ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡುವ ಬದಲು ಸದಸ್ಯರನ್ನೇ ಮುಂದುವರೆಸಿ : ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ

Promotion

ಬೆಂಗಳೂರು, ಮೇ 16, 2020 : (www.justkannada.in news): ಕೊರೋನ ಸೋಂಕಿನ ಹೆಸರು ಹೇಳಿಕೊಂಡು ರಾಜ್ಯ ಸರ್ಕಾರ ಗ್ರಾಮ ಪಂಚಾಯ್ತಿ ಚುನಾವಣೆಗಳನ್ನು ಮುಂದೂಡಲು ಪ್ರಯತ್ನಿಸುತ್ತಿದೆ. ಹೀಗೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆದು ಮಾಜಿ ಸಿಎಂ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಗ್ರಾಮ ಪಂಚಾಯತಿಗಳಿಗೆ ಆಯ್ಕೆಯಾಗುವ ಸದಸ್ಯರು ಯಾವುದೇ ಪಕ್ಷ, ಬಣ ಮುಂತಾದವುಗಳಿಗೆ ಸೇರದೆ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಸಂವಿಧಾನದ ಮೂಲ ಆಶಯವಾಗಿದೆ. 5 ವರ್ಷಗಳ ಹಿಂದೆ ರಾಜ್ಯದ 6024 ಗ್ರಾಮ ಪಂಚಾಯತಿಗಳಿಗೆ ನಡೆದ ಚುನಾವಣೆಗಳಲ್ಲಿ 97060 ಸದಸ್ಯರು ಆಯ್ಕೆಯಾಗಿರುತ್ತಾರೆ. ಬರ, ಪ್ರವಾಹ ಕಠಿಣ ಪರಿಸ್ಥಿತಿಯನ್ನು ಹಾಗೂ ಗ್ರಾಮೀಣ ಅಭಿವೃದ್ಧಿಯನ್ನು ಸುಸೂತ್ರವಾಗಿ ನಿಭಾಯಿಸುವುದರ ಮೂಲಕ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಕೋವಿದ್-19 ನ ಈ ಬಿಕ್ಕಟ್ಟನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಹಾಗಾಗಿ ಗ್ರಾಮೀಣ ಭಾಗದಲ್ಲಿ ಈ ವೈರಸ್ಸಿನ ಸೋಂಕು ತೀವ್ರವಾಗಿ ಹರಡುತ್ತಿಲ್ಲ. ಆದರೂ ಕರೋನಾ ನೆಪವಿಟ್ಟುಕೊಂಡು ಚುನಾವಣೆ ಮುಂದೂಡಲು ಮುಂದಾಗಿರುವುದು ಸರಿಯಲ್ಲ ಎಂದಿದ್ದಾರೆ.

 siddaramaiha-karnataka-grama.panchayath-election-postpone-siddu-oppose-cm

ಸಿದ್ದರಾಮಯ್ಯ ಅವರ ಪತ್ರದ ವಿವರ ಹೀಗಿದೆ…….

