ಮೈಸೂರು ಮೃಗಾಲಯಕ್ಕೆ ಬಂದ  ಅಪರೂಪದ ಗೊರಿಲ್ಲಾ, ಒರಾಂಗೂಟಾನ್

ಮೈಸೂರು,ಅಕ್ಟೋಬರ್,3,2021(www.justkannada.in): ಅಪರೂಪದ ಪ್ರಾಣಿ-ಪಕ್ಷಿಗಳ ಸಲಹುವ ಮೂಲಕ ದೇಶದ ಗಮನ ಸೆಳೆದಿದ್ದ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಅಪರೂಪದ ಎರಡು ಜೋಡಿ ಒರಾಂಗೂಟಾನ್ ಹಾಗೂ ಎರಡು ಗೊರಿಲ್ಲಾ ತರಿಸಲಾಗಿದ್ದು, ಈ ಪ್ರಾಣಿಗಳನ್ನು ಹೊಂದಿರುವ ದೇಶದ ಏಕೈಕ ಮೃಗಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೈಸೂರು ಮೃಗಾಲಯಕ್ಕೆ ಹೊಸದಾಗಿ ಪ್ರವೇಶಿಸಿರುವ ಹೊಸ ಪ್ರಾಣಿಗಳಲ್ಲಿ ಒಂದು ಜೋಡಿ ಗೊರಿಲ್ಲಾ ಹಾಗೂ ನಾಲ್ಕು ಒರಾಂಗೂಟಾನ್ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ. ಕೆಲವು ದಿನಗಳಿಂದ ಕ್ವಾರಂಟೇನಲ್ಲಿಡಲಾಗಿದ್ದು, ಕೆಲವೇ ದಿನಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ.

50 ವರ್ಷಗಳ ನಂತರ: ಮೈಸೂರು ನಗರದ ಮೃಗಾಲಯಕ್ಕೆ ತಂದಿರುವ ಒರಾಂಗೂಟಾನ್ ಪ್ರಾಣಿ ದಾಖಲೆಯೊಂದನ್ನು ಬರೆದಿದೆ. ಅಳಿವಿನಂಚಿನಲ್ಲಿರುವ ಇರುವ ಒರಾಂಗೂಟಾನ್ ಭಾರತದ ಯಾವುದೇ ಮೃಗಾಲಯದಲ್ಲಿ ಇಲ್ಲ. 50 ವರ್ಷಗಳ ಹಿಂದೆ ಮೈಸೂರಿನ ಮೃಗಾಲಯದಲ್ಲಿ ಇದ್ದ ಒಂದು ಜೋಡಿ ಒರಾಂಗೂಟಾನ್ ಸಾವಿಗೀಡಾದ ನಂತರ ಒರಾಂಗೂಟಾನ್ ಕೊರತೆ ಎದ್ದು ಕಾಣುತ್ತಿತ್ತು. ಹಲವು ವರ್ಷಗಳಿಂದ ಮೃಗಾಲಯಕ್ಕೆ ಒರಾಂಗೂಟಾನ್ ತರುವ ಪ್ರಯತ್ನ ಮಾಡಲಾಗುತ್ತಿತ್ತು. ಆದರೆ ಇದೀಗ ಮೈಸೂರು ಮೃಗಾಲಯಕ್ಕೆ ಅಪರೂಪದ ಪ್ರಾಣಿ ತರಲಾಗಿದ್ದು, ಮೈಸೂರಿನ ಹೆಮ್ಮೆ-ಹಿರಿಮೆ ಇಮ್ಮಡಿಗೊಂಡಿದೆ.

ಮಲೇಷಿಯಾ ಮೃಗಾಲಯದಿಂದ 5 ವರ್ಷದ ಗಂಡು ಅಫಾ, 7 ವರ್ಷದ ಹೆಣ್ಣು ಮಿನ್ನಿ, ಸಿಂಗಾಪುರ ಮೃಗಾಲಯದಿಂದ 17ವರ್ಷದ ಗಂಡು ಒರಾಂಗೂಟಾನ್ ಮೆರ್ಲಿನ್ ಹಾಗೂ  13 ವರ್ಷದ ಹೆಣ್ಣು ಅಟಿನ ಮೈಸೂರು ಮೃಗಾಲಯಕ್ಕೆ ಬಂದ ಒರಾಂಗೂಟಾನ್‍ಗಳಾಗಿವೆ. ಈ ಎಲ್ಲಾ ಒರಾಂಗೂಟಾನ್ ಕ್ವಾರಂಟೇನ್‍ನಲ್ಲಿಡಲಾಗಿದ್ದು,  ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳುತ್ತಿವೆ. ಸುಧೀರ್ಘ ಅವಧಿಯ ಬಳಿ ಮೈಸೂರಿಗೆ ಒರಾಂಗೂಟಾನ್ ಬಂದಿರುವುದು ಪ್ರಾಣಿ ಪ್ರಿಯರಿಗೆ ಸಂತೋಷವನ್ನುಂಟು ಮಾಡಿದೆ.

