ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಖಾಸಗಿ ಆಸ್ಪತ್ರೆಗಳಿಗೆ  ರಾಜ್ಯ ಸರ್ಕಾರದಿಂದ ಲಕ್ಷಾಂತರ ರೂ. ಬಾಕಿ..!

ಬೆಂಗಳೂರು, ಜುಲೈ,8, 2021 (www.justkannada.in): ಕೋವಿಡ್-19 ಸೋಂಕಿನ ಎರಡನೆ ಅಲೆ ಕಡಿಮೆಯಾಗುತ್ತಿರಬಹುದು. ಆದರೆ ರಾಜ್ಯ ಸರ್ಕಾರ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದಂತಹ ಅನೇಕ ಖಾಸಗಿ ಆಸ್ಪತ್ರೆಗಳಿಗೆ ಇನ್ನೂ ಲಕ್ಷಾಂತರ ರೂಪಾಯಿಗಳ ಪಾವತಿಯನ್ನು ಬಾಕಿ ಉಳಿಸಿಕೊಂಡಿದೆ.jk

ಅನೇಕ ಖಾಸಗಿ ಆಸ್ಪತ್ರೆಗಳು ಈ ಸಂಬಂಧ ಸರ್ಕಾರದ ವಿರುದ್ಧ ದೂರಿದ್ದು, ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಕಾರ್ಯಕ್ರಮದ ಅನುಷ್ಠಾನ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ಅಡಿ ಪ್ರತ್ಯೇಕ ಅಂಗವಾಗಿ ಸ್ಥಾಪಿತವಾಗಿರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್  ನಡಿ ಕೋವಿಡ್ ರೋಗಿಗಳಿಗೆ ಒದಗಿಸಿರುವ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಬಾಕಿ ಬರಬೇಕಿದೆ ಎಂದು ತಿಳಿಸಿವೆ.

ವಾಸ್ತವದಲ್ಲಿ ಕಳೆದ ವರ್ಷ, ಬೆಂಗಳೂರು ನಗರದಲ್ಲಿ ಸರ್ಕಾರಿ ಕೋಟಾದಡಿ ಆಸ್ಪತ್ರೆಗೆ ದಾಖಲಾದ ಒಟ್ಟು ೨.೬೬ ಕೋವಿಡ್-೧೯ ರೋಗಿಗಳ ಪೈಕಿ ಕೇವಲ ೭೮,೬೫೮ ರೋಗಿಗಳ ಚಿಕಿತ್ಸಾ ಬಿಲ್ಲುಗಳನ್ನು ಮಾತ್ರ ಇತ್ಯರ್ಥಪಡಿಸಲಾಗಿದೆ. ಇದರ ಮೊತ್ತ ರೂ.೩೧೦.೯೯ ಕೋಟಿಗಳು. ಅಂದರೆ ಎಸ್‌ಎಎಸ್‌ಟಿ ಕೋಟಾದಡಿ ಚಿಕಿತ್ಸೆ ನೀಡಿರುವ ಒಟ್ಟು ರೋಗಿಗಳ ಪೈಕಿ ಇದು ಕೇವಲ ೨೯.೫೭% ಪ್ರಮಾಣವಾಗಿದೆ. ರಾಜ್ಯದಾದ್ಯಂತ ೧೩,೮೪೭ ಕೋವಿಡ್-೧೯ ರೋಗಿಗಳ ಒಟ್ಟು ರೂ.೪೩.೭೯ ಕೋಟಿ ಇನ್ನೂ ಪಾವತಿಯಾಗಬೇಕಿದೆ.

ಎಸ್‌ಎಎಸ್‌ ಟಿ ಕಾರ್ಯನಿರ್ವಾಹಕ ನಿರ್ದೇಶಕ ಎನ್.ಟಿ. ಆಬ್ರೂ ಅವರು ತಮ್ಮ ಒಂದು ಇ-ಮೇಲ್‌ನಲ್ಲಿ ರಾಜ್ಯದಾದ್ಯಂತ ೧,೪೪,೯೪೭ ಕೋವಿಡ್ ಪ್ರಕರಣಗಳ ಒಟ್ಟು ರೂ.೪೬೬.೫೫ ಕೋಟಿ ಪಾವತಿಯಾಗಿದೆ ಎಂದು ನಮೂದಿಸಿದ್ದಾರೆ.

ಆದರೆ ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಂಗಳ ಸಂಘದ (ಪಿಹೆಚ್‌ಎಎನ್‌ಎ) ಅಧ್ಯಕ್ಷರಾದ ಡಾ. ಪ್ರಸನ್ನ ಅವರ ಪ್ರಕಾರ, ಖಾಸಗಿ ವಲಯದಲ್ಲಿ ಕೋವಿಡ್-೧೯ ಮೊದಲನೆ ಅಲೆಯಲ್ಲಿ ಸರ್ಕಾರಿ ಕೋಟಾದಡಿ ಒಟ್ಟು ೧.೩ ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಎರಡನೆಯ ಅಲೆ ಸಮಯದಲ್ಲಿ ಒಟ್ಟು ೨.೫ ಲಕ್ಷ ರೋಗಿಗಳು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಎಸ್‌ಎಎಸ್‌ಟಿ ದತ್ತಾಂಶದ ಪ್ರಕಾರ ಅವರು ಪಾವತಿಸಿರುವ ಬಿಲ್ಲುಗಳ ಮೊತ್ತದಲ್ಲಿ ಸರ್ಕಾರಿ ಆಸ್ಪತ್ರೆಗಳ ರೋಗಿಗಳೂ ಒಳಗೊಂಡಿದ್ದಾರೆ. ಆದರೆ ಮೊದಲ ಅಲೆಯ ಬಿಲ್ಲುಗಳ ಪೈಕಿ ಇನ್ನೂ ೫೦%ನಷ್ಟೂ ಇತ್ಯರ್ಥವಾಗಿಲ್ಲ,” ಎನ್ನುತ್ತಾರೆ ಡಾ. ಪ್ರಸನ್ನ.

