ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ದ ಹಗರಣ: ಬಂಧಿಸಿ ಆಸ್ತಿ ಮುಟ್ಟುಗೋಲಿಗೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆಗ್ರಹ.

kannada t-shirts

ಮೈಸೂರು,ಅಕ್ಟೋಬರ್,20,2022(www.justkannada.in):  ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಹಗರಣವನ್ನ ಕಾಂಗ್ರೆಸ್ ಬಯಲಿಗೆಳೆದಿದ್ದು ಅವರನ್ನ ಬಂಧಿಸಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಸರ್ಕಾರಕ್ಕೆ  ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆಗ್ರಹಿಸಿದ್ದಾರೆ.

ಈ ಸಂಬಂಧ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹಾಗೂ ರಮೇಶ್ ಬಾಬು ಅವರ ಜಂಟಿ ಪತ್ರಿಕಾಗೋಷ್ಠಿ ಹೇಳಿದ್ದಿಷ್ಟು..

ರಮೇಶ್ ಜಾರಕಿಹೊಳಿ ಅವರ ಮಾಲೀಕತ್ವದ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಾರ್ಖಾನೆಯು 9 ಸಹಕಾರಿ ಬ್ಯಾಂಕ್ ಗಳಲ್ಲಿ 578 ಕೋಟಿ ಸಾಲ ಮಾಡಿದ್ದು, ಈ ಸಾಲ ಮರು ಪಾವತಿ ಮಾಡಿರುವುದಿಲ್ಲ. ಅಪೆಕ್ಸ್ ಬ್ಯಾಂಕ್ ಈ ಕಾರ್ಖಾನೆಯನ್ನು NPA (ದಿವಾಳಿ ಸಂಸ್ಥೆ) ಎಂದು ಘೋಷಣೆ ಮಾಡುತ್ತದೆ. ನಂತರ ಈ ದಿವಾಳಿ ಕಂಪನಿ 2021-22 ಹಾಗೂ 2022-23ನೇ ಸಾಲಿನಲ್ಲಿ ವಾರ್ಷಿಕವಾಗಿ ಕ್ರಮವಾಗಿ 60 ಕೋಟಿ ಹಾಗೂ 72 ಕೋಟಿ ಕೋಟಿ ಲಾಭ ಮಾಡಿದೆ.

ಈ ಸಂಸ್ಥೆಗೆ 9 ಜನ ನಿರ್ದೇಶಕರಿದ್ದರೂ ಇವರನ್ನು ಉದ್ದೇಶಿತ ಸುಸ್ಥಿದಾರರು ಎಂದು ಅಪೆಕ್ಸ್ ಬ್ಯಾಂಕ್ ಘೋಷಿಸಿದೆ. ಈ ರೀತಿ ಉದ್ದೇಶಿತ ಸುಸ್ಥಿದಾರ ಎಂದು ಘೋಷಿಸಿದ ನಂತರ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಆದರೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರ ಕೃಪಾಕಟಾಕ್ಷದಿಂದ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡಿಲ್ಲ. ಅಮಿತ್ ಶಾ ಅವರು ನನಗೆ ಆತ್ಮೀಯರು ಅವರ ಕೃಪಾಕಟಾಕ್ಷ ನನ್ನ ಮೇಲಿದೆ ಎಂದು ರಮೇಶ್ ಜಾರಕಿಹೊಳಿ ಅವರೇ ತಿಳಿಸಿದ್ದಾರೆ. ಇನ್ನು ರಾಜ್ಯ ಸಹಕಾರ ಸಚಿವ ಸೋಮಶೇಖರ್ ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಹಾಗೂ ಬಸವರಾಜ ಬೊಮ್ಮಾಯಿ ಅವರು 860 ಕೋಟಿಯ ಬಹುದೊಡ್ಡ ಹಗರಣದಲ್ಲಿ ಭಾಗಿಯಾಗಿದ್ದಾರೆ.

