ಸಂವಿಧಾನ ವಿರೋಧಿಸುವವರು ಮನುಷ್ಯರೇ ಅಲ್ಲ – ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜುಲೈ,17,2021(www.justkannada.in):  ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವವರು ಮನುಷ್ಯತ್ವ ಇಲ್ಲದವರು. ಅವರು ಮನುಷ್ಯರೇ ಅಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.jk

ತಮ್ಮ ನಿವಾಸದಲ್ಲಿ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಮಣಿ ಅವರು ಬರೆದಿರುವ 28 ಅಂಕಣಗಳನ್ನು ಒಳಗೊಂಡ “ಮನು ಭಾರತ” ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಚಿವರು, ಸಂಸದರು, ಶಾಸಕರೇ ಸಂವಿಧಾನ ವಿರೋಧಿಸುತ್ತಾರೆ. ಸಂವಿಧಾನ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸುತ್ತಾರೆ. ನನ್ನ ದೃಷ್ಟಿಯಲ್ಲಿ ಅವರು ಜನಪ್ರತಿನಿಧಿಗಳಾಗಲು ಯೋಗ್ಯರೇ ಅಲ್ಲ ಎಂದು ಕಿಡಿ ಕಾರಿದರು.

ವಿದ್ಯಾವಂತರು ವೈಚಾರಿಕತೆ, ಜಾತ್ಯಾತೀತ ಮನೋಭಾವ ಬೆಳೆಸಿಕೊಂಡಿಲ್ಲ. ಯಾವ ರೀತಿಯ ಶಿಕ್ಷಣವನ್ನು ಅವರು ಪಡೆದುಕೊಂಡಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ವಿದ್ಯಾವಂತರು ಎನಿಸಿಕೊಂಡವರು ಸಂವಿಧಾನದ ಮೂಲ ಆಶಯಗಳನ್ನಾದರೂ ಓದಿಕೊಳ್ಳಬೇಕು. ಆದರೆ, ಮನುವಾದಿಗಳು ಸಂವಿಧಾನಕ್ಕೆ ವಿರುದ್ಧವಾಗಿರುವವರು. ಅದಕ್ಕಾಗಿಯೇ ಸಂವಿಧಾನ ಬದಲಾವಣೆ ಆಗಬೇಕು ಎನ್ನುತ್ತಾರೆ ಎಂದು ಹರಿಹಾಯ್ದರು. .

ಅಸಮಾನತೆ ಮುಂದುವರಿದಿದೆ :

ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲು ಸೌಲಭ್ಯ ನೀಡಬೇಕು ಎಂದು ಸಂವಿಧಾನ ಹೇಳಿದೆ. ಸಾಮಾಜಿಕ ಮತ್ತು ಆರ್ಥಿಕವಾಗಿ ನಮ್ಮಲ್ಲಿ ತಾರತಮ್ಯವಿದೆ. ಮನು ಸ್ಮೃತಿ, ಶಾಸ್ತ್ರದಿಂದ ನಿರ್ಮಾಣವಾಗಿರುವ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಇನ್ನೂ ಮುಂದುವರಿದಿದೆ.

ನಮ್ಮ ದೇಶದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯನ್ನು ಅಂಬೇಡ್ಕರ್ ಅವರಷ್ಟು ಅರ್ಥ ಮಾಡಿಕೊಂಡವರು ಬೇರೆ ಯಾರೂ ಇಲ್ಲ. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಅವರು ಸಂವಿಧಾನ ರಚಿಸುವ ಕೆಲಸ ಮಾಡುವುದರ ಜೊತೆಗೆ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ಮಾಡಿದರು. ಸಂವಿಧಾನ ಉತ್ತಮವೇ ಅಲ್ಲವೇ ಎಂಬುದು ದೇಶದ ಆಡಳಿತದ ಚುಕ್ಕಾಣಿ ಹಿಡಿದವರಲ್ಲಿ ಅದನ್ನು ಜಾರಿ ಮಾಡುವ ಬದ್ಧತೆ ಇದ್ದಾಗ ಗೊತ್ತಾಗುತ್ತದೆ ಎಂದು ಅಂಬೇಡ್ಕರ್ ಅವರು ಹೇಳಿದ್ದರು.

ಜನರಿಗೆ ಮತದಾನದ ಹಕ್ಕು ಜೊತೆಗೆ ಆರ್ಥಿಕ, ಸಾಮಾಜಿಕ ಪ್ರಜಾಪ್ರಭುತ್ವ ಸಹ ಇರಬೇಕಾಗುತ್ತದೆ.  ಅವಕಾಶಗಳಿಂದ ವಂಚಿತರಾದ ಜನತೆಗೆ ಸಾಮಾಜಿಕ, ಆರ್ಥಿಕ ಶಕ್ತಿ ತುಂಬದಿದ್ದರೆ ಸಮಾನತೆಯ ಸಮಾಜ ನಿರ್ಮಾಣವಾಗುವುದಿಲ್ಲ.

