ಇನ್ಮುಂದೆ ಪಠ್ಯದಲ್ಲೇ ಕೌಶಲ್ಯ ತರಬೇತಿ ಸೇರ್ಪಡೆ : ಡಿಸಿಎಂ ಅಶ್ವಥ್ ನಾರಾಯಣ್…..

Promotion

ಬೆಂಗಳೂರು,ಆ,24,2020(www.justkannada.in):  ರಾಜ್ಯದಲ್ಲಿ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸೃಷ್ಟಿ ಹಾಗೂ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಶಾಲಾ- ಕಾಲೇಜು ಪಠ್ಯದಲ್ಲಿಯೇ ಕೌಶಲ್ಯ ತರಬೇತಿ ವಿಷಯವನ್ನು ಸೇರಿಸಲಾಗುತ್ತದೆ ಎಂದು ಕೌಶಲ್ಯಾಭಿವೃದ್ಧಿ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.skills-training-course-inclusion-dcm-ashwath-narayan

ಬೆಂಗಳೂರಿನ ಮಲ್ಲೇಶ್ವರದ ಒಳಾಂಗಣ ಕ್ರೀಡಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ನಾರಾಯಣ ತರಬೇತಿ ಸಂಸ್ಥೆಗಳ ಸಹಯೋಗದಲ್ಲಿ ತೆರೆಯಲಾಗಿರುವ “ಮಲ್ಲೇಶ್ವರಂ ಕೌಶಲ್ಯ ಕೇಂದ್ರ”ದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್,  ಇವತ್ತು ಕೌಶಲ್ಯವಿರುವುದರ ಜತೆಗೆ, ಆ ಕೌಶಲ್ಯಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ನೌಕರಿ ಸಿಗುತ್ತದೆಯೇ ಎಂಬುದು ಬಹಳ ಮುಖ್ಯವಾದ ವಿಚಾರ. ಹೀಗಾಗಿ ಜಾಬ್‌ ಮಾರುಕಟ್ಟೆಗೆ ತಕ್ಕ ಹಾಗೆ, ಅಂದರೆ ಕೈಗಾರಿಕೆಗಳಿಗೆ ಅಗತ್ಯವಿರುವ ದಿಕ್ಕಿನಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಾಂಕ್ಷಿಗಳಿಗೆ ತರಬೇತಿ ನೀಡಲಾಗುವುದು ಎಂದು ನುಡಿದರು.

ಹಿಂದಿನಿಂದ ಇದೇ ರೀತಿಯ ವೈರುಧ್ಯವನ್ನು ನಾವು ಗಮನಿಸುತ್ತಾ ಬಂದಿದ್ದೇವೆ. ಕೆಲಸಗಳೇ ಬೇರೆ ಇರುತ್ತವೆ. ಅದಕ್ಕೆ ಬೇಕಾದ ಕುಶಲ ಮಾನವ ಸಂಪನ್ಮೂಲ ಲಭ್ಯ ಇರುವುದಿಲ್ಲ. ಓದಿದ್ದೇ ಬೇರೆ, ಸಿಗುವ ಕೆಲಸಗಳೇ ಬೇರೆ. ಇದರಿಂದ ದಕ್ಷತೆ ಇರುವುದಿಲ್ಲ ಎಂಬುದು ಸಾಬೀತಾಗಿದೆ. ಇಂಥ ಅಂತರದಿಂದ ನಿರುದ್ಯೋಗ ಹೆಚ್ಚುತ್ತಲೇ ಹೋಗುತ್ತಿದೆ. ಇದನ್ನು ನಿವಾರಿಸಲು ಸರಕಾರ ಪಠ್ಯದಲ್ಲೇ ಕೌಶಲ್ಯಕ್ಕೆ ಸಂಬಂಧಿಸಿದ ವಿಷಯವನ್ನು ಅಡಕಗೊಳಿಸಲು ಮುಂದಾಗಿದೆ. ಶಿಕ್ಷಣದ ಹಂತದಲ್ಲೇ ಅಗತ್ಯವಾದ ಕುಶಲತೆಯನ್ನು ಹೊಂದಬೇಕಾಗುತ್ತದೆ. ಉದ್ಯೋಗದ ನಂತರ ಅದನ್ನು ಯಾರೂ ಹೇಳಿಕೊಡುವ ಸನ್ನಿವೇಶ ಇರುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹೇಳಿದರು.

ಕೋವಿಡ್‌ ಪೆಟ್ಟು ಕೊಟ್ಟಿದೆ….

