ಸಚಿವ ಕಾರಜೋಳಗೆ ಜಂಟಿಸುದ್ದಿಗೋಷ್ಠಿ ನಡೆಸಿ ಟಾಂಗ್ ಕೊಟ್ಟ ಸಿದ್ದು-ಡಿಕೆಶಿ ಜೋಡಿ

ಬೆಂಗಳೂರು, ಜನವರಿ 07, 2022 (www.justkannada.in): ಸಚಿವ ಗೋವಿಂದ ಕಾರಜೋಳ ಆರೋಪಕ್ಕೆ ಸಂಬಂಧಿಸಿದಂತೆ ಇಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಕಾಂಗ್ರೆಸ್ ಪಕ್ಷ ಯೋಜನೆ ಜಾರಿಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಿದ್ದು-ಡಿಕೆಶಿ ಹೇಳಿದ್ದಿಷ್ಟು…

ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದ್ದು 26 ಜುಲೈ 2019. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ. 2018 ರಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಡಿ.ಕೆ ಶಿವಕುಮಾರ್ ಅವರು ಜಲ ಸಂಪನ್ಮೂಲ ಸಚಿವರಾಗಿದ್ದಾಗ ಕೇಂದ್ರಕ್ಕೆ ಕಳುಹಿಸಿರುವ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಅನುಮೋದನೆ ಪಡೆಯಬಹುದಿತ್ತು. ಇಂದು ಕಾಂಗ್ರೆಸ್ ಪಕ್ಷದ ವಿರುದ್ಧ ಆರೋಪ ಮಾಡಿರುವ ಸಚಿವ ಗೋವಿಂದ ಕಾರಜೋಳ ಅವರು ತಮ್ಮ ಸರ್ಕಾರ ಕಳೆದ ಎರಡೂವರೆ ವರ್ಷಗಳಲ್ಲಿ ಮೇಕೆದಾಟು ಯೋಜನೆ ಜಾರಿಗೆ ಏನೆಲ್ಲಾ ಪ್ರಯತ್ನ ಮಾಡಿದೆ ಎಂದು ಹೇಳಿಲ್ಲ.

2007 ರ ನ್ಯಾಯಾಲಯವು ಬಿಳಿಗೊಂಡ್ಲುವಿನಿಂದ 192 ಟಿ.ಎಂ.ಸಿ ನೀರು ಬಿಡಬೇಕು ಎಂದು ಆದೇಶ ನೀಡಿತ್ತು. ಈ ಆದೇಶದ ವಿರುದ್ಧ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಈ ಕುರಿತು ಮತ್ತೆ ವಿಚಾರಣೆ ನಡೆದು ಡಿಸೆಂಬರ್  2016ಕ್ಕೆ ನಮ್ಮ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿತು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು 2013 ರ ಮೇ ತಿಂಗಳಲ್ಲಿ. ನಂತರ 10/09/2013 ರಲ್ಲಿ 4G ವಿನಾಯಿತಿಗೆ ಕಳಿಸಿದ್ದೆವು. ನಂತರ ಸ್ವತಃ ನಾನೇ ಪ್ರಧಾನಿಯವರನ್ನು ಭೇಟಿಯಾಗಿ ಯೋಜನೆ ಜಾರಿಗೆ ಅನುಮೋದನೆ ಕೋರಿ ಮನವಿ ಮಾಡಿದ್ದೆ. ಮೇಕೆದಾಟು ಯೋಜನೆಯ ರೂಪುರೇಷೆ ತಯಾರಾದದ್ದೇ ನಮ್ಮ ಸರ್ಕಾರದ ಅವಧಿಯಲ್ಲಿ. ಆ ವರೆಗೆ ಯೋಜನೆಗೆ ಯಾವುದೇ ರೀತಿಯ ನಿರ್ಧಿಷ್ಟ ರೂಪವಿರಲಿಲ್ಲ.

ಈ ಹಿಂದೆ 2007ರಲ್ಲಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ 16/02/2018 ರಲ್ಲಿ 177.25 ಟಿ.ಎಂ.ಸಿ ನೀರನ್ನು ಬಿಡಬೇಕು ಎಂದು ಅಂತಿಮ ಆದೇಶ ನೀಡಿತು. ಇಲ್ಲಿಗೆ ನ್ಯಾಯಾಂಗ ಹೋರಾಟ ಕೊನೆಯಾದದ್ದು.

