ಪ್ರಧಾನಿ ಕೂಡ ಭ್ರಷ್ಟಾಚಾರದಲ್ಲಿ ಶಾಮೀಲು: ಜನಪರ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ತನ್ನಿ- ಮಾಜಿ ಸಿಎಂ ಸಿದ‍್ಧರಾಮಯ್ಯ ಕರೆ.

Promotion

ಚಾಮರಾಜನಗರ,ಜನವರಿ,26,2023(www.justkannada.in): ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಎಷ್ಟು ಮಿತಿಮೀರಿದೆ ಎಂದರೆ ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಪ್ರಧಾನಿಗಳಿಗೆ ಪತ್ರ ಬರೆದು 40% ಕಮಿಷನ್‌ ಹಾವಳಿಯಿಂದ ನಮ್ಮನ್ನು ಕಾಪಾಡಿ ಎಂದು ಮನವಿ ಮಾಡಿದ್ದಾರೆ. ಆದರೆ ಪ್ರಧಾನಿಯವರು ಯಾವ ಕ್ರಮವನ್ನು ಕೈಗೊಂಡಿಲ್ಲ. ಕಾರಣ ಅವರು ಕೂಡ ಈ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪಿಸಿದರು.

ಚಾಮರಾಜನಗರದಲ್ಲಿ ಇಂದು ಕಾಂಗ್ರೆಸ್‌ ಪಕ್ಷ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ  ಮಾಜಿ ಸಿಎಂ ಸಿದ್ದರಾಮಯ್ಯ  ಹೇಳಿದ್ದಿಷ್ಟು.

ಇಂದು ಸಂವಿಧಾನ ಜಾರಿಯಾದ ದಿನ, ಬಾಬಾ ಸಾಹೇವ್‌ ಅಂಬೇಡ್ಕರ್‌ ಅವರು ಈ ದೇಶಕ್ಕೆ ಅತ್ಯಂತ ಶ್ರೇಷ್ಠ ಸಂವಿಧಾನ ನೀಡಿದ್ದಾರೆ. 1949 ನವೆಂಬರ್‌ 25ರಂದು ಸಂವಿಧಾನ ಸಭೆಯನ್ನು ಉದ್ದೇಶಿಸಿ ಅಂಬೇಡ್ಕರರು ಮಾಡಿದ ಭಾಷಣ ಐತಿಹಾಸಿಕವಾದುದು. “ಜನವರಿ 26, 1950ರಂದು ಸಂವಿಧಾನ ಜಾರಿಗೆ ಬರುತ್ತದೆ, ನಾವು ಸಂವಿಧಾನದಲ್ಲಿ ರಾಜಕೀಯ ಪ್ರಜಾಪ್ರಭುತ್ವವನ್ನು ಕೊಟ್ಟಿದ್ದೇವೆ, ಒಬ್ಬ ವ್ಯಕ್ತಿ, ಒಂದು ಮತ ಮತ್ತು ಒಂದು ಮೌಲ್ಯ ಇದೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಇದೇ ರೀತಿಯ ಸಮಾನತೆ ಇಲ್ಲ, ಈ ತಾರತಮ್ಯವನ್ನು ಹೋಗಲಾಡಿಸುವುದು ಅಧಿಕಾರಕ್ಕೆ ಬರುವ ಸರ್ಕಾರಗಳ ಕರ್ತವ್ಯ, ಒಂದು ವೇಳೆ ಈ ತಾರತಮ್ಯವನ್ನು ಹೋಗಲಾಡಿಸದೇ ಹೋದರೆ ಶೋಷಣೆಗೆ ಒಳಗಾದ ಜನರೇ ಪ್ರಜಾಪ್ರಭುತ್ವದ ಸೌಧವನ್ನು ದ್ವಂಸ ಮಾಡುತ್ತಾರೆ” ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದ್ದರು. ಹಾಗಾಗಿ ಇಂದು ಸರ್ವರಿಗೂ ಸಮಾನ ಅವಕಾಶಗಳನ್ನು ನೀಡುವ ಸಮಸಮಾಜ ನಿರ್ಮಾಣದ ಅಗತ್ಯವಿದೆ. ಇದೇ ಸಂದರ್ಭದಲ್ಲಿ ನಾಡಿನ ಜನತೆಗೆ 74ನೇ ಗಣರಾಜ್ಯೋತ್ಸವ ಶುಭಾಶಯಗಳನ್ನು ತಿಳಿಸುತ್ತೇನೆ ಎಂದರು.

