ತಜ್ಞರ ಸಮಿತಿಯಲ್ಲಿ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡಿ- ಕೇಂದ್ರ ಸಚಿವರಿಗೆ  ಟಿ.ಎಸ್.ನಾಗಾಭರಣ ಪತ್ರ….

Promotion

ಬೆಂಗಳೂರು,ಅಕ್ಟೋಬರ್,3,2020(www.justkannada.in): ಭಾರತೀಯ ಸಂಸ್ಕೃತಿಯ ಉಗಮ ಮತ್ತು ವಿಕಾಸವನ್ನು ಸಮಗ್ರವಾಗಿ ಅಧ್ಯಯನ ನಡೆಸಲು ರಚಿಸಲಾದ ತಜ್ಞರ ಸಮಿತಿಗೆ ಕರ್ನಾಟಕದ ಪ್ರತಿನಿಧಿಯನ್ನು ನೇಮಕ ಮಾಡಿಕೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು, ಕೇಂದ್ರ ಸರ್ಕಾರದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ ರಾಜ್ಯ  ಸಚಿವರಾದ ಪ್ರಹ್ಲಾದ್ ಸಿಂಗ್ ಪಟೇಲ್ ಅವರಲ್ಲಿ ಮನವಿ ಮಾಡಿದ್ದಾರೆ.

ಈ ಸಂಬಂಧ ಕೇಂದ್ರ ಸಚಿವರಿಗೆ ಪತ್ರ ಬರೆದಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ,   ಸಾಂಪ್ರದಾಯಿಕ ಜಾನಪದ ನೃತ್ಯಗಳು, ಜನಪದ ಕಲೆಗಳು, ಶಾಸ್ತ್ರೀಯ ಸಂಗೀತ, ನೃತ್ಯ, ನಾಟಕ ಇತ್ಯಾದಿ ಹರವುಗಳನ್ನು ಒಳಗೊಂಡಿರುವ ಕರ್ನಾಟಕದ ಸಂಸ್ಕೃತಿ, ಭಾರತೀಯ ಸಂಸ್ಕೃತಿ ಮತ್ತು ವಿಕಾಸ ಅಧ್ಯಯನದೊಳಗೆ ಸೇರದೇ ಹೋದಲ್ಲಿ ಪರಿಪೂರ್ಣವಾಗದು. ಅದು ಪರಿಪೂರ್ಣವಾಗಬೇಕಾದರೆ ಶ್ರೀಮಂತ ಪರಂಪರೆಯನ್ನು ಹೊಂದಿರುವ ಹಾಗೂ ಶಾಸ್ತ್ರೀಯ ಸ್ಥಾನ-ಮಾನವನ್ನು ಪಡೆದುಕೊಂಡಿರುವ ಸಾವಿರಾರು ವರ್ಷಗಳ ಇತಿಹಾಸವುಳ್ಳ ಕನ್ನಡ ಭಾಷೆಯ ಸಮೃದ್ಧತೆಯನ್ನು ತಿಳಿಸಲು ಕರ್ನಾಟಕದ ತಜ್ಞ ವಿದ್ವಾಂಸರನ್ನು ಸಮಿತಿಗೆ ಸೇರಿಸಿಕೊಳ್ಳುವಂತೆ ಸಚಿವರಿಗೆ ಬರೆಯಲಾಗಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೊಡವ, ಕೊಂಕಣಿ, ಟಿಬೆಟಿಯನ್, ಬೌದ್ಧ, ಸಿದ್ಧಿ ಬುಡಕಟ್ಟು ಜನಾಂಗದವರೂ ಸೇರಿದಂತೆ ಉಪಪಂಗಡಗಳ ಜನಾಂಗದವರೂ ಸಹ ಕರ್ನಾಟಕದಲ್ಲಿ ವಾಸಿಸುತ್ತಿದ್ದಾರೆ. ಈ ಎಲ್ಲ ಜನಾಂಗಗಳ ಉಡುಗೆ-ತೊಡುಗೆ, ಸಾಂಪ್ರದಾಯಿಕ ನೃತ್ಯ ಪ್ರಕಾರಗಳು, ಆಹಾರ ಕ್ರಮಗಳು, ಆಡು ಭಾಷೆಗಳು ಸಹ ಅತ್ಯಂತ ವೈವಿದ್ಯಮಯವಾಗಿವೆ. ಈ ಎಲ್ಲವುಗಳ ಸಮಗ್ರ ಅಧ್ಯಯನ ಭಾರತೀಯ ಸಂಸ್ಕೃತಿಯೊಳಗೆ ಸೇರ್ಪಡೆಗೊಂಡಲ್ಲಿ ಮಾತ್ರ ಪರಿಪೂರ್ಣತೆ ಕಾಣಲು ಸಾಧ್ಯ ಮತ್ತು ಕರ್ನಾಟಕ ರಾಜ್ಯದ ಸಂಸ್ಕೃತಿಗೆ ನ್ಯಾಯ ದೊರಕಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ.represent-karnataka-experts-committee-ts-nagarapana-letter-union-minister

ಪ್ರಸ್ತುತ 12,000 ವರ್ಷಗಳ ಭಾರತೀಯ ಸಂಸ್ಕೃತಿ ಮೂಲ ಮತ್ತು ವಿಕಾಸದ ಸಮಗ್ರ ಅಧ್ಯಯನ ನಡೆಸಲು ಮುಂದಾಗಿರುವ ಕೇಂದ್ರ ಸರ್ಕಾರದ ನಿಲುವು ನಿಜಕ್ಕೂ ಅಭಿನಂದನೀಯ. ಆದರೆ ಭಾರತೀಯ ಸಂಸ್ಕೃತಿಯ ಉಗಮ ಮತ್ತು ವಿಕಾಸವನ್ನು ಜಗತ್ತಿನ ಇತರೆ ದೇಶಗಳೊಂದಿಗೆ ತುಲನಾತ್ಮಕವಾಗಿ ಅಧ್ಯಯನ ನಡೆಸಲು ಕೇಂದ್ರ ಸರ್ಕಾರವು ರಚಿಸಿರುವ 16 ಮಂದಿಯ ಸಮಿತಿಯಲ್ಲಿ ಕರ್ನಾಟಕಕ್ಕೆ ಪ್ರಾತಿನಿಧ್ಯತೆಯಾಗಲೀ, ಮಹಿಳಾ ಪ್ರಾತಿನಿಧ್ಯತೆಯಾಗಲೀ ನೀಡದಿರುವುದು ಅತ್ಯಂತ ಬೇಸರದ ವಿಷಯವಾಗಿದೆ. ಕರ್ನಾಟಕದ ಚರಿತ್ರೆ ಮತ್ತು ಪರಂಪರೆಯನ್ನು ಕನ್ನಡಿಗ ತಜ್ಞ ವಿದ್ವಾಂಸರೇ ಅಧ್ಯಯನ ಮಾಡಬೇಕೇ ವಿನಾಃ ಆ ಕೆಲಸವನ್ನು ಬೇರೆ ರಾಜ್ಯದವರು ಮಾಡಿದಲ್ಲಿ ನ್ಯಾಯ ಒದಗಿಸಿದಂತಾಗುವುದಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಮನಗಾಣಬೇಕಿದೆ ಎಂದಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು, ಆ ಸಮಿತಿಯಲ್ಲಿ ಕರ್ನಾಟಕಕ್ಕೂ ಪ್ರಾತಿನಿಧ್ಯವನ್ನು ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Key words: Represent –Karnataka- experts-committee-TS Nagarapana -Letter – Union Minister