ಗಣಿತ ಶಿಕ್ಷಕರಿಂದ ಕಪಾಳಮೋಕ್ಷ:  6ನೇ ತರಗತಿ ಬಾಲಕನ ಕಿವಿ, ಕಣ್ಣಿನ ದೃಷ್ಟಿಗೆ ಹಾನಿ.

Promotion

ಬೆಂಗಳೂರು, ಜುಲೈ 5, 2022 (www.justkannada.in): ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಒಂದು ಖಾಸಗಿ ಅನುದಾನರಹಿತ ಶಾಲೆಯಲ್ಲಿ ಗಣಿತ ಶಿಕ್ಷಕರೊಬ್ಬರು, ನೋಟ್ ಪುಸ್ತಕ ತರಲಿಲ್ಲ ಎಂಬ ಕಾರಣಕ್ಕಾಗಿ 6ನೇ ತರಗತಿ ವಿದ್ಯಾರ್ಥಿಗೆ ಕಪಾಳಮೋಕ್ಷ ಕರುಣಿಸಿದ ಕಾರಣದಿಂದಾಗಿ ಆ ವಿದ್ಯಾರ್ಥಿಯ ಕಿವಿ ಹಾಗೂ ಕಣ್ಣಿನ ದೃಷ್ಟಿಗೆ ತೀವ್ರ ಹಾನಿಯಾಗಿರುವ ಘಟನೆ ವರದಿಯಾಗಿದೆ.

ಆಸ್ಪತ್ರೆಯಲ್ಲಿ 12 ವರ್ಷದ ಬಾಲಕನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿರುವಂತೆ ಶುಕ್ರವಾರ ಶಿಕ್ಷಕರು ಆತನ ಮೇಲೆ ಕೈ ಮಾಡಿರುವುದರ ಪರಿಣಾಮವಾಗಿ ಬಾಲಕನಿಗೆ ಶ್ರವಣ ಹಾಗೂ ದೃಷ್ಟಿ ಹಾನಿಯಾಗಿದೆ. ಈ ಘಟನೆಯ ಕುರಿತು ಬಾಲಕನ ಪೋಷಕರಿಗೆ ಅದೇ ರಾತ್ರಿ ತಿಳಿದು ಬಂದಿದೆ.

ಈ ಘಟನೆಯ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಬಾಲಕನ ತಂದೆ ಲಕ್ಷ್ಮಿ ನರಸಿಂಹ ಅವರು, “ನಾನು ಮನೆ ತಲುಪಿದಾಗ ಆತನ ಕೆನ್ನೆಯ ಮೇಲೆ ಬೆರಳುಗಳ ಗುರುತಿರುವುದನ್ನು ಗಮನಿಸಿದೆ. ವಿಚಾರಿಸಿದಾಗ ಶಿಕ್ಷಕರೊಬ್ಬರು ಆತನನ್ನು ಥಳಿಸಿದ ವಿಷಯ ಗೊತ್ತಾಯಿತು. ಕೂಡಲೇ ನಾನು ಪ್ರಾಂಶುಪಾಲರಿಗೆ ಕರೆ ಮಾಡಿ ವಿಚಾರ ತಿಳಿಸಿದೆ. ಅವರೂ ಸಹ ನನ್ನ ಜೊತೆ ಆಸ್ಪತ್ರೆಗೆ ಬಂದರು. ನಾವು ಮೆಡಿಕೊ-ಲೀಗಲ್ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದಾಗ ಶಾಲೆಯ ಪ್ರಾಂಶುಪಾಲರು ನಮ್ಮನ್ನು ಬೈಯಲು ಆರಂಭಿಸಿ ಯಾವುದೇ ಸಹಾಯ ಮಾಡಲು ನಿರಾಕರಿಸಿದರು. ಅಂತಿಮವಾಗಿ, ಅನಗತ್ಯ ತೊಂದರೆಗಳನ್ನು ತಪ್ಪಿಸುವ ಸಲುವಾಗಿ ನಾವು ನಮ್ಮ ಮಗನನ್ನು ವಾಣಿ ವಿಲಾಸ ಆಸ್ಪತ್ರೆಗೆ ಕರೆದೊಯ್ದೆವು,” ಎಂದು ವಿವರಿಸಿದರು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯ ಸ್ಥಳೀಯ ಅಧಿಕಾರಿಗಳು ಘಟನೆಯ ಕುರಿತು ವಿಚಾರಣೆ ನಡೆಸಲು ಶಾಲೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. “ವಿವರಣೆ ನೀಡುವಂತೆ ನಾವು ಆ ಶಾಲೆಗೆ ಒಂದು ನೋಟಿಸ್ ನೀಡುತ್ತೇವೆ,” ಎಂದು ಅಧಿಕಾರಿ ತಿಳಿಸಿದ್ದಾರೆ.

ಶಾಲೆಯ ಪ್ರಾಂಶುಪಾಲ ರಾಜೇಶ್ ಇದು ದೈಹಿಕ ಶಿಕ್ಷಣದ ಪ್ರಕರಣ ಎಂಬುದನ್ನು ನಿರಾಕರಿಸಿದ್ದಾರೆ. “ಇದು ಕೇವಲ ಒಂದು ತಪ್ಪು ಅಷ್ಟೇ. ಆ ಬಾಲಕ ನಮ್ಮ ಶಾಲೆಯಲ್ಲಿ ಪ್ರಾಥಮಿಕ ಪೂರ್ವದಿಂದಲೂ ಇದ್ದು, ಆ ಶಿಕ್ಷಕರು ಕಳೆದ ನಾಲ್ಕು ವರ್ಷಗಳಿಂದಲೂ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದು ನಮ್ಮ ಶಾಲೆಯಲ್ಲಿ ಈ ರೀತಿಯ ಮೊದಲ ಘಟನೆ. ನಾವು ಬಾಲಕನ ಚಿಕಿತ್ಸೆಗೆ ಹಾಗೂ ಇಲಾಖೆ ನಡೆಸುತ್ತಿರುವ ವಿಚಾರಣೆಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಿದ್ದೇವೆ,” ಎಂದಿದ್ದಾರೆ.

ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಬಾಲಕನ ತಂದೆ ನೀಡಿರುವ ದೂರನ್ನು ಆಧರಿಸಿ ಬಾಲಕನನ್ನು ಥಳಿಸಿದ ಆರೋಪ ಎದುರಿಸುತ್ತಿರುವ ಗಣಿತ ಶಿಕ್ಷಕ ಮಾದೇಶ್ ವಿರುದ್ಧ ಚಂದ್ರ ಲೇಔಟ್ ಪೋಲಿಸ್ ಠಾಣೆಯಲ್ಲಿ ಬಾಲನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಮಾದೇಶ್ ಅನಾರೋಗ್ಯಪೀಡತರಾಗಿದ್ದು, ಅವರನ್ನು ವಿಚಾರಣೆಗೆ ಕರೆದು, ಆತನ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿ ತಿಳಿಸಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words:  slap –teacher-student-ears – eyes -injury