ಸಾರ್ವಜನಿಕ ವಲಯದ ಸಂಸ್ಥೆಗಳು ಅಸಮರ್ಥ:  ಸರ್ಕಾರ ಉದ್ಯಮಗಳನ್ನು ನಡೆಸಬಾರದು: ಮಾರುತಿ ಸುಜುಕಿ ಅಧ್ಯಕ್ಷ ಆರ್.ಸಿ. ಭಾರ್ಗವ.

Promotion

ಮುಂಬೈ, ಸೆಪ್ಟೆಂಬರ್,5,2022 (www.justkannada.in): ಮಾರುತಿ ಸುಜುಕಿ ಇಂಡಿಯಾದ ಅಧ್ಯಕ್ಷ ಆರ್.ಸಿ. ಭಾರ್ಗವ ಅವರು ಸಾರ್ವಜನಿಕ ವಲಯದ ಕಂಪನಿಗಳು ಅಸಮರ್ಥವಾಗಿದ್ದು, ಯಾವಾಗಲೂ ಸರ್ಕಾರದಿಂದ ಬಂಡವಾಳವನ್ನು ಎದುರು ನೋಡುತ್ತಿರುತ್ತವೆ. ಹಾಗಾಗಿ, ಸರ್ಕಾರ ಉದ್ಯಮಗಳನ್ನು ನಡೆಸುವುದು ಸೂಕ್ತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನ್ಯೂಸ್ ಏಜೆನ್ಸಿ ಪಿಟಿಐಗೆ ನೀಡಿರುವ ಒಂದು ಸಂದರ್ಶನದಲ್ಲಿ ವಾಹನ ತಯಾರಿಕೆ ಕ್ಷೇತ್ರದಲ್ಲಿ ಅತ್ಯಂತ ಅನುಭವವುಳ್ಳ ಭಾರ್ಗವ ಅವರು, “ಸರ್ಕಾರ ವ್ಯಾಪಾರ ನಡೆಸಲೇಬಾರದು. ಸರ್ಕಾರ ನಡೆಸುತ್ತಿರುವ ಯಾವುದೇ ಕಂಪನಿಯೂ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದು ವಾಸ್ತವ. ಅಲ್ಲಿ ಉತ್ಪಾದಕತೆ ಇಲ್ಲ, ಲಾಭ ಬರುವುದಿಲ್ಲ, ಸಂಪನ್ಮೂಲಗಳೂ ಸಹ ಸೃಷ್ಟಿಯಾಗುವುದಿಲ್ಲ. ಅವು ಬೆಳೆಯುವುದಿಲ್ಲ. ಸದಾ ಕಾಲ ಸಂಸ್ಥೆಯ ಬೆಳವಣಿಗಾಗಿ ಸರ್ಕಾರದ ಬೆಂಬಲವನ್ನು ಎದುರು ನೋಡುತ್ತಿರುತ್ತವೆ,” ಎಂದಿದ್ದಾರೆ.

“ಈಗ ಸಾಕಷ್ಟು ಸಾರ್ವಜನಿಕ ವಲಯದ ಸಂಸ್ಥೆಗಳು ಇಲ್ಲ. ಆದರೂ ಸಹ ಆಂತರಿಕ ಸಂಪನ್ಮೂಲಗಳಿಂದ ಬೆಳೆದಂತಹ ಸಾರ್ವಜನಿಕ ವಲಯದ ಕಂಪನಿಗಳು, ಬಹುಪಾಲು ಬಂಡವಾಳ ಹೂಡಿಕೆಗೆ ಸರ್ಕಾರದಿಂದಲೇ ಹಣವನ್ನು ಕೋರುತ್ತದೆ. ತೆರಿಗೆಯಿಂದ ನೀವು ಕೈಗಾರಿಕಾ ಬೆಳವಣಿಗೆಯನ್ನು ನಿರೀಕ್ಷಿಸಲಾಗುವುದಿಲ್ಲ. ಕೈಗಾರಿಕಾ ಬೆಳವಣಿಗೆ ಆಂತರಿಕ ಸಂಪನ್ಮೂಲ ಸೃಷ್ಟಿಯಿಂದ ಆಗಬೇಕು. ಒಂದು ಕಂಪನಿ ಸಂಪತ್ತನ್ನು ಸೃಷ್ಟಿಸಬೇಕು, ಸಂಪತ್ತನ್ನು ನಷ್ಟಪಡಿಸಬಾರದು. ಸಾರ್ವಜನಿಕ ವಲಯದ ಕಂಪನಿಗಳು ಸಂಪತ್ತು ಸೃಷ್ಟಿಸುವ ಕಂಪನಿಗಳಲ್ಲ. ಸಂಪತ್ತು ಸೃಷ್ಟಿಸುವ ಮೂಲಭೂತ ಅಂಶವೇ ಈಡೇರದಿದ್ದರೆ, ನೀವು ನಷ್ಟವನ್ನು ಅನುಭವಿಸುವಂತಹ ವ್ಯವಸ್ಥೆಯನ್ನು ಹೊಂದಿರುವಿರಿ ಎಂದರ್ಥ. ಅಸಮರ್ಥ ಕಾರ್ಯಾಚರಣೆಗಾಗಿ ನೀವು ತೆರಿಗೆದಾರರ ಹಣವನ್ನು ಬಳಸಿಕೊಳ್ಳುತ್ತಿದ್ದರೆ ದೇಶ ನಷ್ಟವನ್ನು ಅನುಭವಿಸುತ್ತದೆ,” ಎಂದು ವಿವರಿಸಿದ್ದಾರೆ.

