ಅಪಘಾತ ಹೇಗಾಯಿತೆಂಬ ಬಗ್ಗೆ ವಿವರಿಸಿ ಕರ್ನಾಟಕ ಜನತೆಗೆ ಧನ್ಯವಾದ ಅರ್ಪಿಸಿದ ಪ್ರಧಾನಿ ಮೋದಿ ಸಹೋದರ  ಪ್ರಹ್ಲಾದ್ ಮೋದಿ.

ಮೈಸೂರು,ಡಿಸೆಂಬರ್,28,2022(www.justkannada.in): ನಿನ್ನೆ ಮೈಸೂರಿನ ಕಡಕೊಳದಲ್ಲಿ ಕಾರು ಅಪಘಾತ ಸಂಭವಿಸಿ  ಜೆಎಸ್ ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಧಾನಿ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಚೇತರಿಸಿಕೊಂಡಿದ್ದು ಇಂದು ಸುದ್ಧಿಗೋಷ್ಠಿ ನಡೆಸಿ ಘಟನೆ ಬಗ್ಗೆ ವಿವರ ನೀಡಿದರು.

ನಗರದ ಜೆಎಸ್ಎಸ್ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಹ್ಲಾದ್ ಮೋದಿ, ನಾನು, ನಮ್ಮ ಕುಟುಂಬದವರು ಪ್ರಯಾಣ ಮಾಡುತ್ತಿದ್ದೆವು.  ಈ ವೇಳೆ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಯಿತು.  ಸದ್ಯ ಘಟನೆಯಲ್ಲಿ ಯಾರಿಗೂ ತೊಂದರೆ ಆಗಲಿಲ್ಲ. ಕಮಾಂಡ್, ಪೊಲೀಸ್ ಸಿಬ್ಬಂದಿ ಜತೆಗೆ ಇದ್ದರು.  ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದೇವೆ.  ಕರ್ನಾಟಕದ ಜನತೆ ಅನುಕಂಪ ತೋರಿಸಿದ್ದಾರೆ.  ಕರ್ನಾಟಕ ಸರ್ಕಾರ, ಮುಖಂಡರು, ವಿರೋಧ ಪಕ್ಷದವರು, ಕಾರ್ಯಕರ್ತರು ಬಂದು ವಿಚಾರಿಸಿದ್ದಾರೆ. ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದರು.

ಎರಡು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದೆವು. ಒಂದು ಕಾರಿ‌ನಲ್ಲಿ ನಾನು, ಮಗ, ಸೊಸೆ, ಮೊಮ್ಮಗ ಇದ್ದೆವು. ಮತ್ತೊಂದು ಕಾರಿನಲ್ಲಿ ಮಗಳು, ಅಳಿಯ ಮತ್ತು ಕುಟುಂಬದವರು ಇದ್ದರು. ಕಾರು ನನ್ನ ಸ್ನೇಹಿತ ರಾಜಶೇಖರ್ ಅವರದ್ದು. ಬೆಂಗಳೂರಿನಲ್ಲಿ ಕಾರು ಪಡೆದುಕೊಂಡಿದ್ದೆವು. ಚಾಲಕನದ್ದೂ ಏನೂ ತಪ್ಪಿಲ್ಲ.  ಎಸ್ಕಾರ್ಟ್ ಇದ್ದ ಕಾರಣ ಅತಿ ವೇಗದಲ್ಲಿ ಹೋಗಲು ಅವಕಾಶವೇ ಇರಲಿಲ್ಲ.‌ ಅಚಾನಕ್ಕಾಗಿ ಅಪಘಾತವಾಗಿದೆ.  ಸೀಟ್ ಬೆಲ್ಟ್ ಹಾಕಿದ್ದೆವು, ಏರ್‌ಬ್ಯಾಗ್ ಓಪನ್ ಆಗಿದ್ದರಿಂದ ತೊಂದರೆ ಆಗಲಿಲ್ಲ ಎಂದು ವಿವರಿಸಿದರು.

ಇನ್ನು ಪ್ರಧಾನಿ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಯಾರಿಗೂ ತೊಂದರೆ ಆಗಿಲ್ಲ ಅಂತ ಹೇಳಿದ್ದೇನೆ.‌ ಚಿಕಿತ್ಸೆ ಮುಗಿಸಿದ ಬಳಿಕ ವಾಪಸ್ ಗುಜರಾತ್‌ಗೆ ಹೋಗುತ್ತೇವೆ ಎಂದರು.

ಸುದ್ದಿ ಗೋಷ್ಠಿಯಲ್ಲಿ  ಪ್ರಹ್ಲಾದ್ ಮೋದಿ ಅವರ ಕುಟುಂಬಸ್ಥರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ವೈದ್ಯಾಧಿಕಾರಿಗಳು,  ಈಗಾಗಲೇ ಎಲ್ಲರು ಆರೋಗ್ಯದಿಂದ್ದಾರೆ. ಕಾರಿನಲ್ಲಿದ್ದ ಐವರಲ್ಲಿ ಮಗುವಿಗೆ ಮಾತ್ರ ಒಂದು ಸಣ್ಣ ಪ್ರಾಕ್ಟರ್ ಆಗಿದೆ ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರೂ ಔಟ್ ಆಫ್ ಡೇಂಜರ್. ಇಂದು ಎಲ್ಲಾ ಪರೀಕ್ಷೆಗಳ ನಡೆಸಿ  ಸಾಯಂಕಾಲ ಡಿಸ್ಚಾರ್ಜ್ ಮಾಡುವ ಪ್ರಕ್ರಿಯೆ ನಡೆಯುತ್ತದೆ ಎಂದು ತಿಳಿಸಿದರು.

Key words: PM Modi’s- brother- Prahlad Modi-car-accident -mysore