ಜಲಜಾಗೃತಿ ಬಗ್ಗೆ ಜನಜಾಗೃತಿ ಮೂಡಿಸಿದ ಬೀದಿನಾಟಕ ‘ಬೆಂಗಳೂರ್ ನೀರಿಲ್ಲ’

ಬೆಂಗಳೂರು, ಜು 14,2019(www.justkannada.in):  ಒಂದು ಕಡೆ ಅಂತರ್ಜಲ ಮಟ್ಟ ಕುಸಿಯುತ್ತಿದ್ದರೆ, ಇನ್ನೊಂದುಕಡೆ ಮಳೆ ಅಭಾವ ತಲೆದೋರಿದೆ. ಇದರ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧಭಾಗ  ಹಾಗೂ ದೇಶದ ಬಹುತೇಕ ಭಾಗಗಳಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಬರಿ ಸಮಸ್ಯೆಗಳ ಬಗ್ಗೆ ಚಿಂತಿಸುವುದಕ್ಕಿಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಅವಶ್ಯಕ. ಪರಿಹಾರದ ಜೊತೆಗೆ ನೀರಿನ ಮಹತ್ವ ಹಾಗೂ ಉಳಿಸುವಿಕೆ ಬಗ್ಗೆ ಅರಿವು ಮೂಡಿಸುವುದು ಇನ್ನೂ ಅಗತ್ಯ. ಈ ನಿಟ್ಟಿನಲ್ಲಿ ‘ಸಮರ್ಪಣ ರಂಗಕಲಾವಿದರ ತಂಡ’ ಜಲಜಾಗೃತಿಯ ಜೊತೆಗೆ ಜನಜಾಗೃತಿಯನ್ನು ಮೂಡಿಸುವ ಪ್ರಯತ್ನವನ್ನು ಮಾಡುತ್ತಿದೆ.

ಭಾನುವಾರ ನಗರದ ಲಾಲ್ ಬಾಗ್ , ಜಯನಗರದ ಮೈಯಾಸ್ ವೃತ್ತದ ಬಳಿ ‘ಬೆಂಗಳೂರ್ ನೀರಿಲ್ಲ’ ಹೆಸರಿನ ಬೀದಿ ನಾಟಕ ಪ್ರದರ್ಶಿಸಿತು. ಉದ್ಯಾನನಗರಿಯಾಗಿದ್ದ ಬೆಂಗಳೂರಿನಲ್ಲಿ ಪ್ರತಿಹನಿ ನೀರನ್ನು ಕಾಪಾಡುವ ಅದನ್ನು ಶೇಖರಿಸಿಡುವ ತೀರಾ ಅಗತ್ಯವಿದೆ. ಮಳೆ ಕೊಯ್ಯಲು ಪದ್ಧತಿ, ಪ್ರಸಕ್ತ ಚೆನ್ನೈನಲ್ಲಿ ಎದುರಾಗಿರುವ ಜಲ ಸಮಸ್ಯೆ ಸೇರಿದಂತೆ ಹಲವು ರೀತಿಯ ನೀರಿನ ಸಮಸ್ಯೆಯನ್ನು ಬೀದಿ ನಾಟಕದ ಮೂಲಕ ಜನರ ಮುಂದೆ ತೆರೆದಿಡುವ ಕೆಲಸ ಮಾಡಲಾಯಿತು.

ರಂಗಕಲಾವಿದ, ನಿರ್ದೇಶಕ ಅರವಿಂದ್ ಚಿಂತಾಮಣಿ ನಿರ್ದೇಶನದಲ್ಲಿ ಮೂಡಿಬಂದ ‘ಬೆಂಗಳೂರ್ ನೀರಿಲ್ಲ’ ಬೀದಿನಾಟಕ ಇದಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ತೊಡಗಿರುವ ತಂಡದ ಸದಸ್ಯರು ‘ಸಮರ್ಪಣ’ ಹೆಸರಿನಲ್ಲಿ ತಂಡ ಕಟ್ಟಿಕೊಂಡು ಜನಜಾಗೃತಿ ಮೂಡಿಸುವ ವಿಷಯಗಳನ್ನು ಪ್ರಸ್ತುತಪಡಿಸುತ್ತಿರುವುದಕ್ಕೆ  ಸಾರ್ವಜನಿಕರಿಂದ ಪ್ರಶಂಸೆಯ ಮಾತುಗಳು ಕೇಳಿಬಂದಿದ್ದು, ಜನಜಾಗೃತಿ ಮೂಡಿಸುವ ಪ್ರಯತ್ನ ನಿರಂತರವಾಗಿ ಸಾಗಲಿ ಎಂದು ಹಾರೈಸಲಾಯಿತು.

Key words:  street –drama-people’-awareness – water -Bangalore