ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಮನೆ ಮೇಲೆ ಇಡಿ ಅಧಿಕಾರಿಗಳ ದಾಳಿ

Promotion

ಮುಂಬೈ, ಮಾರ್ಚ್ 7, 2020 (www.juskannada.in): ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ರಾತ್ರಿ ದಿಢೀರ್ ದಾಳಿ ನಡೆಸಿದ್ದಾರೆ.

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯೆಸ್‌ ಬ್ಯಾಂಕ್ ಸಂಸ್ಥಾಪಕ ಮಾಜಿ ಸಿಇಓ ರಾಣಾ ಕಪೂರ್ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿದ್ದಾರೆ.

ಮುಂಬೈನಲ್ಲಿರುವ ಮನೆ ಮೇಲೆ ದಾಳಿ ನಡೆಸಿ ಈಗಾಗಲೇ ನಷ್ಟದಲ್ಲಿದ್ದ ದಿವಾನ್ ಹೌಸಿಂಗ್ ಫೈನಾನ್ಸ್‌(ಡಿಎಚ್‌ಎಫ್‌ಎಲ್) ಜೊತೆ ಯೆಸ್ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದಂತೆ ರಾಣಾ ಕಪೂರ್ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ.

ಬ್ಯಾಂಕ್‌ನ ಆರ್ಥಿಕ ಮುಗ್ಗಟ್ಟಿಗೆ ಕಾರಣಗಳ ಜೊತೆಗೆ ಉನ್ನತ ಅಧಿಕಾರಿಗಳ ಅವ್ಯವಹಾರದ ಪಾಲು ಇರುವುದರಿಂದ ನಿರ್ದೇಶಕ ಮಂಡಳಿ ಪುನರ್ ರಚನೆಗೆ ಸರ್ಕಾರ ಮುಂದಾಗಿದೆ ಎಂದು ಶುಕ್ರವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.

ಈ ಬಿಕ್ಕಟ್ಟಿಗೆ ಕಾರಣವಾದ ತಪ್ಪಿತಸ್ಥರನ್ನು ಗುರುತಿಸಲು ಆರ್‌ಬಿಐ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದರು. ಈ ಹಿನ್ನೆಲೆ ಜಾರಿ ನಿರ್ದೇಶನಾಲಯ ಶೋಧ ನಡೆಸಿದೆ.