ಸಾಲಮನ್ನಾದಲ್ಲಿ ಮಹಾರಾಷ್ಟ್ರಕ್ಕೆ ಬೆಣ್ಣೆ, ಕರ್ನಾಟಕಕ್ಕೆ ಸುಣ್ಣ!

ಬೆಂಗಳೂರು:ಜೂ-14: ರೈತರ ಕೃಷಿ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ಬ್ಯಾಂಕ್​ಗಳು ಮಹಾರಾಷ್ಟ್ರಕ್ಕೆ ಬೆಣ್ಣೆ ನೀಡಿದ್ದರೆ, ರಾಜ್ಯಕ್ಕೆ ಸುಣ್ಣ ನೀಡಿವೆ. ಮಹಾರಾಷ್ಟ್ರ ಮಾದರಿಯನ್ನೇ ರಾಜ್ಯಕ್ಕೂ ಅನ್ವಯಿಸುವಂತೆ ಸರ್ಕಾರ, ಬ್ಯಾಂಕರ್​ಗಳ ಮುಂದೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ.

ರಾಜ್ಯ ಸರ್ಕಾರ ಆರಂಭದಲ್ಲಿ ಸಾಲಮನ್ನಾ ಘೋಷಣೆ ಮಾಡಿದಾಗ 43 ಸಾವಿರ ಕೋಟಿ ರೂ. ಆಗಬಹುದೆಂದು ಅಂದಾಜು ಮಾಡಲಾಗಿತ್ತು. ಷರತ್ತುಗಳಿಂದಾಗಿ ಆ ಮೊತ್ತ 18ರಿಂದ 20 ಸಾವಿರ ಕೋಟಿ ರೂ.ಗೆ ಇಳಿದಿದೆ. ಮಹಾರಾಷ್ಟ್ರದಲ್ಲಿ ನೀಡಿರುವಂತೆ ರಿಯಾಯಿತಿಗೆ ಬ್ಯಾಂಕ್​ಗಳು ಒಪ್ಪಿದರೆ ಇನ್ನಷ್ಟು ಕಡಿಮೆಯಾಗಲಿದೆ. ಒಂದು ಅವಧಿ ತೀರುವಳಿಗೆ ಬಡ್ಡಿ ಮನ್ನಾ ಮಾಡುವುದಾಗಿ ಬ್ಯಾಂಕ್​ಗಳು ಬಾಕಿ ಉಳಿಸಿಕೊಂಡ ರೈತರಿಗೆ ಆಹ್ವಾನ ನೀಡಿದ್ದವು. ಸರ್ಕಾರವೇ ಬೆಳೆಸಾಲ ಮನ್ನಾಕ್ಕೆ ಮುಂದಾದ ನಂತರ ಈ ನಿರ್ಧಾರದಿಂದ ಬ್ಯಾಂಕ್​ಗಳು ಹಿಂದೆ ಸರಿದವು. ಬಡ್ಡಿ ಮನ್ನಾ ಮಾಡಿದ್ದರೆ, ಸರ್ಕಾರಕ್ಕೆ ಸುಮಾರು 1,000 ಕೋಟಿ ರೂ.ಗೂ ಹೆಚ್ಚಿನ ಮೊತ್ತ ಉಳಿತಾಯವಾಗುತ್ತಿತ್ತು.

ಏನಿದು ಮಹಾ ಮಾದರಿ?

ಮಹಾರಾಷ್ಟ್ರ ಸರ್ಕಾರ ಕೂಡ ಸಾಲಮನ್ನಾ ಘೋಷಿಸಿದ್ದು, ಅಲ್ಲಿ ಎನ್​ಪಿಎ ಸಾಲಕ್ಕೆ ಬ್ಯಾಂಕ್​ಗಳು ಶೇ.25 ರಿಯಾಯಿತಿ ನೀಡಿವೆ. ಇದರಿಂದ ನೂರಾರು ಕೋಟಿ ರೂ. ಉಳಿತಾಯವಾಗಿದೆ. ಅದೇ ಮಾದರಿಯನ್ನು ಕರ್ನಾಟಕಕ್ಕೂ ಅನ್ವಯಿಸುವಂತೆ ಸರ್ಕಾರ ಒಂದು ವರ್ಷದಿಂದ ಪ್ರಯತ್ನ ಮಾಡುತ್ತಿದ್ದರೂ ಬ್ಯಾಂಕ್​ಗಳು ಒಪ್ಪಿಲ್ಲ.