7 ವರ್ಷದ ನಂತರ: ಮೈಸೂರು ಮೃಗಾಲಯದಲ್ಲಿ 2014ರಲ್ಲಿ ಸಾವಿಗೀಡಾದ ಪೋಲೋ ಗೊರಿಲ್ಲಾದ ನಂತರ ದೇಶದಲ್ಲಿಯೇ ಯಾವ ಮೃಗಾಲಯದಲ್ಲಿಯೂ ಗೊರಿಲ್ಲ ಇರಲಿಲ್ಲ. ಇದೀಗ 7 ವರ್ಷದ ನಂತರ  ಜರ್ಮನಿಯಿಂದ 2 ಗಂಡು ಗೊರಿಲ್ಲಾ ತರಲಾಗಿದೆ. ತಾಬೊ(14) ಹಾಗೂ ಡೆಂಬ(8) ಎಂಬ ಗೊರಿಲ್ಲಾ ಮೈಸೂರು ಮೃಗಾಲಯದ ಅಥಿತಿಯಾಗಿದೆ. ಅಲ್ಲದೆ ಗೊರಿಲ್ಲಾ ಹೊಂದಿರುವ ದೇಶದ ಏಕೈಕ ಮೃಗಾಲಯ ಎಂಬ ಕೀರ್ತಿ ಮೈಸೂರು ಮೃಗಾಲಯಕ್ಕೆ ಲಭಿಸಿದೆ.

ಸತತ ಪರಿಶ್ರಮದಿಂದ: ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ `ಮೈಸೂರು   ಮಿತ್ರ’ನೊಂದಿಗೆ ಮಾತನಾಡಿ, 1892ರಲ್ಲಿ  ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಚಾಮರಾಜೇಂದ್ರ ಒಡೆಯರ್ ಬಹೂದ್ದೂರ್ ಅವರಿಂದ ಸ್ಥಾಪಿತವಾದ ಮೈಸೂರು ಮೃಗಾಲಯ ಪ್ರಸ್ತುತ ನಗರದ ಹೃದಯ ಭಾಗದಲ್ಲಿದ್ದು 80.13 ಎಕರೆಗಳ ಪ್ರದೇಶದಲ್ಲಿ ವಿಸ್ತಿರಿಸಿದೆ. ಭಾರತದಲ್ಲೇ ಅತ್ಯಂತ ಹಳೆಯ ಮೃಗಾಲಯಗಳಲ್ಲಿ ಒಂದಾಗಿದ್ದು, ಅಪರೂಪದ ಪ್ರಾಣಿಗಳಾದ ಭಾರತೀಯ ಮತ್ತು ಆಫ್ರಿಕಾ ಆನೆಗಳು, ಗೊರಿಲ್ಲಾ, ಒರಾಂಗೂಟಾನ್, ಜಿರಾಫೆ, ಚಿಂಪಾಂಜಿ, ಬಿಳಿ ಘೆಂಡಾಮೃಗ, ಕಪ್ಪುಚಿರತೆ, ಹೂಲ್ಲಕ್ ಗಿಬ್ಬನ್ ಕೋತಿಗಳು, ವಿವಿದ ಜಾತಿಯ ಹುಲಿ, ಸಿಂಹಗಳು ಮತ್ತು ನೀರು ಕುದುರೆ ಸೇರಿದಂತೆ 145ಕ್ಕೂ ಹೆಚ್ಚು ಜಾತಿಯ ಒಟ್ಟು 1450ಕ್ಕಿಂತ ಹೆಚ್ಚು  ವಿವಿಧ ಪ್ರಾಣಿ-ಪಕ್ಷಿ  ಹೊಂದಿದೆ. ಮೈಸೂರು ಮೃಗಾಲಯಕ್ಕೆ ವರ್ಷಕ್ಕೆ (2020 ಮತ್ತು 2021ನೇ ವರ್ಷ ಹೊರತುಪಡಿಸಿ) ಸುಮಾರು 30 ರಿಂದ 35 ಲಕ್ಷ ವೀಕ್ಷಕರು ಭೇಟಿ ನೀಡುತ್ತಿದ್ದು, ವಿಶ್ವಮಟ್ಟದಲ್ಲಿಯೆ ಮನ್ನಣೆ ಗಳಿಸಿದೆ. ವೀಕ್ಷಕರ ಅನುಕೂಲಕ್ಕಾಗಿ ಹಲವಾರು ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.

