ಪ್ರಧಾನಿ ಮೋದಿ ಅವರ ಬೆಂಗಳೂರಿನ ಒಂದು ದಿನದ ಭೇಟಿಗೆ ಖರ್ಚಾಗಿರುವುದು ಬರೋಬ್ಬರಿ ರೂ.23 ಕೋಟಿ..!

Promotion

ಬೆಂಗಳೂರು, ಜೂನ್ 22, 2022 (www.justkannada.in): ಯಾವುದಾದರೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೂ ಮುಂಚೆ ಪ್ರತಿ ಬಾರಿ ಹಣದ ಕೊರತೆಯ ಕುರಿತು ಕೊರಗುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಒಂದು ದಿನದ ಭೇಟಿಗೆ ಮುಂಚೆ ಬೆಂಗಳೂರಿನ ರಸ್ತೆಗಳನ್ನು ದುರಸ್ತಿಗೊಳಿಸಲು ಮಾಡಿರುವ ಒಟ್ಟು ವೆಚ್ಚ ಬರೋಬ್ಬರಿ ರೂ.23 ಕೋಟಿ.

ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನ ಯಲಹಂಕ ಏರ್‌ ಬೇಸ್‌ ಗೆ ವಿಮಾನದಲ್ಲಿ ಆಗಮಿಸಿ, ಐಐಎಸ್‌ ಸಿಗೆ ಭೇಟಿ ನೀಡಿದರು. ನಂತರ ಅಲ್ಲಿಂದ ಕೆಲವು ಯೋಜನೆಗಳನ್ನು ಉದ್ಘಾಟಿಸಿಲು ಮತ್ತು ಸಾರ್ವಜನಿಕ ರ್ಯಾಲಿ ಒಂದರಲ್ಲಿ ಭಾಗವಹಿಸಲು ಕೊಮ್ಮಘಟ್ಟಕ್ಕೆ ತೆರಳಿದರು. ಅಲ್ಲಿಂದ ನೇರವಾಗಿ ಮೈಸೂರಿಗೆ ತೆರಳಿದರು.

ಆದರೆ ಪ್ರಧಾನಿಯ ಭೇಟಿಗೆಂದೇ ಬೆಂಗಳೂರಿಗೆ ಹೊಸ ನೋಟವನ್ನು ನೀಡಲು ಬಿಬಿಎಂಪಿ, ಪ್ರಧಾನಿ ಮೋದಿ ಅವರು ಪ್ರಯಾಣಿಸುವ 14 ಕಿ.ಮೀ. ಉದ್ದದ ರಸ್ತೆಯನ್ನು ದುರಸ್ತಿಪಡಿಸಲು ತನ್ನ ಸಿಬ್ಬಂದಿಗೆ ಕಳೆದ ಒಂದು ವಾರ ಹಗಲಿರುಳು ಕೆಲಸ ನಿರ್ವಹಿಸಬೇಕೆಂದು ಸೂಚನೆ ನೀಡಿತ್ತು. ಬಿಬಿಎಂಪಿಯ ಪ್ರಕಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ೨.೪ ಕಿ.ಮೀ.ಗೆ ರೂ.೨.೦೬ ಕೋಟಿ, ತುಮಕೂರು ರಸ್ತೆಯ ೦.೯ ಕಿ.ಮೀ. ದುರಸ್ತಿಗೆ ರೂ.೧.೫೫ ಕೋಟಿ, ಬೆಂಗಳೂರು ವಿಶ್ವವಿದ್ಯಾಲಯದ ೩.೦೬ ಕಿ.ಮೀ. ರಸ್ತೆ ದುರಸ್ತಿಗೆ ರೂ.೬.೦೫ ಕೋಟಿ ಮತ್ತು ಮೈಸೂರು ರಸ್ತೆಯ ೦.೧೫ ಕಿ.ಮೀ. ದುರಸ್ತಿಗೆ ರೂ.೩೫ ಲಕ್ಷ ಹಾಗೂ ಕೊಮ್ಮಘಟ್ಟ ರಸ್ತೆಯ ಸುಮಾರು ೭ ಕಿ.ಮೀ. ಉದ್ದದ ರಸ್ತೆಯ ಉನ್ನತೀಕರಣಕ್ಕೆ ರೂ.೧೧.೫ ಕೋಟಿಗಳನ್ನು ವೆಚ್ಚ ಮಾಡಲಾಗಿದೆ.

