ಬಿಜೆಪಿ ಸಂಘಟನಾ ಪದ್ಧತಿಯಂತೆ ಆಯ್ಕೆಗೆ ಒಲವು

Promotion

ಬೆಂಗಳೂರು:ಮೇ-11: ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಕುರಿತಂತೆ ಚರ್ಚೆ ತೀವ್ರವಾಗಿರುವ ಬೆನ್ನಲ್ಲೇ ರಾಜ್ಯಾಧ್ಯಕ್ಷರು ಸೇರಿ ಇತರೆ ಸಮಿತಿಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಪಕ್ಷದ ಸಂವಿಧಾನದಲ್ಲಿ ಉಲ್ಲೇಖೀಸಿದಂತೆ ಸಂಘಟನಾ ಪದ್ಧತಿ ಅನುಸಾರವೇ ನಡೆಯಬೇಕೆಂಬ ಮಾತು ಬಲವಾಗಿ ಕೇಳಿಬರಲಾರಂಭಿಸಿದೆ. ಸಂಘಟನೆಯ ಪದ್ಧತಿಯಂತೆ ಗ್ರಾಮ/ವಾರ್ಡ್‌ ಸಮಿತಿ, ಮಂಡಲ ಸಮಿತಿ (ವಿಧಾನಸಭೆ/ ತಾಲೂಕು) ಹಾಗೂ ಜಿಲ್ಲಾ ಸಮಿತಿ ಅಧ್ಯಕ್ಷರನ್ನು ಆಯ್ಕೆ ಮಾಡಿ ನಂತರ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಬೇಕು.

ಆ ಮೂಲಕ ಪಕ್ಷದಲ್ಲಿನ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಮುಂದುವರಿಸಬೇಕು ಎಂಬುದು ಬಿಜೆಪಿ ಸಕ್ರಿಯ ಕಾರ್ಯಕರ್ತರ ಆಶಯ. ಹಾಗಾಗಿ ಈ ಬಾರಿ ವರಿಷ್ಠರು ಸಂಘಟನಾ ಪದ್ಧತಿ ಪಾಲನೆಗೆ ಒತ್ತು ನೀಡುವರೋ ಅಥವಾ ಕಳೆದ ಬಾರಿಯಂತೆ ನೇರವಾಗಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿ ಉಳಿದ ಸಮಿತಿಗಳ ಅಧ್ಯಕ್ಷರನ್ನು ನೇಮಕ ಮಾಡುವ ವ್ಯವಸ್ಥೆ ಮುಂದುವರಿಸುವರೋ ಎಂಬ ಕುತೂಹಲ ಕಾರ್ಯಕರ್ತರಲ್ಲಿ ಮೂಡಿದೆ.

ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ಎಸ್‌.ಯಡಿಯೂರಪ್ಪ ಅವರ ಮೂರು ವರ್ಷದ ಅಧಿಕಾರಾವಧಿ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಬಿಜೆಪಿ ಸಾರಥ್ಯವನ್ನು ಯಾರು ವಹಿಸಿಕೊಳ್ಳಲಿದ್ದಾರೆಂಬ ಬಗ್ಗೆ ಚರ್ಚೆ ಶುರುವಾಗಿದೆ. ರಾಜ್ಯಾಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ತೆರೆಮರೆಯಲ್ಲೇ ತೀವ್ರ ಕಸರತ್ತು ನಡೆಸುತ್ತಿದ್ದಾರೆ. ರಾಜ್ಯಾಧ್ಯಕ್ಷರ ಜತೆಗೆ ಗ್ರಾಮ, ಮಂಡಲ, ಜಿಲ್ಲಾ ಸಮಿತಿ ಅಧ್ಯಕ್ಷರ ಆಯ್ಕೆಯೂ ನಡೆಯುವ ನಿರೀಕ್ಷೆ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು, ಸಕ್ರಿಯ ಸದಸ್ಯರು ಉತ್ಸುಕರಾಗಿದ್ದಾರೆ.

