ಲೋಕಸಭಾ ಸದಸ್ಯತ್ವದಿಂದ ರಾಹುಲ್ ಗಾಂಧಿ ಅನರ್ಹ: ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇದೊಂದು ಕರಾಳ ದಿನ- ಮಾಜಿ ಸಿಎಂ ಸಿದ್ಧರಾಮಯ್ಯ.

kannada t-shirts

ಬೆಂಗಳೂರು,ಮಾರ್ಚ್,24,2023(www.justkannada.in): ರಾಹುಲ್ ಗಾಂಧಿಯವರು ಹೇಳುವ ಸತ್ಯವನ್ನು ಎದುರಿಸಲಾಗದ ನರೇಂದ್ರ ಮೋದಿ ಸರ್ಕಾರ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ತನ್ನ ಹೇಡಿತನವನ್ನು ಜಾಹೀರುಗೊಳಿಸಿದೆ. ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇದೊಂದು ಕರಾಳ ದಿನ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಬಿಜೆಪಿ ವಿರುದ್ಧ ಗುಡುಗಿದ ಸಿದ್ಧರಾಮಯ್ಯ, ಭಾರತೀಯ ಜನತಾ ಪಕ್ಷದ ಪಾಪದ ಕೊಡ ತುಂಬಿದೆ. ತನ್ನ ನಾಶದ ಶವದಪೆಟ್ಟಿಗೆಗೆ ತಾನೇ ಕೊನೆಯ ಮೊಳೆ ಬಡಿದಿದೆ. ಈ ಫ್ಯಾಸಿಸ್ಟ್ ನಡವಳಿಕೆಗೆ ಹೆದರುವ, ಹಿಂಜರಿಯುವ ಪ್ರಶ್ನೆಯೇ ಇಲ್ಲ. ಈ ಅನ್ಯಾಯದ ವಿರುದ್ದ ನ್ಯಾಯಾಲಯ ಮತ್ತು ಬೀದಿಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಇಂದು ಅನಧಿಕೃತವಾಗಿ  ತುರ್ತುಪರಿಸ್ಥಿತಿ ಘೋಷಿಸಲಾಗಿದೆ. ನರೇಂದ್ರ ಮೋದಿ, ಬಿಜೆಪಿ ಮತ್ತು ಎನ್ ಡಿ ಎ ಸರ್ಕಾರದ ವಿರುದ್ದ ಮಾತನಾಡುವವರಿಗೆಲ್ಲರಿಗೂ ಎಚ್ಚರಿಕೆಯ ರೂಪದಲ್ಲಿ ರಾಹುಲ್ ಗಾಂಧಿಯವರ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ.

ಇದು ಕೇವಲ ಕಾಂಗ್ರೆಸ್ ಪಕ್ಷ ಇಲ್ಲವೇ ರಾಹುಲ್ ಗಾಂಧಿಯವರಿಗೆ ನೀಡಿರುವ ಬೆದರಿಕೆ ಅಲ್ಲ, ಅನ್ಯಾಯ-ಅಕ್ರಮದ ವಿರುದ್ದ ದನಿ ಎತ್ತುವ ಎಲ್ಲ ಪ್ರಜಾಪ್ರಭುತ್ವ ಪ್ರೇಮಿಗಳಿಗೆ ಒಡ್ಡಿರುವ ಬೆದರಿಕೆ. ಪಕ್ಷ,ಪಂಥ ಮರೆತು ಎಲ್ಲರೂ ಒಟ್ಟಾಗಿ ಇದರ ವಿರುದ್ದ ಪ್ರತಿಭಟನೆ ನಡೆಸಬೇಕಾಗಿದೆ ಎಂದು ತಿಳಿಸಿದ್ದಾರೆ.

ರಾಹುಲ್ ಗಾಂಧಿಯವರ ವಿರುದ್ದ ಕೈಗೊಳ್ಳಲಾದ ಕ್ರಮದಿಂದ ಕಾಂಗ್ರೆಸ್ ಪಕ್ಷದ ಲಕ್ಷಾಂತರ ಕಾರ್ಯಕರ್ತರ ಮನಸ್ಸಿಗೆ ನೋವಾಗಿರುವುದು ನಿಜವಾದರೂ ಈ ಸಂದರ್ಭದಲ್ಲಿ ಸಂಯಮದಿಂದ ವರ್ತಿಸುವುದು ಅಗತ್ಯ. ಯಾರೂ ಕೂಡಾ ಸಿಟ್ಟು-ಆಕ್ರೋಶದ ಕೈಗೆ ಬುದ್ದಿ ಕೊಡದೆ ಶಾಂತಿಯುತ ಪ್ರತಿಭಟನೆ ನಡೆಸಬೇಕೆಂದು ಕೋರುತ್ತೇನೆ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಸಿದ್ಧರಾಮಯ್ಯ ಮನವಿ ಮಾಡಿದ್ದಾರೆ.

Key words: Rahul Gandhi -disqualified – Lok Sabha -membership- Former CM- Siddaramaiah- Criticism

website developers in mysore