ಒತ್ತಡಗಳನ್ನು ಹೇರಿ ‘ಬ್ಯಾಕ್ ಸೀಟ್ ಡ್ರೈವಿಂಗ್’ ಮಾಡಿದಾಗ ಕಾಂಗ್ರೆಸ್ ನ ನೈತಿಕತೆ ಎಲ್ಲಿತ್ತು..?- ಟ್ವಿಟ್ಟರ್ ನಲ್ಲಿ ‘ಕೈ’ ನಾಯಕರಿಗೆ ಹೆಚ್.ಡಿ ಕುಮಾರಸ್ವಾಮಿ  ಟಾಂಗ್…

ಬೆಂಗಳೂರು,ಜು,29,2020(www.justkannada.in):  ‘ನೈತಿಕತೆ’ ಕುರಿತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಡುವೆ  ಟ್ವಿಟ್ಟರ್ ಸಮರ ಮುಂದುವರೆದಿದೆ. ಈ ನಡುವೆ “ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು CM ಆದಾಗ ಕಾಂಗ್ರೆಸ್ ನೈತಿಕತೆ ಚೆನ್ನಾಗಿತ್ತೆ?”ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದ ರಾಜ್ಯ ಕಾಂಗ್ರೆಸ್ ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, “ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು CM ಆದಾಗ ಕಾಂಗ್ರೆಸ್ ನೈತಿಕತೆ ಚೆನ್ನಾಗಿತ್ತೆ?” ಎಂದು @INCKarnataka ಟ್ವೀಟ್ ಮಾಡಿದೆ. ನನ್ನನ್ನು ನೇರವಾಗಿ ಪ್ರಶ್ನಿಸಲಾಗದ ಕಾಂಗ್ರೆಸ್ನ ಅತಿರಥ ಮಹಾರಥರು ಪಕ್ಷದ ಟ್ವಿಟರ್ ಖಾತೆ ಮೂಲಕ ದಾಳಿ ಮಾಡಿ ಓಡಿ ಹೋಗಿದ್ದಾರೆ. ಆಯ್ತು, ಚರ್ಚೆ ಆರಂಭವಾಗಿದೆ. ಅದನ್ನು ನಾನು ಪೂರ್ತಿಗೊಳಿಸುತ್ತೇನೆ.

ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯದ ನಾಯಕರು ಜೆಡಿಎಸ್ ಎದುರು ನಡು ಬಗ್ಗಿಸಿ ನಾವು ಬೇಡವೆಂದರೂ ಮುಖ್ಯಮಂತ್ರಿ ಕುರ್ಚಿಯಲ್ಲಿ  ಕೂರಿಸಿದಿರಿ. ಆನಂತರ ಒತ್ತಡಗಳನ್ನು ಹೇರಿ ಬ್ಯಾಕ್ ಸೀಟ್ ಡ್ರೈವಿಂಗ್ ಮಾಡಿದಾಗ ಕಾಂಗ್ರೆಸ್ ನ ನೈತಿಕತೆ ಎಲ್ಲಿತ್ತು? ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನೆ ಹಾಕಿದ್ದಾರೆ.putting-pressure-congress-hd-kumaraswamy-tong-twitter

ಹಾಗೆಯೇ ರೈತರ ಸಾಲ ಮನ್ನಾ ಮಾಡಿ ರಾಜಧರ್ಮ ಪಾಲಿಸಬೇಕಿತ್ತು. ನಿಮ್ಮೆಲ್ಲಾ ಆಟಗಳು ಗೊತ್ತಿದ್ದು ಕೂಡ ರಾಜ್ಯದ ಜನತೆಯ ಹಿತಕ್ಕಾಗಿ ನಾನು ಕೂಡ ಚಾಣಕ್ಯ ನೀತಿಯನ್ನು ಪ್ರದರ್ಶಿಸಿ ರೈತರ ಹಿತ ರಕ್ಷಿಸಿದೆ. ಇದರಲ್ಲಿ ನನ್ನ ವೈಯಕ್ತಿಕ ಲಾಭವೇನಿಲ್ಲ ಎಂದು ಹೇಳಿರುವ ಹೆಚ್.ಡಿ ಕುಮಾರಸ್ವಾಮಿ, ಬೇಡವೆಂದರೂ ನಮ್ಮ ಮನೆ ಬಾಗಿಲಿಗೆ ಬಂದವರು ನೀವು. ನಾನು ಅಮಾಯಕನಾಗಿರಲಿಲ್ಲ.  ಕಾಂಗ್ರೆಸ್ನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನನ್ನು ಪೆದ್ದು ಮಾಡಲು ಮುಂದಾದಿರಿ. ಆದರೆ ನಾಡಿನ ರೈತರ ಹಿತ ಕಾಯಲು ನಾನು ಜಾಣತನ ಪ್ರದರ್ಶಿಸಿದೆ ಎಂಬುದು ನೆನಪಿರಲಿ ಎಂದು ಕಾಂಗ್ರೆಸ್  ಚಾಟಿ ಬೀಸಿದ್ದಾರೆ.

