‌ಗಳಿಗೆ ರೂ.೧,೦೦೦ ಶುಲ್ಕ ನಿಗಧಿಪಡಿಸಲಾಗಿದೆ.

ಹೆಲಿಕಾಪ್ಟರ್‌ಗಳಿಗೆ ೨೪ ಗಂಟೆಗಳವರೆಗೆ ಪಾರ್ಕಿಂಗ್‌ಗೆ ಅವಕಾಶ ನೀಡಿದ್ದು, ಪ್ರತಿ ಗಂಟೆಗೆ ರೂ.೧೦೦ ಶುಲ್ಕ ನಿಗಧಿಪಡಿಸಲಾಗಿದೆ. ೨೪ ಗಂಟೆಗಳ ನಂತರ, ಮುಂದಿನ ಏಳು ದಿನಗಳವರೆಗೆ ಪಾರ್ಕಿಂಗ್ ಶುಲ್ಕ ಪ್ರತಿ ಗಂಟೆಗೆ ರೂ.೨೦೦ ವಿಧಿಸಲಾಗುತ್ತಿದೆ. ಅದೇ ರೀತಿ ೮ನೇ ದಿನದಿಂದ ೧೫ನೇ ದಿನದವರೆಗೆ ರೂ.೨೫,೦೦೦ ಹಾಗೂ ೧೫ನೇ ದಿನದಿಂದ ೩೦ನೇ ದಿನದವರೆಗೆ ರು.೫೦,೦೦೦ ಪಾರ್ಕಿಂಗ್ ಶುಲ್ಕ ನಿಗಧಿಪಡಿಸಲಾಗಿದೆ, ಎಂದು ಸರ್ಕಾರದ ಆದೇಶ ತಿಳಿಸಿದೆ.

ಅತೀ ಸಣ್ಣ ವಿಮಾನಗಳ ಲ್ಯಾಂಡಿAಗ್ ಶುಲ್ಕ ರೂ.೪೦೦ ನಿಗಧಿಯಾಗಿದ್ದರೆ, ಪಾರ್ಕಿಂಗ್ ಶುಲ್ಕ ಪ್ರತಿ ಗಂಟೆಗೆ ರೂ.೨೦ ನಿಗಧಿಪಡಿಸಲಾಗಿದೆ. ಈ ಶುಲ್ಕ ಪರಿಷ್ಕರಣೆಯನ್ನು ಸಮರ್ಥಿಸಿಕೊಂಡ ಸಚಿವ ನಾರಾಯಣಗೌಡ ಅವರು ಜಕ್ಕೂರು ವಿಮಾನ ನಿಲ್ದಾಣದಲ್ಲಿ ಈವರೆಗೆ ಸಂಗ್ರಹಿಸುತ್ತಿದ್ದಂತಹ ಶುಲ್ಕ ಅತ್ಯಲ್ಪವಾಗಿತ್ತು. ಆ ಮೊತ್ತದಿಂದ ವಿಮಾನ ನಿಲ್ದಾಣ ನಿರ್ವಹಣೆ ಬಹಳ ಕಷ್ಟವಾಗಿತ್ತು. ಆದ್ದರಿಂದ ಶುಲ್ಕ ಪರಿಷ್ಕರಣೆ ಅನಿವಾರ್ಯವಾಗಿತ್ತು, ಎಂದು ವಿವರಿಸಿದರು.

ಸುದ್ದಿ ಮೂಲ: ಬೆಂಗಳೂರ್ ಮಿರರ್

key words : the-new-hot-spot-Jakkur aerodrome- runway is being renovated.

ENGLISH SUMMARY : 

The much-neglected Jakkur aerodrome is all set to get a fresh tarmac as the runway is being renovated. The aerodrome will also be allowed to be used for tourism, and scheduled aircraft landings are set to begin, soon.