2019ರ ಜನವರಿ ತಿಂಗಳಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಅವರು ಪರಿಷ್ಕೃತ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಕೇಂದ್ರದ ಜಲ ಆಯೋಗದ ಅನುಮತಿಗೆ ಕಳುಹಿಸಿಕೊಟ್ಟಿದ್ದರು. ಆ ನಂತರ  ಡಿ.ಕೆ ಶಿವಕುಮಾರ್ ಅವರು ಅನೇಕ ಬಾರಿ ಕೇಂದ್ರದ ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಇಷ್ಟೆಲ್ಲಾ ಮಾಡಿದ್ದೇವೆ, ಆದರೂ ಕಾಂಗ್ರೆಸ್ ಪಕ್ಷ ಈ ಯೋಜನೆ ಬಗ್ಗೆ ಗಮನ ನೀಡಿಲ್ಲ ಎಂದರೆ ಏನು ಹೇಳಬೇಕು?

ಬಿಜೆಪಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗಿದೆ. ಈಗ ನೀರಿನ ಹಂಚಿಕೆ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ಇಲ್ಲ, ಹಸಿರು ನ್ಯಾಯಾಧೀಕರಣ ಕೂಡ ಯಾವುದೇ ವಿರೋಧ ಮಾಡಿಲ್ಲ, ಎರಡೂ ಕಡೆ ಬಿಜೆಪಿಯವರ ಸರ್ಕಾರವೇ ಇದೆ. ಹೀಗಾಗಿ ಕೇಂದ್ರದ ಅನುಮತಿ ಪಡೆದು ಯೋಜನೆ ಆರಂಭ ಮಾಡಲು ಇರುವ ಸಮಸ್ಯೆಯಾದರೂ ಏನು? ಇದನ್ನು ಗೋವಿಂದ ಕಾರಜೋಳ ಅವರು ಸ್ಪಷ್ಟಪಡಿಸಬೇಕು.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಈ ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆಯಾಗಲ್ಲ, ರಾಜಿ ಸಂಧಾನದ ಮಾತುಕತೆ ನಡೆಸೋಣ ಎಂದು ಎಂ.ಕೆ ಸ್ಟಾಲಿನ್ ಅವರಿಗೆ ಒಂದು ಪತ್ರ ಬರೆದಿರುವುದು ಬಿಟ್ಟರೆ ಬಿಜೆಪಿಯವರು ಬೇರೆ ಏನನ್ನೂ ಇವತ್ತಿನ ವರೆಗೆ ಮಾಡಿಲ್ಲ.

ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಅನುಮೋದನೆ ಪಡೆಯಲು ಏನು ಸಮಸ್ಯೆ? ಮನಮೋಹನ್ ಸಿಂಗ್ ಅಥವಾ ರಾಹುಲ್ ಗಾಂಧಿಯವರು ಪ್ರಧಾನಿಯಾಗಿದ್ದಾರ? ಬಿಜೆಪಿಯ ನರೇಂದ್ರ ಮೋದಿ ಅವರಲ್ಲವೇ? ಮತ್ತೇನು ಕಷ್ಟ ಇದೆ?

ಒಟ್ಟಿನಲ್ಲಿ ಗೋವಿಂದ ಕಾರಜೋಳ ಅವರ ಆರೋಪ ಸತ್ಯಕ್ಕೆ ದೂರವಾದುದ್ದು ಮತ್ತು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ನಮ್ಮ ವಿರುದ್ಧ ಬೆರಳು ಮಾಡಿ ತೋರಿಸುವ ಹತಾಶ ಪ್ರಯತ್ನವಾಗಿದೆ.

ರಾಜ್ಯ ಸರ್ಕಾರ ಸರ್ವಪಕ್ಷ ನಿಯೋಗವನ್ನು ತೆಗೆದುಕೊಂಡು ಹೋಗುವುದಾದರೆ ನರೇಂದ್ರ ಮೋದಿ ಅವರ ಎದುರು ಯೋಜನೆಗೆ ಅನುಮತಿ ನೀಡುವಂತೆ ಒತ್ತಾಯಿಸಲು ನಾವು ಸಿದ್ಧರಿದ್ದೇವೆ. ಮುಖ್ಯಮಂತ್ರಿಗಳು ಕಾಳಜಿ ವಹಿಸಿ ಈ ಕೆಲಸ ಮಾಡಬೇಕು.

ಸುದ್ದಿಗೋಷ್ಠಿ ವೇಳೆ ತಮ್ಮ ಸರ್ಕಾರ ಮೇಕೆದಾಟು ಯೋಜನೆ ಜಾರಿಗೆ ಕೈಗೊಂಡ ಕ್ರಮಗಳನ್ನು ಕಾಲಾನುಕ್ರಮದಲ್ಲಿ ವಿವರಿಸಲಾಗಿದ್ದು, ಅದರ ಪ್ರತಿಯನ್ನು ಮಾಧ್ಯಮ ಪ್ರತಿನಿಧಿಗಳ ಹೆಚ್ಚಿನ ಮಾಹಿತಿಗಾಗಿ ನೀಡಲಾಗಿದೆ.