ಶಕ್ತಿ ತುಂಬುವ ಕಾರ್ಯಕ್ರಮ ಬೇಕು :

ಮುಂದುವರಿದ ಜಾತಿಯಲ್ಲಿರುವ ಬಡವರಿಗೆ ಮೀಸಲಾತಿಯಲ್ಲ, ಆರ್ಥಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಕೊಡಬೇಕು. ಅದನ್ನು ವಿರೋಧಿಸುವುದಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಮಕ್ಕಳಿಗಾಗಿ ಕ್ಷೀರಭಾಗ್ಯ, ಹಸಿದವರಿಗೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದೆ. ಆ ಯೋಜನೆಯಲ್ಲಿ ಎಲ್ಲ ವರ್ಗದ ಬಡವರು ಸೇರಿದ್ದರು. ಅದೇ ರೀತಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದು ಮುಂದುವರಿದ ವರ್ಗಗಳ ಬಡವರಲ್ಲಿ ಶಕ್ತಿ ತುಂಬ ಕೆಲಸ ಮಾಡಬೇಕು.

ಅಂಬೇಡ್ಕರ್ ಅವರಿಗೆ ಇದ್ದ ದೂರದೃಷ್ಟಿಯೇ ಬೇರೆ. ಅವರೊಂದಿಗೆ ಬೇರೆಯವರನ್ನು ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಬಸವಣ್ಣನವರಂತೆ ಅಂಬೇಡ್ಕರ್ ಅವರ ವಿಚಾರಧಾರೆ ಇಂದಿಗೂ ಪ್ರಸ್ತುತ. ಅದು ಸರ್ವಕಾಲಿಕ ಮತ್ತು ಸರ್ವ ಜನರಿಗೆ ಅನ್ವಯ.

ಧರ್ಮದ ಆಧಾರದ ಮೇಲೆ ಯಾವುದನ್ನೂ ಮಾಡಬಾರದು ಎಂದು ಸಂವಿಧಾನ ಸ್ಪಷ್ಟವಾಗಿ ಹೇಳುತ್ತದೆ. ಆದರೂ ಬಹುಮತ ಇದೆ ಎಂದು ಪೌರತ್ವ ಕಾಯಿದೆಗೆ ಬಿಜೆಪಿಯವರು ತಿದ್ದುಪಡಿ ತಂದರು. ಎರಡೇ ದಿನದಲ್ಲಿ ಆ ಸಂಬಂಧ ಕಾನೂನು ರೂಪಿಸಿದರು. ಇದು ಒಂದು ಧರ್ಮದವರನ್ನು ಗುರಿಯಾಗಿಟ್ಟುಕೊಂಡು ರಚಿಸಿರುವ ಕಾನೂನು. ಆದರೆ, ಇದಕ್ಕೆ ವ್ಯಾಪಕವಾಗಿ ವಿರೋಧ ವ್ಯಕ್ತವಾದÀ ಬಳಿಕ ಸುಮ್ಮನಾಗಿದ್ದಾರೆ. ಆದರೂ ಮತ್ತೆ ಅದಕ್ಕೆ ಕೈ ಹಾಕುತ್ತಾರೆ.

ಹಿಂದೂ ನಾವೆಲ್ಲ ಒಂದು ಎನ್ನುತ್ತಾರೆ. ಆದರೆ ಹಿಂದೂಗಳಲ್ಲೇ ಇರುವ ಬಡತನ, ತಾರತಮ್ಯ, ಅಸ್ಪಶ್ರ್ಯತೆ ನಿವಾರಣೆ ಬಗ್ಗೆ ಬಿಜೆಪಿಯವರು ಎಂದಾದರೂ ಮಾತನಾಡುವರೇ ? ಇದು ಡೋಂಗಿತನ. ಅದನ್ನು ಹೇಳಿದರೆ ಸಿದ್ದರಾಮಯ್ಯ ಹಿಂದೂ ವಿರೋಧಿ,. ಮೇಲ್ಜಾತಿಯವರ ವಿರುದ್ಧ  ಎಂದು ಟೀಕೆ ಮಾಡುತ್ತಾರೆ.