ಬಿಬಿಎಂಪಿಯ ವಿಶೇಷ ಆಯುಕ್ತ ರವೀಂದ್ರ ಪಿ.ಎನ್. ಅವರು ಈ ಸಂಬಂಧ ಮಾತನಾಡಿ, “ಪ್ರಧಾನ ಮಂತ್ರಿಗಳ ಭೇಟಿಯ ಸಮಯದಲ್ಲಿ ರಸ್ತೆಗಳನ್ನು ಸರಿಪಡಿಸುವುದು ನಮ್ಮ ಕರ್ತವ್ಯ. ರಸ್ತೆಗಳ ದುರಸ್ತಿಗೆ ಅಗತ್ಯವಿದ್ದಂತಹ ಹಣವನ್ನು ಬಿಬಿಎಂಪಿ ಮುಖ್ಯ ಆಯುಕ್ತರ ವಿವೇಚನಾತ್ಮಕ ಕೋಟಾದಡಿ ಪಡೆಯಲಾಯಿತು. ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಂದಲೂ ಮುಂಚಿತ ಅನುಮತಿಯನ್ನು ಪಡೆದುಕೊಳ್ಳಲಾಯಿತು. ಉನ್ನತೀಕರಣ ಯೋಜನೆಯ ಪ್ರಕಾರ, ಸರ್ವೀಸ್ ರಸ್ತೆಗಳೊಂದಿಗೆ (ಲಭ್ಯವಿರುವ ಕಡೆ) ರಸ್ತೆಗಳನ್ನು ದುರಸ್ತಿಪಡಿಸಲಾಯಿತು, ಜೊತೆಗೆ ಮೀಡಿಯನ್‌ ಗಳನ್ನು ಸ್ವಚ್ಛಗೊಳಿಸಿ ಸುಂದರಗೊಳಿಸಲಾಯಿತು, ರಸ್ತೆಗಳ ಇಕ್ಕೆಲಗಳಲ್ಲಿರುವ ಕಲ್ಲುಗಳಿಗೆ ಬಣ್ಣ ಬಳಿಯುವುದು ಹಾಗೂ ಬೀದಿ ದೀಪಗಳನ್ನೂ ಸಹ ಸರಿಪಡಿಸಲಾಯಿತು. ಈ ಯೋಜನೆಯನ್ನು ಪ್ರಧಾನಿಯವರ ಭೇಟಿಗೆ ಒಂದು ವಾರದ ಮುಂಚೆ ಕೈಗೆತ್ತಿಕೊಳ್ಳಲಾಯಿತು,” ಎಂದು ವಿವರಿಸಿದರು.

ಆದರೆ ಇಡೀ ನಗರಕ್ಕೆ ಯಾವಾಗಲೂ ಇಂತಹ ಆದ್ಯತೆ ನೀಡಬೇಕೆನ್ನುವುದು ಬೆಂಗಳೂರು ನಗರದ ನಾಗರಿಕರ ಅಪೇಕ್ಷೆಯಾಗಿದೆ. “ಕಳೆದ ಕೆಲವು ವಾರಗಳಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಒಳಗೊಂಡಂತೆ ವಿವಿಐಪಿಗಳು ಭೇಟಿ ನೀಡುವ ಹಲವು ಪ್ರದೇಶಗಳು ಹಾಗೂ ರಸ್ತೆಗಳು ಯಾವ ರೀತಿ ಅಭಿವೃದ್ಧಿಗೊಂಡವು ಎನ್ನುವುದನ್ನು ನಾವು ಗಮನಿಸಿದೆವು. ಇದರಿಂದ ತಿಳಿದು ಬಂದಿರುವುದೇನೆಂದರೆ ಬಿಬಿಎಂಪಿ ಮನಸ್ಸು ಮಾಡಿದರೆ ರಸ್ತೆಗಳನ್ನು ಬಹಳ ಕಡಿಮೆ ಅವಧಿಯೊಳಗೆ ಸರಿಪಡಿಸಬಹುದು. ಆದರೆ ಇದೇ ರೀತಿ, ಇದೇ ಗತಿಯಲ್ಲಿ, ಹಾನಿಗೊಂಡಿರುವ ಅನೇಕ ರಸ್ತೆಗಳನ್ನು ಬಿಬಿಎಂಪಿ ಇನ್ನೂ ಏಕೆ ಸರಿಪಡಿಸಿಲ್ಲ ಎಂದು ತಿಳಿದುಕೊಳ್ಳಲು ಬಯಸುತ್ತೇವೆ,” ಎನ್ನುವುದು ಟೆಕಿ ಕಿಶೋರ್ ನಂದಾ ಅವರ ಪ್ರಶ್ನೆಯಾಗಿದೆ.

