ಸಾರ್ವಜನಿಕರೊಡನೆ ಜನಸ್ನೇಹಿಯಾಗಿ ವರ್ತಿಸುವುದು ನಮ್ಮ ಕರ್ತವ್ಯ: ಜನಸ್ನೇಹಿ ಕಾರ್ಯಗಾರದಲ್ಲಿ ನಗರ ಪೊಲೀಸ್ ಆಯುಕ್ತ ಕೆ.ಟಿ ಬಾಲಕೃಷ್ಣ ನುಡಿ…

Promotion

ಮೈಸೂರು,ಡಿ,17,2019(www.justkannada.in): ಸಮಸ್ಯೆಗಳ ಪರಿಹಾರಕ್ಕಾಗಿ ಸಾರ್ವಜನಿಕರು ಪೊಲೀಸ್ ಠಾಣೆಗೆ ಬರುತ್ತಾರೆ. ಅವರೊಡನೆ ಜನಸ್ನೇಹಿಯಾಗಿ ವರ್ತಿಸುವುದು ನಮ್ಮ ಕರ್ತವ್ಯ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ ಬಾಲಕೃಷ್ಣ ಹೇಳಿದರು.

ನೂತನ ವರ್ಷಕ್ಕೆ ಮೈಸೂರು ನಗರ ಪೊಲೀಸರಿಂದ ಜನಸ್ನೇಹಿ ಪೊಲೀಸ್ ಅಭಿಯಾನ ನಡೆಸಲು ತೀರ್ಮಾನಿಸಲಾಗಿದ್ದು, ಈ ಹಿನ್ನೆಲೆ ಇಂದು ಮೈಸೂರು ನಗರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಒಂದು ದಿನದ ಕಾರ್ಯಗಾರ ಆಯೋಜಿಸಲಾಗಿತ್ತು.

ನಗರದ ಪೊಲೀಸ್ ಭವನದಲ್ಲಿ ನಡೆಯುತ್ತಿರುವ ಜನಸ್ನೇಹಿ ಪೊಲೀಸ್ ಕಾರ್ಯಗಾರಕ್ಕೆ ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಚಾಲನೆ ನೀಡಿದರು.  ಕಾರ್ಯಗಾರದಲ್ಲಿ ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ  ಸಾರ್ವಜನಿಕರ ಸಮಸ್ಯೆ, ಸಂಚಾರಿ ಸಮಸ್ಯೆ, ಕಾನೂನು ಸುವ್ಯವಸ್ಥೆ, ಅಪರಾಧ ತಡೆ ಸೇರಿ ವಿವಿಧ ವಿಚಾರಗಳ ಕುರಿತು ಮಾಹಿತಿ ನೀಡಲಾಗುತ್ತಿದೆ.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕೆ.ಟಿ ಬಾಲಕೃಷ್ಣ, ಸಮಸ್ಯೆಗಳ ಪರಿಹಾರಕ್ಕಾಗಿ ಸಾರ್ವಜನಿಕರು ಪೊಲೀಸ್ ಠಾಣೆಗೆ ಬರುತ್ತಾರೆ. ಅವರೊಡನೆ ಜನಸ್ನೇಹಿಯಾಗಿ ವರ್ತಿಸುವುದು ನಮ್ಮ ಕರ್ತವ್ಯ. ಹಾಗಾಗಿ ಇಂದು ರಾಜ್ಯಾದ್ಯಂತ ಜನಸ್ನೇಹಿ ಪೊಲೀಸ್ ಕಾರ್ಯಗಾರ ಆಯೋಜಿಸಲಾಗಿದೆ. ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಕೊಠಡಿ ತೆರೆದು ಸೂಕ್ತ ಸೇವೆ ಒದಗಿಸಲಾಗುತ್ತಿದೆ. ಹೆಚ್ಚಾಗಿ ಮಹಿಳಾ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಿ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರ ನಿರೀಕ್ಷೆಯನ್ನು ಹುಸಿಗೊಳಿಸದೆ ಸೂಕ್ತವಾದ ಪರಿಹಾರ ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ. ನಮ್ಮ ಪೊಲೀಸರು ಜನಸ್ನೇಹಿಯಾಗಿ ವರ್ತಿಸಿ ನಿಮ್ಮ ಸಮಸ್ಯೆ ಬಗೆಹರಿಸುತ್ತಾರೆ. ಪೊಲೀಸ್ ಸಿಬ್ಬಂದಿಗೂ ಈ ಬಗ್ಗೆ  ಇಂದು ತರಬೇತಿ ನೀಡಲಾಗುತ್ತದೆ ಎಂದು ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಹೇಳಿದರು.

ಇನ್ನು ಕಾರ್ಯಗಾರದಲ್ಲಿ ಜನಸ್ನೇಹಿ ಪೊಲೀಸ್ ಪ್ರಾತ್ಯಕ್ಷಿಕೆ ಗಮನ ಸೆಳೆಯಿತು. ನಾಟಕದ ಮೂಲಕ ಜನಸ್ನೇಹಿ ಪೊಲೀಸರ ವರ್ತನೆ ಕುರಿತು ಅರಿವು ಮೂಡಸಲಾಗುತ್ತಿದೆ. ಕಾರ್ಯಗಾರದಲ್ಲಿ ನೂತನ ಡಿಸಿಪಿ ಡಾ.ಎ.ಎಂ.ಪ್ರಕಾಶ್ ಗೌಡ, ಮತ್ತು ಡಿಸಿಪಿ ಕವಿತ ಭಾಗಿಯಾಗಿದ್ದರು.

Key words: our duty – work with public-mysore City- Police Commissioner- KT Balakrishna