ತೆರಿಗೆ ತೆರಲಿಕ್ಕೆ ದಕ್ಷಿಣ ಭಾರತ, ಅನುದಾನ ಹಂಚಲಿಕ್ಕೆ ಉತ್ತರ ಭಾರತ: ಇದು ಮೋದಿ ಸರಕಾರದ ನೀತಿ- ಮಾಜಿ ಸಿಎಂ ಹೆಚ್.ಡಿಕೆ ವಾಗ್ದಾಳಿ.

Promotion

ಬೆಂಗಳೂರು,ಫೆಬ್ರವರಿ,8,2023(www.justkannada.in): ಅನುದಾನದಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವುದು ಮೋದಿ ಸರಕಾರದ ನೀತಿ. ಉತ್ತರಕ್ಕೆ ಬೆಣ್ಣೆ, ದಕ್ಷಿಣಕ್ಕೆ ಸುಣ್ಣ ಅವರ ರಾಜನೀತಿ. ತೆರಿಗೆ ತೆರಲಿಕ್ಕೆ ದಕ್ಷಿಣ ಭಾರತ, ಅನುದಾನ ಹಂಚಲಿಕ್ಕೆ ಉತ್ತರ ಭಾರತ.. ಇದು ಬಿಜೆಪಿ ಪಕ್ಷದ ಅಖಂಡ ಭಾರತದ ಅಭಿವೃದ್ಧಿ ವೈಖರಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು.

ಸರಣಿ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಹೆಚ್.ಡಿ ಕುಮಾರಸ್ವಾಮಿ, ನೆರೆ ಬಂದಾಗ ಕಣ್ಣೆತ್ತಿ ನೋಡಲಿಲ್ಲ, ಬರ ಬಂದಾಗ ಬರಲಿಲ್ಲ. ಆದರೆ, ಚುನಾವಣೆ ವರ್ಷದಲ್ಲಿ ತಿಂಗಳಿಗೆ ನಾಲ್ಕು ಬಾರಿ ರಾಜ್ಯಕ್ಕೆ ಬರುತ್ತಾರೆ. ಮೋದಿ ಅವರ ಸರಕಾರವು ಸ್ವಾಭಿಮಾನಿಗಳ ನಾಡು ಕರ್ನಾಟಕವನ್ನು ಎಷ್ಟು ಕೀಳಾಗಿ ನಡೆಸಿಕೊಳ್ಳುತ್ತಿದೆ ಎನ್ನುವುದಕ್ಕೆ ಅನುದಾನ ಹಂಚಿಕೆಯ ಮಹಾಮೋಸವೇ ಸಾಕ್ಷಿ ಎಂದು ಹರಿಹಾಯ್ದರು.

ಕಳೆದ 5 ವರ್ಷದಲ್ಲಿ ಉತ್ತರ & ದಕ್ಷಿಣ ರಾಜ್ಯಗಳಿಗೆ ಕೊಟ್ಟ ಅನುದಾನದ ಅಂಕೆ ಸಂಖ್ಯೆಯನ್ನು ಲೋಕಸಭೆಯಲ್ಲಿ ಮಂಡಿಸಿದ ಸಚಿವರಿಗೆ ಕೊಂಚವೂ ಲಜ್ಜೆ ಎನಿಸಲಿಲ್ಲವೆ?ದಕ್ಷಿಣದವರನ್ನು  ನರೇಂಧ್ರ ಮೋದಿ ಸರಕಾರ ಮಲತಾಯಿ ಮಕ್ಕಳಂತೆ ನಡೆಸಿಕೊಳ್ಳುತ್ತಿದೆ. ಕನ್ನಡಿಗರಂತೂ ಬಿಜೆಪಿಗರಿಗೆ ತಬ್ಬಲಿ ಮಕ್ಕಳೇ ಆಗಿದ್ದಾರೆ ಎಂದು ಟೀಕಿಸಿದ್ದಾರೆ.

ಕೇಂದ್ರಕ್ಕೆ ಕರ್ನಾಟಕ ಗರಿಷ್ಠ ತೆರಿಗೆ ತೆರುತ್ತಿದೆ. ಬಿಜೆಪಿ ಪಾಲಿಗೆ ಕರ್ನಾಟಕ ಪೊಗದಸ್ತಾದ ಎಟಿಎಂ ಆಗಿಬಿಟ್ಟಿದೆ. ಅದೇ ಅನುದಾನವನ್ನು ಹಂಚುವ ಹೊತ್ತಿನಲ್ಲಿ ಮೋದಿ ಕೈಗಳು ಉತ್ತರದ ರಾಜ್ಯಗಳ ಕಡೆಗೇ ವಾಲುತ್ತಿವೆ. ಚುನಾವಣೆ ಬಂದಾಗ ಅವರ ವಿಮಾನ ಸದಾ ಬೆಂಗಳೂರಿನತ್ತಲೇ ಹಾರುತ್ತದೆ ಎಂದು ಹೆಚ್.ಡಿಕೆ ಲೇವಡಿ ಮಾಡಿದ್ದಾರೆ.

ಅನುದಾನ ಹಂಚಿಕೆ, ತೆರಿಗೆ ಪಾಲು, ಬಾಹ್ಯ ನೆರವಿನ ಯೋಜನೆಗಳಿಗೆ ಸಹಾಯ ಧನ, ಬಂಡವಾಳ ವೆಚ್ಚಕ್ಕಾಗಿ ಕೊಟ್ಟ ನೆರವು ಸೇರಿ ಎಲ್ಲ ವಿಶೇಷ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಸೊನ್ನೆ ಸುತ್ತಿರುವುದು ಹೇಯ. ಬಿಜೆಪಿಗೆ 25 ಸಂಸದರನ್ನು ಕೊಟ್ಟ ಕರ್ನಾಟಕಕ್ಕೆ ಇಂಥ ದುರ್ಗತಿಯೇ? ಇದು ಡಬಲ್ ಎಂಜಿನ್ ಸರಕಾರದ ದ್ರೋಹ.

ಮೂರು ತಿಂಗಳಲ್ಲಿ ರಾಜ್ಯದ ಚುನಾವಣೆ, ಭಾಷಣದಲ್ಲಿ ಬರೀ ಚಿತಾವಣೆ. ತಿಂಗಳಿಗೆ ಹತ್ತು ಸಲ ರಾಜ್ಯಕ್ಕೆ ಬನ್ನಿ. ಆದರೆ, ಕನ್ನಡಿಗರಿಗೆ ಮಾಡಿರುವ ಅನುದಾನದ ಅನ್ಯಾಯಕ್ಕೆ ಕಾರಣ ಹೇಳಿ? ಮಾತಿನಲ್ಲೇ ಜುಟ್ಟಿಗೆ ಮಲ್ಲಿಗೆ ಮುಡಿಸಿದರೆ ಹೇಗೆ ಮೋದಿ ಅವರೇ? ಈ ಅನುದಾನ ಅನ್ಯಾಯ ನನಗೆ ತೀವ್ರ ಆಘಾತ ಉಂಟು ಮಾಡಿದೆ ಎಂದು ಪ್ರಧಾನಿ ಮೋದಿ ವಿರುದ್ಧ ಹೆಚ್.ಡಿ ಕುಮಾರಸ್ವಾಮಿ ಗುಡಿಗಿದ್ದಾರೆ.

Key words: South India -pay taxes, North India -grants- Modi government- policy – HD Kumaraswamy