ಎಚ್1ಎನ್1, ಡೆಂಘ ಜತೆ ಚಿಗಟ ಜ್ವರ ಸಂಕಷ್ಟ

ಬೆಂಗಳೂರು:ಜುಲೈ-26: ರಾಜ್ಯದಲ್ಲಿ ಡೆಂಘ, ಎಚ್1ಎನ್1, ಚಿಕೂನ್ ಗುನ್ಯಾ ಮರಣ ಮೃದಂಗ ಬಾರಿಸುತ್ತಿರುವ ನಡುವೆಯೇ ಆತಂಕಕಾರಿ ‘ಸ್ಕ್ರಬ್ ಟೈಫಸ್’ ಜ್ವರ ಸದ್ದಿಲ್ಲದೆ ವ್ಯಾಪಿಸುತ್ತಿದ್ದು, ಈವರೆಗೆ 240 ಪ್ರಕರಣಗಳು ವರದಿಯಾಗಿವೆ.

2018ರಲ್ಲಿ 217 ಜನ ಸ್ಕ್ರಬ್​ಟೈಫಸ್​ಗೆ ತುತ್ತಾಗಿದ್ದರು. ಹಾವೇರಿ(121), ಉಡುಪಿ(42), ಗದಗ(24), ಧಾರವಾಡದಲ್ಲಿ (20) ಹೆಚ್ಚು ಮಂದಿಗೆ ಜ್ವರ ತಗುಲಿತ್ತು. 2019ರಲ್ಲಿ ಈಗಾಗಲೇ ರಾಜ್ಯದ 10 ಜಿಲ್ಲೆಗಳ 240 ಜನ ಸ್ಕ್ರಬ್ ಟೈಫಸ್​ಗೆ ತುತ್ತಾಗಿದ್ದು, ಈ ಬಾರಿಯೂ ಹಾವೇರಿ, ಗದಗ, ಧಾರವಾಡ, ಉಡುಪಿ ಜಿಲ್ಲೆಗಳಲ್ಲೇ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಶೀತ, ದೇಹದ ಉಷ್ಣಾಂಶ ಹೆಚ್ಚಳದಿಂದ ಪ್ರಾರಂಭವಾಗಿ ಗ್ರಂಥಿಗಳ ಊತ, ರಕ್ತಸ್ರಾವದವರೆಗೂ ಪರಿಣಾಮ ಬೀರುವ ಸ್ಕ್ರಬ್ ಟೈಫಸ್​ನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ, ಹೆಚ್ಚಿನ ಚಿಕಿತ್ಸೆ ಪಡೆಯದಿದ್ದಲ್ಲಿ ಮಾರಣಾಂತಿಕವಾಗಲಿದೆ.

ಏನಿದು ‘ಸ್ಕ್ರಬ್​ಟೈಪಸ್’? ಇಲಿ, ಬೆಕ್ಕು, ನಾಯಿ, ಕುರಿ ಮತ್ತು ದನಗಳ ಮೇಲೆ ಕೂರುವ ಸೋಂಕಿತ ಚಿಗಟ ಅಥವಾ ಉಣ್ಣೆ ಕಚ್ಚುವುದರಿಂದ ‘ಒರಿಯನ್ಸಿಯಾ ಸುಸುಗಮ್ಮಿ’ ಎಂಬ ಬ್ಯಾಕ್ಟೀರಿಯಾ ಮನುಷ್ಯನ ದೇಹ ಸೇರಿ ಜ್ವರ ಬರುತ್ತದೆ. ಸೋಂಕಿತ ಪ್ರದೇಶದಲ್ಲಿ ವಾಸ ಮತ್ತು ಪ್ರಯಾಣ ಮಾಡುವುದರಿಂದ ಮತ್ತೊಬ್ಬರಿಗೆ ಇದು ಹರಡುತ್ತದೆ. ಆಗ್ನೇಯ ಏಷ್ಯಾ, ಇಂಡೋನೇಷ್ಯಾ, ಚೀನಾ, ಜಪಾನ್, ಉತ್ತರ ಆಸ್ಟ್ರೇಲಿಯಾ ಸೇರಿ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸ್ಕ್ರಬ್ ಟೈಫಸ್ ಪ್ರಕರಣಗಳು ಹೆಚ್ಚು ಕಂಡುಬರುತ್ತದೆ. ರಾಜ್ಯದ ಹಲವು ವರ್ಷಗಳಿಂದ ಬೇರೂರಿರುವ ಈ ರೋಗ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಹರಡಿದೆ.

