ಮೇ 24ಕ್ಕೆ ರಾಜ್ಯ ಸರ್ಕಾರದ ಅವಧಿ ಮುಕ್ತಾಯ: ಚುನಾವಣೆ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್

Promotion

ಬೆಂಗಳೂರು:,ಮಾರ್ಚ್,11,2023(www.justkannada.in): ಮೇ 24ಕ್ಕೆ ರಾಜ್ಯ ಸರ್ಕಾರದ ಅವಧಿ ಮುಕ್ತಾಯವಾಗಲಿದ್ದು ಈ ಹಿನ್ನೆಲೆಯಲ್ಲಿ  ಚುನಾವಣೆ ಸಿದ್ಧತೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾಹಿತಿ ನೀಡಿದರು.

ರಾಜ್ಯ ವಿಧಾನಸಭೆ ಚುನಾವಣೆಯ ಸಿದ್ಧತೆ ಪರಿಶೀಲನೆಗೆ ಮೂರು ದಿನಗಳ ಕರ್ನಾಟಕ ಪ್ರವಾಸ ಕೈಗೊಂಡಿರುವ ಕೇಂದ್ರ ಚುನಾವಣಾ ಆಯೋಗ  ಸಿದ್ದತೆ ಬಗ್ಗೆ ವಿವರಗಳನ್ನು ನೀಡಿತು. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಮೂರು ದಿನಗಳಿಂದ ರಾಜಕೀಯ ಪಕ್ಷಗಳ ಜೊತೆ ಸಭೆ ಮಾಡಲಾಗಿದೆ. ಡಿಜಿ ಮತ್ತು ಐಜಿಪಿ, ಡಿಸಿ, ಎಸ್​ಪಿಗಳು ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆಗೂ ಸಭೆ ನಡೆಸಿ ಚರ್ಚೆ ಮಾಡಲಾಗಿದೆ. ಮೇ 24 ಕ್ಕೆ ಈ ಸರ್ಕಾರದ ಅವಧಿ ಮುಗಿಯಲಿದೆ.  ಚುನಾವಣೆ ಸಿದ್ಧತೆ ಬಗ್ಗೆ ಮಾತುಕತೆ ನಡೆಸಿದ್ದೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಒಟ್ಟು 58,282 ಮತಗಟ್ಟೆಗಳು ಇರಲಿವೆ. ನಗರ ಪ್ರದೇಶಗಳಲ್ಲಿ 24,063 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 34,219 ಮತಗಟ್ಟೆಗಳು ಇರಲಿವೆ ಒಂದು ಮತಗಟ್ಟೆಯಲ್ಲಿ 883 ಜನ ಮತದಾನ ಮಾಡಬಹುದು. ಸೌಕರ್ಯಗಳು ಇರುವಂತೆ ನೋಡಿಕೊಳ್ಳಲಾಗುವುದು. ಅಂಗವಿಕಲರಿಗೆ ವ್ಹೀಲ್​ಚೇರ್ ವ್ಯವಸ್ಥೆ ಮಾಡಲಾಗುವುದು ಎಂದು  ತಿಳಿಸಿದರು.

ರಾಜ್ಯದಲ್ಲಿ 5,21,73,579 ಜನ ಮತದಾರರಿದ್ದಾರಿದ್ದು ಈ ಪೈಕಿ  2,62,42,561 ಜನ ಪುರುಷ ಮತದಾರರು ಹಾಗೂ 2,59,26,319 ಮಹಿಳಾ ಮತದಾರರಿದ್ದಾರೆ. 80 ವರ್ಷ ಮೇಲ್ಪಟ್ಟವರು 12,15,763 ಜನ ಇದ್ದಾರೆ. 100 ವರ್ಷ ಮೇಲ್ಪಟ್ಟ 16,976 ಮತದಾರರಿದ್ದಾರೆ. 9,17,241 ಮಂದಿ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. 4,699 ತೃತೀಯ ಲಿಂಗಿ ಮತದಾರರಿದ್ದಾರೆ ಎಂದು ರಾಜೀವ್ ಕುಮಾರ್  ತಿಳಿಸಿದರು.

ಅಭ್ಯರ್ಥಿಗಳು ಸುವಿಧಾ ಮೂಲಕವೂ ನಾಮಪತ್ರ ಸಲ್ಲಿಸಬಹುದು. ಅಫಿಡವಿಟ್ ಕೂಡ ಸಲ್ಲಿಕೆ ಮಾಡಬಹುದು. ಅಪರಾಧ ಪ್ರಕರಣಗಳು ಇದ್ದರೆ ಮೂರು ಬೇರೆ ಬೇರೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಿರಬೇಕು. ಆನ್​​ ಲೈನ್​​ನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪೇಪರ್ ಕಟ್ಟಿಂಗ್ ಕೂಡ ಅಪ್​ಲೋಡ್ ಮಾಡಬೇಕು. ಸಭೆ, ಸಮಾರಂಭ ಮಾಡುವುದಕ್ಕೂ ಆನ್​​ಲೈನ್ ಮೂಲಕವೇ ಮನವಿ ಸಲ್ಲಿಸಬಹುದು ಎಂದು ರಾಜೀವ್ ಕುಮಾರ್ ತಿಳಿಸಿದರು.

ಕರ್ನಾಟಕದಲ್ಲಿಯೂ ಶಾಂತಿಯುತ ಮತದಾನ ಆಗುವ ವಿಶ್ವಾಸವಿದೆ. ಹಣ, ಇತರ ಆಮಿಷಗಳಿಗೆ ಮತದಾರರು ಒಳಗಾಗಬಾರದು. ಚುನಾವಣಾ ಅಕ್ರಮ ತಡೆಯಲು ಹದ್ದಿನ ಕಣ್ಣಿಡಲಾಗುತ್ತದೆ. ಗಡಿ ಪ್ರದೇಶಗಳು, ಕರಾವಳಿ ಭಾಗಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗುತ್ತದೆ. ಅಕ್ರಮ ಸಾಗಾಟಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು  ರಾಜೀವ್ ಕುಮಾರ್ ತಿಳಿಸಿದರು.

Key words: State government -term ends – May 24- Chief Election Commissioner- Rajeev Kumar-preparations