578 ಕೋಟಿ ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದರೆ, ಆದಾ ತೆರಿಗೆ ಇಲಾಖೆಗೆ 150 ಕೋಟಿ ಪಾವತಿ ಬಾಕಿ, ರೈತರ ಬಳಿ 50 ಕೋಟಿ ಬಾಕಿ ಹಾಗೂ ಗುತ್ತಿಗೆದಾರರ ಬಳಿ 50 ಕೋಟಿ, ಇತರೆ ಸಾಲ 60 ಕೋಟಿ ಬಾಕಿ ಉಳಿಸಿಕೊಂಡು ಮೋಸ ಮಾಡಿದ್ದಾರೆ. ಇಷ್ಟೆಲ್ಲಾ ಮೋಸ ಮಾಡಿದ್ದರೂ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾದ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಅವರು ಸುಮ್ಮನೆ ಇರುತ್ತಾರೆ. ಇವರು ಅಧ್ಯಕ್ಷರಾಗುವ ಮುನ್ನ 2019ರಲ್ಲಿ ಅಪೆಕ್ಸ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ಈ ಸಂಸ್ಥೆಗೆ ನೊಟೀಸ್ ನೀಡಿ ಬಾಕಿ ಹಣ ವಾಪಸ್ ಮಾಡಬೇಕು ಇಲ್ಲದಿದ್ದರೆ ಕಾರ್ಖಾನೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕಾಗುತ್ತದೆ ಎಂದು ತಿಳಿಸುತ್ತಾರೆ.

 

ನಂತರ ರಮೇಶ್ ಜಾರಕಿಹೊಳಿ ಅವರು ಈ ನೊಟೀಸ್ ವಿರುದ್ಧ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿರುತ್ತಾರೆ. ಆಗ ಕೋರ್ಟ್ 28-11-2019ರಂದು ಒಂದು ನಿರ್ದೇಶನ ನೀಡಿ ಈ 578 ಕೋಟಿ ಸಾಲದಲ್ಲಿ ಶೇ.50ರಷ್ಟು ಸಾಲವನ್ನು ಆರು ವಾರಗಳಲ್ಲಿ ಮರಪಪಾವತಿ ಮಾಡಿ ನಂತರ ನ್ಯಾಯಾಲಯಕ್ಕೆ ಆಗಮಿಸುವಂತೆ ತಿಳಿಸುತ್ತದೆ. ನ್ಯಾಯಾಲಯ ಕೊಟ್ಟ ಆರು ವಾರಗಳು ಅಷ್ಟೇ ಅಲ್ಲ 3 ವರ್ಷ ಕಳೆದರೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆ ಮೂಲಕ ಕೋರ್ಟ್ ಆದೇಶ ಉಲ್ಲಂಘನೆ ಮಾಡಲಾಗಿದೆ.

ನಂತರ 2-12-2021ರಂದು ಬೆಳ್ಳಿ ಪ್ರಕಾಶ್ ಅವರು ಶೋಕಾಸ್ ನೊಟೀಸ್ ನೀಡಿ ನ್ಯಾಯಾಲಯದ ಆದೇಶದಂತೆ ಅವರು ಸಾಲದ ಪ್ರಮಾಣದಲ್ಲಿ ಅರ್ಧದಷ್ಟು ಸಾಲ ಮರುಪಾವತಿ ಮಾಡಬೇಕಿತ್ತು, ಅದನ್ನು ವಸೂಲಿ ಮಾಡಲು ಸರ್ಫೇಸಿ ಆಕ್ಟ್ ಪ್ರಕಾರ ಆಸ್ತಿ ಮುಟ್ಟುಗೋಲು ಹಾಕುವಂತೆ ಆದೇಶ ನೀಡಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿಗೆ ಮನವಿ ಮಾಡುತ್ತಾರೆ. ಈ ಅಧಿಕಾರಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ.