ಮೋದಿ ವಿಶ್ಲೇಷಣೆ ಮಾಡಲಿ :

ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಪ್ರಧಾನಿಗಳು  ಕಳೆದ ಏಳು ವರ್ಷಗಳಲ್ಲಿ ಒಂದು ದಿನವೂ ವಿಶ್ಲೇಷಣೆ ಮಾಡಿಲ್ಲ. ಜಿಡಿಪಿ ಬೆಳವಣಿಗೆ, ನಿರುದ್ಯೋಗ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು, ಅವರಲ್ಲಿ ಶಕ್ತಿ ತುಂಬುವುದು ಹೇಗೆ ಎಂಬ ಬಗ್ಗೆ ಎಂದಾದರೂ ಚರ್ಚೆ ಆಗಿದೆಯೇ ? ನೋಟು ಅಮಾನ್ಯೀಕರಣದ ಬಳಿಕ ಏನಾಗಿದೆ ಎಂಬುದರ ಬಗ್ಗೆ ಚರ್ಚೆ ನಡೆದಿದೆಯೇ ? ಪೆಟ್ರೋಲ್, ಡೀಸೆಲ್ ದರ ಗಗನ ಮುಟ್ಟಿದ್ದರೂ ಜನ ಚಕಾರ ಎತ್ತುತ್ತಿಲ್ಲ.

ಯಾವುದೇ ಪತ್ರಕರ್ತ, ವರದಿಗಾರನ ವೃತ್ತಿ ಬದುಕು ಸಾರ್ಥಕ ಆಗಬೇಕಾದರೆ ಆತನ ಬರವಣಿಗೆ ಜನರನ್ನು ತಲುಪಬೇಕು. ಟಿವಿ ಮಾಧ್ಯಮ ಬಂದ ಬಳಿಕ ಪತ್ರಿಕೆ ಓದುವ ಹವ್ಯಾಸ ಕಡಿಮೆಯಾಗಿದೆ. ಬೆಳಗ್ಗೆಯಿಂದ ಸಂಜೆವರೆಗೆ ಟಿವಿಗಳಲ್ಲಿ ಅತಿ ರಂಜಿತ ವರದಿಗಳ ಪ್ರಸಾರವಾಗುವುದು ಇದಕ್ಕೆ ಕಾರಣ.

ಒಂದು ಗಂಟೆ ಓದುತ್ತೇನೆ :

ನಿತ್ಯವೂ ನಾನು ಒಂದು ಗಂಟೆ ಕಾಲ ನಾನು ಪತ್ರಿಕೆಗಳನ್ನು ಓದುತ್ತೇನೆ. ಮಾಧ್ಯಮ ಈಗ ವ್ಯಾಪಾರೀಕರಣಕ್ಕೆ ಒಳಗಾಗಿದೆ. ಜನರ ಅಭಿರುಚಿಗೆ ಅನುಗುಣವಾಗಿ ಬದಲಾಗುತ್ತಿದೆ. ಸಾಮಾಜಿಕ, ಆರ್ಥಿಕ ಸ್ಥಿತಿ ಮತ್ತು ನಮ್ಮ ಬದುಕನ್ನು ಸರಿಯಾಗಿ ಬಿಂಬಿಸುವ ಕೆಲಸ ಮಾಧ್ಯಮದಿಂದ ಆಗುತ್ತಿಲ್ಲ. ಸಮಾಜದ ಅಂಕುಡೊಂಕು ತಿದ್ದುವ ಬದಲಾವಣೆ ತರುವ ಕೆಲಸವನ್ನು ದಿಟ್ಟತನದಿಂದ ಮಾಡಬೇಕು.

ದೇಶದ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಮಣಿಯವರು ಧೈರ್ಯವಾಗಿ ತೆರೆದಿಟ್ಟಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ವಸ್ತುಸ್ಥಿತಿ ವಿವರಿಸಿದ್ದಕ್ಕಾಗಿ ಬಿಜೆಪಿಯವರು ಅವರಿಗೆ ಶಾಪ ಹಾಕಿದರೂ ಹಾಕಬೇಕು ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಡಾ. ಎಚ್.ಸಿ. ಮಹದೇವಪ್ಪ, ಶಿವಣ್ಣ, ಶಾಸಕ ರಾಘವೇಂದ್ರ ಹಿಟ್ನಾಳ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು, ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಹಿರಿಯ ಪತ್ರಕರ್ತರಾದ ಎಂ. ಸಿದ್ದರಾಜು, ಡಾ. ಬಿ.ಕೆ. ರವಿ, ನಿವೃತ್ತ ಅಧಿಕಾರಿ ರಾಮಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Key words: oppose -Constitution – not human-Former CM -Siddaramaiah