ಮಳೆ ಅವಾಂತರ, ಕಾರ್ಯೋನ್ಮುಖವಾದ ಐಟಿ ದಿಗ್ಗಜ ಸಂಸ್ಥೆ ವಿಪ್ರೋ: ಒತ್ತುವರಿ ತೆರವುಗೊಳಿಸುವ ಸ್ವಯಂ ಕಾರ್ಯಾಚರಣೆ.

ಬೆಂಗಳೂರು, ಸೆಪ್ಟೆಂಬರ್ 20, 2022(www.justkannada.in): ಬಿಬಿಎಂಪಿ ಅಧಿಕಾರಿಗಳು ಮಳೆಪೀಡಿತ ಪ್ರದೇಶಗಳಲ್ಲಿ ಒತ್ತುವರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ನಡೆಸಲು ಸಿದ್ಧತೆ ನಡೆಸುತ್ತಿದ್ದಂತೆ, ಐಟಿ ದಿಗ್ಗಜ ಸಂಸ್ಥೆ ವಿಪ್ರೋ ಸೋಮವಾರದಂದು ಸ್ವತಃ ಜೆಸಿಬಿಗಳು ಹಾಗೂ ಇತರೆ ಯಂತ್ರಗಳನ್ನು ಬಳಸಿಕೊಂಡು ಸಂಸ್ಥೆಯ ಬಳಿಯಿರುವ ರಾಜಾಕಾಲುವೆಯ ಮೇಲೆ ಹೊದಿಸಲಾಗಿದ್ದ ಕಾಂಕ್ರೀಟ್ ಸ್ಲ್ಯಾಬ್‌ಗಳನ್ನು ತೆರವುಗೊಳಿಸಲು ಆರಂಭಿಸಿತು.

ಬಿಬಿಎಂಪಿ ನೀಡಿದ ಮಾಹಿತಿಯ ಪ್ರಕಾರ, ವಿಪ್ರೋ ಸಂಸ್ಥೆ ಕಚೇರಿ ಬಳಿಯಿರುವ ರಾಜಾಕಾಲುವೆ ಮೇಲೆ ೨.೪ ಮೀಟರ್‌ ಗಳಷ್ಟು ಅಗಲದ ಕಾಂಕ್ರೀಟ್ ಸ್ಲ್ಯಾಬ್ ಒಂದನ್ನು ನಿರ್ಮಾಣ ಮಾಡಿಕೊಂಡಿದೆ. ಇದು ಕಂಪನಿಯ ಆವರಣದೊಳಗೆ ಹರಿಯುವ ರಾಜಾಕಾಲುವೆಯನ್ನು ಒತ್ತುವರಿ ಮಾಡಿಕೊಳ್ಳುವಂತೆ ಇಲ್ಲ ಹಾಗೂ ಅಗಲವನ್ನೂ ಸಹ ಕಡಿಮೆಗೊಳಿಸುವಂತೆ ಇಲ್ಲ.

“ಈ ಸ್ಲ್ಯಾಬ್‌ ನ ಒಂದು ಭಾಗವನ್ನು ತೆರವುಗೊಳಿಸಲಾಯಿತು. ವಿಪ್ರೋ ಸಂಸ್ಥೆ ನಿರ್ಮಾಣ ಮಾಡಿಕೊಂಡಿರುವ ಖಾಯಂ ಕಟ್ಟಡಗಳ ಮೇಲೆ ಹಾಗೂ ರಾಜಕಾಲುವೆ ಪಕ್ಕದಲ್ಲೇ ಇರುವ ಸಲಾರ್‌ಪುರಿಯಾದ ಕಟ್ಟಡಗಳಿಗೆ ಯಾವುದೇ ರೀತಿಯ ಪರಿಣಾಮ ಉಂಟಾಗದಿರಲಿ ಎಂಬ ಉದ್ದೇಶದಿಂದ ಈ ಕೆಲಸವನ್ನು ಮಧ್ಯದಲ್ಲಿಯೇ ನಿಲ್ಲಿಸಲಾಯಿತು. ಉಳಿದ ಸ್ಲ್ಯಾಬ್‌ಗಳನ್ನು ಮಂಗಳವಾರ ಜೆಸಿಬಿ ಬದಲಿಗೆ ಗ್ಯಾಸ್ ಕಟ್ಟರ್‌ ಗಳನ್ನು ಬಳಸಿ ತೆರವುಗೊಳಿಸಲಾಗುವುದು,” ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸರ್ಜಾಪುರ ರಸ್ತೆಯಲ್ಲಿರುವ ವಿಪ್ರೋದ ಕ್ಯಾಂಪಸ್, ಇತ್ತೀಚೆಗೆ ಸುರಿದಂತಹ ಭಾರಿ ಮಳೆಯಿಂದಾಗಿ, ಹಾಲನಾಯಕನಹಳ್ಳಿ ಕೆರೆ ಹಾಗೂ ಸೌಲ್ ಕೆರೆ ನಡುವೆ ಇರುವಂತಹ ಈ ಬಡಾವಣೆಯೊಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾದಂತಹ ಇತರೆ ಹಲವು ಕಚೇರಿಗಳು ಹಾಗೂ ಮನೆಗಳ ಪೈಕಿ ಸೇರಿದೆ.

