ಸೆ.17ರ ವಿಶೇಷ ಕೋವಿಡ್ ಲಸಿಕಾ ಅಭಿಯಾನ:ದೊಡ್ಡಪ್ರಮಾಣದಲ್ಲಿ ಯಶಸ್ವಿಯಾಗಬೇಕು-ಸಚಿವ ಎಸ್.ಟಿ.ಸೋಮಶೇಖರ್.

ಮೈಸೂರು, ಸೆ.16,2021(www.justkannada.in): ಸೆಪ್ಟೆಂಬರ್ 17ರಂದು ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ನಡೆಯುವ ವಿಶೇಷ ಕೋವಿಡ್ ಲಸಿಕಾ ಅಭಿಯಾನ ಮೈಸೂರಿನಲ್ಲಿ ಯಶಸ್ವಿಯಾಗಬೇಕು ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸೆಪ್ಟೆಂಬರ್ 17 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನವಾಗಿರುವುದು ವಿಶೇಷ. ಈ ವಿಶೇಷ ದಿನದಂದು ನಡೆಯುವ ಲಸಿಕಾ ಅಭಿಯಾನಕ್ಕೆ ವಿಶೇಷ ಒತ್ತುಕೊಟ್ಟು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಮೈಸೂರು ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಶೇ.100ರಷ್ಟು ಲಸಿಕೆ ಹಾಕಿಸುವ ಗುರಿ ಇದೆ. ಸೆ.17ರಂದು ಮೈಸೂರಿಗೆ ನೀಡಿರುವ 1.25 ಲಕ್ಷ ಲಸಿಕಾ ಗುರಿಯನ್ನು ಯಶಸ್ವಿಗೊಳಿಸಿದರೆ ಹೆಚ್ಚಿನ ಜನರಿಗೆ ನೀಡಿದಂತಾಗುತ್ತದೆ. ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಶಾಸಕರಾದ ಎಸ್.ಎ. ರಾಮದಾಸ್, ಎಲ್. ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮೇಯರ್ ಸುನಂದಾ ಪಾಲನೇತ್ರ, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಎನ್.ವಿ.ಫಣೀಶ್, ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಲ್ಲಾ ಪಂಚಾಯತಿ ಸಿಇಒ ಎ.ಎಂ.ಯೋಗೀಶ್, ಪಾಲಿಕೆ ಆಯುಕ್ತ ಜಿ. ಲಕ್ಷ್ಮಿಕಾಂತ್ ರೆಡ್ಡಿ, ಮುಡಾ ಆಯುಕ್ತ ಡಾ ಡಿ.ಬಿ.ನಟೇಶ್, ಡಿಎಚ್‌ಒ ಡಾ. ಕೆ.ಎಚ್.ಪ್ರಸಾದ್, ಮತ್ತಿತರರು ಉಪಸ್ಥಿತರಿದ್ದರು.

Key words: Special- covid Vaccination- Campaign -Sept. 17-Minister -ST Somashekhar