ಸಂಘಟನಾ ಪದ್ಧತಿಯಂತೆ ನಡೆಯಲಿ: ಸಾಮಾನ್ಯವಾಗಿ ಗ್ರಾಮ ಪಂಚಾಯ್ತಿಯಿಂದ ರಾಷ್ಟ್ರೀಯ ಅಧ್ಯಕ್ಷರವರೆಗೆ ಚುನಾಯಿತರಾದ ಎಲ್ಲರೂ ಮೂರು ವರ್ಷಗಳ ಅಧಿಕಾರಾವಧಿ ಬಳಿಕ ಬದಲಾಗಬೇಕು. ಆದರೆ ಕಳೆದ ಬಾರಿ ವಿಶೇಷ ಸಂದರ್ಭವೆಂದು ಪರಿಗಣಿಸಿ ಪಕ್ಷದ ಕೇಂದ್ರೀಯ ಕಾರ್ಯಕಾರಿ ಸಮಿತಿಯು ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಎರಡನೇ ಅವಧಿಗೆ ಮುಂದುವರಿಸಲು ನಿರ್ಧರಿಸಿತು. ಉಳಿದಂತೆ ಎಲ್ಲ ಹಂತಗಳಲ್ಲೂ ಅಧ್ಯಕ್ಷರು ಬದಲಾಗಬೇಕು.

ಮೊದಲಿಗೆ ಚುನಾವಣಾ ಸಮಿತಿ ರಚಿಸಿ ಸಂಚಾಲಕರನ್ನು ನೇಮಿಸಬೇಕು. ಬಳಿಕ ಕೆಳಹಂತದಿಂದ ನಿಗದಿತ ಕಾಲಾವಧಿಯಲ್ಲಿ ಗ್ರಾಮ, ಮಂಡಲ ಹಾಗೂ ಜಿಲ್ಲಾ ಸಮಿತಿ ಅಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯಬೇಕು. ಆ ಬಳಿಕ ರಾಜ್ಯಾಧ್ಯಕ್ಷರ ನೇಮಕ ನಡೆಯಲಿದೆ. ಇದರಿಂದ ಎಲ್ಲ ಹಂತಗಳಲ್ಲೂ ಪ್ರಜಾಸತ್ತಾತ್ಮಕವಾಗಿ ಅಧ್ಯಕ್ಷರ ಆಯ್ಕೆ ನಡೆಯುವ ಸಂಘಟನಾ ಪದ್ಧತಿಯಿದ್ದು, ಅದೇ ಮುಂದುವರಿಯಬೇಕು ಎಂಬುದು ಸಕ್ರಿಯ ಸದಸ್ಯರ ಆಶಯ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ಕಳೆದ ಬಾರಿ ಬದಲಾವಣೆ: ಕಳೆದ ಬಾರಿ ಅಂದರೆ 2016ರಲ್ಲಿ ಈ ರೀತಿ ತಳ ಮಟ್ಟದಿಂದ ಆಯ್ಕೆ ಪ್ರಕ್ರಿಯೆ ನಡೆಯಲಿಲ್ಲ. ಬದಲಿಗೆ ವರಿಷ್ಠರೇ ನೇರವಾಗಿ ಯಡಿಯೂರಪ್ಪ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದರು. ಬಳಿಕ ಯಡಿಯೂರಪ್ಪ ಅವರು ಬಹುತೇಕ ಜಿಲ್ಲಾ ಸಮಿತಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದರು. ಜತೆಗೆ ಬಹಳಷ್ಟು ಮಂಡಲ ಸಮಿತಿಗಳಿಗೂ ಅಧ್ಯಕ್ಷರ ನೇಮಕವಾಯಿತು. ಇದು ಹಲವು ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬೆಳವಣಿಗೆಗಳಿಂದ ಬೇಸರಗೊಂಡ ಕೆಲ ನಾಯಕರು ಪ್ರತ್ಯೇಕ ಸಂಘಟನೆ ರಚಿಸಿಕೊಂಡು ಪರ್ಯಾಯ ನಾಯಕತ್ವವನ್ನು ಬೆಳೆಸಿಕೊಳ್ಳುವಷ್ಟರ ಮಟ್ಟಿಗೆ ಗಂಭೀರ ಸ್ವರೂಪ ಪಡೆದಿತ್ತು.