ಕಾಲೇಜು ವಿದ್ಯಾರ್ಥಿ ಸುಕುಮಾರ್ ಆರ್ ಅವರು, ಬಿಬಿಎಂಪಿ ಬೆಂಗಳೂರಿನ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿತ್ತು. ಕೇವಲ ವಿವಿಐಪಿಗಳು ಮಾತ್ರ ಬಿಬಿಎಂಪಿ ಕಾರ್ಯನಿರ್ವಹಿಸುವಂತೆ ಮಾಡಬಲ್ಲರು ಎನಿಸುತ್ತದೆ. ಈವರೆಗೆ ಬಿಬಿಎಂಪಿ ರಸ್ತೆಗುಂಡಿಗಳನ್ನು ಮುಚ್ಚುವುದಕ್ಕೆ ಸಂಬಂಧಿಸಿದಂತೆ ಸ್ವತಃ ನೀಡಿದಂತಹ ಹಲವು ಡೆಡ್‌ಲೈನ್‌ ಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿರುವ ರವೀಂದ್ರ ಅವರು, ಬಿಬಿಎಂಪಿ ಬೆಂಗಳೂರು ನಗರದಾದ್ಯಂತ ಸುಮಾರು ೧೫,೬೭೯ ರಸ್ತೆ ಗುಂಡಿಗಳನ್ನು ಗುರುತಿಸಿದೆ (‘ಫಿಕ್ಸ್ ಮೈ ಸ್ಟ್ರೀಟ್’ ಆ್ಯಪ್‌ ನಲ್ಲಿ ನಮೂದಿಸಿರುವ ಅಧಿಕಾರಿಗಳ ಎಂಟ್ರಿಗಳ ಪ್ರಕಾರ). ಈ ಪೈಕಿ, ೧೪,೨೬೩ ರಸ್ತೆಗುಂಡಿಗಳನ್ನು ಮುಚ್ಚಲಾಗಿವೆ. “ಸತತ ಮಳೆಯಿಂದಾಗಿ ಎಲ್ಲಾ ರಸ್ತೆಗುಂಡಿಗಳನ್ನು ಮುಚ್ಚುವಲ್ಲಿ ಸಾಧ್ಯವಾಗಿಲ್ಲ. ಒಣ ತಾಪಮಾನವಿದಿದ್ದರೆ ಸಮಯಕ್ಕೆ ಸರಿಯಾಗಿ ಎಲ್ಲಾ ರಸ್ತೆಗುಂಡಿಗಳನ್ನೂ ಮುಚ್ಚಬಹುದಾಗಿತ್ತು,” ಎಂದು ಅಭಿಪ್ರಾಯಪಟ್ಟರು. ಆದರೆ ಮಳೆ ಇದ್ದರೂ ಸಹ ಪ್ರಧಾನಿ ಮೋದಿಯವರ ಭೇಟಿ ಸಮಯದಲ್ಲಿ ಹೇಗೆ ರಸ್ತೆಗಳನ್ನು ಸರಿಪಡಿಸುವುದು ಸಾಧ್ಯವಾಯಿತು ಎಂದು ಕೇಳಿದ ಪ್ರಶ್ನೆಗೆ, “ರಸ್ತೆಗುಂಡಿಗಳನ್ನು ಮುಚ್ಚುವುದು ಬಹಳ ಪ್ರಯಾಸದ ಕೆಲಸ, ಆದರೆ ಇಡೀ ರಸ್ತೆಯನ್ನು ಡಾಂಬರೀಕರಣಗೊಳಿಸುವುದು ಸುಲಭ,” ಎಂದು ಉತ್ತರಿಸಿದರು.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Prime Minister –Modi-one day- visit – Bangalore – Rs 23 crore