ರಾಜ್ಯವು ಗುಣಮಟ್ಟದ ಶಿಕ್ಷಣ, ಉಜ್ವಲ ಅವಕಾಶಗಳ ತಾಣ-ಸಚಿವ  ಅಶ್ವತ್ಥನಾರಾಯಣ್

Promotion

ಬೆಂಗಳೂರು,ಡಿಸೆಂಬರ್,8,2021(www.justkannada.in):  ಕರ್ನಾಟಕವು ಜಾಗತಿಕ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಉಜ್ವಲ ಅವಕಾಶಗಳಿಗೆ ಹೇಳಿಮಾಡಿಸಿದ ರಾಜ್ಯವಾಗಿದೆ. ಇಡೀ ದೇಶದಲ್ಲಿ ಇಂದು ಶಿಕ್ಷಣದಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ನಗರದ ಮೈಸೂರು ರಸ್ತೆಯಲ್ಲಿ ನಿರ್ಮಾಣವಾಗಿರುವ ಆರ್.ವಿ.ವಿಶ್ವವಿದ್ಯಾಲಯವನ್ನು ಉದ್ಘಾಟಿಸಿ ಬುಧವಾರ ಮಾತನಾಡಿದ ಅವರು, 21ನೇ ಶತಮಾನವು ಜ್ಞಾನಾಧಾರಿತ ಆರ್ಥಿಕತೆಯ ಯುಗವಾಗಿದ್ದು, ಗುಣಮಟ್ಟದ ಶಿಕ್ಷಣವು ಮಾತ್ರ ನಮ್ಮ ಸಮಸ್ಯೆಗಳಿಗೆ ಸದೃಢ ಪರಿಹಾರ ಕೊಡುತ್ತದಷ್ಟೆ ಎಂದು ನುಡಿದರು.

ಇಂದು ಉದ್ಯೋಗರಂಗದಲ್ಲಿ ಕೌಶಲ್ಯಪೂರ್ಣ ಮಾನವ ಸಂಪನ್ಮೂಲಕ್ಕೆ ಅಪಾರ ಬೇಡಿಕೆ ಇದೆ. ಇದಕ್ಕೆ ತಕ್ಕಂತೆ ರಾಜ್ಯದಲ್ಲಿ ಶಿಕ್ಷಣವನ್ನು ಉದ್ಯೋಗದಾತ ಕಂಪನಿಗಳೊಂದಿಗೆ ಬೆಸೆಯಲಾಗಿದೆ. ಜೊತೆಗೆ ಪ್ರಧಾನಿ ಮೋದಿಯವರ ಆಶಯದಂತೆ ರಾಜ್ಯವು ದೇಶದಲ್ಲೇ ಮೊದಲನೆಯದಾಗಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಅವರು ಪ್ರತಿಪಾದಿಸಿದರು.

ರಾಜ್ಯದಲ್ಲಿ 8 ಸಾವಿರ ಸ್ಮಾರ್ಟ್ ಕ್ಲಾಸ್ ರೂಮುಗಳನ್ನು ತೆರೆಯಲಾಗಿದ್ದು, 3.50 ಲಕ್ಷ ಆಧುನಿಕ ಕೋರ್ಸುಗಳು ವಿದ್ಯಾರ್ಥಿಗಳಿಗೆ ಉಚಿತವಾಗಿ ಲಭ್ಯವಿವೆ. ಇದಲ್ಲದೆ, ಸರಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಮತ್ತು ಲ್ಯಾಪ್ ಟಾಪ್ ಗಳನ್ನು ವಿತರಿಸಲಾಗಿದೆ ಎಂದು ಅವರು ವಿವರಿಸಿದರು.

ರಾಜ್ಯದಲ್ಲಿ ಎಲ್ಲ ವಲಯಗಳಲ್ಲೂ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಜತೆಗೆ ಡಿಜಿಟಲ್ ಎಕಾನಮಿ ಮಿಷನ್ ಯೋಜನೆಯು ಸಮಗ್ರ ಬೆಳವಣಿಗೆಗೆ ಒತ್ತು ಕೊಡುತ್ತಿದೆ. ಈ ವಿಚಾರದಲ್ಲಿ ರಾಜ್ಯವು ಸಿಂಗಪುರವನ್ನು ಬಿಟ್ಟರೆ ಇಡೀ ಜಗತ್ತಿನಲ್ಲಿ ದ್ವಿತೀಯ ಸ್ಥಾನದಲ್ಲಿದೆ  ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದರು.

ಮೋದಿಯವರು 2024ರ ಹೊತ್ತಿಗೆ ಭಾರತವನ್ನು 5 ಟ್ರಿಲಿಯನ್ ಮೌಲ್ಯದ ಆರ್ಥಿಕತೆಯಾಗಿ ಬೆಳೆಸುವ ಸಂಕಲ್ಪ ಮಾಡಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ್ಯವನ್ನು 1.50 ಟ್ರಿಲಿಯನ್ ಮೌಲ್ಯದ ಆರ್ಥಿಕ ವ್ಯವಸ್ಥೆಯನ್ನಾಗಿ ಬೆಳೆಸುವ ಹೊಂಗನಸು ಹೊಂದಿದ್ದಾರೆ. ಅತ್ಯುತ್ತಮ ಶಿಕ್ಷಣದ ಮೂಲಕ ಈ ಕನಸನ್ನು ನನಸು ಮಾಡಿಕೊಳ್ಳಬಹುದು. ಡಿಜಿಟಲೀಕರಣದ ಮೂಲಕ ಈ ನಿಟ್ಟಿನಲ್ಲಿ ಶೇ.50ರಷ್ಟು ಕಾಣಿಕೆ ನೀಡಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರ್.ವಿ.ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಎಂ.ಕೆ.ಪಾಂಡುರಂಗ ಶೆಟ್ಟಿ, ಆರ್.ವಿ. ವಿಶ್ವವಿದ್ಯಾಲಯದ ಕುಲಪತಿ ವೈ.ಎಸ್.ಆರ್.ಮೂರ್ತಿ, ಸಮಕುಲಪತಿಗಳಾದ ನಾಗರಾಜ್ ಮತ್ತು ದ್ವಾರಕೀಪ್ರಸಾದ್, ರಿಜಿಸ್ಟ್ರಾರ್ ಕೃಪಾಶಂಕರ್ ಮುಂತಾದವರು ಉಪಸ್ಥಿತರಿದ್ದರು.

Key words: state -quality education- site – splendid –opportunities-Minister- Ashwaththanarayan