ಲಕ್ಷಣ, ಪರಿಣಾಮ, ಚಿಕಿತ್ಸೆ: ಚಿಗಟ ಅಥವಾ ಉಣ್ಣೆ ಕಚ್ಚಿದ 10 ದಿನಗಳಲ್ಲಿ ಸ್ಕ್ರಬ್​ಟೈಫಸ್ ಕಾಣಿಸಿಕೊಳ್ಳುತ್ತದೆ. ಪ್ರಾರಂಭದಲ್ಲಿ ಶೀತ, ಕೆಮ್ಮು, ಗ್ರಂಥಿಗಳ ಊತ, ಜ್ವರ, ಬೆವರುವಿಕೆ, ತಲೆನೋವು, ದೇಹ ಮತ್ತು ಸ್ನಾಯು ನೋವು, ಮೈ ಮೇಲೆ ಗುಳ್ಳೆಗಳು, ಚಿಗಟ ಅಥವಾ ಉಣ್ಣೆ ಕಚ್ಚಿದ ಜಾಗದಲ್ಲಿ ತುರಿಕೆ, ಕಜ್ಜಿ ಕಂಡು ಬರುವುದು ಸ್ಕ್ರಬ್​ಟೈಫಸ್​ನ ಲಕ್ಷಣಗಳು. ಶೀಘ್ರದಲ್ಲಿ ರೋಗ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ರಕ್ತಸ್ರಾವ ಹೆಚ್ಚಾಗಿ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಸ್ಕ್ರಬ್ ಟೈಫಸ್​ನ ಲಕ್ಷಣಗಳನ್ನು ಗಮನಿಸಿ ರೋಗಿಯ ರಕ್ತ ಪರೀಕ್ಷೆ ವರದಿಯಿಂದ ‘ಒರಿಯನ್ಸಿಯಾ ಸುಸುಗಮ್ಮಿ’ ಬ್ಯಾಕ್ಟೀರಿಯಾ ದೇಹಕ್ಕೆ ಸೇರಿರುವುದನ್ನು ದೃಢಪಡಿಸಿಕೊಂಡು ರೋಗ ನಿರೋಧಕ ಔಷಧ ನೀಡಿ ಗುಣಪಡಿಸಬಹುದಾಗಿದೆ. ಆದರೆ, ಸ್ಕ್ರಬ್ ಟೈಫಸ್ ಮತ್ತು ಡೆಂಘ ಎರಡೂ ಜ್ವರ ಒಂದೇ ರೀತಿಯ ಲಕ್ಷಣಗಳನ್ನು ಹೊಂದಿರುವುದರಿಂದ ಕೆಲವು ರೋಗಿಗಳಿಗೆ ಡೆಂಘಗೆ ನೀಡುವ ಚಿಕಿತ್ಸೆಯನ್ನೇ ನೀಡಲಾಗುತ್ತಿದೆ. ರಕ್ತದ ಮಾದರಿ ಪರೀಕ್ಷೆ ವರದಿ ಅಥವಾ ಹಲವು ದಿನಗಳ ನಂತರ ಚಿಗಟ ಅಥವಾ ಉಣ್ಣೆ ಕಚ್ಚಿದ ಕಡೆಗಳಲ್ಲಿ ಗಾಯಗಳು ಕಂಡು ಬಂದಾಗ ಸ್ಕ್ರಬ್​ಟೈಫಸ್ ಪತ್ತೆಯಾಗುತ್ತಿದೆ.

ಅಧಿಕಾರಿಗಳ ನಿರ್ಲಕ್ಷ್ಯ

ಉತ್ತರದಾಯಿತ್ವವಿಲ್ಲದ ಸಂಯೋಜಿತ ರೋಗ ಕಣ್ಗಾವಲು ಕಾರ್ಯಕ್ರಮದ ಕೆಲ ಅಧಿಕಾರಿಗಳು ರೋಗ ಪ್ರಕರಣಗಳ ವರದಿ ಸೇರಿ ಇತರ ಮಾಹಿತಿಗಳಲ್ಲಿ ಗೌಪ್ಯತೆ ಕಾಯ್ದುಕೊಂಡ ಕಾರಣಕ್ಕೆ ಸ್ಕ್ರಬ್ ಟೈಫಸ್​ನಂತಹ ವಿರಳ ರೋಗಗಳು ಹೆಚ್ಚಲು ಕಾರಣವಾಗಿವೆ ಎನ್ನಲಾಗಿದೆ.

ಸಾಮಾನ್ಯ ರೋಗವಾದ ಸ್ಕ್ರಬ್ ಟೈಫಸ್​ಗೆ ಸೂಕ್ತ ಚಿಕಿತ್ಸೆ ದೊರೆಯದಿದ್ದಲ್ಲಿ ಮಾರಣಾಂತಿಕವಾಗಳೂಬಹುದು. ಜಿಗಟ ಕಚ್ಚುವುದರಿಂದ ಈ ರೋಗ ಹರಡುವುದರಿಂದ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು.

| ಶಿವರಾಜ ಸಜ್ಜನ್ ಶೆಟ್ಟಿ, ಜಂಟಿ ನಿರ್ದೇಶಕ, ಆರೋಗ್ಯ ಇಲಾಖೆ

ಮುನ್ನೆಚ್ಚರಿಕೆ ಕ್ರಮ

ಸಾಕು ಪ್ರಾಣಿಗಳನ್ನು ಸ್ವಚ್ಛಗೊಳಿಸಿ ಚಿಗಟ ಬರದಂತೆ ನೋಡಿಕೊಳ್ಳುವುದು.
ಜಾನುವಾರು ಕೊಟ್ಟಿಗೆ, ವಾಸ ಸ್ಥಳಗಳನ್ನು ಶುಚಿಯಾಗಿಟ್ಟುಕೊಳ್ಳುವುದು.
ಪಶುಸಂಗೋಪನೆಯಲ್ಲಿ ತೊಡಗಿರುವವರು ಮೈತುಂಬ ಬಟ್ಟೆ ತೊಡುವುದು.
ಸೋಂಕಿತ ಪ್ರದೇಶದಲ್ಲಿ ವಾಸ ಅಥವಾ ಸಂಚಾರ ನಿರ್ಬಂಧಿಸಬೇಕು.
ಬೀದಿನಾಯಿಗಳಿಂದ ಅಂತರ ಕಾಯ್ದುಕೊಳ್ಳಬೇಕು.
ಕ್ರಿಮಿಕೀಟಗಳು ಕಚ್ಚಿದ ಜಾಗವನ್ನು ಗಮನಿಸಿ ಲಕ್ಷಣ ಕಂಡರೆ ವೈದ್ಯರಿಗೆ ತಿಳಿಸಬೇಕು.
ಕೃಪೆ:ವಿಜಯವಾಣಿ
scrub-typhus-disease-spreading-in-karnataka-state