ರಮೇಶ್ ಜಾರಕಿಹೊಳಿ ಅವರು ಸಾಲ ಪಡೆದಿರುವ 9  ಬ್ಯಾಂಕ್ ಗಳ ಪೈಕಿ ಹರಿಹಂತ್ ಸಹಕಾರಿ ಬ್ಯಾಂಕ್ ಸಹ ಒಂದು. ಇದನ್ನು ನಡೆಸುತ್ತಿರುವವರು ರಮೇಶ್ ಜಾರಕಿಹೊಳಿ ಅವರ ಆತ್ಮೀಯರು ಹಾಗೂ ಬೇನಾಮಿ ಆಗಿರುವ ಅಭಿನಂದನ್ ಪಾಟೀಲ್. ಇವರು ಈ ಸಂಸ್ಥೆಗೆ 42 ಕೋಟಿ ಸಾಲ ನೀಡಿದ್ದು, ಸಾಲ ಮರುಪಾವತಿ ಆಗಿಲ್ಲ ಎಂದು NCLT ನ್ಯಾಯಾಧಿಕರಣಕ್ಕೆ ಅರ್ಜಿ ಹಾಕಿಸುತ್ತಾರೆ. ಇತರೆ 8 ಬ್ಯಾಂಕುಗಳಿಗೆ 530 ಕೋಟಿ ಸಾಲ ಮರುಪಾವತಿ ಮಾಡಬೇಕಿದ್ದರೂ ಈ ಬ್ಯಾಂಕುಗಳು ಇದನ್ನು NPA ಎಂದು ಘೋಷಿಸುತ್ತಾರೆ. ಈ ಬ್ಯಾಂಕುಗಳು NCLTಗೆ ಅರ್ಜಿ ಹಾಕುವುದಿಲ್ಲ. ಕೇವಲ ಅಭಿನಂದನ್ ಪಾಟೀಲ್ ಅವರಿಂದ ಮಾತ್ರ ಅರ್ಜಿ ಹಾಕಿಸುತ್ತಾರೆ. ನಂತರ ನ್ಯಾಯಾಧಿಕರಣ IRP ಮೂಲಕ ಪ್ರಕ್ರಿಯೆ ಆರಂಭಿಸುತ್ತದೆ. ಇದರ ಭಾಗವಾಗಿ 23-4-2022ರ ಒಳಗಾಗಿ ಯಾರಿಗಾದರೂ ಆಕ್ಷೇಪಣೆ ಇದ್ದರೆ ಸಲ್ಲಿಸಬೇಕು ಎಂದು ಪ್ರಕಟಣೆ ನೀಡುತ್ತದೆ. ಈ ಕಾರ್ಖಾನೆ ಇರುವುದು ಗೋಕಾಕ್ ತಾಲೂಕಿನಲ್ಲಾದರೂ ಈ ಆಕ್ಷೇಪಣೆ ಸಲ್ಲಿಸಲು ಬೆಂಗಳೂರಿನ ಜಯನಗರದಲ್ಲಿ ನಕಲಿ ವಿಳಾಸ ಕೊಟ್ಟಿರುತ್ತಾರೆ. ಈ ವಿಳಾಸಕ್ಕೆ ಎಷ್ಟು ಆಕ್ಷೇಪಣೆಗಳು ಬಂದಿದ್ದವೋ ತಿಳಿದಿಲ್ಲ. ಈ ಎಲ್ಲ ಪ್ರಕ್ರಿಯೆಗೆ ಮುಖ್ಯಸ್ಥರನ್ನಾಗಿ ಕೊಂಡಿ ಶೆಟ್ಟಿ ಕುಮಾರ್ ದುಶ್ಯಂತ್ ಅವರನ್ನು ನೇಮಿಸಲಾಗಿದ್ದು, ಇವರಿವರೆ ತಮಗೆ ಬೇಕಾದವರನ್ನು ನೇಮಕ ಮಾಡಿಕೊಳ್ಳುತ್ತಾರೆ.