ಮಾನ್ಯ ಯಡಿಯೂರಪ್ಪನವರೆ,
ಗ್ರಾಮ ಸ್ವರಾಜ್ಯದ ಸ್ಥಾಪನೆಯ ಮೂಲಕ ಭಾರತದ ಗ್ರಾಮಗಳನ್ನು ಸರ್ವತೋಮುಖವಾಗಿ ಅಭಿವೃದ್ಧಿ ಮಾಡಲು ಸಾಧ್ಯ ಎಂದು ರಾಷ್ಟ್ರಪಿತ ಮಹಾತ್ಮ ಗಾಧೀಜಿಯವರು ನಂಬಿದ್ದರು. ಈ ಹಿನ್ನೆಲೆಯಲ್ಲಿ 1991 ರಲ್ಲಿ ದಿವಂಗತ ರಾಜೀವ್‍ಗಾಂಧಿ ಮತ್ತು ದಿವಂಗತ ಪಿ.ವಿ ನರಸಿಂಹರಾವ್ ಇವರುಗಳ ಪ್ರಯತ್ನಗಳಿಂದ ಸಂವಿಧಾನಕ್ಕೆ 73ನೇ ತಿದ್ದುಪಡಿ ತರಲಾಯಿತು. ಈ ತಿದ್ದುಪಡಿಯ ಮೂಲಕ ಸಂವಿಧಾನದ ಅನುಚ್ಛೇದ 243 ಕ್ಕೆ ತಿದ್ದುಪಡಿ ತಂದು ಗ್ರಾಮ ಪಂಚಾಯತಿಗಳನ್ನು ಸ್ಥಳೀಯ ಸರ್ಕಾರಗಳನ್ನಾಗಿ ರೂಪಿಸಲಾಯಿತು. ಗ್ರಾಮ ಪಂಚಾಯತಿಗಳಿಗೆ ಆಯ್ಕೆಯಾಗುವ ಸದಸ್ಯರು ಯಾವುದೇ ಪಕ್ಷ, ಬಣ ಮುಂತಾದವುಗಳಿಗೆ ಸೇರದೆ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಸಂವಿಧಾನದ ಮೂಲ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ನ್ನು ಜಾರಿಗೆ ತರಲಾಯಿತು.

5 ವರ್ಷಗಳ ಹಿಂದೆ ರಾಜ್ಯದ 6024 ಗ್ರಾಮ ಪಂಚಾಯತಿಗಳಿಗೆ ನಡೆದ ಚುನಾವಣೆಗಳಲ್ಲಿ 97060 ಸದಸ್ಯರು ಆಯ್ಕೆಯಾಗಿರುತ್ತಾರೆ. ಬರ, ಪ್ರವಾಹ ಕಠಿಣ ಪರಿಸ್ಥಿತಿಯನ್ನು ಹಾಗೂ ಗ್ರಾಮೀಣ ಅಭಿವೃದ್ಧಿಯನ್ನು ಸುಸೂತ್ರವಾಗಿ ನಿಭಾಯಿಸುವುದರ ಮೂಲಕ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಕೋವಿದ್-19 ನ ಈ ಬಿಕ್ಕಟ್ಟನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಹಾಗಾಗಿ ಗ್ರಾಮೀಣ ಭಾಗದಲ್ಲಿ ಈ ವೈರಸ್ಸಿನ ಸೋಂಕು ತೀವ್ರವಾಗಿ ಹರಡುತ್ತಿಲ್ಲ. ನಗರಗಳಿಂದ ವ್ಯಾಪಕವಾಗಿ ಜನರು ಹಳ್ಳಿಗಳಿಗೆ ವಲಸೆ ಹೋದರೂ ಈ ಬೇಸಿಗೆಯಲ್ಲಿ ಕುಡಿಯುವ ನೀರು, ನೈರ್ಮಲ್ಯ ಮುಂತಾದ ಸಮಸ್ಯೆಗಳು ಸೃಷ್ಟಿಯಾಗದಂತೆ ಗ್ರಾಮ ಪಂಚಾಯಿತಿಗಳು ಅಚ್ಚು ಕಟ್ಟಾಗಿ ಕೆಲಸ ನಿರ್ವಹಿಸುತ್ತಿವೆ. ಈ ಸದಸ್ಯರುಗಳ ಪದಾವಧಿ ಮುಂದಿನ ಒಂದೆರಡು ತಿಂಗಳಲ್ಲಿ ಮುಗಿಯುತ್ತದೆ.