ಕಾಂಗ್ರೆಸ್‌ ಪಕ್ಷ ಬಾಬಾ ಸಾಹೇಬರ ಸಂವಿಧಾನದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪಕ್ಷ. ಸಮಸಮಾಜ ನಿರ್ಮಾಣ ಮಾಡಬೇಕು ಎಂದು ಸಂವಿಧಾನ ಹೇಳುತ್ತದೆ. ಆದರೆ ಬಿಜೆಪಿ ಈ ಸಮಾನತೆಗೆ ವಿರುದ್ಧವಾದುದ್ದು. ಅಸಮಾನತೆ ಇದ್ದರೆ ಜನರ ಶೋಷಣೆ ಮಾಡಲು ಸಾಧ್ಯವಾಗುತ್ತದೆ ಎಂಬುದು ಅವರ ನಂಬಿಕೆ. ಇದಕ್ಕೆ ಉದಾಹರಣೆ ಎಂದರೆ ನರೇಂದ್ರ ಮೋದಿ ಅವರು ಹೇಳುವ ಸಬ್‌ ಕ ಸಾಥ್‌ ಸಬ್‌ ಕ ವಿಕಾಸ್‌ ನಲ್ಲಿ ಮಹಿಳೆಯರು, ಮಕ್ಕಳು, ದಲಿತರು, ಅಲ್ಪಸಂಖ್ಯಾತರು ಇಲ್ಲದಿರುವುದು ಎಂದು ಕಿಡಿಕಾರಿದರು.

ಬಿಜೆಪಿ ಸರ್ಕಾರದ ಪಾಪದ ಪುರಾಣಕ್ಕೆ ಉತ್ತರ ಕೊಡಿ..

ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ವಿರುದ್ಧ ನಾವು “ಬಿಜೆಪಿ ಸರ್ಕಾರದ ಪಾಪದ ಪುರಾಣ” ಎಂಬ ಆರೋಪ ಪಟ್ಟಿಯನ್ನು ಸಿದ್ಧಪಡಿಸಿದ್ದೇವೆ. ಇದಕ್ಕೆ ಬಿಜೆಪಿಯವರು ಉತ್ತರ ನೀಡಲಿ, ಈ ಕರ್ಮಕಾಂಡಗಳ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ ಬೊಮ್ಮಾಯಿ ಅವರೇ. ಕಾಂಗ್ರೆಸ್‌ ಪಕ್ಷವನ್ನು ಭ್ರಷ್ಟಾಚಾರದ ಗಂಗೋತ್ರಿ ಎನ್ನುವ ಬೊಮ್ಮಾಯಿ ಅವರು ಬಿಜೆಪಿ ಅಧಿಕಾರಕ್ಕೆ ಬಂದು ಮೂರುವರೆ ವರ್ಷವಾದರೂ ಯಾವ ತನಿಖೆ ನಡೆಸಿರಲಿಲ್ಲ, ಈಗ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹೊರಬರುತ್ತಿರುವುದರಿಂದ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ.

ನಮ್ಮ ಸರ್ಕಾರದ ಮೇಲೆ ಬಂದಿದ್ದ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ವಹಿಸಿದ್ದೆ. ಆಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ನಾವು ಅದಕ್ಕೆ ಹೆದರಿರಲಿಲ್ಲ. ಡಿವೈಎಸ್‌ಪಿ ಗಣಪತಿ, ಡಿ.ಕೆ ರವಿ ಅವರ ಸಾವು, ಪರೇಶ್‌ ಮೇಸ್ತಾ ಸಾವು, ಒಂದಂಕಿ ಲಾಟರಿ ಇವುಗಳನ್ನು ಸಿಬಿಐ ತನಿಖೆಗೆ ವಹಿಸಿದ್ದೆ, ಅವುಗಳ ಬಿ ರಿಪೋರ್ಟ್‌ ಬಂದು ಬಿಜೆಪಿ ಆರೋಪಗಳು ಸುಳ್ಳು ಎಂದು ಈಗ ಸಾಬೀತಾಗಿದೆ. ಬಸವರಾಜ ಬೊಮ್ಮಾಯಿ ಅವರಿಗೆ ಧಮ್‌, ತಾಕತ್‌ ಇದ್ದರೆ ಸುಪ್ರೀಂ ಕೋರ್ಟ್‌ ನ ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ಮಾಡಿಸಲಿ. ಇದಕ್ಕೆ ಉತ್ತರ ಕೊಡಲಾಗದೆ ಸುಳ್ಳಿನ ಸಾಮ್ರಾಟ ಸುಧಾಕರ್‌ ಅವರ ಕೈಲಿ ಉತ್ತರ ಕೊಡಿಸುತ್ತಾರೆ. ಈ ಸುಧಾಕರ ಅಲಿಬಾಬಾ ಮತ್ತು 40 ಜನ ಕಳ್ಳರ ತಂಡದ ಸದಸ್ಯ. ತನ್ನನ್ನು ತಾನು ಮಾರಿಕೊಂಡು ನಮ್ಮ ಪಕ್ಷ ಬಿಟ್ಟು ಹೋದ ಆಸಾಮಿ ಆತ ಎಂದು ಸಿದ್ಧರಾಮಯ್ಯ ಲೇವಡಿ ಮಾಡಿದರು.

