ಕೆಎಸ್‌ ಆರ್‌ಟಿಸಿ ಹೌಸಿಂಗ್ ಸೊಸೈಟಿಯಲ್ಲಿ ರೂ.15 ಕೋಟಿ ಹಗರಣ ಬಯಲು..!

Promotion

ಬೆಂಗಳೂರು, ಜುಲೈ 12, 2021 (www.justkannada.in): ಸಾಲಗಳನ್ನು ಮಾಡಿ ತಮ್ಮ ಜೀವಮಾನದ ಇಡೀ ಉಳಿತಾಯ ಹಣವನ್ನು ಕೆಎಸ್‌ ಆರ್‌ಟಿಸಿ ಉದ್ಯೋಗಿಗಳ ಸಹಕಾರ ಗೃಹ ಸಂಘದಲ್ಲಿ (ಕೆಇಸಿಹೆಚ್‌ಎಸ್) ಹೂಡಿಕೆ ಮಾಡಿದ್ದಂತಹ ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿಗಳ ಭವಿಷ್ಯ ಅನಿಶ್ಚಿತತೆ ಎದುರಿಸುವಂತಾಗಿದೆ. ಅಧ್ಯಕ್ಷರು ಹಾಗೂ ನಿರ್ದೇಶಕರು ಒಳಗೊಂಡಂತೆ ಗೃಹ ನಿರ್ಮಾಣ ಸಂಘದಿAದ ರೂ.15 ಕೋಟಿ ದುರುಪಯೋಗಪಡಿಸಿಕೊಂಡಿರುವ ಆರೋಪ ಎದುರಾಗಿದೆ.jk

ಸಹಕಾರ ಸಂಘಗಳ ನೋಂದಣಾಧಿಕಾರಿಗಳ ಆದೇಶದ ಮೇರೆಗೆ ಕೈಗೊಂಡಿರುವ ತಪಾಸಣೆಯಿಂದ ಸಹಕಾರ ಸಂಘದಲ್ಲಿ ಹಲವಾರು ಕಾನೂನುಬಾಹಿರ ಕೆಲಸಗಳು ನಡೆದಿರುವುದು ಬೆಳಕಿಗೆ ಬಂದಿದೆ.

2006ರಲ್ಲಿ ಕೆಇಸಿಹೆಚ್‌ಎಸ್ ಬೆಂಗಳೂರು ಬಳಿಯ ನೆಲಮಂಗಲದಲ್ಲಿ 110 ಎಕರೆ ಭೂಮಿಯನ್ನು ಖರೀದಿಸಿ ಸಂಘದ ಸದಸ್ಯರಿಗೆ ಗೃಹ ನಿವೇಶನಗಳನ್ನು ಸೃಷ್ಟಿಸುವ ಪ್ರಸ್ತಾಪವನ್ನು ಸಂಬಂಧಪಟ್ಟ ಪ್ರಾಧಿಕಾರಗಳು ಅನುಮೋದಿಸಿದವು. ಈ ಸಹಕಾರ ಸಂಘದಲ್ಲಿ ಸುಮಾರು ೫,೦೦೦ ಸದಸ್ಯರಿದ್ದು, ಈ ಪೈಕಿ ೯೧೦ ಸದಸ್ಯರು ಕೆಎಸ್‌ಆರ್‌ಟಿಸಿದವರೇ ಆಗಿದ್ದಾರೆ. ಜಾಗ ಖರೀದಿಸಲು ಒಟ್ಟು ರೂ.೩೯.೩೨ ಕೋಟಿ ಹಣ ಸಂಗ್ರಹಿಸಲಾಯಿತು.

ನಂತರದಲ್ಲಿ ಕೆಇಸಿಹೆಚ್‌ಎಸ್ ಸ್ಥಳ ಖರೀದಿಸಲು ಹಾಗೂ ಎಲ್ಲಾ ಸವಲತ್ತುಗಳೊಂದಿಗೆ ಸಾರಿಗೆ ನಗರ ಟೌನ್‌ಷಿಪ್ ಅಭಿವೃದ್ಧಿಪಡಿಸಲು ಕರ್ನಾಟಕ ಹೌಸಿಂಗ್ ಬೋರ್ಡ್ (ಕೆಹೆಚ್‌ಬಿ) ಹಾಗೂ ಸುಪ್ರೀಂ ಅಸೋಸಿಯೇಟ್ಸ್ ಎನ್ನುವ ಖಾಸಗಿ ಕಂಪನಿಯೊಂದಿಗೆ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿತು.

ಆದರೆ 2011ರಲ್ಲಿ ಕೆಇಸಿಹೆಚ್‌ಎಸ್‌ಗೆ ಆಯ್ಕೆಯಾದ ಪದಾಧಿಕಾರಿಗಳು ಕೆಹೆಚ್‌ಬಿ ಗಮನಕ್ಕೆ ತರದೆ ಖಾಸಗಿ ಕಂಪನಿಗೆ ರೂ.೧೪.೭೩ ಕೋಟಿಗಳನ್ನು ಬಿಡುಗಡೆ ಮಾಡುವ ಮೂಲಕ ತ್ರಿಪಕ್ಷೀಯ ಒಪ್ಪಂದನವನ್ನು ಉಲ್ಲಂಘಸಿದ್ದಾರೆ. ಇದರ ಫಲವಾಗಿ ಪ್ರಸ್ತಾಪಿತ ಒಟ್ಟು ೧೧೦ ಎಕರೆಗಳ ಪೈಕಿ ಮಂಡಳಿಗೆ ಕೇವಲ ೭೨ ಎಕರೆ, ೨೭ ಗುಂಟೆ ಜಾಗ ಮಾತ್ರ ನೋಂದಣಿಯಾಯಿತು.