ನಂತರ ಈ ಕಾರ್ಖಾನೆಯ ಒಟ್ಟಾರೆ ಆಸ್ತಿಯ ಮೌಲ್ಯ ಇರುವುದು 1000 ಕೋಟಿಯಷ್ಟು. ಆದರೆ ಇವರು ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಾರ್ಖಾನೆ ಆಸ್ತಿ ಮೌಲ್ಯವನ್ನು ಕೇವಲ 59 ಕೋಟಿ ಎಂದು ಘೋಷಿಸುತ್ತಾರೆ. ನಂತರ NCLT ಮೂಲಕ ಈ ಹರಿಹಂತ್ ಬ್ಯಾಂಕಿಗೆ ಪಾವತಿ ಆಗಬೇಕಿರುವ 42 ಕೋಟಿ ಹೊರತು ಪಡಿಸಿ ಉಳಿದ ಮೊತ್ತವನ್ನು ಬ್ಯಾಂಕಿನವರೆ ಕೊಟ್ಟರೆ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಾರ್ಖಾನೆ ಪಾವತಿ ಹರಿಹಂತ್ ಸಹಕಾರಿ ಬ್ಯಾಂಕಿಗೆ ವರ್ಗಾವಣೆ ಮಾಡಿಕೊಳ್ಳಲು ಪ್ರಯತ್ನ ಮಾಡಲಾಗಿದೆ. ಈ ಕಾರ್ಖಾನೆ ಸಾವಿರಾರು ಕೋಟಿ ರೂ. ಮೌಲ್ಯದ್ದಾಗಿದ್ದು, ಜತೆಗೆ ಈಗಳೂ ಕಬ್ಬನ್ನು ಅರೆಯುತ್ತಿದ್ದು ವಾರ್ಷಿಕ 60 ಕೋಟಿಯಷ್ಟು ಲಾಭ ಮಾಡುತ್ತಿದೆ. ಇಂತಹ ಕಾರ್ಖಾನೆ ಆಸ್ತಿಯನ್ನು ಬೇನಾಮಿ ನಡೆಸುತ್ತಿರುವ ಸಹಕಾರಿ ಬ್ಯಾಂಕಿಗೆ ವರ್ಗಾವಣೆ ಮಾಡಿ ಉಳಿದ 8 ಬ್ಯಾಂಕುಗಳಿಗೆ ನೀಡಬೇಕಿರುವ ಸುಮಾರು 530 ಕೋಟಿ ಸಾಲ, ರೈತರ ಬಾಕಿ ಹಣ, ಗುತ್ತಿಗೆದಾರರ ಬಾಕಿ ಹಣ ಹಾಗೂ ಆದಾಯ ತೆರಿಗೆ ಬಾಕಿ ಹಣಕ್ಕೆ ಉಂಡೆನಾಮ ಹಾಕುವ ಷಡ್ಯಂತ್ರ ಇದಾಗಿದೆ.

ಕಾಂಗ್ರೆಸ್ ಪಕ್ಷದವತಿಯಿಂದ ಪತ್ರಿಕಾಗೋಷ್ಠಿ ಮಾಡಿ ವಿಚಾರ ಬಹಿರಂಗ ಮಾಡಿದ್ದೆ. ಜತೆಗೆ ಇಡಿಗೆ ದೂರು ನೀಡಿದ್ದು, ಅಪೆಕ್ಸ್ ಬ್ಯಾಂಕ್ ಗೂ ಪತ್ರ ಬರೆದಿದ್ದೆ.

ಈಗ ನಾವು ಈ ವಿಚಾರದಲ್ಲಿ ಆಕ್ಷೇಪ ಎತ್ತಿ ಷಡ್ಯಂತ್ರವನ್ನು ಬಯಲು ಮಾಡಿದ ನಂತರ NCLT ಅವರು IRP ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸಿದ್ದಾರೆ. ಒಂದು ವಾರದ ಹಿಂದೆ ಈ ಆದೇಶ ಹೊರಬಂದಿದೆ. ಅಲ್ಲದೇ ಇತರೆ 8 ಬ್ಯಾಂಕುಗಳು NCLTಗೆ ಆಕ್ಷೇಪಣಾ ಪತ್ರ ಬರೆದಿದ್ದು, ನಮಗೂ ಸಾಲ ಮರುಪಾವತಿ ಆಗಬೇಕು ಎಂದು ಮನವಿ ಮಾಡಿದ್ದಾರೆ. ಹೀಗಾಗಿ ಎಲ್ಲ ಪ್ರಕ್ರಿಯೆಗೆ ತಡೆ ಹಿಡಿಯಲಾಗಿದೆ. ಆ ಮೂಲಕ ನಮ್ಮ ಹೋರಾಟಕ್ಕೆ ಮೊದಲ ಹಂತದಲ್ಲಿ ಜಯ ಸಿಕ್ಕಿದೆ.

