ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಶ್ವೇತಪತ್ರ ಹೊರಡಿಸಿ: ಸಿಎಂಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ

ನವದೆಹಲಿ, ಜೂನ್ 28, 2020 (www.justkannada.in):  ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಶ್ವೇತಪತ್ರಕ್ಕೆ ವಿರೋಧ ಪಕ್ಷಗಳ ನಾಯಕ ಸಿದ್ದರಾಮಯ್ಯನವರ ಆಗ್ರಹಿಸಿದ್ದಾರೆ.

ಸರಕಾರಕ್ಕೆ ಈ ಕುರಿತು ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ… ಇದೇ ಸಿದ್ದು ಬರೆದಿರುವ ಪತ್ರ….

ಕೊರೊನಾ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಪಾರದರ್ಶಕ ರೀತಿಯಲ್ಲಿ ಕ್ರಮಕೈಗೊಳ್ಳದೆ ಇರುವ ಕಾರಣಕ್ಕೆ ಜನರಲ್ಲಿ ಅನುಮಾನ, ಅಸುರಕ್ಷತೆ, ಅಭದ್ರತೆ ಹುಟ್ಟಿಕೊಂಡಿವೆ. ರಾಜ್ಯ ಸರ್ಕಾರ ತಕ್ಷಣ ತಾನು ಕೈಗೊಂಡ ಕ್ರಮಗಳು ಮತ್ತು ಮಾಡಿರುವ ಖರ್ಚು-ವೆಚ್ಚಗಳ ಬಗ್ಗೆ ಶ್ವೇತಪತ್ರವನ್ನು ಹೊರಡಿಸಿ ಸಂಪೂರ್ಣ ವಿವರವನ್ನು ಜನತೆಯ ಮುಂದಿಟ್ಟು ಅವರಲ್ಲಿ ವಿಶ್ವಾಸವನ್ನು ತುಂಬುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಆಗ್ರಹಿಸುತ್ತಿದ್ದೇನೆ.

ಕೊರೊನಾ ನಿಯಂತ್ರಣಕ್ಕೆ ರಾಜ್ಯದ ಖಜಾನೆಯಿಂದ ಎಷ್ಟು ಖರ್ಚಾಗಿದೆ? ಅದು ಯಾವ ಉದ್ದೇಶಗಳಿಗೆ ಖರ್ಚಾಗಿದೆ? ಇದರಲ್ಲಿ ಕ್ವಾರಂಟೈನ್, ಚಿಕಿತ್ಸೆ, ಪಿಪಿಇ, ವೆಂಟಿಲೇಟರ್ ಆಮ್ಲಜನಕ ಸಿಲಿಂಡರ್, ಮಾಸ್ಕ್,ಸಾನಿಟೈಸರ್ ಸೇರಿದಂತೆ ಮತ್ತಿತರ ವೈದ್ಯಕೀಯ ಸಲಕರಣೆ ಮತ್ತು ಚಿಕಿತ್ಸೆಗೆ ಖರ್ಚಾದ ಹಣ ಎಷ್ಟು? ಕೇಂದ್ರ ಸರ್ಕಾರದಿಂದ ಈ ವರೆಗೆ ಬಂದಿರುವ ದುಡ್ಡು ಮತ್ತು ವೈದ್ಯಕೀಯ ಸಲಕರಣೆಗಳೆಷ್ಟು? ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ಮೀಸಲಿಟ್ಟಿರುವ ಹಾಸಿಗೆಗಳೆಷ್ಟು? ಯಾವ ಮಾನದಂಡದ ಆಧಾರದಲ್ಲಿ ಖಾಸಗಿ ಆಸ್ಪತ್ರೆಗಳ ಶುಲ್ಕ ನಿಗದಿಪಡಿಸಿದೆ? – ಈ ಎಲ್ಲ ವಿವರಗಳನ್ನು ರಾಜ್ಯ ಸರ್ಕಾರ ಜನತೆಯ ಮುಂದಿಡಬೇಕಾಗಿದೆ.