ಉದಾಹರಣೆಗೆ ರಾಜಾಜಿನಗರದ ಪ್ರಿಸ್ಟೈನ್ ಆಸ್ಪತ್ರೆ ಕೋವಿಡ್ ಮೊದಲನೆ ಅಲೆಯಲ್ಲಿ ರೂ.೧೯ ಲಕ್ಷ ಮೊತ್ತದ ಬಿಲ್ಲುಗಳನ್ನು ನೀಡಿದ್ದು, ಅದು ಇನ್ನೂ ಬಾಕಿ ಇದೆ. ಎರಡನೆ ಅಲೆಯ ಒಟ್ಟು ಮೊತ್ತದ ಪೈಕಿ ಕೇವಲ ರೂ.೩ ಲಕ್ಷ ಪಾವತಿಯಾಗಿದೆ. ಒಬ್ಬ ಕೋವಿಡ್-೧೯ ರೋಗಿಯು ಆಸ್ಪತ್ರೆಯಲ್ಲಿ ಸರಾಸರಿ ಏಳು ದಿನಗಳ ಕಾಲ ಇರಬೇಕಾಗುತ್ತದೆ. ಇದಕ್ಕೆ ಸರ್ಕಾರದ ಮಿತಿಯ ಹೊರತಾಗಿಯೂ ಸಹ ರೂ.೩೫,೦೦೦ ವೆಚ್ಚವಾಗುತ್ತದೆ.

“ಮೊದಲ ಅಲೆಯಲ್ಲಿ ಖಾಸಗಿ ಆಸ್ಪತ್ರೆಗಳು ೭೫,೮೦೦ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದೆ. ಈ ಪೈಕಿ ೬೦,೦೦೦ ರೋಗಿಗಳು ಸರ್ಕಾರಿ ಕೋಟಾದಡಿ ದಾಖಲಾದವರಾಗಿದ್ದಾರೆ. ಎರಡನೆ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಇನ್ನೂ ಅಧಿಕ. ನಾವು ಮೊದಲ ಅಲೆಯಲ್ಲಿ ಚಿಕಿತ್ಸೆ ನೀಡಿದ ಬಿಲ್ಲುಗಳ ಪಾವತಿ, ನಮಗೆ ಎರಡನೇ ಅಲೆ ಆರಂಭವಾದ ನಂತರ ಬರಲಾರಂಭಿಸಿತು. ಒಟ್ಟಾರೆಯಾಗಿ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದಿಂದ ೫% ರಿಂದ ೧೦%ರಷ್ಟು ಮಾತ್ರ ಹಣ ಬಂದಿದೆ,” ಎನ್ನುತ್ತಾರೆ.

“ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರ ಪ್ರಕಾರ, ಒಂದು ದಿನಕ್ಕೆ ಕೇವಲ ೨೦೦ ಬಿಲ್ಲುಗಳನ್ನು ಮಾತ್ರ ಇತ್ಯರ್ಥಗೊಳಿಸಬಹುದಂತೆ,” ಎನ್ನುತ್ತಾರೆ ಡಾ. ಪ್ರಸನ್ನ.

ಎಸ್‌ಎಎಸ್‌ಟಿ  ಸಾಫ್ಟ್ ವೇರ್ ನಲ್ಲಿ, ಹೆಚ್‌ಆರ್ ಅನುಮತಿಸಿದರೂ ಸಹ, ಒಂದು ದಿನದಲ್ಲಿ ೨೦೦ಕ್ಕಿಂತ ಹೆಚ್ಚಿನ ಅಂದರೆ ೨೦೧ನೇ ಬಿಲ್ ಬ್ಲಾಕ್ ಆಗುತ್ತದಂತೆ. ಅಂದರೆ ಇದರರ್ಥ ಒಂದು ತಿಂಗಳಲ್ಲಿ ಕೇವಲ ೬,೦೦೦ ಪಾವತಿಗಳನ್ನು ಮಾತ್ರ ಇತ್ಯರ್ಥಪಡಿಸಬಹುದು. ನಾವು ಪ್ರತಿ ದಿನ ೩,೦೦೦ಕ್ಕೂ ಹೆಚ್ಚಿನ ಪ್ರಕರಣಗಳನ್ನು ನಿರ್ವಹಿಸುತ್ತಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ರೀತಿ ತೊಂದರೆ ಎದುರಾಗುತ್ತಿದೆ ಎನ್ನುತ್ತಾರೆ ಡಾ. ಪ್ರಸನ್ನ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Private hospitals -treatment -covid-19 -patients – received – state government- Pending.