ಬಿಜೆಪಿಯವರಿಗೆ ಮಾನ ಮಾರ್ಯಾದೆ ಇದ್ದರೆ ಸುಸ್ಥಿದಾರ ಎಂದು ರಮೇಶ್ ಜಾರಕಿಹೊಳಿ ಹಾಗೂ ಅವರ ಜತೆಗಿನ ಇತರೆ ನಿರ್ದೇಶಕರು ಘೋಷಣೆ ಆಗಿದ್ದರೂ ಅವರು ಬ್ಯಾಂಕುಗಳಲ್ಲಿ ಕೋಟ್ಯಂತರ ರೂಪಾಯಿ ಹಣ ಡ್ರಾ ಮಾಡುತ್ತಿದ್ದಾರೆ. ಇದು ಹೇಗೆ ಸಾಧ್ಯ? ಹೀಗಾಗಿ ಇವರನ್ನು ಉದ್ದೇಶಿತ ಸುಸ್ಥಿದಾರ ಎಂದು ಪರಿಗಣಿಸಬೇಕು. ಅವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಇವರನ್ನು ಬಂಧಿಸಬೇಕು. ಮೆಹುಲ್ ಚೋಕ್ಸಿ, ನೀರವ್ ಮೋದಿ ಹಾಗೂ ಮಲ್ಯಾ ಅವರು ಕೂಡ ಇದೇ ರೀತಿ ಉದ್ದೇಶಿತ ಸುಸ್ಥಿದಾರರಾಗಿ ದೇಶ ಬಿಟ್ಟುಹೋಗಿದ್ದು, ಅದಕ್ಕೆ ಅವಕಾಶ ಮಾಡಿಕೊಟ್ಟಿರುವವರು ಇದೇ ಬಿಜೆಪಿಯವರು. ಇಷ್ಟಾದರೂ ಬಿಜೆಪಿಯವರು ಈ ವ್ಯಕ್ತಿಯನ್ನು ಮಂತ್ರಿಮಂಡಲಕ್ಕೆ ತೆಗೆದುಕೊಂಡು ಮಂತ್ರಿ ಮಾಡಲು ಹೊರಟಿದೆ. ಇಂತಹವರಿಗೆ ಯಾವುದೇ ಕಾರಣಕ್ಕೂ ಸಂವಿಧಾನಿಕ ಹುದ್ದೆ ನೀಡಬಾರದು.

ಸಾಮಾನ್ಯ ವ್ಯಕ್ತಿ ಬೇಕ್ ಖರೀದಿಗೆ ಮಾಡಿರುವ ಸಾಲದ ಕಂತು ಕಟ್ಟದಿದ್ದರೆ ಬೈಕ್ ಸಮೇತ ಹೊತ್ತುಕೊಂಡು ಹೋಗುತ್ತೀರಿ. ಆದರೆ 850 ಕೋಟಿ ಮೋಸ ಮಾಡಲು ಪ್ರಯತ್ನಿಸಿರುವ ವ್ಯಕ್ತಿ ಕಣ್ಣ ಮುಂದೆ ಇದ್ದರೂ ಕಣ್ಣು ಮುಚ್ಚಿ ಕುಳಿತಿದೆ. ಈ ಹಗರಣದ ಹಿಂದೆ ಬಿಜೆಪಿ ನಾಯಕರು ಇದ್ದಾರೆ. ಇದೇ ಕಾರಣಕ್ಕೆ ರಮೇಶ್ ಜಾರಕಿಹೊಳಿ ಸಮ್ಮಿಶ್ರ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ತಂದಿದ್ದು, ಅದಕ್ಕೆ ಬಳುವಳಿಯಾಗಿ ಬಿಜೆಪಿ ಈ ರೀತಿ ಸಹಕಾರ ಮಾಡುತ್ತಿದೆ.

ಬೊಮ್ಮಾಯಿ ಅವರು ಸಂಕಲ್ಪ ಸಮಾವೇಶ ಮಾಡಿ ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಬಾಯಿಗೆ ಬಂದಂತೆ ಟೀಕೆ ಮಾಡುತ್ತಾರೆ. ಇವರು ನಮಗೆ ಧಮ್ಮು ತಾಕತ್ತಿನ ಸವಾಲು ಹಾಕುತ್ತಾರೆ. ಬೊಮ್ಮಾಯಿ ಅವರೇ ನಿಮಗೆ ಧಮ್ಮು ತಾಕತ್ತು ಇದ್ದರೆ ಇವರ ಆಸ್ತಿ ಮುಟ್ಟುಗೋಲು ಹಾಕಿ, ಬಂಧಿಸಿ. ಇದನ್ನು ಯಾಕೆ ಮಾಡುತ್ತಿಲ್ಲ. ನಿಮ್ಮ ಆಡಳಿತದಲ್ಲಿ ಶ್ರೀಮಂತರಿಗೊಂದು ಬಡವರಿಗೊಂದು ನ್ಯಾಯವೇ? ಬಿಜೆಪಿಯವರಿಗೊಂದು ಕಾಂಗ್ರೆಸ್ ನವರಿಗೊಂದು ನ್ಯಾಯವೇ? ಈ ಬಗ್ಗೆ ಬೊಮ್ಮಾಯಿ ಅವರು ಮಾತನಾಡಬೇಕು. ನಿಮಗೆ ಎಷ್ಟು ಕಮಿಷನ್ ಬಂದಿದೆ?