ನಾನು ಹಲವಾರು ಪತ್ರಗಳನ್ನು ಬರೆದು ವಿವರವನ್ನು ಕೇಳಿದರೂ ಇಲಾಖೆಗಳು ಸರಿಯಾದ ಮಾಹಿತಿ ಕೊಡುತ್ತಿಲ್ಲ. ಈ ರೀತಿ ಮಾಹಿತಿಯನ್ನು ನಿರಾಕರಿಸುವುದು ನನ್ನ ಹಕ್ಕುಚ್ಯುತಿಯಾಗುತ್ತದೆ. ಇಷ್ಟು ಮಾತ್ರವಲ್ಲ ಸರ್ಕಾರದ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡಿಸುತ್ತದೆ. ಈ ಬಗ್ಗೆ ಸಂಪೂರ್ಣ ವಿವರವನ್ನು ಶ್ವೇತಪತ್ರದ ಮೂಲಕ ಜನರ ಮುಂದಿಡಬೇಕು .
ರಾಜ್ಯದ 9 ಜಿಲ್ಲೆಗಳಲ್ಲಿ ದೇಶಕ್ಕೆ ಒಂದು ದಿನ ಮೊದಲು ಮಾರ್ಚ್ 23ರಂದು ಲಾಕ್ ಡೌನ್ ಘೋಷಿಸಲಾಯಿತು. ಆಗ ರಾಜ್ಯದಲ್ಲಿ ಒಂದೇ ಒಂದು ಸಾವು ಸಂಭವಿಸಿರಲಿಲ್ಲ, 26 ಮಂದಿ ಸೋಂಕಿತರು ಮಾತ್ರ ಇದ್ದರು. ಇಂದಿನ ವರದಿಯ ಪ್ರಕಾರ ರಾಜ್ಯದ ಸೋಂಕಿತರ ಸಂಖ್ಯೆ 11,923, ಸಾವಿಗೀಡಾದವರ ಸಂಖ್ಯೆ 191 ದಾಟಿದೆ. ಆಗ ಬೆಂಗಳೂರು ಮತ್ತು ಕೆಲವು ಜಿಲ್ಲಾ ಕೇಂದ್ರಗಳಿಗೆ ಸೀಮಿತವಾಗಿದ್ದ ಕೊರೊನಾ ಸೋಂಕು ಈಗ ಹಳ್ಳಿ-ಊರುಗಳೆನ್ನದೆ ವ್ಯಾಪಕವಾಗಿ ಹರಡಿದೆ.

ಕೊರೊನಾ ದಿಡೀರನೇ ಬಂದೆರಗಿಲ್ಲ, ಹಂತಹಂತವಾಗಿ ಕಾಣಿಸಿಕೊಂಡಿದೆ. ಕಳೆದ ಮೂರು ತಿಂಗಳ ಅವಧಿಯನ್ನು ಕೇವಲ ಲಾಕ್ ಡೌನ್ ಹೇರಿಕೆ ಮತ್ತು ಹಿಂತೆಗೆತದಲ್ಲಿ ವ್ಯರ್ಥವಾಗಿ ಕಳೆದ ರಾಜ್ಯ ಸರ್ಕಾರ ಅದನ್ನು ಎದುರಿಸಲು ಯಾವ ತಯಾರಿಯನ್ನೂ ನಡೆಸಿಲ್ಲ. ಮೂರು ತಿಂಗಳ ಅಮೂಲ್ಯ ಸಮಯವನ್ನು ರಾಜ್ಯ ಸರ್ಕಾರ ತನ್ನ ಬೇಜವಾಬ್ದಾರಿತನದಿಂದ ವ್ಯರ್ಥಮಾಡಿದೆ. ಈ ನಿಷ್ಕ್ರೀಯತೆಯ ಫಲವನ್ನು ರಾಜ್ಯದ ಜನತೆ ಅನುಭವಿಸಿದಂತಾಗಿದೆ.
ರಾಜ್ಯದಲ್ಲಿ ಕೊರೊನಾ ಸೋಂಕು ಯಾವ ನಿಯಂತ್ರಣವೂ ಇಲ್ಲದೆ ತೀವ್ರಗತಿಯಲ್ಲಿ ಹರಡುತ್ತಿದ್ದು, ಲಾಕ್ ಡೌನ್ ನಲ್ಲಿ ಸುರಕ್ಷಿತವಾಗಿದ್ದ ಹಳ್ಳಿಗಳಲ್ಲೂ ಈಗ ದಿನದಿಂದ ದಿನಕ್ಕೆ ಸೋಂಕು ವ್ಯಾಪಕವಾಗುತ್ತಿದೆ.
ರಾಜ್ಯ ಸರ್ಕಾರದ ಮೇಲಿನ ನಂಬಿಕೆ ಕಳೆದುಕೊಂಡಿರುವ ರಾಜ್ಯದ ಜನತೆ ಕೊರೊನಾ ಭೀತಿಯಿಂದ ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರ ತಮ್ಮನ್ನು ಕೊರೊನಾ ಮಾರಿಯಿಂದ ರಕ್ಷಿಸಬಹುದೆಂಬ ವಿಶ್ವಾಸ ಅವರಿಗಿಲ್ಲದಂತಾಗಿದೆ.

