ಸಿದ್ಧರಾಮಯ್ಯ ಪರ ಬ್ಯಾಟಿಂಗ್: ಬಿಎಸ್ ವೈ ಬಿಟ್ಟು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಆಗಲ್ಲ ಎಂದ ವಾಟಾಳ್ ನಾಗರಾಜ್.

Promotion

ಮೈಸೂರು,ಮಾರ್ಚ್,27,2022(www.justkannada.in): ಬಿಎಸ್ ಯಡಿಯೂರಪ್ಪ ಅವರನ್ನ ಬಿಟ್ಟು, ಬಿಜೆಪಿ ಚುನಾವಣೆಗೆ ಹೋಗೊ ಪ್ಲಾನ್ ಮಾಡುತ್ತಿದೆ. ಆದರೆ ಯಡಿಯೂರಪ್ಪ ಅವರನ್ನ  ಬಿಟ್ರೆ ಇವರು ಮುಂದಿನ ಚುನಾವಣೆಯಲ್ಲಿ ಗೆಲ್ಲೊಕೆ ಆಗೋದಿಲ್ಲ.  ಈ ಕಾರಣಕ್ಕಾಗಿ ಹಿಜಾಬ್, ಮುಸ್ಲಿಂ ವರ್ತಕರಿಗೆ ವ್ಯಾಪಾರ ಬಹಿಷ್ಕಾರ ಹಾಕಿದ್ದಾರೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ವಾಟಾಳ್ ನಾಗರಾಜ್, ಕರ್ನಾಟಕ ಭಾಷವಾರು ಪ್ರಾಂತ್ಯ. ಕರ್ನಾಟಕದಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುವ ಪರಿಸ್ಥಿತಿ ಇದೆ. ಪರಭಾಷೆಯವರು ಕರ್ನಾಟಕದುದ್ದಕ್ಕೂ ಬರ್ತಿದ್ದಾರೆ. ಬೆಂಗಳೂರನ್ನ ಪರಭಾಷಿಕರು ತಿಂದು ನುಂಗ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ರೆ ಕನ್ನಡಿಗರಿಗೆ ಗಂಭೀರವಾದ ಸ್ಥಿತಿ ಎದುರಿಸಬೇಕಾಗುತ್ತೆ. ಕನ್ನಡಿಗರ ಉದ್ಯೋಗಕ್ಕೆ ಸರ್ಕಾರ ಸ್ಪಷ್ಟ ನೀತಿ ಮಾಡಿಲ್ಲ. ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡ್ತಿಲ್ಲ. ಶಾಸಕರು, ಮಂತ್ರಿಗಳಿಗೆ ಕನ್ನಡದ ಉಳಿವು ಬೇಕಾಗಿಲ್ಲ. ಇದು ಗಂಭೀರವಾದ ಪರಿಸ್ಥಿತಿ. ನಮಗೆ ಹಿಂದಿ ಬೇಡವೇ ಬೇಡ. ಕನ್ನಡ ಚಿತ್ರಗಳನ್ನು ಮೂಲೆಗುಂಪು ಮಾಡಲಾಗ್ತಿದೆ‌. ಪರಿಭಾಷೆಯ ಚಿತ್ರಗಳಿಗೆ ಬಾಗಿಲು ತೆರದು ಆಹ್ವಾನ ನೀಡುತಿದ್ದಾರೆ‌. ಆದರೆ ಹೊರರಾಜ್ಯಗಳಲ್ಲಿ ಕನ್ನಡಕ್ಕೆ ಅವಕಾಶವೇ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.

ಸಿದ್ಧರಾಮಯ್ಯ ಪರ ಬ್ಯಾಟಿಂಗ್…

ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ವಾಟಾಳ್ ನಾಗರಾಜ್, ಸಿದ್ದರಾಮಯ್ಯ ಒಬ್ಬ ಪ್ರಬುದ್ಧ ರಾಜಕಾರಣಿ. ಸಿದ್ದರಾಮಯ್ಯ ಈಗಾಗಲೇ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸ್ಪಷ್ಟನೆ ನೀಡಿದ ಬಳಿಕವೂ ಬಿಜೆಪಿಯವರು ತೀಟೆ ಜಗಳ ಮಾಡ್ತಿದ್ದಾರೆ. ಸಿದ್ದರಾಮಯ್ಯ ಮಠಗಳ ಬಗ್ಗೆ ಗೌರವ ಇರುವ ವ್ಯಕ್ತಿ. ಅವರ ವಿರುದ್ಧ ಷಡ್ಯಂತ್ರ ಮಾಡಲಾಗ್ತಿದೆ‌. ಮಠಾಧಿಪತಿಗಳೂ ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಚುನಾವಣಾ ಸಮೀಪ ಹಿನ್ನಲೆ ಬಿಜೆಪಿಯವರು ಹೀಗೆ ಮಾಡ್ತಿದ್ದಾರೆ. ಮೊದಲು ಹಿಜಾಬ್, ಈಗ ಜಾತ್ರೆಯಲ್ಲಿ ಮುಸ್ಲಿಂ ನಿರ್ಬಂಧ ಹೀಗೆ ಹೊಸ ಹೊಸ ವಿವಾದ ತರುತ್ತಿದ್ದಾರೆ.  ಮುಸ್ಲಿಂಮರು ಶತಮಾನಗಳಿಂದ ಇಲ್ಲಿದ್ದಾರೆ. ಇಲ್ಲೇ ಹುಟ್ಟಿ ವ್ಯಾಪಾರ ಮಾಡುವವರನ್ನು ದೂರ ಮಾಡಬೇಡಿ ಎಂದು ಹೇಳಿದರು.

ಟಿಪ್ಪು ಸುಲ್ತಾನ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ದೇಶಕ್ಕೆ ಆತನ ಕೊಡುಗೆ ಅಪಾರವಾದದ್ದು. ಕೊಲ್ಲೂರು ಸನ್ನಿಧಿಯಲ್ಲಿ ಈಗಲೂ ಟಿಪ್ಪು ಹೆಸರಿನಲ್ಲಿ ಮಂಗಳಾರತಿ ಮಾಡ್ತಾರೆ. ಮಂಗಳಾರತಿ ನಿಲ್ಲಿಸಿ ಇತಿಹಾಸ ತಿರುಚಲು ಸಾಧ್ಯವೇ ಎಂದು ವಾಟಾಳ್ ನಾಗರಾಜ್ ಪ್ರಶ್ನಿಸಿದರು.

Key words: Siddaramaiah- Vatal Nagaraj – BJP – the next election – BSY.