ಸರ್ಕಾರ ಈ ವಿಚಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಪೇಸಿಎಂ ಅಭಿಯಾನ ಮಾದರಿಯಲ್ಲಿ ಬೆಳಗಾವಿ ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈ ಹಗರಣದ ವಿರುದ್ದ ಅಭಿಯಾನ ಮಾಡಲಾಗುವುದು.

 

ಮಾಜಿ ಎಂಎಲ್ಸಿ ರಮೇಶ್ ಬಾಬು ಮಾತನಾಡಿ ಹೇಳಿದ್ದಿಷ್ಟು…

ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಂಪನಿಯ 850 ಕೋಟಿಯ ಹಗರಣವನ್ನು ದಾಖಲೆ ಸಮೇತ ಬಹಿರಂಗಪಡಿಸಲಾಗಿದ್ದು, ಬೇನಾಮಿ ವರ್ಗಾವಣೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕಾನೂನು ತಂದಿದ್ದು. ಹರಿಹಂತ್ ಬ್ಯಾಂಕ್ ಮೂಲಕ ಸಾರ್ವಜನಿಕ ಹಣ ಲಪಟಾಯಿಸುವ ಪ್ರಯತ್ನದ ವಿರುದ್ಧ ತನಿಖೆ ಆಗಿ ಇದರಲ್ಲಿ ಭಾಗವಾಗಿರುವವರ ವಿರುದ್ಧ ಅಗತ್ಯ ಕ್ರಮ ವಹಿಸಬೇಕು.

ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ 250 ಎಕರೆ ಜಾಗವನ್ನು ಇಶಾ ಫೌಂಡೇಶನ್ ಗೆ ನೀಡುವುದರ ಜತೆಗೆ ಸುಮಾರು 100 ಕೋಟಿ ಹಣವನ್ನು ಮಣ್ಣಿನ ಸಂರಕ್ಷಣೆ ಅಭಿಯಾನ ಹೆಸರಲ್ಲಿ ಜಗ್ಗಿ ವಾಸುದೇವ್ ಅವರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಸರ್ಕಾರ ನೀಡಿದೆ. ಇದು ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾದರಿಯ ಮತ್ತೊಂದು ರೀತಿಯ ಹಗರಣವಾಗಿದೆ.

ಈ ದೇಶದಲ್ಲಿ ಸ್ವಯಂ ಘೋಷಿತ ದೇವಮಾನವರು ಸರ್ಕಾರ ಅಲ್ಲಾಡಿಸುವ ಕೆಲಸ ಮಾಡುತ್ತಿದ್ದು, ನಮ್ಮ ರಾಜ್ಯದಲ್ಲಿ ಬಿಡದಿಯ ಬಳಿಯ ನಿತ್ಯಾನಂದ ಅವರ ಹಗರಣವನ್ನು ದೇಶವೇ ನೋಡಿದೆ. ಜಗ್ಗಿ ವಾಸುದೇವ್ ಅವರು ಸ್ವಯಂಘೋಷಿತ ದೇವಮಾನವರಾಗಿದ್ದು, ಇವರ ವಿರುದ್ಧ ಸುಪ್ರೀಂ ಕೋರ್ಟ್, ಹೈಕೋರ್ಟ್ ಗಳಲ್ಲಿ ಭೂ ಹಗರಣ, ಕಾವೇರಿ ಕಾಲಿಂಗ್ ಹೆಸರಿನಲ್ಲಿ ನಡೆದ ಹಗರಣಗಳು ವಿಚಾರಣೆ ನಡೆಯುತ್ತಿವೆ. ಇನ್ನು ಇವರು ಹಲವಾರು ಕೋಟಿ ತೆರಿಗೆ ವಂಚನೆ ಆರೋಪವಿದೆ.