ಖರ್ಗೆ ಸಿಎಂ ಆಗುವುದನ್ನು ಕಾಂಗ್ರೆಸ್ ಒಳಗಿನ ನಾಯಕರೇ ತಡೆದರು‌…

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರನ್ನ ಕುಟುಕಿರುವ ಹೆಚ್.ಡಿಕೆ, ಕಳೆದ ವಿಧಾನಸಭಾ  ಚುನಾವಣೆಯಲ್ಲಿ  ಅತಂತ್ರ ಫಲಿತಾಂಶ ಬಂದಾಗ ಕಾಂಗ್ರೆಸ್ ನ ರಾಷ್ಟ್ರ, ರಾಜ್ಯ ನಾಯಕರು ಇದ್ದ ಸಭೆಯಲ್ಲಿ ದೇವೇಗೌಡರು ಕಾಂಗ್ರೆಸ್ಗೆ ಸಲಹೆ ನೀಡಿ @kharge CM ಆಗಲಿ ಎಂದರು. ಖರ್ಗೆ ಸಿಎಂ ಆಗುವುದನ್ನು ಕಾಂಗ್ರೆಸ್ ಒಳಗಿನ ನಾಯಕರೇ ತಡೆದರು‌. ಆ ನಾಯಕರುಗಳು ಯಾರ್ಯಾರೆಂದು ಕಾಂಗ್ರೆಸ್ ಹುಡುಕಿಕೊಳ್ಳಲಿ. ಆಗ ಅವರ ನೈತಿಕತೆ ಪ್ರಶ್ನೆಗೆ ಅವರದೇ ನಾಯಕರಿಂದ ಉತ್ತರ ಸಿಗಬಹುದು ಎಂದು ಲೇವಡಿ ಮಾಡಿದರು.

ಕುಮಾರಸ್ವಾಮಿ ಅಜ್ಞಾತ, ಅಪ್ರಸ್ತುತರಾಗಿದ್ದಾರೆ ಎಂದೂ ಕಾಂಗ್ರೆಸ್ನ ನಾಯಕರು ಪಕ್ಷದ ಟ್ವಿಟರ್ ಮೂಲಕ ದಾಳಿ ಮಾಡಿದ್ದಾರೆ. ದೇಶದ ಎಷ್ಟು ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಸ್ತುತವಾಗಿದೆ?  ಪ್ರತ್ಯಕ್ಷವಾಗಿ ರಾಜಕಾರಣ ಮಾಡುತ್ತಿದೆ? ಅನಾಥವಾಗಿದೆ?  ಇದಕ್ಕೆ ಉತ್ತರಿಸಲು ನಾಯಕರ್ಯಾರಾದರೂ ಇದ್ದಾರೋ? ಇಲ್ಲ ಕಾಂಗ್ರೆಸ್ ಗೆ  ಟ್ವಿಟರ್ ಖಾತೆಗೆ ಸೀಮಿತವೋ? ಎಂದು ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಬೇರೆ ಪಕ್ಷದ ಶಾಸಕರಿಗೆ ಸ್ವಯಂ ಸೇರ್ಪಡೆಯ ‘ಮಾರುವೇಶ’ ಹಾಕಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಕ್ಕೂ ಬಿಜೆಪಿ ಅವರು ಆಪರೇಷನ್  ಅಸ್ತ್ರ ಬಳಸಿ ಸರ್ಕಾರವೊಂದನ್ನು ಬುಡಮೇಲು ಮಾಡುವುದಕ್ಕೂ ಅಂತಹ ವ್ಯತ್ಯಾಸವೇನಿಲ್ಲ. ಒಂದು ತೆಳುಗೆರೆಯಷ್ಟೇ ಅಂತರ.

ಕಾಂಗ್ರೆಸ್ ಇದರ ಅರ್ಥ ತಿಳಿಯದಷ್ಟು ಕುಬ್ಜ ಸ್ಥಿತಿ ತಲುಪಿರುವುದು ಚೋದ್ಯವೆನಿಸಿದೆ. ಟೀಕೆಗಾಗಿ ಟೀಕೆ ಮಾಡುವ ಇಂತಹ ಮನಸ್ಥಿತಿಯಿಂದಾಗಿಯೇ ಕಾಂಗ್ರೆಸ್ ಇಂದು ಇಂತಹ ದುಃಸ್ಥಿತಿಗೆ ತಲುಪಿದೆ. ಕಪಟ ರಾಜಕಾರಣವನ್ನು ಯಾವ ಬಾಗಿಲಿನಿಂದ ಮಾಡಿದರೂ ಅದು ಅನೀತಿಯೇ ಆಗಿದೆ ಎಂದು ಹೆಚ್.ಡಿ ಕುಮಾರಸ್ವಾಮಿ ಟ್ವಿಟ್ಟರ್ ಮೂಲಕ ಟೀಕಿಸಿದರು.

Key words: Putting -pressure – Congress-HD Kumaraswamy- Tong – Twitter