ಸೋಮವಾರ, ಬಿಬಿಎಂಪಿ ಗ್ರೀನ್‌ ವುಡ್ ರೆಸಿಡೆನ್ಸಿ ಬಳಿ ಇರುವ ಕಾಲುವೆಯನ್ನು ಮುಚ್ಚಿದಂತ್ತಿದ್ದ ಮೇಲ್ಭಾಗದ ಸಿಮೆಂಟ್ ಸ್ಲ್ಯಾಬ್ ಅನ್ನು ತೆರವುಗೊಳಿಸಿತು. ಸಲಾರ್‌ ಪುರಿಯಾ ಸಂಸ್ಥೆಯ ಆವರಣದಲ್ಲೂ ಸಹ, ಅಧಿಕಾರಿಗಳು ತಿಳಿಸಿದಂತೆ, ಆವರಣದೊಳಗಿನ ಕಾಲುವೆ ಕಾಮಗಾರಿ ಪೂರ್ಣಗೊಂಡ ನಂತರ ಇದೇ ಕ್ರಮವನ್ನು ಕೈಗೊಳ್ಳಲಾಗಿದೆಯಂತೆ.

ಈ ಸಂಬಂಧ ಮಾತನಾಡಿದ ವಿಪ್ರೋದ ವಕ್ತಾರರು; “ವಿಪ್ರೋ ಸಂಸ್ಥೆ ತನ್ನ ಕಚೇರಿ ಇರುವ ಪ್ರದೇಶ ವ್ಯಾಪ್ತಿಯಲ್ಲಿನ ಪರಿಸರ ವ್ಯವಸ್ಥೆಯನ್ನು ಬೆಂಬಲಿಸಲು ಬದ್ಧವಾಗಿದೆ. ಸಂಬಂಧಪಟ್ಟ ಪ್ರಾಧಿಕಾರಗಳು ಮಂಜೂರು ಮಾಡಿದಂತಹ ಪ್ಲಾನ್ ಪ್ರಕಾರವೇ ನಿರ್ಮಿಸಲಾಗಿರುವ, ನಮ್ಮ ದೊಡ್ಡಕನ್ನೇಹಳ್ಳೀ ಆವರಣದಿಂದ ಹಾದು ಹೋಗುವ ರಾಜಾಕಾಲುವೆಯ ಸಾಮರ್ಥ್ಯವನ್ನು ವೃದ್ಧಿಸಲು ಬಿಬಿಎಂಪಿ ಜತೆಗೆ ನಾವು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ,” ಎಂದು ವಿವರಿಸಿದರು.

ಬಾಗ್ಮನೆ, ಪೂರ್ವಂಕರ ತೊಂದರೆಯಲ್ಲಿ

ಎರಡು ದೊಡ್ಡ ಕಟ್ಟಡ ನಿರ್ಮಾಣ ಸಂಸ್ಥೆಗಳಾದ ಬಾಗ್ಮನೆ ಹಾಗೂ ಪೂರ್ವಂಕರ ಲಿಮಿಟೆಡ್‌ ಗಳೂ ಸಹ ರಾಜಾಕಾಲುವೆ ಒತ್ತುವರಿ ಮಾಡಿಕೊಂಡಿವೆ ಎಂಬ ಆರೋಪಗಳನ್ನು ಎದುರಿಸುತ್ತಿವೆ. ಮಾನ್ಯ ಉಚ್ಛ ನ್ಯಾಯಾಲಯ ಹೊಸದಾಗಿ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲು ಸೂಚಿಸಿದ್ದು, ಆ ಪ್ರಕಾರವಾಗಿ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಗರುಡಾಚಾರ್ ಪಾಳ್ಯದಲ್ಲಿ ಈ ಸಂಸ್ಥೆಗಳು ಒತ್ತುವರಿ ಮಾಡಿಕೊಂಡಿರುವುದು ಕಂಡು ಬಂದಿದೆ.

ಭೂದಾಖಲೆಗಳು ಹಾಗೂ ಸಮೀಕ್ಷೆ ಇತ್ಯರ್ಥ ಇಲಾಖೆ ಒತ್ತುವರಿದಾರರಿಗೆ ಸೂಚನೆಗಳನ್ನು ವಿತರಿಸಿದ ನಂತರ, ಬಿಬಿಎಂಪಿ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಯನ್ನು ಆರಂಭಿಲಿದೆ ಎಂದು ಮೂಲಗಳು ತಿಳಿಸಿವೆ.