ರಾಜ್ಯದಲ್ಲಿ ಕೃಷಿ ಇಲಾಖೆ, ಕೃಷಿ ತಜ್ಞರಿದ್ದು ಇವರೆಲ್ಲರನ್ನು ಬಿಟ್ಟು ಮಣ್ಣು ಸಂರಕ್ಷಣೆ ಹೆಸರಲ್ಲಿ ರಾಜ್ಯ ಸರ್ಕಾರ ಸ್ವಾಮೀಜಿಗೆ ಶರಣಾಗುತ್ತದೆ ಎಂದರೆ ಇದಕ್ಕಿಂತ ದೊಡ್ಡ ನಾಚಿಕೆಗೇಡಿನ ವಿಚಾರ ಮತ್ತೊಂದಿಲ್ಲ. ಬೊಮ್ಮಾಯಿ ಅವರು ತಮ್ಮ ತಪ್ಪು ತಿದ್ದುಕೊಳ್ಳಬೇಕು.

ಆಶ್ಚರ್ಯಕರ ವಿಚಾರ ಎಂದರೆ ಪುಣ್ಯಕೋಟಿ ಯೋಜನೆಗೆ ಸರ್ಕಾರಿ ನೌಕರರಿಗೆ ಪತ್ರ ಬರೆದು ದೇಣಿಗೆ ನೀಡುವಂತೆ ಕೇಳುತ್ತಾರೆ. ಆ ಪತ್ರಕ್ಕೆ ಪೂರಕವಾಗಿ ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನ 100 ಕೋಟಿ ನೀಡುವುದಾಗಿ ತಿಳಿಸುತ್ತಾರೆ. ನೀವು ಪುಣ್ಯಕೋಟಿ ಯೋಜನೆ ಹೆಸರಲ್ಲಿ 100 ಕೋಟಿಯನ್ನು ಸರ್ಕಾರಿ ನೌಕರರಿಂದ ಸಂಗ್ರಹಿಸುತ್ತೀರಿ, ಮತ್ತೊಂದೆಡೆ ಸ್ವಯಂ ಘೋಷಿತ ಸ್ವಾಮೀಜಿಗೆ 100 ಕೋಟಿ ಹಣ ನೀಡುತ್ತೀರಿ. ಇಂದು ಕರ್ನಾಟಕ ಹೈಕೋರ್ಟ್ ಕೂಡ ಗೋಶಾಲೆ ವಿಚಾರವಾಗಿ ಸರ್ಕಾರವನ್ನು ಪ್ರಶ್ನಿಸಿದೆ. ಸರ್ಕಾರ ಗೋಶಾಲೆ ಹೆಸರಲ್ಲಿ ವಸೂಲಿಗೆ ಮುಂದಾಗಿದೆ.

ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡಿಲ್ಲ. ಕೋವಿಡ್ ಸಮಯದಲ್ಲಿ ಇವರಿಗೆ ನೀಡಬೇಕಾಗಿದ್ದ ತುಟ್ಟಿ ಭತ್ಯೆ 2-3 ಸಾವಿರ ಕೋಟಿ ನೀಡಿಲ್ಲ, ಶಾಲೆ ಕಾಲೇಜು ವಿಚಾರ ಬಗೆಹರಿಸಿಲ್ಲ. ಮಕ್ಕಳಿಗೆ ಸಮವಸ್ತ್ರ, ಶೂ ಸಾಕ್ಸ್ ನೀಡುತ್ತಿಲ್ಲ. ಅವರಿಗೆ ಅನುಕೂಲ ಮಾಡಲು ನಿಮ್ಮ ಬಳಿ ಹಣವಿಲ್ಲ. ಆದರೆ ಸ್ವಯಂಘೋಷಿತ ದೇವಮಾನವನಿಗೆ ಹಣ ನೀಡುತ್ತೀರಾ ಎಂದಾದರೆ ಈ ರಾಜ್ಯವನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದೀರಿ. ನಿಮ್ಮ 40% ಕಮಿಷನ್ ಮುಚ್ಚಿಟ್ಟುಕೊಳ್ಳಲು ಇಂತಹ ದೇವಮಾನವರು ಬೇಕಾ? ಇವರು ಭ್ರಷ್ಟಾಚಾರ ಹಣ ರಕ್ಷಿಸಲು ಜಾಗ ಹುಡುಕಿಕೊಳ್ಳುತ್ತಿದ್ದಾರೆ. ಬೊಮ್ಮಾಯಿ ಅವರೇ ನಿಮಗೆ ಸಾರ್ವಜನಿಕರ ಹಣವನ್ನು ಸಂರಕ್ಷಿಸುವ ಜವಾಬ್ದಾರಿ ಇದೆ. ಜನರ ಹಣವನ್ನು ಸಿಕ್ಕಸಿಕ್ಕವರಿಗೆ ನೀಡಲು ನಿಮ್ಮನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿಲ್ಲ. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಹಗರಣವಾಗಲಿ ಅಥವಾ ಜಗ್ಗಿ ವಾಸುದೇವ ಅವರಿಗೆ ಹಣ ನೀಡುವ ಧಂದೆಯನ್ನು ತಡೆಯಬೇಕು. ವಿವಿ ಹಾಗೂ ಅತಿಥಿ ಉಪನ್ಯಾಸಕರಿಗೆ ವೇತನ ನೀಡಲು ಸರ್ಕಾರದ ಹಣವಿಲ್ಲ. ಆದರೆ ಜಗ್ಗಿವಾಸುದೇವ ಅವರಿಗೆ 100 ಕೋಟಿ ಹಣ ನೀಡುತ್ತಿರುವುದೇಕೆ?