 siddaramaiha-karnataka-grama.panchayath-election-postpone-siddu-oppose-cm

ಸಂವಿಧಾನದ ಅನುಚ್ಛೇದ 243 ರ ಪ್ರಕಾರ ಚುನಾವಣೆಗಳನ್ನು ನಿಗಧಿತ ಅವಧಿಯೊಳಗೆ ಕಡ್ಡಾಯವಾಗಿ ನಡೆಸಬೇಕಾಗಿರುತ್ತದೆ. ಆದರೆ ಕೊರೋನ ಸೋಂಕಿನ ಹೆಸರು ಹೇಳಿಕೊಂಡು ಸರ್ಕಾರ ಚುನಾವಣೆಗಳನ್ನು ಮುಂದೂಡಲು ಪ್ರಯತ್ನಿಸುತ್ತಿದೆ. ಹೀಗೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ಹಿಂದೆ ಹಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ಸಹ ನಿಗಧಿ ಪಡಿಸಿದ ಅವಧಿಯ ಒಳಗೆ ಚುನಾವಣೆಗಳನ್ನು ನಡೆಸುವಂತೆ ಸರ್ಕಾರಗಳಿಗೆ ನಿರ್ದೇಶನಗಳನ್ನು ನೀಡಿವೆ. ಕೊರೋನ ಬಿಕ್ಕಟ್ಟಿನ ನೆಪದಲ್ಲಿ ಚುನಾವಣೆಗಳನ್ನು ನಡೆಸದೆ ಜಿಲ್ಲಾಧಿಕಾರಿಗಳ ಮೂಲಕ ಆಡಳಿತಾಧಿಕಾರಿಗಳನ್ನು ಮತ್ತು ನಾಮ ನಿರ್ದೇಶಿತ ಆಡಳಿತ ಸಮಿತಿಗಳನ್ನು ರಚಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ. ಸರ್ಕಾರ ಒಂದು ವೇಳೆ ಹೀಗೆ ಮಾಡಿದ್ದೆ ಆದರೆ ಅದು ಪ್ರಜಾಪ್ರಭುತ್ವದ ಮತ್ತು ಸಂವಿಧಾನದ ಆಶಯಗಳಿಗೆ ಸಂಪೂರ್ಣ ವಿರುದ್ಧವಾಗುತ್ತದೆ. ಗ್ರಾಮ ಪಂಚಾಯತಿಗಳ ಕಾರ್ಯ ವೈಖರಿಯ ಬಗ್ಗೆ ಏನೇನೂ ತಿಳಿವಳಿಕೆ ಇಲ್ಲದವರನ್ನು, ನಿರ್ಧಿಷ್ಠ ಸಿದ್ಧಾಂತಗಳ ಹಿನ್ನೆಲೆಯವರನ್ನು ಸೇರಿಸಿ ಆಡಳಿತ ಸಮಿತಿ ರಚಿಸಿದರೆ ಕೊರೋನದಂತಹ ಭೀಕರ ಬಿಕ್ಕಟ್ಟನ್ನು ನಿಭಾಯಿಸಲು ಕಷ್ಟವಾಗುತ್ತದೆ. ಇದರಿಂದ ಗ್ರಾಮೀಣ ಕರ್ನಾಟಕ ತೀವ್ರ ಅನ್ಯಾಯಕ್ಕೆ ತುತ್ತಾಗುತ್ತದೆ.

ಆದ್ದರಿಂದ ಯಾವುದೇ ಕಾರಣಕ್ಕೂ ಹೊಸ ಆಡಳಿತ ಸಮಿತಿ ರಚಿಸುವ , ಆಡಳಿತಾಧಿಕಾರಿ ನೇಮಿಸುವ ಕೆಟ್ಟ ಸಂಪ್ರದಾಯಕ್ಕೆ ಸರ್ಕಾರ ನಾಂದಿ ಹಾಡಬಾರದು. ಒಂದು ವೇಳೆ ತಾತ್ಕಾಲಿಕ ವ್ಯವಸ್ಥೆ ಮಾಡಲೇಬೇಕೆಂದಿದ್ದರೆ 1987 ರಲ್ಲಿ ಮಾಡಿದ್ದಂತೆ, ಪ್ರಸ್ತುತ ಅಧಿಕಾರದಲ್ಲಿರುವ ಎಲ್ಲ ಗ್ರಾಮ ಪಂಚಾಯಿತಿಗಳನ್ನು ಮತ್ತು ಸದಸ್ಯರನ್ನು ಮುಂದಿನ ಚುನಾವಣೆ ನಡೆಸುವವರೆಗೆ ಮುಂದುವರೆಸಬೇಕು. ಅದರ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ.

key words : karnataka-grama.panchayath-election-postpone-siddu-oppose-cm