ರಾಜ್ಯದಲ್ಲಿ ಎಷ್ಟಿದೆ ಎನ್​ಪಿಎ

ರಾಜ್ಯದಲ್ಲಿ ವಾಣಿಜ್ಯ ಬ್ಯಾಂಕ್​ಗಳಲ್ಲಿ 1,08,136 ರೈತರ 965.7 ಕೋಟಿ ರೂ ಎನ್​ಡಿಎ ಸಾಲ ಇದೆ. ಸರ್ಕಾರ ಆರಂಭದಲ್ಲಿ ಬ್ಯಾಂಕ್​ಗಳಿಂದ ಮಾಹಿತಿ ಕೇಳುತ್ತಿದ್ದಂತೆ ಎನ್​ಪಿಎ ಹೆಚ್ಚಿರುವುದಾಗಿ ತಿಳಿಸಿದ್ದವು. ಬೆಳೆಸಾಲ ಮಾತ್ರ ಮಾಹಿತಿ ಪಡೆದಾಗ ಈ ಮೊತ್ತ ಲಭ್ಯವಾಗಿದೆ. ಎನ್​ಪಿಎ ಸಾಲವನ್ನು ಸಹ 2 ಲಕ್ಷ ರೂ. ತನಕ ತೀರಿಸಲು ಸರ್ಕಾರ ಸಿದ್ಧವಿದೆ. ಮಹಾರಾಷ್ಟ್ರ ರೀತಿಯಲ್ಲಿ ರಾಜ್ಯಕ್ಕೂ ಬ್ಯಾಂಕ್​ಗಳು ನೆರವಾಗಿದ್ದರೆ ಎನ್​ಪಿಎ ಸಾಲದಲ್ಲಿಯೇ 242 ಕೋಟಿ ರೂ. ಉಳಿತಾಯವಾಗುತ್ತಿತ್ತು. ಸಾಲಮನ್ನಾಕ್ಕಾಗಿ ಸರ್ಕಾರ ಬಹುತೇಕ ಇಲಾಖೆಗಳಲ್ಲಿ ಅನುದಾನ ಕಡಿತ ಮಾಡಿದೆ. ಬಜೆಟ್​ನಲ್ಲಿಯೇ ಕಡಿತ ಮಾಡಿರುವ ಪರಿಣಾಮ ಅಭಿವೃದ್ಧಿ ಯೋಜನೆಗಳು ಕುಂಠಿತವಾಗಿವೆ. ಬಡ್ಡಿ ಮನ್ನಾ ಹಾಗೂ ರಿಯಾಯಿತಿಗೆ ಒಪ್ಪಿದ್ದರೆ ಸರ್ಕಾರದ ಆರ್ಥಿಕ ಸ್ಥಿತಿಗೆ ಅನುಕೂಲವಾಗುತ್ತಿತ್ತು ಎಂದು ಮೂಲಗಳು ಹೇಳುತ್ತವೆ.

ಹಣ ಬಿಡುಗಡೆ

ಸರ್ಕಾರ ಸಾಲಮನ್ನಾ ಘೋಷಣೆ ಮಾಡಿದಂತೆ 9 ತಿಂಗಳ ಅವಧಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್​ಗಳ ಬೆಲೆ ಸಾಲಮನ್ನಾ ಮಾಡಿದೆ. ಕೊನೇ ಕಂತಿನಲ್ಲಿ 7.49 ಲಕ್ಷ ರೈತರ ಸಾಲಮನ್ನಾಕ್ಕಾಗಿ 5,323 ಕೋಟಿ ರೂ. ಅನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಿದೆ. ಇದಕ್ಕಾಗಿ 2018-19ನೇ ಸಾಲಿನ ಬಜೆಟ್​ನಲ್ಲಿ 6,500 ಕೋಟಿ ರೂ., 2019-20ರ ಬಜೆಟ್​ನಲ್ಲಿ ವಾಣಿಜ್ಯ ಬ್ಯಾಂಕ್​ಗಳ ಸಾಲಕ್ಕೆ 6,500 ಕೋಟಿ ರೂ. ಹಾಗೂ ಸಹಕಾರ ವಲಯಕ್ಕೆ 6,150 ಕೋಟಿ ರೂ.ಗಳನ್ನು ಮೀಸಲಿಟ್ಟಿತ್ತು.

ಇಂದು ಬ್ಯಾಂಕರ್ ಸಭೆ

ಸಾಲಮನ್ನಾ ಗೊಂದಲ ರ್ಚಚಿಸಲು ಶುಕ್ರವಾರ ಬ್ಯಾಂಕರ್​ಗಳ ಸಭೆ ಕರೆಯಲಾಗಿದೆ. ಬ್ಯಾಂಕರ್​ಗಳ ಸಮಿತಿ ಮುಂದೆ ಸರ್ಕಾರ ಮತ್ತೆ ಮಹಾರಾಷ್ಟ್ರದಂತೆ ಕರ್ನಾಟಕಕ್ಕೂ ನೆರವು ನೀಡುವಂತೆ ಮನವಿ ಮಾಡಲಿದೆ. ಬ್ಯಾಂಕ್​ಗಳು ಒಪ್ಪಲಿವೆ ಎಂಬ ವಿಶ್ವಾಸದಲ್ಲಿ ಸರ್ಕಾರವಿದೆ.

ಮಹಾರಾಷ್ಟ್ರ ಮಾದರಿಯಲ್ಲಿ ಎನ್​ಪಿಎ ಸಾಲಕ್ಕೆ ಶೇ.25 ರಿಯಾಯಿತಿ ನೀಡುವಂತೆ ಬ್ಯಾಂಕರ್​ಗಳ ಜತೆ ಮಾತುಕತೆ ಇನ್ನೂ ಮುಂದುವರೆದಿದೆ. ಬ್ಯಾಂಕರ್​ಗಳು ಒಪ್ಪಿದರೆ ಸರ್ಕಾರಕ್ಕೆ ಅನುಕೂಲವಾಗಲಿದೆ.

| ಮನೀಷ್ ಮೌದ್ಗಿಲ್, ಸಾಲಮನ್ನಾ ನೋಡಲ್ ಅಧಿಕಾರಿ
ಕೃಪೆ:ವಿಜಯವಾಣಿ

ಸಾಲಮನ್ನಾದಲ್ಲಿ ಮಹಾರಾಷ್ಟ್ರಕ್ಕೆ ಬೆಣ್ಣೆ, ಕರ್ನಾಟಕಕ್ಕೆ ಸುಣ್ಣ!
state-government-to-talk-with-banks-to-apply-maharashtra-model-in-loan-waiver