ಸಮೀಕ್ಷೆ ವರದಿಯ ಪ್ರಕಾರ ಬಾಗ್ಮನೆ ಟೆಕ್ ಪಾರ್ಕ್ ಸಂಸ್ಥೆಯು ರಾಜಾಕಾಲುವೆ (ಸರ್ವೆ ಸಂಖ್ಯೆ ೩೫/೧)ನ ಮೇಲ್ಭಾಗವನ್ನು ಮುಚ್ಚಿ ಎರಡು ಗುಂಟೆಗಳ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಉದ್ಯಾನವನ್ನು ನಿರ್ಮಾಣ ಮಾಡಿದೆ. ಪೂರ್ವಂಕರದ ಪೂರ್ವ ಪಾರ್ಕ್ರಿಡ್ಜ್ ವಿಲ್ಲಾ ಕಟ್ಟಡವೂ ಸಹ ಅದೇ ಹಾದಿಯಲ್ಲಿ ಮೂರು ಸ್ಥಳಗಳಲ್ಲಿ ಕಾಲುವೆಯ ಒತ್ತುವರಿಯನ್ನು ಮಾಡಿರುವುದಾಗಿ ಕಂಡು ಬಂದಿದೆ.

ಬಿಲ್ಡರ್ ವಿಲ್ಲಾ, ರಸ್ತೆ ಹಾಗೂ ಪ್ಯಾಸೇಜ್ ನಿರ್ಮಾಣ ಮಾಡಲು ೦.೨೫ ಗುಂಟೆ ಹಾಗೂ ೦.೭೫ ಗುಂಟೆಗಳನ್ನು ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಜೊತೆಗೆ ಒಂದು ರಸ್ತೆ ಹಾಗೂ ಉದ್ಯಾನವನ್ನು ನಿರ್ಮಾಣ ಮಾಡಲು ೦.೨೫ ಗುಂಟೆ ಹಾಗೂ ೧.೫ ಗುಂಟೆ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ.

ಮಾನ್ಯ ಉಚ್ಛ ನ್ಯಾಯಾಲಯದ ಆದೇಶದ ಪ್ರಕಾರ ನಡೆಸಿರುವಂತಹ ಸಮೀಕ್ಷಾ ವರದಿ ಮಾಧ್ಯಮಕ್ಕೆ ಲಭ್ಯವಾಗಿದೆ. ಪೂರ್ವಂಕರ ಲಿಮಿಟೆಡ್ ತನ್ನ ಒಂದು ಇಮೇಲ್ ಪ್ರತಿಕ್ರಿಯೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದಾಗಿ ಬಿಬಿಎಂಪಿ ಅಧಿಕಾರಿಗಳಿಗೆ ಸಹಕಾರ ನೀಡುವುದಾಗಿಯೂ ಹಾಗೂ ಅವರೊಂದಿಗೆ ಕೆಲಸ ನಿರ್ವಹಿಸುವ ಮೂಲಕ ನಗರ ಎದುರಿಸುತ್ತಿರುವ ಸವಾಲುಗಳಿಗೆ ದೀರ್ಘಾವಧಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಬೆಂಬಲ ನೀಡುವುದಾಗಿ ತಿಳಿಸಿದೆ.

“೧೯೯೫ರ ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ)ಯಂತೆ, ಬಿಡಿಎ ಅನುಮೋದಿಸಿರುವ ಯೋಜನೆಯ ಪ್ರಕಾರವಾಗಿಯೇ ಪೂರ್ವ ಪಾರ್ಕ್ರಿಡ್ಜ್ ಅನ್ನು ನಿರ್ಮಾಣ ಮಾಡಲಾಗಿದೆ. ಇದರ ಅಭಿವೃದ್ಧಿ ಮಂಜೂರಾತಿಯನ್ನು ೨೦೦೪ರಲ್ಲಿ ಪಡೆಯಲಾಯಿತು, ಹಾಗೂ ಈ ಯೋಜನೆಯ ಕಾಮಗಾರಿಗಳು ೨೦೦೮ರಲ್ಲಿ ಪೂರ್ಣಗೊಂಡಿತು. ಹಾಲಿ ಪ್ರದೇಶಕ್ಕೆ ಪ್ರಾಂತ್ಯ ಹಾಗೂ ಸಿಡಿಪಿ ಯೋಜನೆಗಳನ್ನು ಆ ಸಮಯದಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಅನುಮೋದನೆಗಾಗಿ ಸಲ್ಲಿಸಲಾಯಿತು,” ಎಂದು ಪೂರ್ವಂಕರ ಲಿಮಿಟೆಡ್‌ ನ ಸಿಇಒ ಅಭಿಷೇಕ್ ಕಪೂರ್ ಅವರು ತಿಳಿಸಿದರು.

“ನಾವು ಈ ಪ್ರದೇಶದ ಒಟ್ಟಾರೆ ಅಭಿವೃದ್ಧಿಯನ್ನು ಹಾಗೂ ಒಳಗೊಂಡಿರುವ ಜನರ ಕಾನೂನಾತ್ಮಕ ಹಕ್ಕುಗಳನ್ನು ಗಮನದಲ್ಲಿರಿಸಿಕೊಂಡು ಈ ಸಮಸ್ಯೆಗೆ ಒಂದು ಪೂರಕ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ,” ಎಂದು ಕಪೂರ್ ಅವರು ತಿಳಿಸಿದರು.

ಸುದ್ದಿಮೂಲ: ಡೆಕ್ಕನ್ ಹೆರಾಲ್ಡ್

Key words: Rain –emergency- IT – Wipro – Self operation – clear- encroachment.