ಮನೆ ಮನೆಗೆ ಆರೋಗ್ಯ ಶಿಬಿರ: ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಆರೋಗ್ಯ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಕೊಡುಗೆಗಳೇನು..?

Promotion

ಬೆಂಗಳೂರು,ಫೆಬ್ರವರಿ,17,2023(www.justkannada.in): ರಾಜ್ಯ ಬಜೆಟ್ ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ 15, 151 ಕೋಟಿ  ರೂ ಅನುದಾನ ಮೀಸಲಿಟ್ಟಿರುವ ಸಿಎಂ ಬಸವರಾಜ ಬೊಮ್ಮಾಯಿ ಆರೋಗ್ಯ ಕ್ಷೇತ್ರದಲ್ಲಿ ಹಲವು ಕಾರ್ಯಕ್ರಮಗಳನ್ನ ಘೋಷಿಸಿದ್ದಾರೆ.

ವಿಧಾನಸಭೆಯಲ್ಲಿ ಇಂದು ಬಜೆಟ್ ಮಂಡಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ಪ್ರಸಕ್ತ ವರ್ಷ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು. ಮೈಸೂರು, ಶಿವಮೊಗ್ಗ ಮತ್ತು ಕಲಬುರಗಿಗಳಲ್ಲಿ ಕಿದ್ವಾಯಿ ಸಂಸ್ಥೆಯಡಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಜತೆಗೆ ಪ್ರಸಕ್ತ ವರ್ಷದಲ್ಲಿ ರಾಯಚೂರಿನಲ್ಲಿ ಏಮ್ಸ್ ಮಾದರಿಯ ಆಸ್ಪತ್ರೆ ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.

ಹಾಗೆಯೇ  ಮನೆ ಮನೆಗೆ ಆರೋಗ್ಯ’ ಎಂಬ ಕಾರ್ಯಕ್ರಮದಡಿಯಲ್ಲಿ ರಾಜ್ಯದ ಗ್ರಾಮೀಣ ಜನತೆಗೆ 2023-24ನೇ ಸಾಲಿನಲ್ಲಿ ಎರಡು ಬಾರಿ ಹಳ್ಳಿಗಳಲ್ಲಿ ಆರೋಗ್ಯ ಶಿಬಿರಗಳನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಆಯೋಜಿಸಲಾಗುವುದು. ಇದರಿಂದ ತೀವ್ರವಾದ ಕಾಯಿಲೆಗಳನ್ನು ಆರಂಭದಲ್ಲಿಯೇ ಪತ್ತೆಹಚ್ಚಿ ಜನರ ಆರೋಗ್ಯ ಕಾಪಾಡುವ ಗುರಿ ಹೊಂದಲಾಗಿದೆ. ಇದರೊಂದಿಗೆ ಈ ಯೋಜನೆಯಡಿ ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುತ್ತಿರುವವರ ಮನೆ ಬಾಗಿಲಿಗೆ ಔಷಧಿಗಳನ್ನು ಕ್ರಮವಹಿಸಲಾಗುವುದು ಎಂದು ಬಜೆಟ್​​ನಲ್ಲಿ  ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ.

ಬೆಂಗಳೂರಿನಲ್ಲಿ 2022-23 ನೇ ಸಾಲಿನಲ್ಲಿ 243 ವಾರ್ಡ್‌ಗಳಲ್ಲಿ ನಮ್ಮ ಕ್ಲಿನಿಕ್ ಮತ್ತು 27 ಸ್ಮಾರ್ಟ್ ವರ್ಚುಯಲ್ ಕ್ಲಿನಿಕ್ ಗಳನ್ನು ಅನುಮೋದಿಸಲಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ 50 ಡಯಾಲಿಸಿಸ್ ಹಾಸಿಗೆಗಳು ಮತ್ತು 300 ಹಾಸಿಗೆಗಳ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ. ಮಹಾನಗರದ ಆರೋಗ್ಯ ಆಡಳಿತ ವ್ಯವಸ್ಥೆಯನ್ನು ಬೆಂಗಳೂರು ಹೆಲ್ತ್ ಸಿಸ್ಟಮ್ಸ್ ಎಂದು ಪುನರ್ ರಚನೆ ಮಾಡಲು  ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಜೊತೆಗೆ ಆರೋಗ್ಯ ದಾಖಲೆಗಳನ್ನು ಒಂದೆಡೆ ಸುರಕ್ಷಿತವಾಗಿ ಕ್ರೂಢೀಕರಿಸಲು, ರೋಗಿಗಳ ಸಮ್ಮತಿಯೊಂದಿಗೆ ವೈದ್ಯಕೀಯ ದಾಖಲಾತಿಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ಇದರಿಂದ ಮುಂದಿನ ಚಿಕಿತ್ಸೆಗೆ ಸಹಾಯವಾಗಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಹೊಸದಾಗಿ 6 ಇಎಸ್​ಐ ಆಸ್ಪತ್ರೆಗಳ ನಿರ್ಮಾಣಕ್ಕೆ ಕ್ರಮ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಹೊಸ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ ಮಾಡಲಾಗುವುದು. ರಾಜ್ಯದ ಶಿಶುಮರಣ ಪ್ರಮಾಣ ತಗ್ಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

Key words: Super -specialty -hospital -Uttara Kannada – contributions-budget – health sector