ಕಾವೇರಿ ಕಾಲಿಂಗ್ ಅಭಿಯಾನ ವಿಚಾರವಾಗಿ ಜಗ್ಗಿ ವಾಸುದೇವ್ ಅವರ ವಿರುದ್ಧ ಹೈಕೋರ್ಟ್ ವಿಚಾರಣೆ ನಡೆಯುತ್ತಿದ್ದು, ಇತ್ಯರ್ಥವಾಗುವ ಮುನ್ನ ಮುಖ್ಯಮಂತ್ರಿಗಳು 250 ಎಕರೆ ಜಮೀನು 100 ಕೋಟಿ ಹಣ ನೀಡಿದ್ದಾರೆ. ಈ ಹಿಂದೆಯೂ ಜಗ್ಗಿ ವಾಸುದೇವ್ ಅವರು ತಮ್ಮ ಫೌಂಡೇಶನ್ ಗೆ ದೇಣಿಗೆ ನೀಡಬೇಕು ಎಂದು ಪತ್ರ ಬರೆದಿದ್ದರೂ ಈ ಹಿಂದಿನ ಸರ್ಕಾರಗಳು ಅದನ್ನು ಪರಿಗಣಿಸಿರಲಿಲ್ಲ. ಹೀಗಾಗಿ ಇಶಾ ಫೌಂಡೇಶನ್ ಜೆತೆ ಸರ್ಕಾರ ಮಾಡಿಕೊಂಡಿರುವ ಒಪ್ಪಂದ ರದ್ದು ಮಾಡಿ ಕೊಟ್ಟಿರುವ ಹಣ ಹಾಗೂ ಸರ್ಕಾರಿ ಜಮೀನು ಹಿಂಪಡೆಯಬೇಕು. ರಾಜ್ಯದ ತೆರಿಗೆದಾರರ ಹಣವನ್ನು ಸ್ವಯಂಘೋಷಿತ ದೇವಮಾನವರಿಗೆ ನೀಡುವುದು ಸರಿಯಲ್ಲ. ಒಂದು ವೇಳೆ ನಿಮ್ಮ ಪೇಸಿಎಂ ಯೋಜನೆ ಮೂಲಕ ಈ ಹಣ ನೀಡಿದ್ದರೆ ಅದನ್ನು ಬೊಮ್ಮಾಯಿ ಅವರು ಒಪ್ಪಿಕೊಳ್ಳಬೇಕು. ರಾಜ್ಯದ ಖಜಾನೆ ಧರ್ಮಛತ್ರವಲ್ಲ. ಹೀಗಾಗಿ ಈ ಹಣ ಹಾಗೂ ಜಾಗ ಹಿಂಪಡೆಯಬೇಕು.

Key words: Scam- against- former minister -Ramesh Jarakiholi- KPCC spokesperson -M. Lakshman

website developers in mysore