ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಬಿಬಿಎಂಪಿ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ.

ಬೆಂಗಳೂರು,ನವೆಂಬರ್,15,2021(www.justkannada.in): ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.

“ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಕೇಂದ್ರ ಕಾರ್ಮಿಕ ಸಂಘಟನೆಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಯಿಂದ  ಬಿಬಿಎಂಪಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಆಶಾ ಕಾರ್ಯಕರ್ತೆಯರು ಕಳೆದ ಒಂದೂವರೆ ವರ್ಷದಿಂದ ಕೊರೋನಾ ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಗಟ್ಟುವಲ್ಲಿ ತಮ್ಮ ಜೀವದ ಹಂಗು ತೊರೆದು, ಕೊರೋನಾ ವಾರಿಯರ್ಸ್ ಆಗಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ. ಹಾಗೆಯೇ ಜನರಿಗೆ ಲಸಿಕೆ ಹಾಕಿಸುವಲ್ಲಿ, ಲಸಿಕೆ ಸುತ್ತುವರೆದ ವಿವಿಧ ರೀತಿಯ ಕೆಲಸಗಳನ್ನು ಹಗಲಿರುಳು ಮಾಡುತ್ತಿರುವುದನ್ನು ಗಮನಿಸುತ್ತಿರುವಿರಿ. ಈ ಸಂದರ್ಭದಲ್ಲಿ ಕೋವಿಡ್ ಕೆಲಸಗಳ ಜೊತೆಗೆ ಹಲವಾರು ಸಮೀಕ್ಷೆಗಳು, ಇವರ ಮೂಲ ಕೆಲಸಗಳಾದ ಸುಗಮ ಹೆರಿಗೆ, ಸ್ವಸ್ಥ ಮಗುವಿನ ಜನನ, ತಾಯಿ-ಶಿಶು ಆರೈಕೆಗಳ ಕುರಿತ ಸೇವೆಗಳು, ಗ್ರಾಮ ನೈರ್ಮಲ್ಯ ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆಗಳನ್ನೂ ಸಹ ಮಾಡಬೇಕಾಗಿದೆ. ಆಶಾ ಕಾರ್ಯಕರ್ತೆ ದಿನಕ್ಕೆ ೨ ಗಂಟೆ ಕೆಲಸ ಮಾಡಿದರಷ್ಟೇ ಸಾಕು ಎಂದು ಹೇಳಿ ಪ್ರಾರಂಭ ಮಾಡಿದ ಈಕೆಯ ಕೆಲಸವಿಂದು ದಿನವಿಡೀ ಮಾಡುವಂತಾಗಿದೆ ಹೀಗಾಗಿ ಈ ಕೆಳಕಂಡ ಸಮಸ್ಯೆಗಳನ್ನ ಪರಿಹರಿಸುವಂತೆ ಆಶಾಕಾರ್ಯಕರ್ತೆಯರು ಆಗ್ರಹಿಸಿದರು.

ಪ್ರತೀ ತಿಂಗಳು ನಿರ್ದಿಷ್ಟ ದಿನಾಂಕದೊಳಗೆ ರಾಜ್ಯ ಹಾಗೂ ಕೇಂದ್ರದ ಪ್ರೋತ್ಸಾಹಧನ ಆಶಾಕಾರ್ಯಕರ್ತೆಯರಿಗೆ ದೊರೆಯುವಂತೆ ಮಾಡಿ. ಆಶಾಗೆ ನಿಗದಿಪಡಿಸಿದ ಕ್ಷೇತ್ರದಲ್ಲಿ ಮಾತ್ರ ಆಕೆ ಕೆಲಸ ಮಾಡಬೇಕು. ಬೇರೆ ಪ್ರದೇಶಗಳಿಗೆ ನಿಯೋಜಿಸಬಾರದು ಎನ್ನುವ ಆದೇಶ ಪಾಲನೆ ಮಾಡಿ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಅವರಿಗೆ ನಿಗದಿಪಡಿಸಿರುವ ಹೆಚ್ಚಿನ ಜನ ಸಂಖ್ಯೆಗೆ ಹಾಗೂ ಬೆಂಗಳೂರಂತಹ ಮಹಾನಗರದ ಜೀವನ ಮಟ್ಟಕ್ಕೆ ಅನುಗುಣವಾಗಿ ಅವರ ಮಾಸಿಕ ಗೌರವಧನ ರೂ. 5000/- ಹೆಚ್ಚಳ ಮಾಡಿ ಎಂದು ಒತ್ತಾಯಿಸಿದ್ದಾರೆ.

