ಉದ್ಯಾನ ನಗರಿ ಬ್ರ್ಯಾಂಡ್ ಉಳಿಸಿ : 10 ಸಾವಿರ ಸಸಿ ನೆಡುವ ಚಾಲನಾ ಕಾರ್ಯಕ್ರಮದಲ್ಲಿ ಸಚಿವ ಡಾ. ನಾರಾಯಣಗೌಡ ಕರೆ.

Promotion

ಬೆಂಗಳೂರು, ಆಗಸ್ಟ್,11,2021(www.justkannada.in): ಬೆಂಗಳೂರಿಗೆ ಇರುವ ಉದ್ಯಾನ ನಗರಿ ಎಂಬ ಬ್ರ್ಯಾಂಡ್ ಉಳಿಸಿಕೊಳ್ಳಬೇಕು. ಅದಕ್ಕಾಗಿ ಬೆಂಗಳೂರಿನ ಪಾರ್ಕ್, ಕ್ರೀಡಾ ಸಮುಚ್ಚಯ, ಕೆರೆ ಕಟ್ಟೆ ಪ್ರದೇಶಗಳಲ್ಲಿ ಗಿಡ ನೆಟ್ಟು ಪೋಷಿಸುವ ಕೆಲಸ ಆಗಬೇಕು.  ಅಭಿವೃದ್ಧಿಗಾಗಿ ಒಂದು ಮರ ತೆರವುಗೊಳಿಸಿದರೆ ಏಳು ಸಸಿಗಳನ್ನು ನೆಡಬೇಕು ಎಂದು ಯುವ ಸಬಲಿಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಹೇಳಿದರು.

ಬೆಂಗಳೂರಿನ ವಿದ್ಯಾನಗರದಲ್ಲಿರುವ ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಯುವ ಕೇಂದ್ರದಲ್ಲಿ ಶಾಸಕರಾದ ಕೃಷ್ಣಬೈರೇಗೌಡ, ವಿಧಾನ ಪರಿಷತ್ ಸದಸ್ಯ ಗೋವಿಂದರಾಜ್ ಅವರೊಂದಿಗೆ ಸಸಿ ನೆಡುವ ಕಾರ್ಯಕ್ರಮಕ್ಕೆ ಸಚಿವ ನಾರಾಯಣಗೌಡ ಚಾಲನೆ ನೀಡಿದರು.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್ ಎಸ್ ಎಸ್ ಹಾಗೂ ಬಿ ಎಂ ಆರ್ ಸಿ ಎಲ್ ಸಹಯೋಗದಲ್ಲಿ 10 ಸಾವಿರ ಸಸಿಗಳನ್ನು ನೆಡುವ ಯೋಜನೆ ರೂಪಿಸಲಾಗಿದೆ. ಇಂದು ಈ ಕಾರ್ಯಕ್ರಮಕ್ಕೆ ಸಚಿವ ನಾರಾಯಣಗೌಡ ಚಾಲನೆ ನೀಡಿದರು.

ಬೆಂಗಳೂರಿನಾದ್ಯಂತ ಕ್ರೀಡಾ ಸಮುಚ್ಚಯ, ಸರ್ಕಾರಿ ಆಸ್ಪತ್ರೆ ಆವರಣ ಸೇರಿದಂತೆ ಸರ್ಕಾರಿ ಜಾಗಗಳಲ್ಲಿ ಸಸಿಗಳನ್ನು ನೆಟ್ಟು ಮೂರುವರ್ಷಗಳ ಕಾಲ ಪೋಷಿಸುವ ಜವಾಬ್ದಾರಿಯನ್ನು ಬಿ.ಎಂ.ಆರ್.ಸಿ.ಎಲ್. ಹೊತ್ತುಕೊಂಡಿದೆ. ರಸ್ತೆ, ಮೆಟ್ರೋ ಕಾಮಗಾರಿ ಸೇರಿದಂತೆ ಅಭಿವೃದ್ಧಿ ಕಾರಣಕ್ಕಾಗಿ ಮರಗಳನ್ನು ತೆರವು ಮಾಡಲಾಗಿದೆ. ಹೀಗಾಗಿ ಉದ್ಯಾನ ನಗರಿಯಲ್ಲಿ ಮರಗಳ  ಪ್ರಮಾಣ ಹೆಚ್ಚಾಗಬೇಕು ಎಂಬ ಉದ್ದೇಶದೊಂದಿಗೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಸರಕಾರಿ ಜಾಗವಿದೆ‌. ಕೆ.ಸಿ. ವ್ಯಾಲಿ ಯಿಂದ ನೀರು ತರಲಾಗುತ್ತಿದೆ. ಕೆರೆ ಏರಿ ಸೇರಿದಂತೆ ಅವಕಾಶ ಇರುವ ಕಡೆಗಳಲ್ಲಿ ಎನ್ ಎಸ್ ಎಸ್ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಿ. ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದು ಶಾಸಕ ಕೃಷ್ಣಬೈರೇಗೌಡ ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಗೋವಿಂದರಾಜ್, ಬಿ.ಎಂ.ಆರ್.ಸಿ.ಎಲ್ ಅಧಿಕಾರಿಗಳು, ಎನ್ ಎಸ್ ಎಸ್ ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳು, ಎನ್ ಎಸ್ ಎಸ್ ಸ್ವಯಂ ಸೇವಕರು ಮತ್ತಿತರರು ಪಾಲ್ಗೊಂಡಿದ್ದರು.

Key words: Save – Garden City –brand-Minister – Narayana Gowda.