ಖಾಸಗೀಕರಣಗೊಳಿಸುವ ಮುಂಚಿನ ಮಾರುತಿ ಸಂಸ್ಥೆಯ ಉದಾಹರಣೆಯನ್ನು ನೀಡುತ್ತಾ ಭಾರ್ಗವ ಅವರು, “ಜೊತೆಗೆ, ಸಂವಿಧಾನದಡಿ ರಾಜ್ಯದ ಒಂದು ಸಾಧನದಂತೆ ಸೀಮಿತವಾಗಿರುವ ಕಾರಣದಿಂದಾಗಿ ಸಾರ್ವಜನಿಕ ವಲಯದ ಒಂದು ಸಂಸ್ಥೆ ವಿಕಲಚೇನತವೂ ಹೌದು ಎನ್ನಬಹುದು. ಇದರಿಂದಾಗಿ ಆ ಸಂಸ್ಥೆಯ ವಿರುದ್ಧ ಸಂವಿಧಾನದಡಿ ಇರುವ ಎಲ್ಲಾ ಮೂಲಭೂತ ಹಕ್ಕುಗಳನ್ನೂ ಸಹ ಜಾರಿಗೊಳಿಸುವಂತಿತ್ತು,” ಎಂದಿದ್ದಾರೆ.

“ಆಗ ಹಲವು ಮೌಲ್ಯವಿರದ ಹಲವು ಚಟುವಟಿಕೆಗಳಿದ್ದವು, ಅದರಿಂದಾಗಿ ನಾವು ಮಾಡುತ್ತಿದ್ದ ಕೆಲಸಗಳ ಉತ್ಪಾದನಾ ದರಗಳ ಮೇಲೆ ಹೆಚ್ಚುವರಿ ಹೊರೆ ಉಂಟಾಗುತಿತ್ತು ಹಾಗೂ ನಾವು ಮುಂದುವರೆಯುವುದನ್ನು ತಡೆಯುತಿತ್ತು,” ಎಂದರು.

ಆಗ ಮಾರುತಿ ಉದ್ಯೋಗ್ ಲಿ. ಯಾವ ರೀತಿ ಹಲವು ಸಂಸದೀಯ ಸಮಿತಿಗಳೊಂದಿಗೆ ವ್ಯವಹರಿಸಬೇಕಾಗುತಿತ್ತು, ಜೊತೆಗೆ ಅಧಿಕೃತ ಭಾಷೆಗಳ ಕಾಯ್ದೆಯಿಂದಾಗಿ, ಹಿಂದಿ ಮತ್ತು ಆಂಗ್ಲ ಟೈಪ್‌ ರೈಟರ್‌ ಗಳಲ್ಲಿ ಎರಡೂ ಭಾಷೆಗಳಲ್ಲಿ ಜನರು ಟೈಪ್ ಮಾಡುವುದನ್ನು ಕಲಿಯಬೇಕಾಗುತಿತ್ತು, ಎಂದು ವಿವರಿಸಿದರು.

ಸುದ್ದಿ ಮೂಲ: ಇಟಿ ನೌ

Key words: Public -sector -organizations – inefficient-R.C. Bhargava.