ಅರ್ಚಕರು ಹಾಗೂ ದೇವಾಲಯ ನೌಕರರಿಗೆ ಆರೋಗ್ಯ ವಿಮೆ ಜಾರಿಗೊಳಿಸಲು ಶೀಘ್ರ ಕ್ರಮ-ಸಚಿವೆ ಶಶಿಕಲಾ ಜೊಲ್ಲೆ

Promotion

ಬೆಂಗಳೂರು,ಸೆಪ್ಟಂಬರ್,23,2021(www.justkannada.in): ಮುಜರಾಯಿ ಇಲಾಖೆಯ ಆಡಳಿತಯಂತ್ರ ಚುರುಕುಗೊಳಸಲು ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆಯವರು ಮುಂದಾಗಿದ್ದಾರೆ.

 ಗುರುವಾರ ವಿಕಾಸಸೌಧದಲ್ಲಿ ಮುಜರಾಯಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವೆ ಶಶಿಕಲಾ ಜೊಲ್ಲೆ, ಇಲಾಖೆಯ ಕಾರ್ಯ ಚಟುವಟಿಕೆಗಳಿಗೆ ವೇಗ ಹೆಚ್ಚಿಸಿ,ತ್ವರಿತಗತಿಯಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆನೀಡಿದರು.

ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ  ಪೂಜೆ ಸಲ್ಲಿಸುವ ಅರ್ಚಕರು ಹಾಗೂ ದೇವಾಲಯ ನೌಕರರು ಆರೋಗ್ಯ ಸಮಸ್ಯೆಗೆ ಒಳಗಾದರೆ  ಅವರಿಗೆ ರಕ್ಷಣೆ ಒದಗಿಸಲು ಆರೋಗ್ಯ ವಿಮೆ ಜಾರಿಗೊಳಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದ್ದು, ಈ ಕುರಿತು ಶೀಘ್ರ ಅಗತ್ಯ ಕ್ರಮ  ಕೈಗೊಳ್ಳುವುದಾಗಿ ತಿಳಿಸಿದರು. 

ಇದರಿಂದ ಮುಜರಾಯಿ ಇಲಾಖೆಯ ಸುಮಾರು 37,000 ಸಿಬ್ಬಂದಿಗೆ ಪ್ರಯೋಜನವಾಗಲಿದೆ. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಧಾರ್ಮಿಕ ಸಂಸ್ಥೆಗಳಲ್ಲಿ ಈಗಾಗಲೇ 5 ನೇ ವೇತನ ಆಯೋಗದ ವೇತನ ಪಡೆದು ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಹಾಗೂ  ಅರ್ಚಕರಿಗೆ 6 ನೇ ವೇತನ ಆಯೋಗದ ವೇತನ ದೊರಕಿಸಿಕೊಡುವಂತೆ ಅನೇಕ ಶಾಸಕರಿಂದ ಹಲವಾರು ಬಾರಿ ಒತ್ತಡ ಬಂದಿರುವುದರಿಂದ ಕೆಲವು ಷರತ್ತುಗಳನ್ನು ವಿಧಿಸಿ, ದೇವಾಲಯದ ವಾರ್ಷಿಕ ಆದಾಯದಲ್ಲಿ ನೌಕರರ ವೇತನ ಶೇ 35% ರಷ್ಟು ಮೀರದಂತೆ ನೌಕರರನ್ನು 6 ನೇ ವೇತನ ಆಯೋಗದ ವ್ಯಾಪ್ತಿಗೆ ಒಳಪಡುವಂತೆ ಕ್ರಮ  ಕೈಗೊಳ್ಳಲಾಗುತ್ತದೆ ಎಂದು  ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು. ಇದರಿಂದ ಮುಜರಾಯಿ ಇಲಾಖೆಯ ಸುಮಾರು 1034 ಸಿಬ್ಬಂದಿಗೆ ಪ್ರಯೋಜನವಾಗಲಿದೆ.

ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ರಾಜ್ಯದ ಎಲ್ಲ ದೇವಸ್ಥಾನಗಳ ಆಸ್ತಿ, ಮಾರ್ಗ ನಕ್ಷೆ, ಅಲ್ಲಿನ ಸೇವೆಗಳ  ಸಂಪೂರ್ಣ ಮಾಹಿತಿಯನ್ನು ಆನ್ ಲೈನ್ ಮೂಲಕ ತಿಳಿದುಕೊಳ್ಳುವಂತೆ ಐಟಿಎಂಎಸ್ (ಇಂಟಿಗ್ರೆಟೆಡ್ ಟೆಂಪಲ್ ಮ್ಯಾನೇಜ್ ಮೆಂಟ್ ಸಿಸ್ಟಮ್) ಜಾರಿಗೆ ಕ್ರಮ ವಹಿಸುವುದಾಗಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.  ಇದರಿಂದ ರಾಜ್ಯದ ದೇವಾಲಯಗಳ ಮಾಹಿತಿ ಒಂದೆಡೆ ದೊರೆಯುವುದರಿಂದ ದೇಶ-ವಿದೇಶಗಳಿಂದ ಬರುವ ಭಕ್ತಾಧಿಗಳಿಗೆ ಅನುಕೂಲವಾಗಲಿದೆ. ದೇವಾಲಯಗಳ ಆದಾಯ ವೃದ್ಧಿಗೂ ಇದು ಪೂರಕವಾಗಲಿದೆ.

 ಪ್ರತಿ ವರ್ಷವೂ ದೇವಸ್ಥಾನಗಳ  ನಿರ್ವಹಣೆಗೆ ಬಿಡುಗಡೆ ಮಾಡುವ  ತಸ್ತಿಕ್ ಅನುದಾನವು ತಾಂತ್ರಿಕ  ಕಾರಣದಿಂದ ಸಮರ್ಪಕವಾಗಿ  ಬಿಡುಗಡೆಯಾಗದೇ ವಿಳಂಬವಾಗಿದೆ. ಈ ಯೋಜನೆ ಅಡಿ 2021-22 ನೇ ಸಾಲಿನಲ್ಲಿ 134.62 ಕೋಟಿ ರೂ. ಒದಗಿಸಲಾಗಿದ್ದು, ಮೊದಲ ಎರಡು ತ್ರೈಮಾಸಿಕದಲ್ಲಿ 67.31 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.  ಈ ಯೋಜನೆಯನ್ನು ಆಧುನಿಕ  ತಂತ್ರಜ್ಞಾನದ  ಮೂಲಕ  ಜಾರಿಗೊಳಿಸಲು  ಯೋಜನೆ  ರೂಪಿಸಲಾಗಿದ್ದು,  ಆನ್ ಲೈನ್ ಮೂಲಕ  ನೇರವಾಗಿ  ಫಲಾನುಭವಿಗಳ ಖಾತೆಗೆ ಹಣ  ವರ್ಗಾವಣೆ ಮಾಡುವ ಕುರಿತು  ಚರ್ಚಿಸಲಾಗಿದೆ ಎಂದು ಸಚಿವರು  ತಿಳಿಸಿದರು ಅಲ್ಲದೇ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿರುವುದನ್ನು ಗಮನಿಸಿದ ಸಚಿವರು ಈ ಬಗ್ಗೆ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಆಯುಕ್ತರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಮುಜರಾಯಿ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹಾಗೂ ಆಯುಕ್ತರಾದ ರೋಹಿಣಿ ಸಿಂಧೂರಿ ಸೇರಿದಂತೆ  ಇಲಾಖೆಯ ಅಧಿಕಾರಿಗಳು  ಪಾಲ್ಗೊಂಡಿದ್ದರು.

Key words: Quick action – implement-health insurance – priests and -temple –employees-Minister -Shashikala Jolle