ಸಿಂಗಾಪುರ ಮೃಗಾಲಯಕ್ಕೆ ಜಿರಾಫೆ ನೀಡಲಾಗಿದೆ. ಮಲೇಷಿಯಾಗೆ ಹಾಗೂ ಗೊರಿಲ್ಲ ನೀಡಿರುವ ಜರ್ಮನಿ ಮೃಗಾಲಯಕ್ಕೆ ಯಾವುದೇ ಪ್ರಾಣಿ ಕೊಟ್ಟಿಲ್ಲ. ಈ ಪ್ರಾಣಿಗಳನ್ನು ಚೆನ್ನಾಗಿ ನೋಡಿಕೊಂಡರೆ ಇನ್ನಷ್ಟು ಪ್ರಾಣಿಗಳು ದೊರೆಯಲಿವೆ. ಗೊರಿಲ್ಲಾ, ಒರಾಂಗೂಟಾನ್ ಸೂಕ್ಷ ಪ್ರ್ರಾಣಿಗಳಾಗಿವೆ. ಇವುಗಳನ್ನು ಚೆನ್ನಾಗಿ ಪಾಲನೆ ಮಾಡಿದರೆ ಹೆಣ್ಣು ಗೊರಿಲ್ಲಾ ಕೊಡುತ್ತಾರೆ ಎಂದು ತಿಳಿಸಿದರು.

ಶೆಲ್ಟರ್ ನಿರ್ಮಾಣ: ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ  ಮಾತನಾಡಿ, ಮೈಸೂರು ಮೃಗಾಲಯಕ್ಕೆ ಒರಾಂಗೂಟಾನ್ ಹಾಗೂ ಗೊರಿಲ್ಲಾ ತಂದಿರುವುದು ಮೈಸೂರಿನ ಹಿರಿಮೆ ಹೆಚ್ಚಿಸಿದೆ. ದೇಶದ ಮುಂಚೂಣಿ ಮೃಗಾಲಯಗಳಲ್ಲಿ ಮೈಸೂರು ಮೃಗಾಲಯ ಗುರುತಿಸಿಕೊಂಡಿದೆ. ಸ್ವಚ್ಛತೆ,  ಪ್ರವಾಸಿಗರ ಸುರಕ್ಷತೆ, ವನ್ಯಜೀವಿಗಳ ಪಾಲನೆಗೆ ಕೈಗೊಂಡಿರುವ ಉತ್ತಮ ಕ್ರಮ ನೋಡಿ ಮಲೇಷಿಯಾ,  ಸಿಂಗಾಪುರ, ಜರ್ಮನಿ ಮೃಗಾಲಯದಿಂದ ಮೈಸೂರು ಮೃಗಾಲಯಕ್ಕೆ ಗೊರಿಲ್ಲಾ ಹಾಗೂ ಒರಾಂಗೂಟಾನ್ ನೀಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಪರೂಪದ ಪ್ರಾಣಿ-ಪಕ್ಷಿಗಳನ್ನು ಮೈಸೂರು ಮೃಗಾಲಯಕ್ಕೆ ತರುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಹೊಸದಾಗಿ ತಂದಿರುವ ಗೊರಿಲ್ಲಾಗೆ ಸಿಎಸ್‍ಆರ್ ಫಂಡ್‍ನಿಂದ  ಇನ್ಫೋಸಿಸ್ ಫೌಂಡೇಷನ್ ವತಿಯಿಂದ 3 ಕೋಟಿ ರೂ. ವೆಚ್ಚದಲ್ಲಿ ಶೆಲ್ಟರ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಆರ್‍ಬಿಐ ಹಾಗೂ ಎಲ್‍ಅಂಡ್‍ಟಿ ಸಂಸ್ಥೆ ಸಿಎಸ್‍ಆರ್ ಫಂಡ್‍ನಿಂದ ಒರಾಂಗೂಟಾನ್‍ಗೆ ಶೆಲ್ಟರ್ ನಿರ್ಮಿಸಲಾಗುತ್ತಿದೆ ಎಂದರು ವಿವರಿಸಿದರು.

Key words: Orangutan- rare -gorilla – came – Mysore Zoo.