ಕೋವಿಡ್ ಮಹಾಮಾರಿಯಿಂದಾದ ಬಹಳ ಉದ್ಯಮಗಳು ನಷ್ಟಕ್ಕೆ ತುತ್ತಾಗಿ ಅನೇಕ ಯುವಕ ಯುವತಿಯರು ಕೆಲಸ ಕಳೆದುಕೊಂಡಿದ್ದು, ಭವಿಷ್ಯದ ಬಗ್ಗೆ ಚಿಂತೆಗೀಡಾಗಿದ್ದಾರೆ. ಅಂತಹ ಅನೇಕ ಯುವಜನರಿಗೆ ಅಗತ್ಯ ಕೌಶಲ್ಯದ ಕೊರತೆಯಿದ್ದು, ಸೂಕ್ತವಾದ ಹೊಸ ಕೆಲಸ ಹುಡುಕಿಕೊಳ್ಳಲು ಅವರು ಪರದಾಡುತ್ತಿದ್ದಾರೆ. ಇಂಥವರ ನೆರವಿಗೆ ಸರಕಾರ ಧಾವಿಸಿದೆ. ಕೋವಿಡ್‌ ನಂತರ ಉಂಟಾಗಿರುವ ಉದ್ಯೋಗ ನಷ್ಟವನ್ನು ಸರಕಾರ ಸರಿಪಡಿಸಲಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಭರವಸೆ ನೀಡಿದರು.

ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿವೆ. ಔದ್ಯೋಗಿಕವಾಗಿ ಆಕಾಂಕ್ಷಿಗಳಿಗೆ ಸಹಾಯವಾಗುವ ಹಲವು ಯೋಜನೆಗಳನ್ನು ಹಮ್ಮಿಕೊಂಡಿವೆ. ಅಂತಹುದೇ ಒಂದು ಯೋಜನೆ ಇದಾಗಿದೆ. ಕೋವಿಡ್ʼನಿಂದ ಸಂಕಷ್ಟಕ್ಕೆ ತುತ್ತಾಗಿ ಉದ್ಯೋಗ ವಂಚಿತರಾದ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಯುವಕ- ಯುವತಿಯರಿಗೆ ಕೌಶಲ್ಯ ತರಬೇತಿ ನೀಡುವ ಸಲುವಾಗಿ ʼಮಲ್ಲೇಶ್ವರಂ ಕೌಶಲ್ಯ ಕೇಂದ್ರʼವನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದರು..

ಈ ಕೇಂದ್ರದಲ್ಲಿ ಏನಿರುತ್ತದೆ?

ಮುಖ್ಯವಾಗಿ ಈ ಕೇಂದ್ರದಲ್ಲಿ ಪ್ರಾರಂಭಿಕವಾಗಿ ಬ್ಯಾಂಕಿಂಗ್‌, ಹಣಕಾಸು ಸೇವೆ, ವಿಮಾ ಸೇವೆ, ಲೆಕ್ಕ ನಿರ್ವಹಣೆ, ಐಟಿ ಸೆಕ್ಯೂರಿಟಿ ವಿಶ್ಲೇಷಣೆ ಸೇರಿದಂತೆ ಹಲವು ಉಪಯುಕ್ತ ವಿಭಾಗಗಳಲ್ಲಿ ತರಬೇತಿ ನೀಡಲಾಗುವುದು. ದಿನಕ್ಕೆ ಎರಡು ಬ್ಯಾಚ್‌ʼಗಳಲ್ಲಿ ಇಲ್ಲಿ ತರಬೇತಿ ನೀಡಲಾಗುವುದು. ಕೌಶಲ್ಯ ತರಬೇತಿ ಕೇಂದ್ರದಲ್ಲಿ, ಉದ್ಯೋಗಾಕಾಂಕ್ಷಿಗಳ ಕಲಿಕೆಗೆ ಅನುಕೂಲವಾಗುವಂತೆ ಸುಸಜ್ಜಿತ ತರಗತಿಗಳು ಮತ್ತು ಪ್ರಯೋಗಾಲಯಗಳನ್ನೂ ಸಹ ತಯಾರು ಮಾಡಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

ಸಮಾರಂಭದಲ್ಲಿ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು ಸೇರಿದಂತೆ ಇತರ ಪಾಲಿಕೆ ಸದಸ್ಯರು  ಹಾಗು ಅಧಿಕಾರಿಗಳು ಪಾಲ್ಗೊಂಡಿದ್ದರು.

Key words: skills training – course- Inclusion – DCM -Ashwath Narayan.