ಆಂತರಿಕ ಪ್ರಜಾಪ್ರಭುತ್ವದ ಪ್ರತೀಕ: ತಮ್ಮ ಗ್ರಾಮ/ವಾರ್ಡ್‌ ಸಮಿತಿ ಅಧ್ಯಕ್ಷ, ಮಂಡಲ ಅಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರನ್ನು ತಾವೇ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಆಯಾ ಹಂತದ ಸಕ್ರಿಯ ಸದಸ್ಯರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಇಚ್ಛೆಯಾಗಿರುತ್ತದೆ. ಇದರಿಂದ ಸ್ಥಳೀಯರ ಭಾವನೆ, ಆಶಯಕ್ಕೆ ಬೆಲೆ ಕೊಟ್ಟಂತಾಗುತ್ತದೆ. ಆ ಮೂಲಕ ಅವರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಂತಾಗಲಿದೆ.

ಮುಖ್ಯವಾಗಿ ಈ ವ್ಯವಸ್ಥೆ ಪಕ್ಷದಲ್ಲಿನ ಆಂತರಿಕ ಪ್ರಜಾಪ್ರಭುತ್ವದ ಪ್ರತೀಕದಂತಿದೆ. ಸ್ಥಳೀಯ ಸಂಘಟನೆಯ ಅಧ್ಯಕ್ಷರನ್ನು ಆಯ್ಕೆ ಮಾಡುವ ಅವಕಾಶ ಕಾರ್ಯಕರ್ತರು, ಪದಾಧಿಕಾರಿಗಳಿಗಿಲ್ಲ ಎನ್ನುವುದಾದರೆ ಸಂಘಟನೆ ಬಲಗೊಳ್ಳುವುದಾದರೂ ಹೇಗೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡೇ ಪಕ್ಷದ ಸಂವಿಧಾನದಲ್ಲಿ ಈ ಅಂಶ ಅಳವಡಿಸಲಾಗಿದೆ. ಅದು ಪಾಲನೆಯಾಗುವ ನಿರೀಕ್ಷೆ ಇದೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.

ಆಂತರಿಕ ಪ್ರಜಾಪ್ರಭುತ್ವ ನಿರಂತರ ಪಾಲನೆ: ಅನ್ಯ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿಯಲ್ಲಷ್ಟೇ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಯಿದ್ದು, ಅದರಂತೆ ನಿರಂತರವಾಗಿ ಪಾಲನೆಯಾಗುತ್ತಾ ಬಂದಿದೆ. ಗ್ರಾಮ ಸಮಿತಿಯಿಂದ ರಾಷ್ಟ್ರೀಯ ಅಧ್ಯಕ್ಷರವರೆಗೆ ಚುನಾವಣೆಗಳ ಮೂಲಕವೇ ಎಲ್ಲ ಪ್ರಮುಖ ಹಂತದಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡುವ ವ್ಯವಸ್ಥೆಯಿದೆ. ಕಳೆದ ಬಾರಿ ಈ ಪದ್ಧತಿ ಪಾಲನೆಯಲ್ಲಿ ತುಸು ಹಿನ್ನಡೆಯಾಗಿತ್ತು. ಆದರೆ ಈ ಬಾರಿ ಪಾಲನೆಯಾಗಬೇಕು ಎಂಬುದು ಎಲ್ಲ ಸಕ್ರಿಯ ಕಾರ್ಯಕರ್ತರ ಆಶಯ. ಇದಕ್ಕೆ ವರಿಷ್ಠರು ಮಾನ್ಯತೆ ನೀಡಿ ಸಂಘಟನಾ ಪದ್ಧತಿಯಂತೆಯೇ ಆಯ್ಕೆ ಪ್ರಕ್ರಿಯೆ ನಡೆಸುವ ನಿರೀಕ್ಷೆ ಇದೆ ಎಂದು ರಾಜ್ಯ ಬಿಜೆಪಿ ಉನ್ನತ ನಾಯಕರೊಬ್ಬರು ತಿಳಿಸಿದರು.
ಕೃಪೆ:ಉದಯವಾಣಿ

ಬಿಜೆಪಿ ಸಂಘಟನಾ ಪದ್ಧತಿಯಂತೆ ಆಯ್ಕೆಗೆ ಒಲವು
the-bjp-is-in-favor-of-the-organizational-system