ಈಗಾಗಲೇ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳು ತುಂಬಿ ಹೋಗಿವೆ. ಖಾಸಗಿ ಆಸ್ಪತ್ರೆಗಳು ಸರ್ಕಾರ ಒಪ್ಪಿಕೊಂಡಿರುವ ಚಿಕಿತ್ಸಾ ಶುಲ್ಕಕ್ಕೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ. ಸರ್ಕಾರ ಅವರನ್ನು ಒಪ್ಪಿಸಬೇಕು, ಇಲ್ಲವೇ ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಎರಡನ್ನೂ ಮಾಡದೆ ಕೈಕಟ್ಟಿ ಕುಳಿತರೆ ಜನರೇನು ಮಾಡಬೇಕು?
ಕಳೆದ 15 ದಿನಗಳಿಂದ ಪರೀಕ್ಷೆ ಮಾಡುವ ಪ್ರಮಾಣ 16 ಸಾವಿರದಿಂದ ಸರಾಸರಿ 11000 ಗಳಿಗೆ ಇಳಿದಿದೆ. ಸೋಂಕು ಸಮುದಾಯಕ್ಕೆ ವ್ಯಾಪಿಸಿಕೊಂಡಿರುವ ಭೀತಿ ಇದೆ.

ರಾಜ್ಯದಲ್ಲಿ 9200 ವೆಂಟಿಲೇಟರ್‍ ತುರ್ತಾಗಿ ಅಗತ್ಯವಿದ್ದರೆ ಈಗ ಲಭ್ಯಇರುವುದು ಕೇವಲ 1500 ಮಾತ್ರ. ಕೇಂದ್ರವನ್ನು 33000 ವೆಂಟಿಲೇಟರ್ ಕಳಿಸಿ ಎಂದು ಕೇಳಿಕೊಂಡರೆ ಅವರು ಇಲ್ಲಿಯ ವರೆಗೆ ಕಳಿಸಿರುವುದು ಕೇವಲ 90 ಮಾತ್ರ. ಆಕ್ಸಿಜನೇಟೆಡ್ ವೆಂಟಿಲೇಟರ್ ಕೇವಲ 7000 ಮಾತ್ರ ಇವೆ. ಅಗತ್ಯ ಇರುವುದು 20000 ವೆಂಟಿಲೇಟರ್ ಎಂದು ಹೇಳಲಾಗಿದೆ.

ಮೆಡಿಕಲ್ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ, ಮಾರುಕಟ್ಟೆ ದರಗಳಿಗಿಂತ ಎರಡು ಪಟ್ಟು ಹೆಚ್ಚಿಗೆ ಪಾವತಿಸಿ ಖರೀದಿಸಲಾಗಿದೆ. ಇದಕ್ಕೆ ಸಮರ್ಥನೆಗಳಿಲ್ಲ ಎಂದು ಆರ್ಥಿಕಇಲಾಖೆ ಟಿಪ್ಪಣಿ ಇದೆ. ಈ ರೀತಿಯ ಹಣದ ಮೊತ್ತ ಸುಮಾರು 3300 ಕೋಟಿಗಳೆಂಬ ಆರೋಪ ಕೇಳಿಬರುತ್ತಿದೆ.

ರಾಜ್ಯ ಸರ್ಕಾರ ತಕ್ಷಣ ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ವಿವರವಾದ ಶ್ವೇತಪತ್ರವನ್ನು ಹೊರಡಿಸಿ ನಿಜ ಪರಿಸ್ಥಿತಿಯನ್ನು ಜನರ ಮುಂದಿಟ್ಟು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೋಂಕು ನಿಯಂತ್ರಣದಲ್ಲಿ ತೊಡಗಿಸಿಕೊಳ್ಳಬೇಕು. ಸರ್ಕಾರ ಇದೇ ರೀತಿಯ ಉದಾಸೀನ-ಉಡಾಫೆತನವನ್ನು ಮುಂದುವರಿಸಿದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಬಹುದು.

-ಸಿದ್ದರಾಮಯ್ಯ
ವಿರೋಧಪಕ್ಷದ ನಾಯಕರು