ಪೆರಿಫೆರಲ್ ರಿಂಗ್ ರಸ್ತೆ ಕಾಮಗಾರಿ ಕ್ಷಿಪ್ರ ಅನುಷ್ಠಾನಕ್ಕೆ ಆದ್ಯತೆ ನೀಡಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಜೂನ್ 08: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ ಜರುಗಿತು.

1. ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯ ಅನುಷ್ಠಾನಕ್ಕೆ ಟರ್ಕಿ ಇಸ್ರೇಲ್ ಹಾಗೂ ಸ್ವಿಸ್ ದೇಶಗಳ ಕಂಪನಿಗಳು ಆಸಕ್ತಿ ತೋರಿದ್ದು, ಶೀಘ್ರವಾಗಿ ಟೆಂಡರ್‍ ಅಂತಿಮಗೊಳಿಸಿ ಸಚಿವ ಸಂಪುಟದ ಅನುಮೋದನೆ ಪಡೆದು ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಮುಖ್ಯಮಂತ್ರಿಗಳು ಸೂಚಿಸಿದರು.

2. ನಾಡಪ್ರಭು ಕೆಂಪೇಗೌಡ ಬಡಾವಣೆ ಹಾಗೂ ಡಾ: ಕೆ.ಶಿವರಾಮ ಕಾರಂತ ಬಡಾವಣೆಗಳಲ್ಲಿ ಮೂಲ ಸೌಲಭ್ಯಗಳಾದ ಒಳಚರಂಡಿ, ವಿದ್ಯುತ್ ಸಂಪರ್ಕ ರಸ್ತೆ ಮುಂತಾದ ಅಭಿವೃದ್ಧಿ ಕಾರ್ಯಕ್ಕೆ ವೇಗ ನೀಡುವಂತೆ ಸೂಚಿಸಿದರು.

3. ಖಾಲಿ ನಿವೇಶನಗಳು, ಪ್ಲಾಟ್‍ಗಳು ಹಾಗೂ ಮೂಲೆ ನಿವೇಶನಗಳ ಹರಾಜು ಪ್ರಕ್ರಿಯೆಯನ್ನು ಚುರುಕುಗೊಳಿಸಿ, ಪ್ರಾಧಿಕಾರದ ಆದಾಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಬಿ.ಡಿ.ಎ ಕಳೆದ ಸಾಲಿನಲ್ಲಿ 2066.72 ಕೊಟಿ ರೂ.ಗಳ ಆದಾಯ ಗಳಿಸಿದ್ದು, 1332.44 ಕೋಟಿಗಳು ವೆಚ್ಚವಾಗಿದೆ. ಈ ಬಾರಿ 9530 ಕೋಟಿ ರೂ.ಗಳ ಆದಾಯವನ್ನು ನಿರೀಕ್ಷಿಸಲಾಗಿದೆ ಎಂದರು.

4. ಬಿ.ಡಿ.ಎ ಗೆ ಸೇರಿದ ವಾಣಿಜ್ಯ ಸಂಕೀರ್ಣಗಳನ್ನು ಪಿ.ಪಿ.ಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕುರಿತು ಪರಿಶೀಲಿಸಬೇಕೆಂದರು.

5. ಮಳೆಗಾಲ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಹೂಳೆತ್ತಿ ವಿಲೇವಾರಿ ಮಾಡುವ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಚಿಕ್ಕಬಾಣಾವರ, ಕೊಮ್ಮ ಘಟ್ಟ ಹಾಗೂ ರಾಮಸಂದ್ರ ಕೆರೆಗಳ ಅಭಿವೃದ್ಧಿಗೂ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

6. ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ಲ್ಯಾಂಡ್ ಆಡಿಟ್ ಸಮೀಕ್ಷೆಯ ವರದಿಯಂತೆ ಪ್ರಾಧಿಕಾರಕ್ಕೆ ಲಭ್ಯವಿರುವ ಒಟ್ಟು ಆಸ್ತಿಯ ಕುರಿತ ಮಾಹಿತಿಯನ್ನು ಒದಗಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

7. ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ 6431 ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವುದರಿಂದ ಕಾನೂನು ವಿಭಾಗವನ್ನು ಬಲಪಡಿಸಲು ಉತ್ತಮ ವಕೀಲರನ್ನು ನೇಮಿಸಿಕೊಳ್ಳುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.

8. ಪ್ರಾಧಿಕಾರವು ಪಾರದರ್ಶಕವಾಗಿ ಕಾರ್ಯನಿರ್ವಹಿಸಲು ಕೈಗೆತ್ತಿಕೊಳ್ಳಲಾಗಿರುವ ಗಣಕೀಕರಣ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ಸೂಚಿಸಿದರು.

ಸಭೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ: ಇ.ವಿ.ರಮಣರೆಡ್ಡಿ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಆರ್ಥಿ ಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್, ಬಿ.ಡಿ.ಎ. ಆಯುಕ್ತ ರಾಜೇಶ್ ಗೌಡ ಉಪಸ್ಥಿತರಿದ್ದರು.