ಜಾತ್ಯತೀತತೆ, ಅಹಿಂಸೆ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಭಾರತೀಯನಿಗೂ ಆರ್ ಎಸ್ ಎಸ್ ಕಂಡರೆ ಭಯ- ಸಿದ್ಧರಾಮಯ್ಯ ಟಾಂಗ್.

ಬೆಂಗಳೂರು,ಜೂನ್,2,2022(www.justkannada.in): ಸಿದ್ಧರಾಮಯ್ಯಗೆ ಆರ್ ಎಸ್ ಎಸ್ ಕಂಡರೇ ಭಯ ಎಂದು ಹೇಳಿಕೆ ನೀಡಿದ್ಧ ಬಿಜೆಪಿ ನಾಯಕರಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಟಾಂಗ್ ನೀಡಿದ್ದಾರೆ.

ಟ್ವಿಟ್ ಮಾಡಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ,  ಆರ್.ಎಸ್.ಎಸ್ ಕಂಡರೆ ನನಗೆ ಭಯ ಎಂದು‌ ಮಾಜಿ‌ ಮುಖ್ಯಮಂತ್ರಿ ಡಿವಿಎಸ್ ಅವರು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ. ನನಗೆ ಮಾತ್ರವಲ್ಲ ಜಾತ್ಯತೀತತೆ, ಸೌಹಾರ್ದತೆ ಮತ್ತು ಅಹಿಂಸೆಯ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಭಾರತೀಯನಿಗೂ ಆರ್ ಎಸ್ ಎಸ್ ಕಂಡರೆ ಭಯ ಇದೆ ಎಂದು ತಿಳಿಸಿದ್ದಾರೆ.

ಭಯ ಹುಟ್ಟಿಸುವವರನ್ನು ಸಾಮಾನ್ಯ ಭಾಷೆಯಲ್ಲಿ ಭಯೋತ್ಪಾದಕರು ಎನ್ನಲಾಗುತ್ತಿದೆ. ಡಿವಿ ಸದಾನಂದಗೌಡ ಅವರು ಯಾಕೆ ತನ್ನ‌ ಮಾತೃ ಸಂಸ್ಥೆಯ ಮೇಲೆ ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎನ್ನುವುದನ್ನು ಅವರೇ ಹೇಳಬೇಕು. ಆರ್.ಎಸ್.ಎಸ್ ಬಗೆಗಿನ ಭಯದ ಕಾರಣದಿಂದಾಗಿಯೇ ಮಹಾತ್ಮ ಗಾಂಧೀಜಿಯವರ ಹತ್ಯೆಯ ನಂತರ ಆರ್ ಎಸ್ಎಸ್ ಮೇಲೆ ದೇಶದ ಮೊದಲ ಗೃಹಸಚಿವ‌ ವಲ್ಲಭಭಾಯಿ‌ ಪಟೇಲ್ ಅವರು ನಿಷೇಧ ಹೇರಿದ್ದು ಎನ್ನುವುದು ನೆನಪಿರಲಿ.

ಉನ್ನತ ಪದಾಧಿಕಾರದಿಂದ ಈ ದೇಶದ ಬಹುಸಂಖ್ಯಾತ ಹಿಂದೂಗಳಾದ ದಲಿತರು ಮತ್ತು ಹಿಂದುಳಿದ ಜಾತಿಗಳನ್ನು ದೂರ ಇಟ್ಟಿರುವ ಕಾರಣಕ್ಕಾಗಿಯೇ ಈ‌ ಸಮುದಾಯಗಳಂತೆ ನನಗೂ  ಆರ್ ಎಸ್ ಎಸ್ ಬಗ್ಗೆ ಭಯವಿದೆ. ಮೀಸಲಾತಿ, ಭೂಸುಧಾರಣೆಯಂತಹ ಬಹುಸಂಖ್ಯೆಯ ಹಿಂದೂಗಳೇ ಫಲಾನುಭವಿಗಳಾಗಿರುವ ಸಾಮಾಜಿಕ ನ್ಯಾಯದ ಕಾನೂನುಗಳನ್ನೇ ವಿರೋಧಿಸುವ ಆರ್ ಎಸ್ ಎಸ್  ಬಗ್ಗೆ ಭಯವಲ್ಲದೆ ಪ್ರೀತಿ ಇರಲು ಸಾಧ್ಯವೇ?

ತಮ್ಮ ಮಕ್ಕಳಿಗೆ ದೇಶ-ವಿದೇಶದಲ್ಲಿ ಉನ್ನತ ಶಿಕ್ಷಣ ಕೊಡಿಸಿ, ದಲಿತ, ಹಿಂದುಳಿದ ಸಮುದಾಯದ ಬಡವರ ಮಕ್ಕಳನ್ನು ಹಿಂಸಾಚಾರಕ್ಕೆ ಇಳಿಸಿ ಜೈಲಿಗೆ ಅಟ್ಟುವ ಆರ್ ಎಸ್ ಎಸ್ ಬಗ್ಗೆ ಭಯ ಸಹಜ ಅಲ್ಲವೇ ಸದಾನಂದಗೌಡರೇ..?  ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.

ಯಾವುದೇ ವ್ಯಕ್ತಿ-ಸಿದ್ದಾಂತ- ಸಂಸ್ಥೆ ಇತರರಲ್ಲಿ ಗೌರವ ಹುಟ್ಟಿಸಬೇಕೇ ಹೊರತು ಭಯ ಹುಟ್ಟಿಸುವುದಲ್ಲ. ಈ ಬಗ್ಗೆ‌ ಆತ್ಮಾವಲೋಕನ‌ ಮಾಡಬೇಕಾದವರು ಭಯವನ್ನು ಉತ್ಪಾದಿಸುವವರೇ ಹೊರತು ಭಯ ಪಡುವವರಲ್ಲ. ಆರ್.ಎಸ್.ಎಸ್ ಉನ್ನತ ಪದಾಧಿಕಾರ ಯಾಕೆ ಒಂದು ಜಾತಿಗೆ ಸೀಮಿತವಾಗಿದೆ? ಯಾಕೆ ಅಲ್ಲಿ ಹಿಂದುಗಳೇ ಆಗಿರುವ ದಲಿತ ಮತ್ತು ಹಿಂದುಳಿದ ಜಾತಿಗಳಿಲ್ಲ?‌ ಎನ್ನುವ ನನ್ನ ಸರಳ ಪ್ರಶ್ನೆಗೆ ಯಾಕೆ, ಯಾರೂ ಉತ್ತರಿಸುತ್ತಿಲ್ಲ? ಎಂದು ಸಿದ್ಧರಾಮಯ್ಯ ಗುಡುಗಿದ್ದಾರೆ.

Key words: RSS-feared – every Indian-former CM-Siddaramaiah