KSRTC ಬಸ್ಸುಗಳಲ್ಲಿ ಈಗ ‘ಸ್ಪೀಕರ್ ಮೋಡ್’ ಮೊಬೈಲ್ ಫೋನ್‌ ಬಳಕೆ ನಿಷೇಧ..!

 

ಬೆಂಗಳೂರು, ನವೆಂಬರ್ ೧೨, ೨೦೨೧ (www.justkannada.in): ಬಸ್ಸುಗಳಲ್ಲಿ ಪ್ರಯಾಣಿಸುವಾಗ ಹಲವು ಪ್ರಯಾಣಿಕರು ಮೊಬೈಲ್ ಫೋನ್‌ಗಳನ್ನು ಬಳಸುವ ಕುರಿತು ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು, ಕೆಎಸ್‌ಆರ್‌ಟಿಸಿ ( KSRTC ) ಬಸ್ಸುಗಳಲ್ಲಿ ಪ್ರಯಾಣಿಸುವಾಗ ‘ಸ್ಪೀಕರ್ ಮೋಡ್’ನಲ್ಲಿ ಮೊಬೈಲ್ ಫೋನ್‌ಗಳನ್ನು ಬಳಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ಸಹ ಪ್ರಯಾಣಿಕರಿಗೆ ಆಗುವ ತೊಂದರೆಯನ್ನು ಹೋಗಲಾಡಿಸುವುದು ಹಾಗೂ ಸರಾಗವಾದ ಪ್ರಯಾಣವನ್ನು ಖಾತ್ರಿಪಡಿಸುವ ಉದ್ದೇಶದೊಂದಿಗೆ ಕೆಎಸ್‌ಆರ್‌ಟಿಸಿ ( KSRTC ) ಬಸ್ಸುಗಳಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರಿಂದ ಮೊಬೈಲ್ ಬಳಕೆಯ ಕುರಿತಂತೆ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಕೆಎಸ್‌ಆರ್‌ಟಿಸಿ ಗುರುವಾರ (ನವೆಂಬರ್ ೧೧ರಂದು) ಹೊರಡಿಸಿರುವ ಸುತ್ತೋಲೆಯಲ್ಲಿ, “ಇತ್ತೀಚಿನ ದಿನಗಳಲ್ಲಿ ಬಸ್ಸುಗಳಲ್ಲಿ ಪ್ರಯಾಣಿಸುವಾಗ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಮೊಬೈಲ್ ಫೋನ್‌ಗಳನ್ನು ಬಳಸಲಾರಂಭಿಸಿದ್ದಾರೆ. ಕೆಲವರಂತು ಜೋರಾಗಿ ಹಾಡುಗಳು, ಸಂಗೀತವನ್ನು ಹಚ್ಚುವುದು, ವಾರ್ತೆಗಳನ್ನು ಕೇಳುವುದನ್ನು ಮಾಡುತ್ತಾರೆ. ಅದರಲ್ಲಿಯೂ ಸ್ಪೀಕರ್ ಮೋಡ್‌ನಲ್ಲಿ ಹೀಗೆ ಮಾಡುವವರ ಸಂಖ್ಯೆಯ ಹೆಚ್ಚಾಗಿದೆ.

“ಈ ರೀತಿ ಮೊಬೈಲ್ ಫೋನ್‌ಗಳಲ್ಲಿ ಸ್ಪೀಕರ್ ಆನ್ ಮಾಡಿ ಅದರಿಂದ ಬರುವ ಜೋರಾದ ಧ್ವನಿ ಸಹ ಪ್ರಯಾಣಿಕರಲ್ಲಿ ಕಿರಿಕಿರಿ ಉಂಟು ಮಾಡುತ್ತದೆ ಹಾಗೂ ಅವರ ಪ್ರಯಾಣದ ಆಹ್ಲಾದವನ್ನು ಕೆಡಿಸುತ್ತದೆ. ಈ ಸಂಬಂಧ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದನ್ನು ಹೂಡಲಾಗಿತ್ತು,” ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ( KSRTC-MD )ಶಿವಯೋಗಿ ಕಳಸದ್ ಅವರು ತಿಳಿಸಿದ್ದಾರೆ.

ಮೊಬೈಲ್ ಫೋನ್‌ಗಳನ್ನು ಸ್ಪೀಕರ್ ಮೋಡ್‌ನಲ್ಲಿಟ್ಟು, ಚಲನಚಿತ್ರಗಳನ್ನು ವೀಕ್ಷಿಸುವುದು, ಹಾಡುಗಳನ್ನು ಕೇಳವುದು, ಸುದ್ದಿಗಳು ಹಾಗೂ ಇತರೆ ಹಾಡುಗಳನ್ನು ನೋಡುವುದು ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ, ೧೯೮೯ರ ನಿಯಮ ೯೪ (೧) (ಗಿ)ರ ಪ್ರಕಾರ ನಿಷೇಧಿಸಲಾಗಿದೆ.  ಈ ಹಿನ್ನೆಲೆಯಲ್ಲಿ ಬಸ್ಸುಗಳ ನಿರ್ವಾಹಕರಿಗೆ ಪ್ರಯಾಣಿಕರಲ್ಲಿ ಅರಿವನ್ನು ಮೂಡಿಸುವಂತೆ ಸಲಹೆ ನೀಡಲಾಗಿದೆ.

ಒಂದು ವೇಳೆ ನಿರ್ವಾಹಕರು ಹೇಳಿದ ಹೊರತಾಗಿಯೂ ಯಾವುದಾದರೂ ಪ್ರಯಾಣಿಕರು ನಿಯಮ ಉಲ್ಲಂಘಿಸಿದರೆ ಆ ಬಸ್ಸಿನ ಚಾಲಕರು ಅಥವಾ ನಿರ್ವಾಹಕರು ಅಂತಹ ಪ್ರಯಾಣಿಕರನ್ನು ಬಸ್ಸಿನಿಂದ ಹೊರಗಟ್ಟಬಹುದು. ಈ ಮಾರ್ಗಸೂಚಿಯ ಪ್ರಕಾರ ಬಸ್ಸಿನ ನಿರ್ವಾಹಕರು ಹಾಗು ಚಾಲಕರಿಗೆ ಪ್ರಯಾಣಿಕರು ಬಸ್ಸಿನಿಂದ ಕೆಳಗಿಳಿಯುವವರೆಗೂ ಬಸ್ಸನ್ನು ನಿಲ್ಲಿಸಲು ಅಧಿಕಾರ ನೀಡಿದೆ.

ಜೊತೆಗೆ ಅಂತಹ ಪ್ರಯಾಣಿಕರಿಗೆ ಬಸ್ ಟಿಕೆಟ್ ದರವನ್ನೂ ಸಹ ಹಿಂದಿರುಗಿಸಲಾಗುವುದಿಲ್ಲ. ಸುತ್ತೋಲೆಯಲ್ಲಿ ನಿಗಧಿಪಡಿಸಿರುವ ಮಾರ್ಗಸೂಚಿಗಳ ಕುರಿತಂತೆ ತೆಗೆದಕೊಂಡಿರುವ ಕ್ರಮದ ಕುರಿತು ಒಂದು ವರದಿಯನ್ನು ಸಲ್ಲಿಸುವಂತೆಯೂ ತಿಳಿಸಲಾಗಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

key words : speaker-mode-mobile-phone-ban-in-KSRTC -bus-high.court-direction-Karnataka-Bangalore