ಆ.23ರಿಂದ ಶಾಲೆ ಆರಂಭ ಹಿನ್ನೆಲೆ: ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸಿ ಆತ್ಮಸ್ಥೈರ್ಯ ತುಂಬಲು ಸಚಿವ ಎಸ್.ಟಿ.ಸೋಮಶೇಖರ್ ಸೂಚನೆ.

Promotion

ಮೈಸೂರು, ಆಗಸ್ಟ್, 17,2021(www.justkannada.in):  ಕೇಂದ್ರ ಸಮಿತಿಯ ಶಿಫಾರಸಿನಂತೆ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಅಧಿಕಾರಿಗಳು ಮಕ್ಕಳ ಮೇಲೆ ಹೆಚ್ಚಿನ ನೀಗಾ ವಹಿಸಬೇಕು. ಪೋಷಕರಿಗೆ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಬೇಕು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ನಡೆದ ಮೈಸೂರು ಜಿಲ್ಲೆಯಲ್ಲಿನ ಕೋವಿಡ್ ಸಂಬಂಧ ಹಾಗೂ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆ ಹಾಗೂ ಕಾಲೇಜುಗಳ ಪ್ರಾರಂಭಕ್ಕೆ  ಮಾಡಿಕೊಂಡಿರುವ ಸಿದ್ದತೆಗಳಿಗೆ ಸಂಬಂಧಿಸಿದಂತೆ ಪೂರ್ವಸಿದ್ಧತೆಯನ್ನ ಪರಿಶೀಲನೆ ನಡೆಸಿ ಸಚಿವ ಎಸ್.ಟಿ ಸೋಮಶೇಖರ್ ಮಾತನಾಡಿದರು.

ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲೆಗಳಲ್ಲಿ ಒಟ್ಟು 9088 ಶಿಕ್ಷಕರು ಇದ್ದಾರೆ. ಪೈಕಿ 5875 ಶಿಕ್ಷಕರು ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ‌. 2417 ಶಿಕ್ಷಕರು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 796 ಶಿಕ್ಷಕರು ಮಾತ್ರ ಇನ್ನೂ ಲಸಿಕೆ ಪಡೆದಿಲ್ಲ ಎಂದು ಸಚಿವರಿಗೆ ಸಭೆಯಲ್ಲಿ ಮಾಹಿತಿ ನೀಡಿದರು‌. ಜಿಲ್ಲೆಯಲ್ಲಿ ಸಾಕಷ್ಟು ಡೋಸ್ ಲಸಿಕೆ ಲಭ್ಯವಿದೆ‌. ಶಾಲೆ ಆರಂಭಕ್ಕೂ ಈ ಎಲ್ಲಾ ಶಿಕ್ಷಕರಿಗೂ ಲಸಿಕೆ ನೀಡುವಂತೆ‌ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸೂಚನೆ ನೀಡಿದರು.

ಸರ್ಕಾರವು ಸದಾ ನಿಮ್ಮ ಜೊತೆಯಲ್ಲಿ ಇರಲಿದೆ. ಯಾವುದೇ ನಿರ್ಧಾರವನ್ನು ತೆಗೆದುಕೊಂಡರೆ ಶೀಘ್ರವಾಗಿ ಗಮನಕ್ಕೆ ತಂದು ಸರ್ಕಾರದ ಆದೇಶಗಳನ್ನು ಜಾರಿಗೊಳಿಸಬೇಕು. ಪ್ರತಿದಿನ 10 ಸಾವಿರ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದರ ಜೊತೆಗೆ ಗಡಿ ಭಾಗಗಳಿಂದ ಜಿಲ್ಲೆಗೆ ಬರಬೇಕಾದರೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿದ್ದು, ಅಧಿಕಾರಿಗಳು ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಯಾವುದೇ ರೀತಿಯ ಭಯ ಪಡುವ ಅಗತ್ಯ ಇಲ್ಲ ಎಂದರು.

ಸಭೆಯಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ, ಹರ್ಷವರ್ಧನ್, ಆರ್. ಧರ್ಮಸೇನ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ಮಹಾಪೌರರಾದ ಅನ್ವರ್ ಬೇಗ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿಯ ಸಿಇಒ ಎ.ಎಂ.ಯೋಗೀಶ್, ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ನಗರ ಪಾಲಿಕೆಯ ಆಯುಕ್ತ ಜಿ.ಲಕ್ಷ್ಮಿಕಾಂತ್ ರೆಡ್ಡಿ,  ಡಿಡಿಪಿಐ, ಡಿಡಿಪಿಯು, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು, ಮೈಸೂರು ವಿವಿ ಕುಲಸಚಿವರು, ಕೆ.ಎಸ್.ಒ.ಯು, ಕುಲಸಚಿವರು  ಮತ್ತಿತರ ಗಣ್ಯರು ಹಾಜರಿದ್ದರು.

key words: School -starting -Minister -ST Somashekhar -instructed –mysore- officer