ಗಣರಾಜ್ಯೋತ್ಸವ ಆಚರಣೆಗೆ ಬೆಂಗಳೂರಿನಲ್ಲಿ ಭರ್ಜರಿ ಸಿದ್ಧತೆ: ಭದ್ರತೆಗೆ 1200ಕ್ಕೂ ಹೆಚ್ಚು ಪೊಲೀಸರ ನಿಯೋಜನೆ.

ಬೆಂಗಳೂರು,ಜನವರಿ,24,2023(www.justkannada.in): ಕೋವಿಡ್ ನಿಂದ ಕಳೆದೆರಡು ವರ್ಷಗಳಿಂದ ಸರಳವಾಗಿ ಗಣರಾಜ್ಯೋತ್ಸವ ಆಚರಿಸಲಾಗಿತ್ತು. ಆದರೆ ಈ ಬಾರಿ  ಜನವರಿ 26ರಂದು  ಅದ್ಧೂರಿಯಾಗಿ ಗಣರಾಜ್ಯೋತ್ಸವ ಆಚರಣೆಗೆ ಬೆಂಗಳೂರಿನಲ್ಲಿ ಭರ್ಜರಿ ಸಿದ್ಧತೆ ನಡೆಸಲಾಗುತ್ತಿದೆ.

ಬೆಂಗಳೂರು ನಗರದ ಮಾಣೆಕ್ ಷಾ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕಾರ್ಯಕ್ರಮ ಹಿನ್ನೆಲೆ ಬೆಂಗಳೂರಲ್ಲಿ ಭದ್ರತೆಗೆ 1,200ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಭದ್ರತೆಗಾಗಿ 9 ಡಿಸಿಪಿ, 16 ಎಸಿಪಿ, 45 ಇನ್ಸ್​​ಪೆಕ್ಟರ್​ಗಳು, 101 ಪಿಎಸ್​​ಐ, 14 ಮಹಿಳಾ ಪಿಎಸ್​​ಐ, 83 ಎಎಸ್​ಐ, 577 ಹೆಡ್​​ ಕಾನ್ಸ್​​ಟೇಬಲ್ಸ್, 77 ಮಹಿಳಾ ಸಿಬ್ಬಂದಿ, ಮಫ್ತಿಯಲ್ಲಿ 172 ಪೊಲೀಸ್​ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹೆಚ್ಚುವರಿ ಭದ್ರತೆಗೆ 10 KSRP ತುಕಡಿ, ಸಿಎಆರ್ ತುಕಡಿ ನಿಯೋಜಿಸಲಾಗಿದೆ.

ಮಾಣೆಕ್​ ಷಾ ಮೈದಾನದ ಸುತ್ತಮುತ್ತ 56 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. 3 ಅಗ್ನಿಶಾಮಕ ವಾಹನಗಳು, 2 ಆಯಂಬುಲೆನ್ಸ್, 1 ಕ್ಷಿಪ್ರ ಕಾರ್ಯಾಚರಣೆ ಪಡೆ, 1 ಡಿಸ್ವಾಟ್, 1 ಆರ್ ಐವಿ, 1 ಗರುಡಾ, ಮೈದಾನದ ಆಯಾಕಟ್ಟಿನಲ್ಲಿ 100 ಸಿಸಿಟಿವಿ ಅಳವಡಿಸಲಾಗಿದೆ. 4 ಬ್ಯಾಗೇಜ್ ಸ್ಕ್ಯಾನರ್, 20 ಡಿಎಫ್ ಎಂಡಿ ಹಾಗೂ 24 ಹೆಚ್ಚ ಹೆಚ್ ಎಂಡಿ ಉಪಕರಣಗಳ ಬಳಕೆ ಮಾಡಲಾಗುತ್ತಿದೆ.

ಇನ್ನು ಕಾರ್ಯಕ್ರಮಕ್ಕೆ ಬರುವವರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಮಾಣೆಕ್​ ಷಾ ಮೈದಾನಕ್ಕೆ ಅನುಮಾನಾಸ್ಪದ ವಸ್ತುಗಳನ್ನು ನಿಷೇಧಿಸಲಾಗಿದ್ದು,  ಹೆಲ್ಮೆಟ್​, ಕ್ಯಾಮರಾ, ಕೊಡೆ, ಸಿಗರೇಟ್​, ಬೆಂಕಿಪೊಟ್ಟಣ, ಹರಿತ ವಸ್ತು, ಕರಪತ್ರ, ಕಪ್ಪು ಕರವಸ್ತ್ರ, ಬಣ್ಣದ ದ್ರಾವಣ, ತಿಂಡಿ ತಿನಿಸುಗಳು, ಬಾವುಟ, ಶಸ್ತ್ರಾಸ್ತ್ರ, ಪಟಾಕಿ ಹಾಗೂ ಸ್ಫೋಟಕ ವಸ್ತುಗಳನ್ನು ನಿಷೇಧಿಸಲಾಗಿದೆ.

Key words: preparations -Bengaluru – Republic Day- celebrations.