ಶುಭ್ ಮನ್ ಗಿಲ್ ಭರ್ಜರಿ ಶತಕ: 290 ರನ್ ಟಾರ್ಗೆಟ್ ನೀಡಿದ ಟೀಂ ಇಂಡಿಯಾ.

Promotion

ಹರಾರೆ,ಆಗಸ್ಟ್,22,2022(www.justkannada.in): ಹರಾರೆಯ ಸ್ಪೋರ್ಟ್ಸ್​ ಮೈದಾನದಲ್ಲಿ ನಡೆಯುತ್ತಿರುವ ಭಾರತ- ಜಿಂಬಾಬ್ವೆ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಶುಭ್ ಮನ್ ಗಿಲ್ ಭರ್ಜರಿ ಶತಕ ಬಾರಿಸಿದ್ದಾರೆ.

ಜಿಬಾಂಬ್ವೆಗೆ ಟೀಮ್ ಇಂಡಿಯಾ 290 ರನ್​ಗಳ ಟಾರ್ಗೆಟ್ ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಕೆ.ಎಲ್ ರಾಹುಲ್ ನಾಯಕತ್ವದ  ಟೀಮ್ ಇಂಡಿಯಾ ಪರ ಶುಭ್​ಮನ್​ ಗಿಲ್ ಭರ್ಜರಿ ಶತಕ ಸಿಡಿಸುವ ಮೂಲಕ ಬೃಹತ್ ಮೊತ್ತ ಪೇರಿಸಲು ನೆರವಾದರು. ಇದಕ್ಕೂ ಮುನ್ನ ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಮೊದಲ ವಿಕೆಟ್​ಗೆ 63 ರನ್​​ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ಬ್ರಾಡ್ ಇವಾನ್ಸ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ರಾಹುಲ್ (30) ಕ್ಲೀನ್ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರು.

ಇನ್ನು 40 ರನ್​ಗಳಿಸಿ ಉತ್ತಮ ಬ್ಯಾಟಿಂಗ್ ಮುಂದುವರೆಸಿದ್ದ ಶಿಖರ್ ಧವನ್ ಕೂಡ ಔಟ್ ಆದರು.  21 ಓವರ್​ನಲ್ಲಿ 84 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾಗೆ ಈ ಹಂತದಲ್ಲಿ ಶುಭ್​ಮನ್ ಗಿಲ್ ಹಾಗೂ ಇಶಾನ್ ಕಿಶನ್ ಆಸರೆಯಾದರು.

3ನೇ ವಿಕೆಟ್​ಗೆ ಶತಕದ ಜೊತೆಯಾಟವಾಡಿದ ಶುಭ್​ಮನ್ ಗಿಲ್ ಹಾಗೂ ಕಿಶನ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಈ ವೇಳೆ 51 ಎಸೆತಗಳಲ್ಲಿ ಗಿಲ್ ಅರ್ಧಶತಕ ಬಾರಿಸಿದ ಬ್ಯಾಟ್ ಮೇಲೆಕ್ಕೆತ್ತಿದ್ದರು. ಶುಭ್​ಮನ್​ ಗಿಲ್ 82 ಎಸೆತಗಳಲ್ಲಿ 12 ಫೋರ್​ನೊಂದಿಗೆ ಚೊಚ್ಚಲ ಶತಕ ಪೂರೈಸಿ ಸಂಭ್ರಮಿಸಿದರು. ಶುಭ್​ಮನ್ ಗಿಲ್ 97 ಎಸೆತಗಳಲ್ಲಿ 130 ರನ್​ ಬಾರಿಸಿ ಕೊನೆಗೆ ವಿಕೆಟ್ ಒಪ್ಪಿಸಿದರು,  ಇನ್ನು ಸಂಜು ಸ್ಯಾಮ್ಸನ್ 13 ಎಸೆತಗಳಲ್ಲಿ 15 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದರೆ, ಅಕ್ಷರ್ ಪಟೇಲ್ 1 ರನ್​ ಬಾರಿಸಿ ವಿಕೆಟ್ ಒಪ್ಪಿಸಿದರು.

ಅಂತಿಮವಾಗಿ ಭಾರತ  50 ಓವರ್ ಗಳಲ್ಲಿ 290 ರನ್ ಗುರಿ ನೀಡಿದೆ.

Key words: Shubman Gill-century- Team India – Zimbabwe-3rd ODI