ಸರ್ಕಾರ ಅತಂತ್ರ, ವರ್ಗ ಸ್ವತಂತ್ರ: 10 ದಿನಗಳಲ್ಲಿ ರಾಜ್ಯದಲ್ಲಿ ಎರಡು ಸಾವಿರ ಅಧಿಕಾರಿಗಳ ಎತ್ತಂಗಡಿ

ಬೆಂಗಳೂರು:ಜುಲೈ-19: ಅಭಿವೃದ್ಧಿ ಕೆಲಸಗಳನ್ನು ಬಿಟ್ಟು ಅಧಿಕಾರ ಉಳಿಸಿಕೊಳ್ಳುವ ಕಸರತ್ತಿನಲ್ಲೇ ಬಿಜಿಯಾಗಿರುವ ರಾಜ್ಯ ಸರ್ಕಾರ, ಕಳೆದ 10 ದಿನಗಳ ಅವಧಿಯಲ್ಲಿ ವಿವಿಧ ಇಲಾಖೆಗಳ ಬರೋಬ್ಬರಿ 2 ಸಾವಿರ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮಾರ್ಗಸೂಚಿಯನ್ನು ಗಾಳಿಗೆ ತೂರುವ ಮೂಲಕ ತನಗೆ ಬೇಕಾದ ಅಧಿಕಾರಿಗಳಿಗೆ ನೆಲೆ ಕಲ್ಪಿಸುವಲ್ಲಿ ಸರ್ಕಾರ ನಿರತವಾಗಿದೆ. ಸಮಾಜ ಕಲ್ಯಾಣ ಇಲಾಖೆ, ಅರಣ್ಯ, ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ ಸೇರಿ ಪ್ರಮುಖ ಸಚಿವಾಲಯಗಳಲ್ಲಿ ವರ್ಗಾವಣೆ ಬಯಸಿದ್ದ ಅಧಿಕಾರಿಗಳಿಗೆ ವರ್ಗಾವಣೆ ಭಾಗ್ಯ ಕಲ್ಪಿಸಿದೆ.

ಸೂಪರ್ ಸಿಎಂ ಎಂದೇ ಕರೆಯಲ್ಪಡುವ ಎಚ್.ಡಿ. ರೇವಣ್ಣ ನೇತೃತ್ವದ ಪಿಡಬ್ಲ್ಯುಡಿ ಇಲಾಖೆಯಲ್ಲೇ ಅತಿ ಹೆಚ್ಚು ವರ್ಗಾವಣೆ ಆದೇಶಗಳು ಹೊರಬಿದ್ದಿರುವುದನ್ನು ದಾಖಲೆಗಳು ದೃಢಪಡಿಸಿವೆ. ಇದಾದ ನಂತರ ಪೊಲೀಸ್ ಇಲಾಖೆಯಲ್ಲಿ ಡಿವೈಎಸ್​ಪಿಗಳು, ಇನ್​ಸ್ಪೆಕ್ಟರ್​ಗಳ ದೊಡ್ಡ ಪಟ್ಟಿಯೇ ಬಿಡುಗಡೆಗೊಂಡಿದೆ.

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವರ್ಗಾವಣೆ ನಡೆಯಲು ಸರ್ಕಾರದ ಅತಂತ್ರ ಸ್ಥಿತಿಯೇ ಕಾರಣ ಎಂಬ ಮಾತುಗಳು ಕೇಳಿಬಂದಿವೆ. ಅಧಿಕಾರಿಗಳಿಗೆ ಎಷ್ಟು ಬೇಕಾದರೂ ಹಣ ಕೊಟ್ಟು ತಮಗೆ ಬೇಕಾದ ಸ್ಥಳಕ್ಕೆ ಹೋಗುವ ಆತುರ. ಇನ್ನು ಸಂಬಂಧಪಟ್ಟ ಇಲಾಖೆಗಳ ಸಚಿವರಿಗೆ ಅಂತಿಮ ಕ್ಷಣದಲ್ಲಿ ಆಪ್ತ ಅಧಿಕಾರಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಇದ್ದರೆ, ಕೊನೆಯ ಪರಿಸ್ಥಿತಿಯಲ್ಲಿ ಸಿಕ್ಕಷ್ಟು ಸಂಪಾದನೆ ಮಾಡಿಕೊಳ್ಳುವುದು ಮತ್ತೊಂದು ತಂತ್ರ ಎಂದು ಹೇಳಲಾಗುತ್ತಿದೆ.

30 ರಿಂದ – 50 ಲಕ್ಷ ರೂ. ಬಿಡ್

ಹಲವರು 30 ರಿಂದ 50 ಲಕ್ಷ ರೂ.ವರೆಗೂ ನೀಡಿ ಬೆಂಗಳೂರಿನಲ್ಲಿ ತಮಗೆ ಬೇಕಾದ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಇಷ್ಟೊಂದು ಹಣ ಕೊಟ್ಟು ಹೇಗೆ ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವೆಂಬುದು ಹಿರಿಯ ಅಧಿಕಾರಿಯೊಬ್ಬರ ಪ್ರಶ್ನೆ.
ಕೃಪೆ:ವಿಜಯವಾಣಿ

ಸರ್ಕಾರ ಅತಂತ್ರ, ವರ್ಗ ಸ್ವತಂತ್ರ: 10 ದಿನಗಳಲ್ಲಿ ರಾಜ್ಯದಲ್ಲಿ ಎರಡು ಸಾವಿರ ಅಧಿಕಾರಿಗಳ ಎತ್ತಂಗಡಿ
state-govt-officer-transfer-govt-officer-transfer-govt-dept