ಇಲಾಖೆಯ ಆದೇಶಗಳಂತೆ ಎನ್‌ಸಿಡಿ ಸರ್ವೆ, ಕ್ವಾರಂಟೈನ್ ಅಪ್ ಮೂಲಕ ಕೆಲಸ, ಈ-ಸಮೀಕ್ಷೆ ಕೆಲಸಗಳನ್ನು ಆಶಾಗಳಿಂದ ಒತ್ತಾಯ ಪೂರ್ವಕವಾಗಿ ಮಾಡಿಸುತ್ತಿರುವುದನ್ನು ಕೈಬಿಡಿ. ಇಲಾಖೆಯ ಸುತ್ತೋಲೆಗಳಂತೆ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಕೈಮ್ ರಿಪೋರ್ಟ್ ಮತ್ತು ರಿಲೀಸ್ ಕಾಪಿಗಳನ್ನು ಕಡ್ಡಾಯವಾಗಿ ನೀಡಿ. ಆರ್.ಸಿ.ಹೆಚ್ ಪೋರ್ಟಲ್‌ನಲ್ಲಿ ಎ.ಎನ್.ಸಿ. ಹಾಗೂ ಪಿ.ಎನ್.ಸಿ ಇನ್ನಿತರ ಹಲವು ಆಶಾ ಕೆಲಸಗಳು ಡಾಟಾ ಎಂಟ್ರಿ ಆಗುತ್ತಿಲ್ಲ ಇದರಿಂದಾಗಿ ಆಶಾಕಾರ್ಯಕರ್ತೆಯರಿಗೆ ಕೆಲಸ ಮಾಡಿದಷ್ಟು ಪ್ರೋತ್ಸಾಹ ಧನ ಸಿಗುತ್ತಿಲ್ಲ.

ಆಶಾ ಕಾರ್ಯಕರ್ತೆಯರ ಕಾರ್ಯ ಚಟುವಟಿಕೆಗಳು ಅವರ ಜನ ಸಂಖ್ಯೆ (2,500) ವ್ಯಾಪ್ತಿಯನ್ನು ಮೀರದಂತೆ ಕ್ರಮ ವಹಿಸಿ, ಕಫ ಪರೀಕ್ಷೆ ಸ್ಯಾಂಪಲ್ ತರಲು ಎಲ್ಲಾ ಕಡೆ ಆಶಾಗಳಿಗೆ ಒತ್ತಾಯಿಸಲಾಗುತ್ತಿದೆ ಸುತ್ತೋಲೆಯಲ್ಲಿರುವಂತೆ ಆಶಾಗಳದ್ದಲ್ಲದ ಈ ಕೆಲಸವನ್ನು ಅವರಿಂದ ಮಾಡಿಸದಂತೆ ಸೂಕ್ತ ಕ್ರಮ ಕೈಗೊಳ್ಳಿ. ಮೂರು ತಿಂಗಳಿಗೊಮ್ಮೆ ಆಶಾ ಕಾರ್ಯಕರ್ತೆಯರ ಕುಂದುಕೊರತೆ ನಿವಾರಣಾ ಸಭೆಯನ್ನು ಸಂಘಟಿಸುವುದರ ಬಗ್ಗೆ ಆದೇಶವಿದ್ದು ಅದರ ಬಗ್ಗೆ ಈ ಕೂಡಲೇ ಕ್ರಮ ಕೈಗೊಳ್ಳಿ. ಕೋವಿಡ್-೧೯ ನಿಯಂತ್ರಣ ಚಟುವಟಿಕೆಗಳಲ್ಲಿ ಡಾಟಾ ತುಂಬಿಸುವುದು, ಲಸಿಕಾ ಕೇಂದ್ರದಲ್ಲಿ ವಿವಿಧ ಕೆಲಸಗಳನ್ನು ಮಾಡಿಸುವುದು, ಸ್ವಾಬ್ ತೆಗೆಯುವ ಕೇಂದ್ರದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಆಶಾಗಳನ್ನು ಭಾಗಿ ಮಾಡಿಕೊಳ್ಳುತ್ತಿರುವುದನ್ನು ನಿಲ್ಲಿಸಿ. ಅಗತ್ಯವಿರುವಷ್ಟು ಮಾಸ್ಕ್, ಸ್ಯಾನಿಟೈಸರ್, ಗೌಸ್, ಫೇಸ್ ಶೀಲ್ಡ್ ಗಳನ್ನು ನಿಯಮಿತವಾಗಿ ನೀಡಿ ಎಂದು ಪ್ರತಿಭಟನಾನಿರತ ಆಶಾಕಾರ್ಯಕರ್ತೆಯರು ಆಗ್ರಹಿಸಿದರು.

Key words: Protest- Asha activists- BBMP- various -problems.