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಸಿಗದೆ 36 ಮಂದಿ ಸಾವಿಗೀಡಾದಾಗ ಸುಧಾಕರ್‌ ಮತ್ತು ಸುರೇಶ್‌ ಕುಮಾರ್‌ ಅವರು ಬಂದಿದ್ದರು. ಈ ದುರಂತದಲ್ಲಿ ಸತ್ತವರು ಮೂರೇ ಜನ ಎಂದು ಸುಳ್ಳು ಹೇಳಿದ್ರು. ಹೀಗೆ ಹೆಣದ ಮೇಲೆ ರಾಜಕೀಯ ಮಾಡುವ ದುಷ್ಟರು ಅವರು. ನಮ್ಮ ಪಕ್ಷದ ಮುಖಂಡರೆಲ್ಲ ಜಿಲ್ಲಾಸ್ಪತ್ರೆಗೆ ಹೋಗಿ, ವೈದ್ಯರ ಜೊತೆ ಸಭೆ ಮಾಡಿದಾಗ ಆಮ್ಲಜನಕ ಇಲ್ಲದೆ ಸತ್ತವರು 36 ಜನ ಎಂಬುದನ್ನು ಅವರು ಒಪ್ಪಿಕೊಂಡರು. ಡಿ.ಕೆ ಶಿವಕುಮಾರ್‌ ಅವರು ರಾತ್ರಿಯಿಡಿ ನಿದ್ದೆ ಬಿಟ್ಟು ಪರಿಹಾರದ ಹಣ ವಿತರಣೆ ಮಾಡಿದರು. ಆದರೆ ಸರ್ಕಾರ ಈ ವರೆಗೆ ಸತ್ತವರಿಗೆ ಸೂಕ್ತ ಪರಿಹಾರ ನೀಡಿಲ್ಲ. ಕೋರ್ಟ್‌ ಆದೇಶ ಆದಮೇಲೆ ಕೆಲವರಿಗೆ ಮಾತ್ರ ಪರಿಹಾರ ನೀಡಿದ್ದಾರೆ, ಇನ್ನುಳಿದವರಿಗೆ ಕೊಟ್ಟಿಲ್ಲ ಎಂದು ಸಿದ್ಧರಾಮಯ್ಯ ಆರೋಪಿಸಿದರು.

ಪರಿಶಿಷ್ಟ ಜಾತಿ ಮತ್ತು ವರ್ಗದ ಜನರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆಯಾಗಬೇಕು ಎಂದು ಎಸ್‌,ಸಿ,ಪಿ/ಟಿ,ಎಸ್‌,ಪಿ ಕಾಯ್ದೆಯನ್ನು ಜಾರಿಗೆ ತಂದಿದ್ದು ನಮ್ಮ ಸರ್ಕಾರ. ನಮ್ಮ ಸರ್ಕಾರದ 5 ವರ್ಷಗಳಲ್ಲಿ ಈ ಯೋಜನೆಗೆ 88,000 ಕೋಟಿ ರೂ. ಖರ್ಚು ಮಾಡಿದ್ದೇವೆ. ಮೋದಿ ಸರ್ಕಾರ ಅಲ್ಪಸಂಖ್ಯಾತರು, ದಲಿತರಿಗೆ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನ ನಿಲ್ಲಿಸಿದೆ. ಮನ್‌ ಕಿ ಬಾತ್‌ ನಲ್ಲಿ ನಿರುದ್ಯೋಗ, ಬೆಲೆಯೇರಿಕೆ ಬಗ್ಗೆ ಮೋದಿ ಒಂದಾದರೂ ಮಾತನಾಡುತ್ತಾರಾ?