ಕೆಇಸಿಹೆಚ್‌ಎಸ್‌ನ ಹಿಂದಿನ ಅಧ್ಯಕ್ಷರಾದ ಮಂಜುನಾಥ್ ಜಿ.ಎ ಅವರು, 2011ರಲ್ಲಿ ಸುಪ್ರೀಂ ಅಸೋಸಿಯೇಟ್ಸ್ ನ ಪಾಲುದಾರಿಕೆಯನ್ನು ಹೊಂದಿದ ತನ್ನ ಸಹೋದರ ಲಕ್ಷ್ಮಿನಾರಾಯಣಗೌಡ ಅವರಿಗೆ ರೂ.೧೨.೧೦ ಕೋಟಿ ಹಣವನ್ನು ವರ್ಗಾಯಿಸುವ ಅನುಮಾನ ವ್ಯಕ್ತವಾಗಿದೆ.

ಈ ಪ್ರಕರಣದ ತಪಾಸಣೆ ನಡೆಸುತ್ತಿರುವ ಅಧಿಕಾರಿಯೂ ಆಗಿರುವ ಸಹಕಾರ ಸಂಘಗಳ ಉಪನೋಂದಣಾಧಿಕಾರಿ ಎನ್. ವೆಂಕಟೇಶ್ ಅವರ ಪ್ರಕಾರ, “ಲಕ್ಷ್ಮಿನಾರಾಯಣಗೌಡ ಪಾಲುದಾರನಾದ ನಂತರ ರೂ.೧೨.೧೦ ಕೋಟಿ ಪಾವತಿಸಿದ್ದಾರೆ. ಆದರೆ ಈ ಹಣ ಪಡೆದುಕೊಂಡ ನಂತರ ಸ್ಥಳದಲ್ಲಿ ಯಾವುದೇ ಕೆಲಸ ಕೈಗೊಂಡಿಲ್ಲ. ಕೆಇಸಿಹೆಚ್‌ಎಸ್ ಪದಾಧಿಕಾರಿಗಳು ಯಾವುದೇ ಬ್ಯಾಂಕ್ ಗ್ಯಾರಂಟಿ ಪಡೆಯದೇ ಇಷ್ಟು ದೊಡ್ಡ ಮೊತ್ತವನ್ನು ವರ್ಗಾಯಿಸಿದ್ದಾರೆ. ಈಗ ಅವರಿಂದ ಈ ಹಣವನ್ನು ಹಿಂದಕ್ಕೆ ಪಡೆಯಬೇಕಿದೆ,” ಎನ್ನುತ್ತಾರೆ.

ಪ್ರತ್ಯೇಕ ತಪಾಸಣೆಯೊಂದರಲ್ಲಿ ವಿಲ್ಸನ್ ಗಾರ್ಡನ್ ಪೊಲೀಸರು, ಕೆಇಸಿಹೆಚ್‌ಎಸ್‌ಗೆ ಸೇರಿರುವ ಭೂಮಿಯ ಪೈಕಿ ೫ ಎಕರೆ, ೧೨ ಗುಂಟೆಗಳಷ್ಟು ಜಾಗ ಸುಪ್ರೀಂ ಅಸೋಸಿಯೇಟ್ಸ್ ನ ಮತ್ತೋರ್ವ ಪಾಲುದಾರ ಸುರೇಂದ್ರ ಹಾಗೂ ಅವರ ಸ್ನೇಹಿತರ ಹೆಸರಿನಲ್ಲಿ ನೋಂದಣಿಯಾಗಿರುವುದನ್ನು ಪತ್ತೆ ಹಚ್ಚಿದ್ದಾರೆ.

ಉಪನೋಂದಣಾಧಿಕಾರಿಯವರು ಕೈಗೊಂಡ ತಪಾಸಣೆಯ ಪ್ರಕಾರ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ, ೧೯೫೯ರ ಕಲಂ ೬೮ರಡಿ ಉಲ್ಲಂಘನೆಯಾಗಿರುವ ವಿಚಾರಕ್ಕೆ ಹೆಚ್ಚಿನ ಗಮನ ನೀಡಲಾಗಿದ್ದು, ಪೊಲೀಸರು ೭೬ ಜನರಿಂದ ಹೇಳಿಕೆಗಳನ್ನು ಪಡೆದ ನಂತರ ಐಪಿಸಿ ಕಲಂಗಳಡಿ ಒಳಸಂಚು ನಡೆದಿರುವುದಾಗಿ ಅನುಮಾನಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸರು, ಮಂಜುನಾಥ್, ಹಿಂದಿನ ಉಪಾಧ್ಯಕ್ಷ ಎಸ್.ಎನ್. ರಾಜಣ್ಣ, ಹಿಂದಿನ ಗೌರವ ಕಾರ್ಯದರ್ಶಿ ಪುರುಷೋತ್ತಮ್, ವಿ.ಕೆ. ಪುಟ್ಟಸ್ವಾಮಿ, ಶಿವಣ್ಣ ಹಾಗೂ ಟಿ.ಎಲ್. ಅರುಣ್ ಕುಮಾರ್ ಅವರು ಒಳಗೊಂಡಂತೆ ಒಟ್ಟು ೧೬ ಜನರ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Rs 15 crore -scam – KSRTC- Housing Society