ಮೈಸೂರಿನಲ್ಲಿ ಪ್ಯಾರಮೋಟರಿಂಗ್ ಹಾಗೂ ಹಾಟ್ ಬಲೂನ್ ಏರ್ ಶೋ ಗೆ  ಚಾಲನೆ

Promotion

ಮೈಸೂರು, ಅಕ್ಟೋಬರ್ 06, 2019 (www.justkannada.in):  ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ಈಗಾಗಲೇ ಹಲವಾರು ಕಾರ್ಯಕ್ರಮಗಳು ನಡೆಯುತ್ತಿದ್ದು, ಇಂದು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ಯಾರಮೋಟರಿಂಗ್ ಹಾಗೂ ಹಾಟ್ ಬಲೂನ್ ಏರ್ ಶೋ ಗೆ ವಸತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ ಸೋಮಣ್ಣ ಅವರು  ಚಾಲನೆ ನೀಡಿದರು.

ಚಾಲನೆ ನೀಡಿ ಮಾತನಾಡಿದ ಅವರು ದಸರಾ ಜಂಬೂಸವಾರಿಗೆ ಒಂದು ದಿನ ಮಾತ್ರ ಬಾಕಿ ಇದ್ದು, ಈ ಸಂದರ್ಭದಲ್ಲಿ ಪ್ಯಾರಮೋಟರಿಂಗ್ ಸಾಹಸ ಕ್ರೀಡಾ ಪ್ರದರ್ಶನ ಹಾಗೂ ಹಾಟ್ ಬಲೂನ್ ಶೋ ಮಕ್ಕಳು ಹಾಗೂ ಪ್ರವಾಸಿಗರ ಆಕರ್ಷಣೆಯನ್ನು ಹೆಚ್ಚಿಸಲಿದೆ ಎಲ್ಲರೂ ಈ ಸಾಹಸ ಕ್ರೀಡೆಯನ್ನು ಕಣ್ತುಂಬಿಕೊಳ್ಳಿ ಎಂದು ತಿಳಿಸಿದರು.

ದೇಶದ ಹಲವಾರು ಭಾಗಗಳಿಂದ ತರಬೇತಿ ಪಡೆದವರು ಪ್ಯಾರಮೋಟರಿಂಗ್ ಸಾಹಸ ಮಾಡಲಿದ್ದು, ಇದು ಮೊದಲ ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ. ನಾಳೆ ಹಾಗೂ ನಾಳಿದ್ದು ಕೂಡ ಈ ಪ್ರದರ್ಶನವಿದ್ದು ಎಲ್ಲಾ ಸಾರ್ವಜನಿಕರು ಇದರ ವೀಕ್ಷಣೆ ಮಾಡಬಹುದು ಎಂದು ಅವರು ಹೇಳಿದರು.

ದಸರಾ ಹಬ್ಬದ ಅಂತಿಮ ಹಂತದ ಎಲ್ಲಾ ಕಾರ್ಯ ಕೆಲಸಗಳು ಮುಗಿದಿದ್ದು, ಇಂದಿನಿಂದ ಪ್ರವಾಸಿಗರ ಸಂಖ್ಯೆ ಅಧಿಕವಾಗಲಿದ್ದು, ಸುಮಾರು 25 ಸಾವಿರ ಪೋಲೀಸ್ ಸಿಬ್ಬಂದಿ ಈಗಾಗಲೇ ಸೂಕ್ತ ಬಂದೂಬಸ್ತ್ ಮಾಡಿಕೊಂಡಿದ್ದು ಯಾವುದೇ  ಲೋಪದೋಷವಾಗದೇ ಯಶಸ್ವಿಯಾಗಿ ಜಂಬೂ ಸವಾರಿ ನಡೆಯಲಿದೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಹಾಟ್ ಬಲೂನ್ ಮೇಲೆ ಸಂಸದ ಪ್ರತಾಪ್ ಸಿಂಹ, ಸೋಮಣ್ಣ, ಕುಳಿತು ಮೇಲಿನಿಂದ ಮೈಸೂರನ್ನು ಕಣ್ತುಂಬಿಕೊಂಡರು. ಕ್ರೀಡಾ ಉಪಸಮಿತಿಯ ಕಾರ್ಯದರ್ಶಿ ಜೆ.ಸುರೇಶ್, ಕಾರ್ಯಾಧ್ಯಕ್ಷ ಸುಭಾಷ್ ಚಂದ್ರ ಕೆ.ಎಲ್, ಮುಖಂಡರಾದ ರಾಜೀವ್, ಅರ್ಪಿತಾ ಸಿಂಹ ಹಾಗೂ ಮತ್ತಿತರರು ಉಪಸ್ಥಿತರಿದ್ದರು.