ನಾನು ಮುಖ್ಯಮಂತ್ರಿಯಾಗಿದ್ದಾಗ 50 ಲಕ್ಷದ ವರೆಗೆ ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ನೀಡುವ ಕೆಲಸ ಮಾಡಿದ್ದೆ. ಈ ಕೆಲಸವನ್ನು ದೇಶದಲ್ಲಿ ಬೇರೆ ಯಾವುದಾದರೂ ಸರ್ಕಾರ ಮಾಡಿದೆಯಾ? ನಾವು 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದೆವು, ಅದನ್ನು 5 ಕೆ.ಜಿ ಗೆ ಇಳಿಸಿದ್ದಾರೆ. ನಾವು ಮತ್ತೆ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ರಾಜ್ಯದ ಪ್ರತಿ ಬಡ ಕುಟುಂಬದ ವ್ಯಕ್ತಿಗೆ ತಲಾ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ನಾವು ನುಡಿದಂತೆ ನಡೆದವರು. ಶರಣರು ಎಂದರೆ ನುಡಿದಂತೆ ನಡೆಯುವ ಜನ, ಹಾಗಾಗಿ ನಾನು ಬಸವ ಜಯಂತಿ ದಿನದಂದೇ ಪ್ರಮಾಣ ವಚನ ಸ್ವೀಕಾರ ಮಾಡಿ ನೇರವಾಗಿ ವಿಧಾನಸೌಧದ ಕ್ಯಾಬಿನೆಟ್‌ ಗೆ ಹಾಲ್‌ ಗೆ ಹೋಗಿ ನಾವು ನೀಡಿದ್ದ 165 ಭರವಸೆಗಳಲ್ಲಿ 5 ಭರವಸೆಗಳನ್ನು ಈಡೇರಿಸುವ ಕೆಲಸ ಮಾಡಿದ್ದೆ, ಈಗಲೂ ಅಷ್ಟೆ ನಾವು ನೀಡುವ ಅಷ್ಟೂ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಸಿದ್ಧರಾಮಯ್ಯ ಭರವಸೆ ನೀಡಿದರು.

ನಾವು ಅಧಿಕಾರಕ್ಕೆ ಬಂದ ನಂತರ 200 ಯುನಿಟ್‌ ವಿದ್ಯುತ್‌ ಅನ್ನು ಉಚಿತವಾಗಿ ನೀಡುತ್ತೇವೆ. ಸಾಮಾನ್ಯ ಕುಟುಂಬವೊಂದು 200 ಯುನಿಟ್‌ ಗಿಂತ ಕಡಿಮೆ ವಿದ್ಯುತ್‌ ಬಳಕೆ ಮಾಡುತ್ತದೆ, ಹಾಗಾಗಿ ನೀವು ಒಂದು ಪೈಸೆ ವಿದ್ಯುತ್‌ ಬಿಲ್‌ ಕಟ್ಟುವ ಅಗತ್ಯವಿರುವುದಿಲ್ಲ. ಬಿಜೆಪಿಯವರು ಎಲ್ಲಾ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿ ಬಡವರು ಬದುಕದಂತೆ ಮಾಡಿದ್ದಾರೆ. ಹಾಗಾಗಿ ಪ್ರತೀ ಕುಟುಂಬದ ಯಜಮಾನಿಗೆ ತಿಂಗಳಿಗೆ 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡುತ್ತೇವೆ.

ಬಿಜೆಪಿ ಅವರಿಂದ ಜನ ಇಂದು ಆತಂಕದಲ್ಲಿ ದಿನ ದೂಡಬೇಕಾದ ಸ್ಥಿತಿ ಇದೆ. ಇದೇ ಕಾರಣಕ್ಕೆ ರಾಹುಲ್‌ ಗಾಂಧಿ ಅವರು ಭಾರತ ಐಕ್ಯತಾ ಯಾತ್ರೆ ಮಾಡಿ ಒಡೆದಿರುವ ಜನರ ಮನಸುಗಳನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಹನೂರಿನಲ್ಲಿ ನರೇಂದ್ರ ಅವರು ಗೆದ್ದರೆ ಅದು ನಾನು ಗೆದ್ದಂತೆ, ಕಾಂಗ್ರೆಸ್‌ ಪಕ್ಷ ಗೆದ್ದಂತೆ, ಸೋನಿಯಾ ಗಾಂಧಿ, ಡಿ.ಕೆ ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ ಅವರು ಗೆದ್ದಂತೆ ಎಂದರು.

ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಚಾಮರಾಜನಗರ ಜಿಲ್ಲೆಗೆ 10,000 ಕೋಟಿ ರೂ. ಅನುದಾನ ನೀಡಿ ರಸ್ತೆ, ಚರಂಡಿ, ಆಸ್ಪತ್ರೆ, ಶಾಲೆಗಳನ್ನು ನಿರ್ಮಾಣ ಮಾಡಿದ್ದೆವು. ಹನೂರಿಗೆ ಕುಡಿಯುವ ನೀರು ಕೊಟ್ಟಿದ್ದು ನಮ್ಮ ಸರ್ಕಾರ. 78 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಜಾರಿ ಮಾಡಿದ್ದು ನಾವು. ಮಹದೇವ ಪ್ರಸಾದ್‌ ಅವರು ಇಂದು ನಮ್ಮೊಂದಿಗಿಲ್ಲ, ಅವರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದರು. ಚಾಮರಾಜನಗರದ ಅಭಿವೃದ್ಧಿಗೆ ಅವರ ಕೊಡುಗೆಯೂ ಇದೆ.

ಮಹದೇಶ್ವರ ಬೆಟ್ಟಕ್ಕೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದು ನಮ್ಮ ಸರ್ಕಾರ. ಚಾಮರಾಜನಗರಕ್ಕೆ ಮೆಡಿಕಲ್‌ ಕಾಲೇಜ್‌ ಸ್ಥಾಪನೆ ಮಾಡಿದ್ದು ನಾವು, ಕೃಷಿ ಕಾಲೇಜ್‌, ಕಾನೂನು ಕಾಲೇಜು, ಮೊರಾರ್ಜಿ ಶಾಲೆಗಳನ್ನು ನೀಡಿದವರು ನಾವು. 200ಕ್ಕೂ ಹೆಚ್ಚು ಭವನಗಳನ್ನು ನಿರ್ಮಾಣ ಮಾಡಿದ್ದು, 500 ಕೋಟಿ ಹಣ ನೀಡಿ ರಸ್ತೆ ಅಭಿವೃದ್ಧಿ ಮಾಡಿದ್ದು, 3.5 ಕೋಟಿ ಹಣ ಕೊಟ್ಟು ಚಾಮರಾಜೇಶ್ವರ ದೇವಾಲಯದ ರಥ ನಿರ್ಮಾಣ ಮಾಡಿಕೊಟ್ಟಿದ್ದು, ನಳಂದ ಬುದ್ಧ ವಿಹಾರಕ್ಕೆ 25 ಎಕರೆ ಜಮೀನು ನೀಡಿದ್ದು, ಹನೂರಿಗೆ 250 ಕೋಟಿ ನೀಡಿ ನೀರಿನ ವ್ಯವಸ್ಥೆ ಮಾಡಿದ್ದು, 1400 ಎಕರೆ ಜಮೀನು ಸ್ವಾಧೀನ ಮಾಡಿಕೊಂಡು ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಿದ್ದು, ಭಗೀರಥ ಜಯಂತಿ ಆರಂಭ ಮಾಡಿದ್ದು, ಉಪ್ಪಾರ ಅಭಿವೃದ್ಧಿ ನಿಗಮ ಮಾಡಿದ್ದು ನಮ್ಮ ಸರ್ಕಾರ. ಉಪ್ಪಾರರನ್ನು ಎಸ್‌,ಟಿ ಗೆ ಸೇರಿಸಬೇಕು ಕುಲಶಾಸ್ತ್ರ ಅಧ್ಯಯನ ಮಾಡಲು ಆದೇಶ ನೀಡಿದ್ದು ನಾವು, ಮೋದಿ ಅವರು ಬಂದು 9 ವರ್ಷ ಆಯಿತು, ಚಾಮರಾಜನಗರಕ್ಕೆ ಅವರ ಕೊಡುಗೆ ಏನು? ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ನಮ್ಮ ಸರ್ಕಾರ ಇದ್ದಾಗ 200 ಕೋಟಿ ಅನುದಾನ ನೀಡಿದ್ದೆ, ಈಗ ಬಿಜೆಪಿ 80 ಕೋಟಿ ರೂ. ನೀಡಿದೆ.

ಹೀಗೆ ಬಿಜೆಪಿ ಸರ್ಕಾರ ಸಮಾಜದ ಯಾವ ಸಮುದಾಯದ ಜನರಿಗೂ ನ್ಯಾಯ ಒದಗಿಸುವ ಕೆಲಸ ಮಾಡುತ್ತಿಲ್ಲ, ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಈ ರಾಜ್ಯ ಉಳಿಯಬೇಕು ಎನ್ನುವುದಾರೆ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತುಹಾಕಿ ಜನಪರವಾದ ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರಕ್ಕೆ ತರುವ ಕೆಲಸ ತಾವು ಮಾಡಬೇಕು ಎಂದು ಸಿದ್ಧರಾಮಯ್ಯ ಕರೆ ನೀಡಿದರು.

Key words: Prime Minister – also- involved – corruption-Former CM -Sidhuramaiah